ಬೊಗಳೆ ರಗಳೆ

header ads

BarKing News: ಕನ್ನಡ ಚಾನೆಲ್‌ಗಳ ಮೇಲೆ ಕೇಸು ದಾಖಲು!


[ರಣಭೀಕರ ಬ್ಯುರೋದಿಂದ]

ಬೊಗಳೂರು: ಕನ್ನಡದ ಬಹುತೇಕ ಎಲ್ಲ ಟಿವಿ ವಾಹಿನಿಗಳ ವಿರುದ್ಧ ವಿಶಿಷ್ಟವಾದ ಕೇಸೊಂದು ದಾಖಲಾಗಿದೆ. ಇದು ಪದವಿಯ ಕೃತಿಸ್ವಾಮ್ಯ ಅಥವಾ ಬಿರುದುಗಳ ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ವಿಶಿಷ್ಟ ಪ್ರಕರಣವೆಂದು ನಾಡಿನ ಖ್ಯಾತ ನ್ಯಾಯವಾದಿಗಳಾದ ರೇಮ್ ರಾಠ್ಮಲಾನಿ ಅವರು ಬೊಗಳೆ ಬ್ಯುರೋಗೆ ತಿಳಿಸಿದ್ದಾರೆ.

ಕೊರೊನಾ ವೈರಸ್ ಹಾವಳಿಯಿಂದಾಗಿ ಬರುತ್ತಿರುವ ಕೋವಿಡ್-19 ಎಂಬ ಜಾಗತಿಕ ಪಿಡುಗು ಭಾರತದಲ್ಲಿಯೂ ಹಬ್ಬಿದೆ, ಕರ್ನಾಟಕದಲ್ಲಿಯೂ ಹಬ್ಬಿದೆ ಎಂದು ಕನ್ನಡದ ಟಿವಿ ವಾಹಿನಿಗಳು ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದ್ದವು. ಆದರೆ, ಇಡೀ ಜಗತ್ತಿಗಿಂತಲೂ ಕರ್ನಾಟಕದಲ್ಲಿಯೇ ಕೋವಿಡ್ ಜಾಸ್ತಿಯಾಗಿದೆ. ಈ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೊಸ ಹೊಸ ರೂಪದಲ್ಲಿ, ರಣ ಭೀಕರತೆ ಸೃಷ್ಟಿಸುತ್ತಾ, ರಕ್ತರಾತ್ರಿ ಮಾಡುತ್ತಾ, ಭಯಾನಕ ಅಟ್ಟಹಾಸ ಮೆರೆಯುತ್ತಿದೆ ಎಂದು ಟಿವಿ ವಾಹಿನಿಗಳು ವರದ್ದಿ ನೀಡುತ್ತಲೇ ಬಂದಿದ್ದವು.

ಪ್ರಚಂಡ ಅಟ್ಟಹಾಸದದೊಂದಿಗೆ ಜನರ ಮೇಲೆ ಅಬ್ಬರಿಸಿ ಬೊಬ್ಬಿರಿವ ರಣಭೀಕರ ರಕ್ತಪಿಪಾಸುವಾಗಿ ಮೆರೆದು ಸಾಕಷ್ಟು ಸುದ್ದಿ, ಸದ್ದು ಮಾಡುತ್ತಿದ್ದ ಕೊರೊನಾ ವೈರಸ್ ಈಗ ಹತಾಶೆಯಿಂದ ಈ ದೇಶದಿಂದಲೇ ಓಡಿ ಹೋಗುವ ಯೋಚನೆ ಮಾಡುತ್ತಿರುವುದಾಗಿ ಮೂಲಗಳು ತಿಳಿಸಿವೆ. ಆದರೂ ಕೊನೆಯ ಪ್ರಯತ್ನವಾಗಿ ಕೇಸೊಂದನ್ನು ದಾಖಲಿಸಲಾಗಿದೆ ಎಂಬ ಮಾಹಿತಿ ಈಗಷ್ಟೇ ಲಭ್ಯವಾಗಿದೆ.

ಇದುವರೆಗೆ ಅಬ್ಬರಿಸಿ ಬೊಬ್ಬಿಡುತ್ತಾ, ರಣ ಕೇಕೆ ಹಾಕುತ್ತಾ, ರೌದ್ರ ನರ್ತನ ಮಾಡುತ್ತಾ ರಣಭೀಕರ ಹೆಮ್ಮಾರಿಯಾಗಿ ಮೆರೆದ ತನ್ನ ಹೆಸರನ್ನು ಈಗ ಮಳೆ ಎಂಬ ಒಂದು ಪುಟಗೋಸಿ ನೀರಿಗೆ ಇರಿಸಿ, ಅದನ್ನೇ ಎಲ್ಲ ಚಾನೆಲ್‌ಗಳೂ ಬಿಂಬಿಸುತ್ತಿವೆ. ಇಷ್ಟರವರೆಗೆ ಏಕಮೇವಾದ್ವಿತೀಯವಾಗಿ ಈ ಬಿರುದು ಬಾವಲಿಗಳಿಂದ ಮೆರೆದ ತನಗೆ ಅವಮಾನವಾಗಿದೆ. ಮೊದಲೆಲ್ಲಾ ಒಂದೆರಡು ಕೋವಿಡ್ ಪ್ರಕರಣ ದಾಖಲಾದಾಗಲೇ ರಣಭೀಕರ ಹೆಮ್ಮಾರಿ ಅಂತ ತನ್ನನ್ನು ಕರೆಯುತ್ತಿದ್ದರು. ಆದರೆ, ಈಗ ದಿನಕ್ಕೆ ಆರು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾದರೂ ಕೂಡ, ತನ್ನನ್ನು ಎರಡು ದಿನಗಳಿಂದ ಯಾರು ಕೂಡ ರಣಭೀಕರ ಹೆಮ್ಮಾರಿ ಅಂತ ಕರೆಯಲೇ ಇಲ್ಲ. ಇದು ತನ್ನ ಪ್ರಚಂಡ ಶಕ್ತಿಗೆ ಮಾಡಿರುವ ಅವಮಾನವಲ್ಲವೇ ಎಂದು ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನಲ್ಲಿ ಕೊರೊನಾ ವೈರಸ್ ವಿವರಿಸಿದೆ.

ಶುಕ್ರವಾರವಂತೂ, ತಾನು ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಸದ್ದು ಮಾಡಿದ್ದೆ. ಆದರೆ, ಮಳೆಯನ್ನೇ ಜಲಾಸುರ, ವರುಣಾಸುರನ ರಣಕೇಕೆ ಅಂತೆಲ್ಲಾ ಬಿಂಬಿಸಲಾಯಿತು. ಸಂಜೆ ನೋಡಿದರೆ, ತನ್ನ ಸುದ್ದಿಯೇ ಇಲ್ಲ, ಯಾಕೆಂದರೆ ಕೋಯಿಕ್ಕೋಡ್‌ನಲ್ಲಿ ವಿಮಾನ ಅಪಘಾತವನ್ನೇ ಪದೇ ಪದೇ ತೋರಿಸಿ, ತನಗೆ ತೀರಾ ಅವಮಾನ ಮಾಡಿದರು ಎಂದು ಕೊರೊನಾ ವೈರಸ್ ಹತಾಶೆಯಿಂದ ಸಲ್ಲಿಸಿದ ದೂರಿನಲ್ಲಿ ತಿಳಿಸಿದೆ. ತನ್ನ ಬಿರುದುಗಳನ್ನೆಲ್ಲ ಈ ಜಲಾಸುರ, ವರುಣಾಸುರ ಎಂಬ ದೇವತೆಯೇ 'ಅಸುರ'ನಾಗಿ ಕಿತ್ತುಕೊಂಡಿದ್ದು ಹೇಗೆ ಎನ್ನುವುದು ದೂರಿನಲ್ಲಿರುವ ಒಟ್ಟಾರೆ ಅಂಶ.

ಪ್ರಕರಣವನ್ನು ಕೈಗೆತ್ತಿಕೊಂಡು ನೋಡಿದ ನ್ಯಾಯಾಧೀಶರು, ವಿಚಾರಣೆಯನ್ನು ಕೆಲವು ದಿನಗಳ ಕಾಲ ಮುಂದೂಡಿದ್ದಾರೆ ಎಂದು ಏಕಸದಸ್ಯ ಬ್ಯುರೋದ ಸಮಸ್ತ ಸದಸ್ಯರ ತಂಡವೊಂದು ರಣಭೀಕರ ಹೆಮ್ಮಾರಿ ಯಾರು ಎಂಬ ಗೊಂದಲಕ್ಕೀಡಾಗಿ ವರದ್ದಿ ಮಾಡಿರುವುದಾಗಿ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಠೀವಿ ಚಾನೆಲ್ಲುಗಳದೇ ನಿಜವಾದ ರಣಕೇಕೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಚಾನೆಲ್ಲುಗಳಿಗೆ ಚಾ ಪೂರೈಸುವುದನ್ನೇ ನಿಲ್ಲಿಸಿ, ಬರೇ ನಲ್ಲಿಯಲ್ಲಷ್ಟೇ ಎಣ್ಣೆ ಬರುವಂತೆ ಮಾಡಿಸಬೇಕೆಂಬ ಆಗ್ರಹ ಕೇಳಿಬಂದಿದೆ.

      ಅಳಿಸಿ

ಏನಾದ್ರೂ ಹೇಳ್ರಪಾ :-D