[ಬೊಗಳೂರು ಅಸತ್ಯ ಶೋಧನಾ ಬ್ಯುರೋದಿಂದ]

ಬೊಗಳೂರು: ಫೇಸ್‌ಬುಕ್‌ನಿಂದಾಗಿ ಇತ್ತೀಚೆಗೆ ಗಲಭೆ, ದೊಂಬಿಗಳು ಜಾಸ್ತಿಯಾಗುತ್ತಿರುವುದರ ಹಿನ್ನೆಲೆಯು ಈಗಷ್ಟೇ ಬೆಳಕಿಗೆ ಬಂದಿರುವುದಾಗಿ ಏಕಸದಸ್ಯ ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳು ತನಿಖಾ ವರದ್ದಿ ಮಾಡಿದ್ದಾರೆ.

ಬೊಗಳೂರಿನ ವಿವಿಧೆಡೆ ಇತ್ತೀಚೆಗೆ ಅಮಾಯಕರು, ಶಾಂತಿದೂತರು ಎಲ್ಲ ಒಟ್ಟು ಸೇರಿ, ಕಾನೂನಿಗೆ ಏನೂ ಆಗಬಾರದೆಂದು ಅದನ್ನು ತಮ್ಮ ಕೈಗೆತ್ತಿಕೊಂಡಿದ್ದರು. ಸುಖಾ ಸುಮ್ಮನೇ ರಸ್ತೆ ಬದಿ ನಿಲ್ಲಿಸಿ, ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ವಾಹನಗಳನ್ನು ಸುಟ್ಟು ಭಸ್ಮ ಮಾಡಿದ್ದರು. ಅಷ್ಟೇ ಅಲ್ಲದೆ, ತ್ಯಾಜ್ಯ ವಿಲೇವಾರಿಗಾಗಿ ಪೌರಕಾರ್ಮಿಕರಿಗೆ ನೆರವಾಗಲೆಂದು, ಹಲವು ವಾಹನಗಳನ್ನು ಸ್ಟೀಲ್ ರಾಡ್‌ನಿಂದ ಬಡಿದು ಪುಡಿಗಟ್ಟಿದ್ದರು.

ಈ ರೀತಿ ಮಾಡುವುದರಿಂದ ವಾಹನಗಳನ್ನು ಬುಟ್ಟಿಯಲ್ಲಿ ತುಂಬಿಕೊಂಡು, ತ್ಯಾಜ್ಯ ವಿಲೇವಾರಿ ಮಾಡುವುದು ಪೌರ ಕಾರ್ಮಿಕರಿಗೆ ವಿಶೇಷ ಅನುಕೂಲವಾಗಿತ್ತು. ಇಡೀ ವಾಹನವನ್ನು ಹೊತ್ತುಕೊಂಡು ಹೋಗುವುದು ಕಷ್ಟ, ಆದರೆ, ಅದರ ಬೂದಿಯನ್ನು ಒಂದು ಗೋಣಿಚೀಲದಲ್ಲಿ ತುಂಬಿಸಿಕೊಂಡು ಹೋಗಬಹುದಾಗಿತ್ತು. ಇದಕ್ಕಾಗಿ ಪೌರ ಕಾರ್ಮಿಕರು ಶಾಂತಿಪ್ರಿಯ ಅಮಾಯಕರಿಗೆ, ಅನಕ್ಷರಸ್ಥರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿರುವುದಾಗಿ ವರದಿಯಾಗಿದೆ.

ಕೇಜಿ ಹಳ್ಳಿಯಿಂದ ಕ್ವಿಂಟಾಲ್‌ಗಟ್ಟಲೆ ವಾಹನಗಳ ಬದಲು, ಕೇಜಿ ಗಟ್ಟಲೆ ಬೂದಿ ಮತ್ತು ವಾಹನಗಳ ಚೂರುಗಳನ್ನು ಬುಟ್ಟಿಯಲ್ಲಿ ಹೊರುವುದು ಸುಲಭವಾಗಿತ್ತು. ಇದಕ್ಕಾಗಿ ಶಾಂತಿಪ್ರಿಯರಿಗೆ ಕೃತಜ್ಞತೆ ಸಲ್ಲಿಸಿರುವ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಪೋರ ಕುಮಾರ್ ಅವರು, ಮುಂದೆಯೂ ಇದೇ ರೀತಿ ಅಭಿಪ್ರಾಯ ಸ್ವಾತಂತ್ರ್ಯವನ್ನು ಬಳಸಲು ಅನುವು ಮಾಡಿಕೊಟ್ಟಿರುವ ಫೇಸ್‌ಬುಕ್ಕಿಗೆ ಧನ್ಯವಾದ ಹೇಳಿದ್ದಾರೆ.  ಇಲ್ಲಿ ಒಂದು ಧರ್ಮದವರನ್ನು ದೂಷಿಸಿದರೆ ಮಾತ್ರವೇ ಈ ರೀತಿ ಶಾಂತಿಪ್ರಿಯರು ಕುಣಿಯುತ್ತಾರೆ, ಬಡಿಗೆ ಹಿಡಿದುಕೊಂಡು, ದೊಂದಿ ಹಿಡಿದು, ಹಾಹಾಕಾರ, ಅರಚಾಟ, ಕೂಗಾಟ ಸಂಗೀತದೊಂದಿಗೆ ರುದ್ರ ನರ್ತನ ಮಾಡುತ್ತಾರೆ.

ಡಿಜೆ ಹಳ್ಳಿಯಲ್ಲಿ ಡಿಜೆ ಸಾಂಗ್ಸ್ ಕೂಡ ಚೆನ್ನಾಗಿಯೇ ಕೇಳಿ ಬರುತ್ತಿದ್ದುದರಿಂದ, ಇದಕ್ಕೆಲ್ಲದಕ್ಕೂ ಫೇಸ್‌ಬುಕ್ ಅಭಿಪ್ರಾಯ ಸ್ವಾತಂತ್ರ್ಯ ಕಾರಣ. ಇದು ಈಗ ಬಿಜೆಪಿ, ಆರೆಸ್ಸೆಸ್‌ನ ನಿಯಂತ್ರಣದಲ್ಲಿದೆ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷರು ಸತ್ಯಶೋಧನೆ ನಡೆಸಿರುವುದು ಅಸತ್ಯಾನ್ವೇಷಣಾ ಬ್ಯುರೋಗೆ ನುಂಗಲಾರದ ತುತ್ತಾಗಿದೆ. ಈ ರೀತಿ ತಮ್ಮ ಬ್ಯುರೋಗೆ ಪ್ರತಿಸ್ಫರ್ಧೆ ನೀಡಿದರೆ ಮುಂದೆ ಭವಿಷ್ಯ ಕಷ್ಟವಿದೆ ಎಂಬುದನ್ನು ಅರಿತುಕೊಂಡಿರುವ ಬೊಗಳೂರು ಬೊಗಳೆ ಬ್ಯುರೋ, ಮುಂದೆಂದಾದರೂ ಅವಕಾಶ ದೊರೆತಾಗ, ಅವರನ್ನೇ ಬ್ಯುರೋ ಮುಖ್ಯಸ್ಥರನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಿದೆ ಎಂದು ನಾವ್ಯಾರೂ ವರದಿ ಮಾಡಿಲ್ಲ.

2 Comments

ಏನಾದ್ರೂ ಹೇಳ್ರಪಾ :-D

  1. ಸತ್ಯದ ತಲೆಯ ಮೇಲೆ ಹೊಡೆದಂತಿರುವ ಶಾಂತಿಪ್ರಿಯ-ವರದ್ದಿಗಾಗಿ ಸಂತೋಷವಾಗುತ್ತಿದೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವವು ಚೆನ್ನಾಗಿ ಬೆಳೆಯುತ್ತಿದೆ.

    ReplyDelete
  2. ಸುನಾಥರೇ, ಈಗೇನಿದ್ದರೂ ಪ್ರಜೆಗಳೇ ಪ್ರಭುಗಳು. ಪ್ರಭುಗಳ ಕೈಯಲ್ಲಿ ಅಧಿಕಾರವಿದ್ದರೆ, ಪ್ರಜೆಗಳ ಕೈಯಲ್ಲಿ ಲಾಂಗು ಮಚ್ಚುಗಳು, ಜೊತೆಗೆ ಪೆಟ್ರೋಲು ಬಾಂಬುಗಳು. ಇಬ್ಬರೂ ಎಲ್ಲವನ್ನೂ ಚಲಾಯಿಸುತ್ತಾರೆ. ಅಷ್ಟೇ ವ್ಯತ್ಯಾಸ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post