(ಬೊಗಳೂರು ಬೆಲೆ ಏರಿಕೆ ಸ್ಪಷ್ಟನೆ ಬ್ಯುರೋದಿಂದ)
ಬೊಗಳೂರು, ಏ.22- ಏರುತ್ತಿರುವ ಬೆಲೆಗಳನ್ನು ಇಳಿಸಲೇಬೇಕು ಎಂದು ಹೋರಾಟ ಮಾಡುತ್ತಿದ್ದ ಬಿಜೆಪಿ, ಕೇಂದ್ರದ ಬೆಲೆ ಏರಿಕೆ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದ ಘಟನೆಗೆ ಸ್ಪಷ್ಟನೆಗಳ ಮಹಾಪೂರವೇ ಹರಿದುಬರುತ್ತಿದೆ.

ಒಂದೆಡೆ, ನೀವು ಬೆಲೆ ಕುಸಿತ ಮಾಡದಿದ್ದರೆ, ನಾನೇ ಕುಸಿದುಬೀಳುತ್ತೇನೆ ಎಂದು ಗಡ್ಕರಿ ಹೆದರಿಸಿ ಮಾಡಿಯೂ ತೋರಿಸಿದ್ದರು ಎಂದು ಒಂದು ಮೂಲವು ವರದ್ದಿ ತಂದು ಸುರಿದಿದ್ದರೆ, ಮತ್ತೊಂದು ರದ್ದಿ ಮೂಲದ ಪ್ರಕಾರ, ಆಕಾಶದಲ್ಲಿ ಹೋಗುತ್ತಿದ್ದ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ನೋಡಿಯೇ, ಗಡ್ಕರಿ ತಲೆ ತಿರುಗಿ ತಿರು ತಿರುಗಿ, ತಿರುವು ಮುರುವಾಗಿ ಬಿದ್ದರು!

ಇನ್ನೊಂದು ಸ್ಪಷ್ಟನೆ ತಿಳಿಸಿರುವಂತೆ, ಅಲ್ಲಿ ಲಕ್ಷಾಂತರ ಮಂದಿ ಹರಿದುಬಂದಿದ್ದರಿಂದಾಗಿ, ದೆಹಲಿಯ ಆ ಭಾಗದ ಮೇಲೆ ಭಾರ ಹೆಚ್ಚಾಯಿತು. ಹೀಗಾಗಿ ಭೂಮಿಯೇ ಒಂದಿಷ್ಟು ವಾಲಿದ ಪರಿಣಾಮವಾಗಿ ವೇದಿಕೆಯೂ ಅಲುಗಾಡಿದ ಅನುಭವವಾಯಿತು ಗಡ್ಕರಿ ಅವರಿಗೆ. ಹೀಗಾಗಿ ಅವರು ಸಾವರಿಸಿಕೊಳ್ಳುವಷ್ಟರಲ್ಲಿ ತತ್ತರಿಸಿ ಬಿದ್ದಿದ್ದರು ಎನ್ನುತ್ತವೆ ಏನೂ ತಿಳಿಯದ ಮೂಲಗಳು.

ತೀವ್ರ ಬಿಸಿಲೆಂಬುದು ಜನಸಾಗರಕ್ಕೆ ತಿಳಿಸಿದ ಕಾರಣವಾದರೂ, ಅಷ್ಟೊಂದು ಜನ ಸಾಗರವೇ ಇರುವಾಗ, ಈ ತಂಪು ತಂಪು ಸಾಗರದಲ್ಲಿ ಬಿಸಿಲಿನ ಝಳವಾದರೂ ಎಷ್ಟರಮಟ್ಟಿಗೆ ಪರಿಣಾಮ ಬೀರಬಹುದು? ಸಾಗರದಲ್ಲಿ ತಂಪು ನೀರೇ ಅಲ್ಲವೇ ಇರುವುದು? ಸಾಗರದ ಬೀಚುಗಳಿಗೆ ಹೋಗುವುದು ಕೂಡ ವಾಯು ವಿಹಾರಕ್ಕಾಗಿಯೇ ಅಲ್ಲವೇ? ಈ ಕಾರಣಕ್ಕೆ, ಅವರು ಕುಸಿದದ್ದು ಖಂಡಿತಾ ಬಿಸಿಲಿನ ತಾಪದಿಂದಾಗಿ ಅಲ್ಲ ಎಂದು ಮಗದೊಂದು ಮೂಲವು ವಾದಿಸುತ್ತಿದೆ.

ಇನ್ನೂ ಒಂದು ಮೂಲದ ವಾದವಿದೆ. ಈ ಪ್ರಮಾಣದಲ್ಲಿ ರಾಜ್ಯ-ಹೊರರಾಜ್ಯಗಳ ಜನರನ್ನು ಕರೆದುತಂದು ದಿಲ್ಲಿಯಲ್ಲಿ ರ‌್ಯಾಲಿ ಮಾಡುತ್ತಿದ್ದರೂ, ಪ್ರಧಾನಿ ಮನಮೋಹನ್ ಸಿಂಗ್ ಎಲ್ಲಿದ್ದಾರೆ? ಸರಕಾರವನ್ನು ನಿಜಕ್ಕೂ ನಿಯಂತ್ರಿಸುತ್ತಿರುವ ಸೋನಿಯಾ ಗಾಂಧಿ ಎಲ್ಲಿದ್ದಾರೆ? ಕೇಂದ್ರ ವಿತ್ತ ಸಚಿವರು ಎಲ್ಲಿದ್ದಾರೆ ಎಂದೆಲ್ಲಾ ಕತ್ತು ಉದ್ದ ಮಾಡಿ, ಮಾಡಿ, ಗಡ್ಕರಿಯವರು ಅವರನ್ನು ಈ ದೇಶದೊಳಗೆಲ್ಲೂ ಕಾಣದೆ, ಸುಸ್ತಾಗಿ ಕುಸಿದುಬಿದ್ದರು!

ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ಬೆಲೆ ಕುಸಿತ ಮಾಡುತ್ತೇವೆ ಎಂದು ಅನಾದಿ ಕಾಲದಿಂದ ಭರವಸೆ ನೀಡಿ ಅಧಿಕಾರಕ್ಕೇರಿದ್ದ ಯುಪಿಎ ಸರಕಾರದಲ್ಲಿ, ಈ ರೀತಿ ಹೇಳಿದವರ್ಯಾರೂ ಕಾಣಿಸದೇ ಹೋಗಿದ್ದರಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ, ಭಾರತದ ದಕ್ಷಿಣ ಭಾಗದಿಂದ ಮೇಲಕ್ಕೇರುತ್ತಲೇ ಹೋದ ಅಗತ್ಯ ವಸ್ತುಗಳ ಬೆಲೆಗಳೆಲ್ಲವೂ ದೆಹಲಿ ಮೇಲೆ ಹಾರಾಡುತ್ತಿದ್ದರಿಂದಾಗಿ, ಅಲ್ಲಿನ ಭೂಮಿಯ ಭಾರ ಜಾಸ್ತಿಯಾಗಿ, ವೇದಿಕೆ ಅಲುಗಾಡಿ ಗಡ್ಕರಿ ಕುಸಿದರು ಎಂದೂ ಹೇಳಲಾಗುತ್ತಿದೆ.

ಕೊಟ್ಟ ಕೊನೆಯ ಮೂಲದ ಪ್ರಕಾರ, ಕೇಂದ್ರದಲ್ಲಿ ಇದೆ ಎನ್ನಲಾಗುತ್ತಿರುವ ಸರಕಾರವೇ ಬೆಲೆ ಕುಸಿತಕ್ಕೆ ಆದೇಶ ನೀಡಿದಾಗ, ಅದು ತಿಳಿಯದೆ ತಾವಾಗಿಯೇ ಸ್ವತಃ ಗಡ್ಕರಿ ಗಡಗಡನೆ ಕುಸಿದರು ಅಂತೆ!

4 Comments

ಏನಾದ್ರೂ ಹೇಳ್ರಪಾ :-D

 1. ಗಡಕರಿಯವರು ಬಿದ್ದದ್ದು symbolic ಅಂತೀರಾ?

  ReplyDelete
 2. ಕುಸಿದುಬೀಳುವುದರಿಂದ ಒಳ್ಳೆಯದಾಗುವುದಾದರೆ ಆಗಲಿ ಬಿಡಿ ..!!!

  ReplyDelete
 3. ಸುನಾಥರೇ,
  ಗಡ್ಕರಿ ಗಡಗಡಾಂತ ನಡುಗಿ ಬಿದ್ದದ್ದು ಮೆಟಾಬಾಲಿಕ್ ಕಾರಣಕ್ಕಾಗಿಯಾದ್ರೂ, ಬೆಲೆ ಏರಿಕೆ ಪ್ರತಿಭಟನೆ ಸಂದರ್ಭವೇ ಆಗಿದ್ದು ಮಾತ್ರ ಸಿಂಬಾಲಿಕ್.

  ReplyDelete
 4. ಸುಬ್ರಹ್ಮಣ್ಯರೇ,
  ಯಾರೂ ಏನೂ ಆದರೂ ಕೇಂದ್ರ ಸರಕಾರಕ್ಕೂ ಏನೂ ಆಗುವುದಿಲ್ಲ. ಮುಗುಮ್ಮನೇ ತೆಪ್ಪಗಿದ್ದುಬಿಟ್ಟಿದೆಯಲ್ಲಾ...

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post