[ಬೊಗಳೂರು ಭಾಗ್ಯಗಳ ಬ್ಯುರೋದಿಂದ]
ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು ಎಂದು ಸಾರೀ ಖಾವಂತ್ ಎಂಬ ಸ್ವಘೋಷಿತ ಮಹಿಳಾ ಮಣಿ ಆಗ್ರಹಿಸಿರುವುದರಿಂದ, ಬೊಗಳೂರು ಬ್ಯುರೋ ದಿಢೀರನೇ ಮತ್ತೊಮ್ಮೆ ಎಚ್ಚೆತ್ತುಕೊಂಡಿತು.

ಅರೆ, ಇದ್ಯಾರಪ್ಪ, ನಮ್ಮ ವರದ್ದಿಯನ್ನೆಲ್ಲಾ ತಾವೇ ಘೋಷಿಸಿಕೊಳ್ಳುತ್ತಿರುವುದು ಅಂತ ಭಾವಿಸಿದ ಕಾರಣದಿಂದಾಗಿಯೇ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಯೂ ಎಚ್ಚೆತ್ತುಕೊಂಡು, ತಡಬಡಾಯಿಸಿ, ಕಂಪ್ಯೂಟರ್ ಹುಡುಕಾಡಿ, ಕೀಲಿಮಣೆಯನ್ನು ಕುಟ್ಟ ತೊಡಗಿರುವುದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗುತ್ತಿದೆ.

ಇದೀಗ ಬೊಗಳೂರು ಬ್ಯುರೋ ನೇರವಾಗಿ ಕರು-ನಾಟಕ ಸರಕಾರದ ಅಮುಖ್ಯಮಂತ್ರಿಗಳನ್ನು ಸಂದರ್ಶನಕ್ಕೆ ಒಳಪಡಿಸಿ, ಸಾರೀ ಖಾವಂತ್‌ಳ ಹೇಳಿಕೆ ಬಗ್ಗೆ ಅಭಿಪ್ರಾಯ ಕೇಳಿತು.

ನಮ್ಮ ಪ್ರಶ್ನೆ ಪತ್ರಿಕೆ ಮೊದಲೇ ಲೀಕ್ ಆಗಿತ್ತೋ ಏನೋ, ಅವರು ಯಾವುದೇ ರೀತಿ ಎದೆಗುಂದದೆ ಉತ್ತರ ಬರೆದುಬಿಟ್ಟರು!

ಹೌದು, ನಾವು ಇನ್ನು ಮುಂದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನೇ ನಿಷೇಧಿಸುತ್ತೇವೆ, ಹಾಗಿರುವಾಗ ಯಾವ ನನ್‌ಮಗ ಅದನ್ನು ಲೀಕ್ ಮಾಡುವ ಧೈರ್ಯ ತೋರುತ್ತಾನೆ ಎಂದು ಅವರು ಪ್ರತಿ-ಪ್ರಶ್ನೆಪತ್ರಿಕೆಯನ್ನು ನಮಗೂ ಕೊಟ್ಟುಬಿಟ್ಟರು.

ಇದಲ್ಲದೆ, ಬೊಗಳೂರಿನಲ್ಲಿ ತಿಂದು ತೇಗುವ ತಿಮಿಂಗಿಲಗಳಿಗೆ ತಿನ್ನಲು ಇತ್ತೀಚೆಗೆ ಏನೇನೂ ಸಿಗುತ್ತಿಲ್ಲ. ಯಾಕೆಂದರೆ, ಅದನ್ನು ಅದಾಗಲೇ ತಿಂದು ತಿಂದು ಖಜಾನೆ ಬರಿದು ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಯಾರು ಕೂಡ ಯಾವುದೇ ಬೆಲೆಗಳನ್ನು ಇಳಿಸದಂತೆಯೂ ನಿಷೇಧ ಹೇರಲಾಗುತ್ತಿದೆ ಎಂದು ಅಮುಖ್ಯಮಂತ್ರಿಗಳು ಹೇಳಿದರು.

ಮತ್ತೊಂದೆಡೆ, ಈ ತಿಮಿಂಗಿಲಗಳಿಗೆ ತಿನ್ನುವುದಕ್ಕಾಗಿಯೇ ನಮ್ಮ ಸರಕಾರವು ಸಂಪನ್ಮೂಲ ಕ್ರೋಡೀಕರಣಕ್ಕೆ ಪ್ರಯತ್ನಿಸುತ್ತಿದೆ. ಹೀಗಾಗಿ ಆಸ್ತಿ ತೆರಿಗೆ, ರಸ್ತೆ ತೆರಿಗೆ, ಪೆಟ್ರೋಲ್ ತೆರಿಗೆ, ನೋಂದಣಿ ಶುಲ್ಕ ಇವುಗಳನ್ನೆಲ್ಲ ಹೆಚ್ಚಿಸುತ್ತೇವೆ. ಇನ್ನು ಮುಂದೆ ಯಾವ ನನ್‌ಮಗ ಆಸ್ತಿ ಖರೀದಿಸುವ ಧೈರ್ಯ ಮಾಡುತ್ತಾನೆ... ಆಸ್ತಿ ಖರೀದಿಯನ್ನೂ ನಿಷೇಧಿಸುತ್ತೇವೆ ಎಂದರವರು.

ತಿಮಿಂಗಿಲಗಳನ್ನು ಸಂತೃಪ್ತಿಗೊಳಿಸುವುದೇ ನಮ್ಮ ಬೊಗಳೂರು ಸರಕಾರದ ಮೂಲ ಧ್ಯೇಯ. ಜನರು ಹೇಗಿದ್ದರೂ ಬದುಕಲಿ ಅಥವಾ ಸಾಯಲಿ. ಬೆಲೆ ಏರಿಕೆಯಿಂದ ಅವರನ್ನು ತತ್ತರಿಸುತ್ತಿರುವಂತೆ ಮಾಡಿದರೆ, ಈ ತಿಮಿಂಗಿಲಗಳಾದರೂ ನೆಮ್ಮದಿಯಿಂದ ಬದುಕಬಹುದು. ಜನಸಂಖ್ಯೆ ಕಡಿಮೆಯಿದ್ದಷ್ಟೂ ಸಮೃದ್ಧಿ ಜಾಸ್ತಿ, ನಮ್ಮ ರಾಜ್ಯವೇ ನಂಬರ್ ಒನ್ ಆಗಬಹುದೆಂಬ ಇರಾದೆ ಎಂದು ಅವರು ವಿವರಿಸಿದರು.

ಏಕಸದಸ್ಯ ಸಿಬ್ಬಂದಿಗಳ ಸಂಖ್ಯೆ ಕಡಿತಗೊಳಿಸುವುದು ಹೇಗೆಂಬ ಯೋಚನೆಯೊಂದಿಗೆ ಬೊಗಳೂರು ಬ್ಯುರೋ ಗಂಟುಮೂಟೆ ಕಟ್ಟಿ ಅಲ್ಲಿಂದ ತೊಲಗಿತು.

2 Comments

ಏನಾದ್ರೂ ಹೇಳ್ರಪಾ :-D

  1. ಕರುನಾಟಕದ ಅಮುಖ್ಯ ಮಂತ್ರಿಗಿಂತ ಗಾಢವಾಗಿ ನಿದ್ರೆಯಲ್ಲಿ ಮುಳುಗಿದ್ದ ಅನ್ವೇಷಿಯವರನ್ನು ಎಚ್ಚರಗೊಳಿಸಿದ Sorry ಖಾವಂತರಿಗೆ ಧನ್ಯವಾದಗಳು. ವಿಧಾನಸೌಧದ ತುಂಬೆಲ್ಲ ಮಂತ್ರಿಗಳು, ತಂತ್ರಿಗಳು ಹಾಗು ಕಂತ್ರಿಗಳು ಲೀಕ್ ಮಾಡುತ್ತಿದ್ದಾರಂತೆ. ಇದು ನಿದ್ರಾಮಯ್ಯನವರ ‘ಲೀಕ್-ಭಾಗ್ಯ’ವಂತೆ!

    ReplyDelete
    Replies
    1. ಚುನಾವಣೆ ಬಂತಲ್ಲ, ಇನ್ನಾದ್ರೂ ಇದ್ದೋರಿಗೆ ಬದ್ದೋರಿಗೆ ಬೈಯದೇ ಇದ್ರೆ, ಜನ ನಮ್ಮನ್ನು ನೋಡಲ್ಲ. ಅದ್ಕಾಗಿ ಮತ್ತೆ ಬಂದ್ವಿ ಸರ್.

      Delete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post