ಬೊಗಳೆ ರಗಳೆ

header ads

ನನ್ಮೇಲೆ ಅತ್ಯಾಚಾರ !

(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಏ.8- ನನ್ಮೇಲೆ ಅತ್ಯಾಚಾರವಾಗಿದೆ, ನನ್ ಮೇಲೆ ಅತ್ಯಾಚಾರವಾಗಿದೆ ಅಂತ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ ಶಿಖಾಮಣಿಯ ಬಾಯಿಯಿಂದ ಸತ್ಯ ಹೊರ ಹಾಕಿಸಲು ಅಸತ್ಯ ಅನ್ವೇಷಿ ಹೊರಟಾಗಲೇ ಬೊಗಳೂರು ಬ್ಯುರೋದಲ್ಲಿ ಸಂಚಲನ ಮೂಡಿತ್ತು.
'ಅಲ್ಲಾ, ಈ ಶಿಖಾಮಣಿ ಹೇಳಿ ಕೇಳಿ 'ಗಂಡು'. ಅಲ್ಲವೇ? ಗಂಡಸರ ಮೇಲೂ ಅತ್ಯಾಚಾರ ನಡೆಯುವ ಕಾಲ ಬಂತಲ್ಲ. ಏನೇ ಆಗಲಿ, ಇದು ನಮ್ಮ ರದ್ದಿ ಪತ್ರಿಕೆಗೊಂದು ಒಳ್ಳೆಯ ಸುದ್ದಿ' ಎಂಬ ವಿತಂಡ ವಾದದೊಂದಿಗೆ ತಂಡವು ಅಸತ್ಯ ಶೋಧನೆಗೆ ತೊಡಗಿತು.ಶಿಖಾಮಣಿಯ ಮನೆಗೆ ನಕ್ಸಲರಂತೆ ನುಗ್ಗಿ ಅವನನ್ನೇ ನೇರವಾಗಿ ತೀವ್ರ ತರಾಟೆಗೆ ತೆಗೆದುಕೊಂಡ ತಂಡ, ಎಷ್ಟೇ ಕೈಕಾಲು ಬಡಿದರೂ, ಕಾಲು ಮೇಲೆ-ತಲೆ ಕೆಳಗೆ ಮಾಡಿದರೂ ಶಿಖಾಮಣಿ ಬಾಯಿಂದ ಅಸತ್ಯ ಕಕ್ಕಿಸಲಾಗಲೇ ಇಲ್ಲ.
ಇಂತಿರಲು... ಚಿಂತಾಕ್ರಾಂತವಾಗಿ ಕುಳಿತ ತಂಡ ತಲೆ ಮೇಲೆ ಕೂದಲೇ ಇಲ್ಲದ ಕಡೆ ಪರಪರನೆ..... ಕೊನೆ ಕೊನೆಗೆ ರಪ ರಪನೆ ಕೆರೆದುಕೊಂಡಿದ್ದಾಯಿತು. ಊಹೂಂ... ಏನು ಮಾಡುವುದೆಂದು ತಮ್ಮ ಮೇಲೇ ಅತ್ಯಾಚಾರವಾದವರಂತೆ ತಲೆ ಮೇಲೆ ಕೈಹೊತ್ತು ಕುಳಿತ ತಂಡದ ಸ್ಥಿತಿ ನೋಡಲಾಗದೆ ಗಹ ಗಹಿಸಿ ನಗಲಾರಂಭಿಸಿದ ಶಿಖಾಮಣಿಯನ್ನು ನೋಡಿ ತಂಡಕ್ಕೆ ದೂರದಲ್ಲೆಲ್ಲೋ ಸುಂಯ್ಯನೆ ಸುಳಿವೊಂದು ಗೋಚರಿಸಿದಂತಾಯಿತು.
''ಏನು.... ಇನ್ನೊಮ್ಮೆ ಹೇಳು... ನಿಧಾನವಾಗಿ... ಬಿಡಿಸಿ ಬಿಡಿಸಿ ಹೇಳು'' ಎಂದು ತನಿಖಾ ತಂಡವು ಶಿಖಾಮಣಿಯನ್ನು ಎಳೆದಾಡತೊಡಗಿತು.
ಆಗ ಶಿಖಾಮಣಿ ನಿಧಾನವಾಗಿ ಬಾಯಿಬಿಟ್ಟ. ಇಲ್ಲಿ ಅಲ್ಲ ಸ್ವಾಮೀ, ಮಧ್ಯ ಪ್ರದೇಶದಲ್ಲಿ ಕ್ರಿಶ್ಚಿಯನ್ ಪಂಗಡದ 'ನನ್' ಮೇಲೆ ಅತ್ಯಾಚಾರವಾಗಿದೆ ಅಂತ ಶಿಖಾಮಣಿ ಸತ್ಯದ ತಲೆ ಮೇಲೆ ಹೊಡೆದಂತೆ ಒದರಿದಾಗ, ಅಸತ್ಯ ಶೋಧನಾ ತಂಡ ಬಲೂನಿಗೆ ಸೂಜಿ ಚುಚ್ಚಿದಂತೆ ಸುಂಯ್ಯನೆ ಉತ್ಸಾಹದ ಗಾಳಿಯನ್ನೆಲ್ಲಾ ಕಳೆದುಕೊಂಡು ಠುಸ್ ಆಗಿ ಮರಳಿತು.

ಅಪ್ಪಿ ತಪ್ಪಿ ಮಾಡಿದ ಸತ್ಯಾನ್ವೇಷಣೆ
(ಬೊಗಳೂರು ನೆಟ್ಗಳ್ಳರ ಬ್ಯುರೋ)

ವರಾತ್ರಿ ಅಂದರೆ ಫಸ್ಟ್ ನೈಟಾ? ಸೆಕ್ಸ್ ವರ್ಕರ್ಸ್ ಅಂತ ನಾವೆಲ್ಲಾ ಹೀಗಳೆಯುವ ಮಿಟುಕಲಾಡಿ ನಿತ್ಯ ಸುಮಂಗಲಿಯರಿಗೆ ಫಸ್ಟ್ ನೈಟ್ ಎನ್ನುವುದು "ಮೊದಲ ರಾತ್ರಿ"ಯಾಗುವುದು ಎಂದಿಗೂ ಸಾಧ್ಯವಿಲ್ಲ.
ಫಸ್ಟ್ ಅಂದರೆ ಮೊದಲ ಅನ್ನೋದಕ್ಕೆ ಹೊಸದಾದ ಆರಂಭ ಎಂದೂ ಹೇಳಬಹುದಲ್ಲವೆ? ಈ ಕಾರಣಕ್ಕೆ ಇದೇ ಹೊಸತನ್ನು ಇನ್ನೂ ಸ್ವಲ್ಪ ಮುಂದಕ್ಕೆ ಕೊಂಡೊಯ್ದರೆ 'ನವ' ಎಂದೂ ಕರೆಯಬಹುದಲ್ಲ. ಇದೇ ಕಾರಣಕ್ಕೆ ನವರಾತ್ರಿಯನ್ನು ಕೂಡ ಫಸ್ಟ್ ನೈಟ್ ಎಂದೇ ಭಾವಿಸಿರುವವರಿವರು.
ಇದಕ್ಕಾಗಿಯೇ ನವರಾತ್ರಿಗೂ ಫಸ್ಟ್ ನೈಟ್‌ಗೂ ಸಂಬಂಧ ಕಲ್ಪಿಸಬೇಕಾಯಿತು. ಯಾಕೆಂದರೆ ಈ ನಿತ್ಯ ಸುಮಂಗಲಿಯರಿಗೆ ಯಾವತ್ತೂ ಫಸ್ಟ್ ನೈಟ್ ಗಳೇ ಅಲ್ಲವೆ?
ಹಾಗಂತ, ಈ ನಿತ್ಯ ಸುಮಂಗಲಿಯರಿಗೆ ಯಾವತ್ತೂ ದೇವಳದ ಪ್ರವೇಶ ನಿಷಿದ್ಧ. ಆದರೆ ವಾರಾಣಸಿಯಲ್ಲಿ ನಡೆಯುವ ಸಂಪ್ರದಾಯವೊಂದರ ಪ್ರಕಾರ, ನವರಾತ್ರಿ ಸಂದರ್ಭ ನಿತ್ಯ ಸುಮಂಗಲಿಯರಿಗೆ ಭಾರಿ ಬೇಡಿಕೆ. ಛೆ.. ತಪ್ಪಾಗಿ ತಿಳಿದುಕೊಳ್ಳಬೇಡಿ ಸ್ವಾಮೀ, ನಾನು 'ಹಾಗಲ್ಲ' ಹೇಳಿದ್ದು. ಹೆಚ್ಚಿನ ವಿವರ ಬೇಕಿದ್ದರೆ ಇಲ್ಲಿ ಓದಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

 1. 'ನನ್'
  ವಾಕ್ಯ ಮತ್ತು ಪದ ಪ್ರಯೋಗದ ವಿಶೇಷತೆಯನ್ನ ತೋರಿಸಿದ ಬರಹ ಸೂಪರ್...!!
  ಹಿಡಿಸಿತು..
  ಕೆಲವು ಪದಗಳು ಹಾಗೆಯೇ, ಕೇಳಿದರೆ ಸೆಳೆವವು..
  ;))))

  ನನ್ನಿ

  \\||//

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D