ಮಾನ್ಸೂನ್ ಉಚಿತ: ಲಯಜಲಿತಾ

ಅಣೆಕಟ್ಟೆ ಉಚಿತ: ನರುಣಾಕಿಧಿ

(ಬೊಗಳೂರು ಬ್ಯುರೋದಿಂದ)

ಬೊಗಳೂರು, ಏ.21- ತಮಿಳುನಾಡಿನಲ್ಲಿ ಚುನಾವಣೆಗಳು ಕಾವೇರಿ ವಿವಾದದ ತೆರನಾಗಿ ಕಾವೇರುತ್ತಿರುವಂತೆಯೇ, ಕಡಿಮೆ ದರದಲ್ಲೋ ಉಚಿತವಾಗಿಯೋ ಅಕ್ಕಿ ಕೊಟ್ಟು ಮತದಾರರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ರಾಜಕೀಯ ಪಕ್ಷಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿವೆ.

ರಾಜ್ಯವನ್ನು ಕಾಡುತ್ತಲೇ ಬಂದಿರುವ ನೀರಿನ ಸಮಸ್ಯೆ ಬಗೆಹರಿಸಲು, ಬಡ ರೈತರಿಗೆ ಪ್ರತಿ ವರ್ಷ ಮುಂಗಾರು ಮಳೆಯನ್ನು ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಲಯಜಲಿತಾ ಘೋಷಿಸಿದ್ದಾರೆ.

ಇದರ ಬೆನ್ನಿಗೇ, ಬೊಗಳೆ ಬಿಡುವುದರಲ್ಲಿ ತಾನೇನು ಕಮ್ಮಿ ಎಂದು ತೊಡೆ ತಟ್ಟಿ ರಂಗಕ್ಕಿಳಿದಿರುವ ತಾತ ನರುಣಾಕಿಧಿ ಅವರು, ರಾಜ್ಯದಲ್ಲಿ ಲಯಜಲಿತಾ ಘೋಷಣೆಯಂತೆ ಮುಂಗಾರು ಮಳೆ ಬಂದರೆ, ಪ್ರವಾಹಗಳನ್ನೆಲ್ಲಾ ತಡೆಗಟ್ಟಲು ಅಣೆಕಟ್ಟು ಕಟ್ಟಿ ಬಡರೈತರನ್ನು ಶೋಷಿಸುವುದಾಗಿ... ಅಲ್ಲಲ್ಲ ಪೋಷಿಸುವುದಾಗಿ ಘೋಷಿಸಿದ್ದಾರೆ. ಈ ಅಣೆಕಟ್ಟೆ ಕಾಮಗಾರಿಯನ್ನು ತಮ್ಮ ಪಕ್ಷದ ಭಾವೀ ಅಧ್ಯಕ್ಷ ಮಯಾನಿಧಿ ದಾರನ್ ಅವರಿಗೆ ಗುತ್ತಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಪ್ರತಿಪಕ್ಷ ಮುಖಂಡ ನರುಣಾಕಿಧಿ ಮತ್ತು ಮಯಾನಿಧಿ ದಾರನ್ ಅವರು ಈಗಾಗಲೇ ಕರುಣೆ ಮತ್ತು ದಯೆಯ ಹೆಸರಿನಲ್ಲಿ ಮತಗಳ ಭಿಕ್ಷೆ ಕೇಳುತ್ತಾ ಚುನಾವಣೆಗೆ ನಿಧಿ ಸಂಗ್ರಹಿಸುತ್ತಿದುದ, ಜನತೆಗೆ ತನ್ನಿಂದಲೂ ಹೆಚ್ಚು ದಪ್ಪದ ನಾಮ ಎಳೆಯುತ್ತಾರೆ ಎಂಬ ಬಗ್ಗೆ ಕಸಿವಿಸಿಗೊಂಡಿರುವ ಮುಖ್ಯಮಂತ್ರಿ ಲಯಜಲಿತಾ, ಈ ಘೋಷಣೆಗೆ ಪ್ರತ್ಯುತ್ತರ ನೀಡಲು ಸ್ವಲ್ಪ ಕಾಲ ಯೋಚಿಸುವುದಾಗಿ ಘೋಷಿಸಿದ್ದಾರೆ.

Post a Comment

ಏನಾದ್ರೂ ಹೇಳ್ರಪಾ :-D

Previous Post Next Post