(ಬೊಗಳೂರು, ಕಪಿಸೇನಾ ಬ್ಯುರೋದಿಂದ)
ಹಲವು ದಿನಗಳಿಂದ ಗಡದ್ದಾಗಿ ನಿದ್ದೆ ಮಾಡುತ್ತಿದ್ದ ಬೊಗಳೆ ಬ್ಯುರೋ, ಮಂಗಳೂರಿನಲ್ಲಿ ಮನೆ ಪಕ್ಕದಲ್ಲೇ ವಿಮಾನ ಬಿದ್ದರೂ ಎಚ್ಚರವಾಗದಿದ್ದಾಗ ವೇದೇಗೌಡ್ರು ಬಂದು, ರಾಮಾಯಣದ ಕಥೆ ಕೇಳಿದಾಗ ಬೆಚ್ಚಿ ಬಿದ್ದು ಎದ್ದು ಈ ವರದಿ ಪ್ರಕಟಿಸಿದೆ.
ಅರೆ, ಬೊಗಳೆ ಬ್ಯುರೋ ಇಲ್ಲದಿದ್ದರೂ ಜಗತ್ತಿನಲ್ಲಿ ಇಷ್ಟೆಲ್ಲಾ ವಿದ್ಯಮಾನಗಳು ಘಟಿಸಿದ್ದಾದರೂ ಹೇಗೆ ಎಂದು ಮೂಗಿನ ಮೇಲೆ ಬೆರಳು ಇರಿಸುತ್ತಿರುವಂತೆಯೇ, ರಾಮ, ರಾವಣ, ಸೀತೆ, ಹನುಮಂತ, ವಿಭೀಷಣ, ಲಕ್ಷ್ಮಣ ಎಂಬೆಲ್ಲಾ ಅಮೂಲ್ಯ ಪದಗಳು ನಮ್ಮ 'ಜಾರ'ಕಾರಣಿಗಳ ಬಾಯಿಂದ ಪಟಪಟನೆ ಉದುರುತ್ತಿರುವುದನ್ನು ನೋಡಿ, ರಾವಣರಾಜ್ಯದಲ್ಲಿ ನಿದ್ದೆ ಮಾಡಿದ್ದ ನಾವು, ರಾಮರಾಜ್ಯದಲ್ಲಿ ಎದ್ದೆವೇ ಎಂದುಕೊಂಡು ಮತ್ತೊಂದು ಕೈಯ ಬೆರಳನ್ನೂ ಮೂಗಿನ ಮೇಲೆ ಇರಿಸಲಾಯಿತು!
ಇದೇ ಸಂದರ್ಭದಲ್ಲಿ ಕಿಟಕಿಯಿಂದ ಹೊರಗೆ ನೋಡಿದಾಗ, ಕಪಿಸೈನ್ಯವು ತೀವ್ರ ಪ್ರತಿಭಟನೆ ಮಾಡುತ್ತಿರುವುದು ಕಂಡುಬಂದಿತು. ಇದಕ್ಕೆ ಕಾರಣವೇನು, ಯಾರ ವಿರುದ್ಧ ಪ್ರತಿಭಟನೆ, ಯಾಕಾಗಿ ಈ ಅಪ್ರತಿಭ ಪ್ರತಿಭಟನೆ ಎಂದೆಲ್ಲಾ ವಿಚಾರಿಸಲು ಬೊಗಳೂರು ಬ್ಯುರೋ ಕ್ಯಾಮರಾ ಹೆಗಲಿಗೇರಿಸಿಕೊಂಡು, ಒಡೆದ ಮೈಕ್ ಹಿಡಿದು ಅತ್ತ ಕಡೆ ತೆರಳಿತು.
ಮೈಕ್ ನೋಡಿದ ತಕ್ಷಣವೇ ಮಂಗವೊಂದು ಹಾರಿ, ಅದನ್ನು ಕಿತ್ತುಕೊಳ್ಳಲು ನೋಡಿತು. ತಕ್ಷಣವೇ ಬೊಗಳೂರಿನ ಅನ್ವೇಷಿ ನೇತೃತ್ವದ ಬ್ಯುರೋ ಎಂದು ತಿಳಿದಾಗ, "ಓ... ಇದು ನಮ್ಮವರೇ" ಎಂದುಕೊಂಡ ಆ ಕಪಿಯು, ಸಾರಿ ಸಾರಿ, ನಾನು ನಿಮ್ ಕೈಯಲ್ಲಿರೋದು ಬಾಳೆಹಣ್ಣೋ ಎಂದುಕೊಂಡು ಕಿತ್ತುಕೊಂಡೆ ಎಂದು ಸಮಜಾಯಿಷಿ ನೀಡಿತು.
ಆ ಮಂಗವನ್ನೇ ಕೈಯಲ್ಲಿ ಹಿಡಿದು ಮಾತನಾಡಲು ನಿರ್ಧರಿಸಲಾಯಿತು. ಯಾಕಾಗಿ ಈ ಪ್ರತಿಭಟನೆ ಎಂದು ಕೇಳಿದ ತಕ್ಷಣವೇ ಕಿರುಚಲು ಆರಂಭಿಸಿದ ಅದು ಹೇಳಿದ್ದು, "ರಾಮ, ರಾವಣರೆಲ್ಲ ಈ ಯುಗಕ್ಕೆ ಅಪಥ್ಯ. ಈಗಿನ ಕರ್ನಾಟಕದ ರಾಜಕೀಯ ಪರಿಸ್ಥಿತಿ ಗಮನಿಸಿದರೆ ರಾಮ, ರಾವಣ, ಸೀತೆ, ಲಕ್ಷ್ಮಣ ಮುಂತಾದವರು ಇತ್ತಕಡೆ ತಲೆ ಹಾಕಲೂ ಮಲಗುವುದಿಲ್ಲ ಎಂದು ನಮ್ಮಲ್ಲಿ ಹೇಳಿದ್ದಾರೆ. ಈಗೇನಿದ್ದರೂ ನಮ್ಮದೇ ಸಾಮ್ರಾಜ್ಯ. ಇಲ್ಲಿಯೂ ಕೂಡ ನಮ್ಮವರೇ ತುಂಬಿಕೊಂಡಿದ್ದಾರೆ. ಹೀಗಾಗಿ ಈ ಜಾರಕಾರಣಿಗಳ ಬಾಯಲ್ಲಿ, ರಾಮ, ರಾವಣ, ಸೀತೆ ಹೆಸರಿನ ಬದಲಿಗೆ ಕಪಿ ಸೈನ್ಯದ ಹೆಸರೇ ಬರಬೇಕಿತ್ತು. ನಮ್ಮನ್ನು ಉಲ್ಲೇಖಿಸದೇ ಇರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಇದಕ್ಕಾಗಿಯೇ ಅಪ್ರತಿಭರಾಗಿ ನಾವು ಈ ಪ್ರತಿಭಟನೆ ಮಾಡುತ್ತಿದ್ದೇವೆ" ಎಂದು ಹೇಳಿ ಛಂಗನೆ ನೆಗೆದು ಓಡಿತು.


0 ಕಾಮೆಂಟ್ಗಳು
ಏನಾದ್ರೂ ಹೇಳ್ರಪಾ :-D