(ಬೊಗಳೂರು ಆಂಟಿ ಟ್ರಾಫಿಕ್ ಕಿಂಗ್ ಬ್ಯುರೋದಿಂದ)
ಬೊಗಳೂರು, ಜ.1- ದೇಶಾದ್ಯಂತ ಆಂಟಿ ಹ್ಯೂಮನ್‌ಗಳ ಟ್ರಾಫಿಕಿಂಗು ಹೆಚ್ಚಾಗುತ್ತಿದೆ ಅಂತ ವರದ್ದಿ ಓದಿದಾಕ್ಷಣ, ಕಳೆದ ವರ್ಷದಿಂದೀಚೆಗೆ ಗಡದ್ದಾಗಿ ನಿದ್ದೆ ಹೊಡೀತಿದ್ದ ಬೊಗಳೆ ರಗಳೆ ಬ್ಯುರೋ ಎಚ್ಚೆತ್ತುಕೊಂಡಿದೆ. ಆಂಟಿ ಹ್ಯೂಮನ್ ಹೆಸರು ಹೇಳಿದಾಕ್ಷಣ ಮಾವನ ಸಂಪನ್ಮೂಲ ಸಚಿವರಾಗಿದ್ದ ಕಪಿಕಪಿಲ ಸಿಬ್ಬಲ್ ಅವರ ಹೆಸರು ನೆನಪಾಗಿ, ಬೊಗಳೂರೆಂಬ ಅಂತರಜಾಲಾಡುವ ಪತ್ರಿಕೆಯ ಎಲ್ಲ ಐಟಂಗಳಿಗೆ ಕಡಿವಾಣ ಹಾಕುತ್ತಾರೆಂಬ ಕಾರಣಕ್ಕೆ ಬೆಚ್ಚಿ, ಕೆಳಗೆ ಬಿದ್ದ ಕಾರಣದಿಂದಾಗಿ ಕಳೆದ ವರ್ಷ ಆರಂಭಿಸಿದ ನಿದ್ರೆ ಜರ್ರನೇ ಇಳಿದು, ಈ ವರ್ಷ ಎಚ್ಚರವಾಗಿತ್ತು. ಈ ಸಂದರ್ಭದಲ್ಲಿ ಬೊಗಳೂರು ಬ್ಯುರೋ, ಸದ್ದು ಗದ್ದಲವಿಲ್ಲದೆ ಹೊಸ ವರ್ಷಾಚರಣೆ ಆರಂಭಿಸಿರುವುದಾಗಿ ತಿಳಿದುಬಂದಿದೆಯಾದರೂ, ಈಗಿನ ಸುದ್ದಿಯ ಮೇಲೆ ಗಮನ ಹರಿಸಲು ಆರಂಭಿಸಿದೆ.

ಸಿಬಿಐ ಎಂಬ ಯುಪಿಎ ಸರಕಾರದ ಅಧೀನದಲ್ಲಿ 'ಸರ್ವತಂತ್ರ ಸ್ವತಂತ್ರ'ವಾಗಿ ಕಾರ್ಯಾಚರಿಸುತ್ತಿರುವ ತನಿಖಾ ಸಂಸ್ಥೆಯು, ಹ್ಯೂಮನ್ ಆಂಟಿಗಳನ್ನು ಟ್ರಾಫಿಕ್ ಮಾಡುವ ಘಟಕವನ್ನೇ ಸ್ಥಾಪಿಸಿರುವುದು ಸ್ವಲ್ಪ ಕುತೂಹಲಕ್ಕೆ ಕಾರಣವಾದ ಕಾರಣ, ನಮ್ಮ ಏಕ ಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳೂ ಅಲ್ಲಿಗೆ ಧಾವಿಸಿ ಈ ವರದ್ದಿ ತಂದು ಸುರುವಿದ್ದಾರೆ.

ಇದರ ಪ್ರಕಾರ, ದೇಶಾದ್ಯಂತ ಆಂಟಿಗಳ ಟ್ರಾಫಿಕಿಂಗ್ ಹೆಚ್ಚಾಗುತ್ತಿದೆಯಂತೆ. ಇದಕ್ಕಾಗಿ ಈ ಆಂಟಿಗಳಿಗಾಗಿಯೇ ಟ್ರಾಫಿಕ್ ಯುನಿಟ್ ಒಂದನ್ನು ಸ್ಥಾಪಿಸಲು ಸಿಬಿಐ ನಿರ್ಧರಿಸಿದೆ ಎಂದು ನಮ್ಮ ಬಾತ್‌ಬಾತ್ಮೀದಾರರು ತಿಳಿಸಿದ್ದಾರೆ. ಆದರೂ, ಇದು ಆಂಟಿ ಹ್ಯೂಮನ್‌ಗಳ ಟ್ರಾಫಿಕಿಂಗ್ ಸುಗಮಗೊಳಿಸಲು ರಚಿಸಿದ ಘಟಕವೇ? ಅಥವಾ ಹ್ಯೂಮನ್ ಆಂಟಿಗಳ ಟ್ರಾಫಿಕಿಂಗ್ ಸರಳವಾಗಿಸುವ ಘಟಕವೇ, ಇಲ್ಲಾಂದ್ರೆ, ಹ್ಯೂಮನ್‌ಗಳಿಗೆ ವಿರುದ್ಧವಾಗಿ (ಆಂಟಿಬಯೋಟಿಕ್ ಮಾದರಿಯಲ್ಲಿ) ರಚಿಸಲಾದ ಘಟಕವೇ ಎಂಬುದರ ಬಗ್ಗೆ ಬೊಗಳೂರು ಪಂಡಿತರೆಲ್ಲರೂ ತಲೆ ಕೆರೆದುಕೊಳ್ಳಲಾರಂಭಿಸಿದ್ದಾರೆ. ಅಲ್ಲದೆ, ಇದು ಆಂಟಿಗಳನ್ನು ಟ್ರಾಫಿಕ್ ಮಾಡುವ ಟ್ರಾಫಿಕ್ ಕಿಂಗ್ ಒಬ್ಬಾತನನ್ನು ನೇಮಿಸಿಕೊಳ್ಳಲು ನಡೆಸಿದ ಹುನ್ನಾರವೇ ಎಂಬುದೂ ಬಟಾಬಯಲಾಗಬೇಕಿದೆ.

ಈ ಮಧ್ಯೆ, ಕೇಂದ್ರೀಯ ತನಿಖಾ ಮಂಡಳಿಯೇ ಈ ಘಟಕವನ್ನು ಸ್ಥಾಪಿಸಿರುವುದರಿಂದ, ಈ ಘಟಕ ಸ್ಥಾಪನೆಯ ಉದ್ದೇಶದ ಬಗ್ಗೆಯೇ ತನಿಖೆ ನಡೆಸಲು ಸಿಬಿಐ ಲೋಕಪಾಲವೊಂದನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಆದರೂ, ಟ್ರಾಫಿಕ್ ಕಿಂಗು ಮಾಡುವ ಕುರಿತು ಯಾರೇ ದೂರು ನೀಡಿದರೂ, ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಕೊಡಿಸುವ ಭರವಸೆ ನೀಡಿರುವುದರಿಂದ, ಈ ತನಿಖೆಯನ್ನು ನಡೆಸದಿರಲು ಬೊಗಳೂರು ಬ್ಯುರೋ ನಿರ್ಧರಿಸಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಗುರು,
    ಈ ಟ್ರ್ಯಾಫಿಕಿಂಗ್ ಪರಲೋಕಕ್ಕೂ ವಿಸ್ತರಿಸಿದೆಯಂತೆ. ಭಂವರೀದೇವಿ,ಜೆಸ್ಸಿಕಾ ಮೊದಲಾದವರನ್ನೆಲ್ಲ ಅಲ್ಲಿಗೆ ರವಾನೆ ಮಾಡಲಾಗಿದೆಯಂತೆ!

    ReplyDelete
  2. ಸುನಾಥರೇ,
    ದೇವರು ಕೂಡ ಪರಲೋಕದಲ್ಲೇ ಇರೋದು ಅಂತ ಕೆಲವರು ಎರಡೂ ಕೈಗಳನ್ನು ಚಾಚಿ, ಆಹ್ವಾನಿಸುತ್ತಿದ್ದಾರಲ್ಲಾ???

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post