ಬೊಗಳೂರು: ಬೊಗಳೂರಿನಾದ್ಯಂತ ಮಳೆ ಇಲ್ಲದೆ ಬರ ಇದ್ದರೂ, ಕೊಳ್ಳ-ಹಳ್ಳಗಳು ತುಂಬಿ ತುಳುಕಿದ ಪರಿಣಾಮವಾಗಿ ಅದೇನೋ ಒದ್ದೆಯಾದಂತಾಗಿ ಬೊಗಳೂರು ಬ್ಯುರೋದ ವ-ರದ್ದಿಗಾರರು ಎಚ್ಚರವಾದ ಸಂದರ್ಭ ತಡಕಾಡಿದಾಗ ಈ ಸುದ್ದಿ ಸಿಕ್ಕಿದೆ.

ವಿಷಯ ಏನಪ್ಪಾ ಎಂದರೆ, ಮಾಜಿ ಪ್ರಧಾನಿ ದೇವೇಗೌಡರು ನಿಜವಾದ 'ರಾಜಕೀಯ'ಕ್ಕೆ ಬಂದು ಐವತ್ತು ವರ್ಷಗಳಾದ ಪ್ರಯುಕ್ತ ಅವರು ಕಣ್ಣೀರ ಧಾರೆ ಹರಿಸಿದ್ದಾರೆ ಎಂಬ ಈ ವರದ್ದಿ ಇಲ್ಲಿ ಪ್ರಕಟವಾಗಿರುವುದು ಬರದ ನಡುವೆಯೂ ಭರದ ಪ್ರವಾಹಕ್ಕೆ ಕಾರಣ.

ಮುದ್ದೆ ಸಾರನ್ನಷ್ಟೇ ತಿಂದುಂಡು ಸುಖವಾಗಿದ್ದ, ಆಗಾಗ್ಗೆ ರೈತರ ಪರ ಕಾಳಜಿ ತೋರಿಸಿ ಹೋರಾಟಕ್ಕೆ ಇಳಿಯುತ್ತಿದ್ದ ದೇವೇಗೌಡರು ದಿಢೀರನೇ ಕಣ್ಣೀರು ಹಾಕಿದ್ದೇಕೆಂದು ಧಾವಿಸಿ ನೋಡಿ ವರದ್ದಿ ತಂದು ಹಾಕುವಂತೆ ಸೊಂಪಾದ-ಕರುಗಳ ಆದೇಶ ಪ್ರಯುಕ್ತ ಫೀಲ್ಡಿಗಿಳಿದಾಗ ಈ ಸಂಚೋದನಾತ್ಮಕ ವರದ್ದಿ ದೊರಕಿದೆ.

ವಿಷಯ ಇಷ್ಟೇ. ಮಾಜಿ ಪ್ರಧಾನಿಗಳ ಜಾತ್ಯತೀತವಾದ ಪಕ್ಷಕ್ಕೆ ಇತ್ತೀಚೆಗೆ ಮುಂಗಾರು ಮಳೆ ಬರಿಸೋ ನಟಿ ಪೂಜಾ ಗಾಂಧಿ ಅವರು ತೆನೆ ಹೊರುವುದಕ್ಕಾಗಿ ಸೇರ್ಪಡೆಯಾಗಿದ್ದರು. ಅವರ ಬೆನ್ನ ಹಿಂದೆಯೇ ಈಗ ಚಿತ್ರ ನಿರ್ದೇಶಕ ಎಸ್.ನಾರಾಯಣ್ ಅವರೂ ಜೆಡಿಎಸ್ ಸೇರಿಕೊಂಡಿದ್ದಾರೆ.

ತತ್ಪರಿಣಾಮವಾಗಿ ರಾಜಕೀಯ ರಂಗದಲ್ಲಿ ಕಣ್ಣೀರು ಪ್ರಧಾನ ಚಿತ್ರವೊಂದು ರೂಪುಗೊಳ್ಳುತ್ತಿದೆ. ರೈತರ ಪರವಾಗಿರುವ ಈ ಚಲನಚಿತ್ರದಲ್ಲಿ ದೇವೇಗೌಡರೂ ಪ್ರಮುಖವಾದ (ಕರ್ನಾಟಕದ ಪ್ರಧಾನಿ) ಭೂಮಿಕೆಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ರಿಹರ್ಸಲ್‌ನಲ್ಲಿಯೇ ಇಷ್ಟೊಂದು ಕಣ್ಣೀರು ಸುರಿಸಿದ್ದರಿಂದಾಗಿ, ರಾಜ್ಯದ ಬರವೂ ನಿವಾರಣೆಯಾಗಿದೆ ಎಂದು ಬಲ್ಲ-ಸಲ್ಲದ ಮೂಲಗಳು ತಿಳಿಸಿವೆ.

ಅದೇ ರೀತಿ ಯಾರು ಕೂಡ ಆತಂಕ ಪಡಬೇಕಾಗಿಲ್ಲ ಎಂದೂ ಬೊಗಳೆ ರಗಳೆ ಬ್ಯುರೋದ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಹೀಗೋ ಸಮಾಚಾರ? ನಾನು ತಿಳಿದದ್ದೇ ಬೇರೆ: ದೇವೇಗೌಡರು ಹರಿಸುತ್ತಿರುವ ಮೊಸಳೆ ಕಣ್ಣೀರೇ ಮಹಾಪೂರವಾಗಿ ಹರಿಯುತ್ತಿದೆ ಎಂದು ಭಾವಿಸಿದ್ದೆ!

    ReplyDelete
  2. ಸುನಾಥರೇ,
    ಮೊಸಳೆ ಕಣ್ಣೀರೆಲ್ಲಾ ಬರದಲ್ಲಿ ಬತ್ತಿ ಹೋಗಿರುತ್ತದೆ ಎಂದು ತಿಳಿಸಲು ವಿಷಾದಿಸುವುದಿಲ್ಲ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post