ಬೊಗಳೆ ರಗಳೆ

header ads

ಚಿಕ್ಕಬಳ್ಳಾಪುರದಲ್ಲಿ ನೇತ್ರಾವತಿಗೆ ಮೊದಲು ಕುಮಾರ ಧಾರೆ!

[ಬೊಗಳೂರು ಕಣ್ಣೀರ ಧಾರೆ ಬ್ಯುರೋದಿಂದ]
ಬೊಗಳೂರು, ಏ.4- ಓಟು ಬಂದಿದೆ ಎಂದು ತಿಳಿದದ್ದೇ ತಡ, ತಡವಾಗಿಯಾದರೂ ಎಚ್ಚೆತ್ತುಕೊಂಡಾಗ ಬಹುತೇಕ ಮುಕ್ತಾಯದ ಹಂತದಲ್ಲಿದೆ ಎಂಬುದು ಬೊಗಳೆ ರಗಳೆ ಬ್ಯುರೋ ಅರಿವಿಗೆ ಬಂದಿರುವಂತೆಯೇ, ತಟ್ಟನೇ ಎಬ್ಬಿಸಿ ವರದ್ದಿಗಾರರನ್ನು ಅಟ್ಟಿದಾಗ ಸಿಕ್ಕಿದ ವರದ್ದಿ ಇದು.

ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಆವಾಂತರಗಳ ಕುರಿತು ಗಮನ ಸೆಳೆಯಲು ಹಾಗೂ ಬೆಳಕು ಚೆಲ್ಲಲು ಹೋಗುವಾಗ, ಪೂರ್ವಸಿದ್ಧತೆಯಿಲ್ಲದೆಯೇ ಹೋದ ಕಾರಣ ನಮ್ಮ ವರದ್ದಿಗಾರರು ಮುಳುಗೇಳಬೇಕಾಗಿಬಂದಿತ್ತು. ಇದಕ್ಕೆ ಕಾರಣ, ಅಲ್ಲಿ ಹೋದಲ್ಲೆಲ್ಲಾ ನೀರು.

ನೇತ್ರಾವತಿಯ ಉಪನದಿಯಾಗಿರುವ ಎತ್ತಿನಹೊಳೆ ನದಿಯನ್ನು ತಿರುಗಿಸಿ, ಜನರಿಗೆ ನೀರು ಕುಡಿಸುತ್ತೇವೆ ಎಂದು ದಕ್ಷಿಣ ಕನ್ನಡದ ಮಣ್ಣಿನ ಸುಪುತ್ರ ವೀರಪ್ಪ ಮೊಯ್ಲಿ ರಪ್ಪರಪ್ಪನೇ ಹೇಳಿದಾಗಲೇ ಜನರು ಅಲ್ಲಿ ಆನಂದತುಂದಿಲರಾಗಿದ್ದರು. ಈ ಬಾರಿ ಆ ಎತ್ತಿನ ಹೊಳೆಯ ನೀರಿನಲ್ಲಿ ವೋಟುಗಳೆಲ್ಲವೂ ನಮ್ಮ ಗಾಳಕ್ಕೇ ಬೀಳುತ್ತವೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ ಎಂದು ನಮ್ಮ ಅನಧಿಕೃತ ಮೂಲಗಳು ತಿಳಿಸಿವೆ.

ಆದರೆ, ಅತ್ತ ಕಡೆ ಇದೇ ಕೈಪಕ್ಷದ ಮುಖಂಡರು ಚಿಕ್ಕಬಳ್ಳಾಪುರ-ಎತ್ತಿನಹೊಳೆ-ಮೊಯ್ಲಿ ಮುಂತಾದ ಶಬ್ದಗಳಿಗೆ ನಿಷೇಧ ಹೇರಿದ್ದಾರೆ. ನೇತ್ರಾವತಿಯನ್ನು ಅತ್ತಕಡೆ ಕರೆದುಕೊಂಡು ಹೋಗುವುದಾಗಿಯೂ, ಆ ನೀರು ನೋಡಿಯೇ ಸಾಯುವುದಾಗಿಯೂ ಮೊಯ್ಲಿ ಘೋಷಿಸಿರುವುದು ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿಗೆ ನುಂಗಲಾರದ ಬಿಸಿತುಪ್ಪ ಎಂದು ವಾರ್ತೆಗಳು ತಿಳಿಸಿವೆ. ನಮ್ಮ ದಕ್ಷಿಣ ಕನ್ನಡದ ಜೀವಸೆಲೆಯನ್ನು ಕರೆದುಕೊಂಡು ಹೋಗಿ, ತಮ್ಮ ಮತಗಳ ಬುಟ್ಟಿ ತುಂಬಿಸಿಕೊಂಡು ರಾಜಕೀಯ ಜೀವನವನ್ನು ಸುಧಾರಿಸಿಕೊಳ್ಳಲು ಇವರಿಗೆ ಬಿಟ್ಟವರಾರು ಎಂಬುದು ದ.ಕ.ದವರ ಅಬ್ಬರ.

ಇಷ್ಟೆಲ್ಲಾ ನೇತ್ರಾವತಿ ಕಿತಾಪತಿ ನಡುವೆಯೇ, ನೇತ್ರಾವತಿಗೂ ಮೊದಲೇ ಕುಮಾರಧಾರೆಯನ್ನು ಚಿಕ್ಕಬಳ್ಳಾಪುರಕ್ಕೆ ಹರಿಸಿಯೇ ಸಿದ್ಧ ಎಂದು ಘಂಟಾಘೋಷವಾಗಿ ಸಾರಿರುವ ಮಾಜಿ ಪ್ರಧಾನಿಯ ಕುಮಾರ, ಗಳಗಳನೆ ಕಣ್ಣೀರಿಡುವ ಕೈಂಕರ್ಯಕ್ಕೆ ಚಾಲನೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸ್ಫರ್ಧಿಸದಿದ್ದರೆ ನೀನು ನನ್ನ ಮಗನೇ ಅಲ್ಲ ಎಂದು ದೊಡ್ಡ ಗೌಡರು ಕಣ್ಣೀರಿಟ್ಟು ಸಾಕಷ್ಟು ನೀರನ್ನು ತುಂಬಿಸಿದ್ದರು. ಇದಕ್ಕೆ ತಮ್ಮ ಕಣ್ಣಿನ ನೀರನ್ನೂ ಸೇರಿಸಿರುವ ಕುಮಾರ, ಓಟು ಕೊಡಿ, ಹಿಂದೆ ಯಾಕೆ ಕೊಡಲಿಲ್ಲ ಎಂದೆಲ್ಲಾ ಕೇಳಿ ಧಾರೆ ಹರಿಸಿದ್ದಾರೆ. ಈಗ ಕುಮಾರಧಾರೆ ದಿಢೀರ್ ಹರಿದಿರುವ ಹಿನ್ನೆಲೆಯಲ್ಲಿ ಆ ಊರಿನಲ್ಲಿ ಬೋಟಿನಲ್ಲಿ ಹೋಗಿ ಸುತ್ತಾಡಬೇಕಾಯಿತು ಎಂದು ಅಸತ್ಯದ ಅನ್ವೇಷಣೆಯಲ್ಲಿರುವ ನಮ್ಮ ವರದ್ದಿಗಾರರು ಹೇಳಿದ್ದಾರೆ. ಈ ಬಾರಿ ಪುನಃ ನಿದ್ರೆಗೆ ಜಾರಿಸದಂತೆ ಅವರ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಚಿಕ್ಕಬಳ್ಳಾಪುರದ ಚುನಾವಣಾಪ್ರವಾಹದಲ್ಲಿ ಮುಳುಗಿದ್ದ ನೀವು, ಎದ್ದು ಬಂದಿದ್ದೊಂದು ದೊಡ್ಡ ದುರಂತವೇ ಸೈ (ರಾಜಕಾರಣಿಗಳ ಪಾಲಿಗೆ)! ಆದರೆ ನಿಮ್ಮ ಅಭಿಮಾನಿ ಓದುಗರಿಗೆ ಇದು ಸುದೈವದ ವಿಷಯವಾಗಿದೆ!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದು. ಹೌದು... ಚೀಬಾಪುರದಲ್ಲಿ ನಾವು ಮುಳುಗಿದ್ದು ಯಾವ ರಸದಲ್ಲಿ ಎಂಬುದೇ ತಿಳಿದಿರಲಿಲ್ಲ... ರಾಮ ರಸವೋ ಸೋಮರಸವೋ ಎಂಬುದೆಲ್ಲಾ ಕನ್ಫ್ಯೂಜು...

      ಅಳಿಸಿ

ಏನಾದ್ರೂ ಹೇಳ್ರಪಾ :-D