[ಬೊಗಳೂರು ಲವ್ ಡೇ ಬ್ಯುರೋದಿಂದ]
ಬೊಗಳೂರು, ಸೆ.10- ಪ್ರೇಮಿಗಳು ಬೆಚ್ಚಿ ಬಿದ್ದಿದ್ದಾರೆ. ಒಂದಾದ ಮತ್ತು ಒಂದಾದ ಹೃದಯಗಳಿಗೆ ಈ ಜಗತ್ತಿನಲ್ಲಿ ಜಾಗವೇ ಇಲ್ಲವೆಂಬಂತಹಾ ಪರಿಸ್ಥಿತಿಯಿಂದ ಅವರು ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಕಾರಣ ಇಲ್ಲಿ ಪ್ರಕಟವಾಗಿರುವ "ಜೋಡಿಸಿದ ಹೃದಯ ಹೊರತೆಗೆದ ಹೃದಯಾಲಯ" ಎಂಬ ವರದ್ದಿ.ಕದ್ದು ಮುಚ್ಚಿ ಪ್ರೇಮ ಮಾಡಲು ಕೂಡ ಈ ಜಗತ್ತಿನಲ್ಲಿ ಯಾರು ಕೂಡ ಬಿಡುತ್ತಿಲ್ಲ. ಎಲ್ಲಿದ್ದರೂ ಟಿವಿ ಕ್ಯಾಮರಾಗಳು ಸುಳಿದಾಡುತ್ತಿರುತ್ತವೆ, ಮಾಧ್ಯಮದ ಮಂದಿ ಬೆನ್ನು ಬೀಳುತ್ತಿದ್ದಾರೆ. ಈ ಕಾರಣಕ್ಕೆ ಅನ್ಯಥಾ ಶರಣಂ ನಾಸ್ತಿ ಅಂತ ತಾವು ಹೃದಯಗಳನ್ನು ಒಳಗಿಂದೊಳಗೇ ಜೋಡಿಸಿಕೊಂಡರೆ, ಈ ವೈದ್ಯರು ಅದಕ್ಕೂ ಬಿಡುತ್ತಿಲ್ಲ ಎಂಬುದು ಪ್ರೇಮಿಗಳ ಸಂಘದ ಅಧ್ಯಕ್ಷ ಪ್ರೇಮಕುಮಾರ್ ಅವರ ಅಭಿಮತ.
ಕೃತಕ ಹೃದಯ ಅಳವಡಿಸಲಾಗಿತ್ತು ಎಂದು ರೋಗಿಯು ಹೇಳಿದರೂ, ಅದು ನಿಜಕ್ಕೂ ತನ್ನ ಪ್ರಿಯತಮೆಯ ಹೃದಯ ಎಂದು ತಮ್ಮನ್ನು ಸಂದರ್ಶಿಸಿದ ಬೊಗಳ ರಗಳೆ ಬ್ಯುರೋದ ಎದುರು ಈ ತಥಾಕಥಿತ 'ರೋಗಿ'ಯು ಹೇಳಿಕೊಂಡಿರುವುದಾಗಿ ವರದ್ದಿಯಾಗಿದೆ.
ಕೃತಕ ಎಂದು ಹೇಳಲಾಗುತ್ತಿರುವ ಪ್ರೇಯಸಿಯ ಹೃದಯ ಜೋಡಿಸಿದ ಬಳಿಕವಷ್ಟೇ ತನ್ನ ಹೃದಯ ಸರಿಯಾಗಿ ಕಾರ್ಯ ನಿರ್ವಹಿಸಲಾರಂಭಿಸಿತ್ತು. ನಾವಿಬ್ಬರೂ ಜೊತೆಯಾಗಿಯೇ ಬಾಳಲು ನಿರ್ಧರಿಸಿದ್ದೇವೆ. ಹೀಗಾಗಿ ರಕ್ತದಲ್ಲೂ ಒಂದಾಗುವ ಹಂಬಲದಿಂದ ಎರಡೆರಡು ಹೃದಯಗಳೊಂದಿಗೆ ಬದುಕುತ್ತಿದ್ದೆ, ಪ್ಲೀಸ್ ನಮ್ಮನ್ನು ನಮ್ಮಷ್ಟಕ್ಕೇ ಬಿಡಿ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಹೊಸ ವಿದ್ಯಮಾನದಿಂದ ಬೊಗಳೂರಿನಾದ್ಯಂತ ಇರುವ ಪ್ರೇಮಿಗಳು ಕಳವಳಗೊಂಡಿದ್ದು, ಶೀಘ್ರದಲ್ಲೇ ತುರ್ತು ಸಭೆ ಸೇರಿ ಹೃದಯಾಲಯದ ಈ ಅಮಾನವೀಯ ಕೃತ್ಯದ ವಿರುದ್ಧ ಸಿಡಿದೇಳಲು ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಹೆಚ್ಚಿನ ತನಿಖೆ ನಡೆಯುತ್ತಿದೆ.
2 ಕಾಮೆಂಟ್ಗಳು
Well, an artificial heart can make artificial love only!
ಪ್ರತ್ಯುತ್ತರಅಳಿಸಿಸುನಾಥರೇ, This might be virtual heart!!!
ಅಳಿಸಿಏನಾದ್ರೂ ಹೇಳ್ರಪಾ :-D