[ಬೊಗಳೂರು ಟ್ರಾಫಿಕ್ ಕಿರಿಕ್ ಬ್ಯುರೋದಿಂದ]
ಬೊಗಳೂರು, ಜ.24- ಬೊಗಳೂರಿನಲ್ಲಾಗುತ್ತಿರುವ ಟ್ರಾಫಿಕ್ಕಿನ ಜಾಮ್‌ಗೆ ಬೊಗಳೂರು ಬೀಜಪಿ ಶಾಸಕರು ಶಾಪಿಂಗು ಮಾಲುಗಳು ಹಾಗೂ ಅಪಾರ್ಟುಮೆಂಟುಗಳೇ ಕಾರಣ ಎಂಬ ಒಕ್ಕೊರಲಿನ ಕೂಗಾಟ ಮಾಡಿದ್ದರಿಂದ ಆಘಾತಗೊಂಡು ಬೆಚ್ಚಿ ಬಿದ್ದಿರುವ ಬೊಗಳೂರು ಬ್ಯುರೋ, ಇದರ ಹಿಂದಿನ ಅಸತ್ಯವೇನು ಮತ್ತು ಪರಿಹಾರಗಳೇನು ಎಂಬ ಕುರಿತು ತೀವ್ರ ತಪಾಸಣೆಗೆ ತೊಡಗಿಕೊಂಡುಬಿಟ್ಟು ನಿದ್ದೆಗೆ ಜಾರಿತು.

ಈ ನಿದ್ರೆಯ ಫಲಿತಾಂಶವೇ, ಹೊಸದೊಂದು ಸಂಚೋದನೆ.  ಟ್ರಾಫಿಕ್ಕು ಕಿರಿಕಿರಿ ಕಡಿಮೆಯಾಗಬೇಕಿದ್ದರೆ, ಏನು ಮಾಡಬೇಕೆಂಬ ಪ್ರಶ್ನೆಗೆ ಉತ್ತರ ಕೆದಕಿ ತತ್ತರಿಸುತ್ತಿರುವಾಗ ಹೊಳೆದು ಬಂದ ಅಂಶವೆಂದರೆ, ಈ ಮಂತ್ರಿಗಳು, ಶಾಸಕರು ಮುಂತಾದ ಕೆಂಪು ಗೂಟದ ಕಾರಿನವರನ್ನೇ ಬೊಗಳೂರಿನಿಂದ ಹೊರಹಾಕಬೇಕು.

ಮಂತ್ರಿ ಬರುತ್ತಾರೆಂದರೆ ನೂರಾರು ವಾಹನಗಳ ಸಾಲು, ಹಿಟ್ ಆಂಡ್ ರನ್ ಕೇಸು ಆಗುತ್ತೆ, ಟ್ರಾಫಿಕ್ಕಿನಲ್ಲಿ ಸಿಲುಕಿಕೊಂಡು ಬ್ರೆಡ್ಡಿಗೆ ಜಾಮು ಹಾಕಿಕೊಂಡು ತಿನ್ನುತ್ತಾ ಕೂರಬೇಕಾಗುತ್ತದೆ. ಅದೇನೋ ರಾಜಕೀಯ ಸಮಾವೇಶ ಮಾಡಿದರೆ ದಿನಗಟ್ಟಲೆ ಜಾಮು ಹಾಕಿಕೊಂಡಿರಬೇಕಾಗುತ್ತದೆ. ಹೀಗಾಗಿ ಇಡೀ ನಗರದ ಸಂಚಾರ ನಿಧಾನಕ್ಕೆ ಕಾರಣವಾಗುವ ವಿಧಾನಸೌಧವನ್ನೇ ಬೊಗಳೂರಿನಿಂದ ಹೊರಗೆ ತಂದುಬಿಟ್ಟರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂಬ ಅಸತ್ಯಾನ್ವೇಷಣೆಯೊಂದು ಎಲ್ಲೆಡೆ ಪ್ರಕಟವಾಗಿ ಪಬ್ಲಿಷ್ ಆಗಿ ಚರ್ಚೆಗೆ ಕಾರಣವಾಗಿ, ವಿಧಾನಸೌಧದ ಮೆಟ್ಟಿಲೇರುವ ಸಾಧ್ಯತೆಗಳೂ ಇವೆ.

2 Comments

ಏನಾದ್ರೂ ಹೇಳ್ರಪಾ :-D

  1. ವಿಧಾನಸೌಧದ ಜೊತೆಗೇ, ಬೊಗಳೂರು ಅನ್ಯಾಯವಾದಿಗಳನ್ನೂ ಹೊರಗಟ್ಟಿದರೆ ಹೇಗೆ, ಸಾರ್?

    ReplyDelete
  2. ಅನ್ಯಾಯವಾದಿಗಳನ್ನು ಹೊರಗಟ್ಟಿದರೆ, ನಮ್ಮ ಅಸತ್ಯ ಅನ್ವೇಷಕರಿಗೆ ಏನು ಕೆಲಸ ಉಳಿಯುತ್ತದೆ ಸುನಾಥರೇ... ಹೀಗಾಗಿ... ಇದಕ್ಕೆ ನಿಮ್ಮ ವಿರೋಧವಿದೆ... ನೀವೂ ವಿರೋಧಿಸಿ...

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post