(ಬೊಗಳೂರು ಬ್ಯೂರೊ ವರದಿ)
ಬೊಗಳೂರು, ಏ.7- ಆಪರೇಶನ್ ಅಸತ್ಯ ಕಾರ್ಯಾಚರಣೆ ಪ್ರಯುಕ್ತ ಬೊಗಳೆ ಪಂಡಿತ ಸಮೀಪದ ಪುತ್ತೂರಿನ ಮನೆಯೊಂದಕ್ಕೆ ಭೇಟಿ ನೀಡಿದಾಗ, ಕೆಲವರೆಲ್ಲಾ ಸೇರಿಕೊಂಡು ಒಬ್ಬಾತನಿಗೆ ಚೆನ್ನಾಗಿ ತದುಕುತ್ತಿದ್ದರು. ಅಲ್ಲಿದ್ದವರನ್ನೆಲ್ಲಾ ಸರಿಸಿ ಮುನ್ನುಗ್ಗಿದಾಗ ಹ್ಯಾಪ್ ಮೋರೆಯ 'ಭೂಪ'ತಿ ಎದುರಾದ. ಆತನನ್ನೇ ಆಪರೇಶನ್‌ಗೊಳಪಡಿಸಿದಾಗ ನಿಜವಾದ ಅಸತ್ಯ ಹೊರಬಂತು.
ವಿಷಯ ಏನಪ್ಪಾ ಅಂದ್ರೆ, ಈ 'ಭೂಪ'ತಿಯ ಪ್ರತಿಸ್ಪರ್ಧಿ ಎಂದೇ ಢಾಣಾಢಂಗುರವಾಗಿಬಿಟ್ಟಿದ್ದ ಶ್ರೀಮಾನ್ ಅಲ್ಲೋಲ ಕಲ್ಲೋಲ ಅವರು ಇತ್ತೀಚೆಗೆ ನಿಧನರಾಗಿದ್ದೇ ಈ ರಾದ್ಧಾಂತಕ್ಕೆ ಕಾರಣ. ಬಹುತೇಕ ಎಲ್ಲ ದಕ್ಷಿಣ ಕನ್ನಡಿಗರಂತೆ ಈತ ಕೂಡ ಒಂದಿಷ್ಟು ಪ್ರಚಾರ ಪ್ರಿಯ. ಪ್ರತಿಯೊಂದು ಸಣ್ಣ ವಿಷಯಕ್ಕೂ ಪತ್ರಿಕಾ ಹೇಳಿಕೆ ನೀಡುವುದು ಈತನ ಅಭ್ಯಾಸ.
ಹಾಗೆಯೇ ಅಲ್ಲೋಲ ಕಲ್ಲೋಲ ನಿಧನದಲ್ಲಿ ದೊರೆಯುವ ಪತ್ರಿಕಾ ಪ್ರಚಾರದಲ್ಲಿ ತನ್ನದೂ ಒಂದು ಪಾಲಿರಲಿ ಎಂದು ಯೋಚಿಸಿದ ಈ 'ಭೂಪ'ತಿ ಆ ರೀತಿ ಯೋಚನೆ ಮಾಡಿದ್ದೇ ಕುತ್ತಿಗೆಗೆ ಬಂದು ಬಿಟ್ಟಿದೆ.ಮರು ದಿನ ಪತ್ರಿಕೆ ಬೆಳ್ಳಂಬೆಳಗ್ಗೆ ಎಲ್ಲೆಡೆ ವಿತರಣೆಯಾಗುತ್ತಿರುವಂತೆಯೇ ಮೊದಲ ಫೋನ್ ಪತ್ರಿಕಾಲಯಕ್ಕಲ್ಲ, 'ಭೂಪ'ತಿಯ ಮನೆಗೆ!
ಆ ದುರಂತದ ದಿನ ಈ 'ಭೂಪ'ತಿ ಪತ್ರಿಕೆ ಓದಲು ಕುಳಿತಿದ್ದನಷ್ಟೆ. ಅಲ್ಲೋಲ ಕಲ್ಲೋಲ ಮಹಾಶಯನ ನಿಧನ ವಾರ್ತೆಯ ಕೆಳ ತುದಿಯಲ್ಲಿ, ಸಂತಾಪ ನೀಡಿದವರ ಪಟ್ಟಿ. ಅದೂ ಸಾಕಷ್ಟು ದೊಡ್ಡದೇ ಇತ್ತು. 'ಭೂಪ'ತಿ ಕೂಡ ತನ್ನ ಸಂತಾಪದ ಹೆಸರು ಎಲ್ಲಿ ಪ್ರಕಟವಾಗಿದೆ ಎಂದು ಬಾರಿ ನೋಡಿ ಕಣ್ಣು, ಮನಸ್ಸು ತಂಪು ಮಾಡಿಕೊಳ್ಳೋಣ ಎಂದು ನಿಧನ ವಾರ್ತೆಗೆ ಕಣ್ಣು ಹಾಯಿಸುತ್ತಿದ್ದಾಗಲೇ ಆತನಿಗೆ ಹಾರ್ಟ್ ಅಟ್ಯಾಕ್ ಆಗುವುದೊಂದು ಬಾಕಿ!
ಅಲ್ಲಿ ಪ್ರಕಟವಾಗಿದ್ದು : ಅಲ್ಲೋಲ ಕಲ್ಲೋಲ ನಿಧನಕ್ಕೆ ಶ್ರೀಮಾನ್ 'ಭೂಪ'ತಿಯವರು ತೀವ್ರ ಸಂತಸ ಸೂಚಿಸಿದ್ದಾರೆ ಎಂದು !

ಅಪ್ಪಿ ತಪ್ಪಿ ಮಾಡಿದ ಸತ್ಯಾನ್ವೇಷಣೆ:

(ಬೊಗಳೂರು ನೆಟ್ ಕಳ್ಳರ ವಿಭಾಗ ವಿಶೇಷ ವರದಿ)
ತಾಂತ್ರಿಕ ಯುಗದಲ್ಲಿ ಕಂಪ್ಯೂಟರ್ ಕ್ರೇಜಿ ಜನಸಾಮಾನ್ಯರ ಮೂಗಿನ ಕೆಳಗೆ ಒಂದು 'U' ಆಕಾರದ ವಕ್ರರೇಖೆ ಮೂಡಿಸುವ ಸುದ್ದಿಯೊಂದು ಇಲ್ಲಿ ಪ್ರಕಟವಾಗಿದೆ. 100 ಡಾಲರ್‌ ಕೊಟ್ಟರೆ ತೊಡೆ ಮೇಲೊಂದು (ಲ್ಯಾಪ್-ಟಾಪ್)ಕಂಪ್ಯೂಟರ್ ಇಟ್ಟುಕೊಳ್ಳಬಹುದು ಎಂಬುದು ಸಿಹಿ ಸುದ್ದಿ. ಆ ಕನಸು ಶೀಘ್ರ ನನಸಾಗಲಿ ಎಂಬುದು ಬೊಗಳೆ ಪಂಡಿತನ ಹಾರೈಕೆ.

1 Comments

ಏನಾದ್ರೂ ಹೇಳ್ರಪಾ :-D

Post a Comment

ಏನಾದ್ರೂ ಹೇಳ್ರಪಾ :-D

Previous Post Next Post