Subscribe Us

ಜಾಹೀರಾತು
header ads

ಬ್ರೇಕ್ ಮಾಡಲು ಸುದ್ದಿ ಇಲ್ಲದೆ ಪರದಾಡಿದ ಬೊಗಳೆ!

[ಬೊಗಳೂರು ಬ್ರೇಕ್ ಆಗದ ಬ್ಯುರೋದಿಂದ]
ಬೊಗಳೂರು, ಏ.12- ಇಂದು ಬೊಗಳೂರು ಸುದ್ದಿ ಮನೆಯಲ್ಲಿ ಮಾತಿಲ್ಲ, ಕಥೆಯಿಲ್ಲ. ಏನೇ ಆದರೂ ಒಡೆದು ಹೋಗುತ್ತಿಲ್ಲ. ಅಂದರೆ ಅಕ್ಷರಶಃ ಬ್ರೇಕ್ ಆಗುತ್ತಿಲ್ಲ. ಬ್ರೇಕ್ ಆಗಲು ಏನೂ ಉಳಿದಿಲ್ಲ.

ಇದಕ್ಕೆಲ್ಲಾ ಕಾರಣ ನೂರಾರು ಜನಸಂಖ್ಯೆಯಿರುವ ಬೊಗಳೂರಿನಲ್ಲಿ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದ ಸಾನಿಯಾ ಮಿರ್ಜಾಳ ಮದುವೆ. ಹಾಂ! ತಪ್ಪು ತಿಳಕೋಬ್ಯಾಡ್ರೀ... ಇದು ವಿರಹವೇದನೆಯಂತೂ ಅಲ್ಲವೇ ಅಲ್ಲ. ಆದರೆ, ಶೋಯಬ್-ಸಾನಿಯಾ ಮದುವೆಯಾದ ಬಳಿಕ ಬೊಗಳೂರಿನ ಸುದ್ದಿಮನೆಯು ಬಿಕೋ ಎಂಬಂತಾಗಿಬಿಟ್ಟಿರುವ ಪರಿಸ್ಥಿತಿಯ ವಿವರಣೆ ಅಷ್ಟೆ!

ಸಾನಿಯಾ ಯಾವ ಸೀರೆ ಉಟ್ಟಿದ್ದಳು, ಅದರ ಬಣ್ಣ ಯಾವುದು, ಅದು ತಾಯಿಯ ಸೀರೆಯನ್ನೇ ಉಟ್ಟಳೇ, ಅದು ಯಾಕೆ? ಹಾಗಾದರೆ ತಾಯಿಗೆ ಉಡಲು ಸೀರೆ ಇತ್ತೇ? ಸಾನಿಯಾ ಪ್ರಯಾಣಿಸಿದ ಕಾರಿಗೆ ಎಷ್ಟು ಚಕ್ರಗಳಿದ್ದವು? ಅದರ ಗಾಲಿಯಲ್ಲಿ ಸಾಕಷ್ಟು ಗಾಳಿ ಇತ್ತೇ? ಮೂಗುತಿ ಸುಂದರಿ ಮೂಗಿಗೆ ಏನು ಇಟ್ಟಳು? ಬ್ರೇಕಿಂಗ್ ಸುದ್ದಿಯ ಧಾವಂತ ನೋಡಿ ನೋಡಿ ಮೂಗಿಗೆ ಕೈಯಿಟ್ಟಳೇ? ಅಥವಾ ಕೈಮುಚ್ಚಿಕೊಂಡಳೇ? ಎಂಬಿತ್ಯಾದಿ ರದ್ದಿಯನ್ನು ಬ್ರೇಕ್ ಮಾಡಿ ಮಾಡಿ ಸುಸ್ತಾಗಿದ್ದಾಗಲೇ, ಈ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಸಾನಿಯಾ-ಶೋಯಬ್ ಕೊನೆಗೂ ಮದುವೆ ಆಗಿಬಿಟ್ಟಿತು! ಅಲ್ಲಿಗೆ ಇನ್ನು ಬ್ರೇಕ್ ಮಾಡಲು ಏನೂ ಉಳಿದಿಲ್ಲ ಎಂಬಂತಹಾ ಶೂನ್ಯ ಪರಿಸ್ಥಿತಿ!

ದಿಢೀರ್ ಆಗಿ ಮದುವೆ ಮಾಡಿಸುವಲ್ಲಿ ಸಾನಿಯಾ ಕೈವಾಡವೂ ಇದೆ ಎಂದು ಶಂಕಿಸಲಾಗಿದೆ. ಅಂದರೆ, ಬೊಗಳೂರು ರದ್ದಿ ಚಾನೆಲಿನಲ್ಲಿ ನಿರಂತರವಾಗಿ ಸಾನಿಯಾ-ಶೋಯಬ್ ಬಗ್ಗೆ, ಶೋಯಬ್ ತಂದೆಯ ಹೆಸರಿನ ಬಗ್ಗೆ, ಶೋಯಬ್ ಮೊದಲನೇ ಪತ್ನಿಯ ಬಗ್ಗೆ, ಎರಡನೇ ಪತ್ನಿಯ ಬಗ್ಗೆ ಇತ್ಯಾದಿತ್ಯಾದಿ ಹಗ್ಗೆ ರೇಜಿಗೆ ಹುಟ್ಟಿಸುವಂತಹಾ ಬ್ರೇಕಿಂಗ್ ರದ್ದಿಗಳು, ತಲೆಯಿರುವ ಆದರೆ ಬುಡವಿಲ್ಲದ ವಿಶ್ಲೇಷಣಾತ್ಮಕ ರದ್ದಿಗಳನ್ನು ತಂದು ತಂದು ಸುರಿದು ಮೂಗು ಮುಚ್ಚಿಸುತ್ತಿದ್ದವರಿಗೆ ಕೆಲಸವಿಲ್ಲದೆ ಹೊಡೆಯೋಣವೆಂದರೆ ನೊಣವೂ ಸಿಗಲಾರದ ಪರಿಸ್ಥಿತಿ. ಅವುಗಳೂ ಸಾನಿಯಾ ಮದುವೆಗೆ ಗುಂಯ್‌ಗುಡಲು ಹೋಗಿರುವ ಶಂಕೆ.

ಹೀಗಾಗಿ, ಇನ್ನು ಮುಂದೆ ಬೊಗಳೂರು ಬ್ಯುರೋ ಏನೇನೇ ಬಾಯಿಗೆ ಬಂದ ವರದ್ದಿ ಪ್ರಕಟಿಸಿ, ಯಾರೋ ಯಾರನ್ನೋ ಮದುವೆಯಾಗಿಬಿಟ್ಟರು ಎಂದೆಲ್ಲಾ ತಪ್ಪು ತಪ್ಪು ಚಿತ್ರಗಳನ್ನು ತೋರಿಸದಂತಾಗಲೂ, ಬೊಗಳೂರು ಛಾಯಾಗ್ರಾಹಕರಿಗೆ ಅವಕಾಶವೇ ನೀಡದೆ, ತಾವೇ ಚಿತ್ರಗಳನ್ನು ಕಳುಹಿಸುವುದಾಗಿ ಮದುವೆ ಮನೆಯಿಂದ ಸೂಚನೆಗಳು ಬಂದಿದ್ದವು.

ಆಗಿಬಿಟ್ಟಿತು. ಆಗಿಯೇ ಬಿಟ್ಟಿತು. ಇನ್ನು ಮುಂದೆ ಸಾನಿಯಾ ಬ್ರೇಕ್ ಆದ ನ್ಯೂಸಿಗೆ ಅವಕಾಶವೇ ಇಲ್ಲದಂತಾಗಿರುವ ಕಾರಣ, ಬೊಗಳೂರು ಬ್ಯುರೋ ಬಿಕೋ!

Post a Comment

16 Comments

 1. ಮೊನ್ನೆ ಮೊ-ಬಯಲಿನಲ್ಲಿ ಹರಿದಾಡುತ್ತಿದ್ದ ಬ್ರೇಕಿಂಗ್ ನ್ಯೂಸ್:
  SANIA MIRZA left INDIA.
  MILK price hiked by 3 Rs.

  ReplyDelete
 2. ಬ್ರೇಕ್ ಆಗಲು ಏನೂ ಉಳಿದಿಲ್ಲ!!! ಶೋಯಬ್-ಸಾನಿಯಾ ಆಲ್‌ರೆಡಿ ಬ್ರೋಕನ್ ಐಟಮ್ಸ್... ;)

  ReplyDelete
 3. ಹಯ್ಯೋ ಶಿವನೆ!....ಸಾನಿಾಯಾಳ ವಿವಾದ ಅಲ್ಲ್ಲ ವಿವಾಹ ನಿಮ್ಮ ಬೊಗಳೂರಿನಲ್ಲೂ ವಿಷಾದವನ್ನೇ ತಂದಿಟ್ಟಿದೆಯೇ ಗುರುವೇ....
  ವ್ಯಾಕುಲಗೊಳ್ಳದಿರಿ.... ಸಮಾಧಾನಿಸಿಕೊಳ್ಳಿ

  ReplyDelete
 4. ಛೇ ! ಹೀಗಾಗಬಾರದಿತ್ತು !!
  ಕನಿಷ್ಟ, ನಿಮ್ಮ ಬ್ಯೂರೋಗಾದರೂ ಸಾನಿಯಾ ಒಂದು Hot ರದ್ದಿ ಕೊಡಬೇಕಿತ್ತು .

  ReplyDelete
 5. Hyaage nodi !sania ella biTTu shoaib na madve aagbitlu, break aagakke avakaasha ne koDade ! irli, naanondisht gaajina pieces itkondidini, break maaDi koDtira ?

  ReplyDelete
 6. ಪಾಕಿಸ್ತಾನದಲ್ಲಿ ನಿರುದ್ಯೋಗಿಯಾಗಿದ್ದ ಶೋಯೆಬ್ಬಂಕನಿಗೆ ಮನೆ-ಅಳಿಯ ಎನ್ನುವ ಉದ್ಯೋಗ ಕೊಟ್ಟ ಭಾರತವೇ ಧನ್ಯ! ‘ಅಳಿಯ ಮನೆ ತೊಳೆಯ’ ಅನ್ನೋ ಗಾದೆ ಮಾತು ಈಗ ಏನಾಗುತ್ತದೆ, ನೋಡೋಣ!

  ReplyDelete
 7. Vishwanath Gudsi SedamApril 17, 2010 8:05 AM

  ಯಾರು ಎದೆ ಒಡೆದುಕೊಳ್ಳುವ ಅಗತ್ಯವಿಲ್ಲ... ಸೋಹ್ರಬನೊಂದಿಗೆ ಎಂಗೇಜ್ಮೆಂಟ್ ಪ್ರಾಕ್ಟಿಸ್ ಮಾಡಿದ ಸಾನಿಯಾ, ಈಗ ಶೋಯೆಬ್ನೊಂದಿಗೆ ಮಾಡುವೆ ರಿಹರ್ಸಲ್ ಮುಗಿಸಿದ್ದಾಳೆ. ಇನ್ನು ಕೆಲವೇ ದಿನದಲ್ಲಿ ಡೀ-ವೋರ್ಸ್ ಕೊಟ್ಟು ಓಡಿ ಬರುತ್ತಾಳೆ ಅಲ್ಲಿಯವರೆಗೆ ತಾಳ್ಮೆಯಿಂದಿರಿ..

  ReplyDelete
 8. ರೀ.., ವಿಶ್ವನಾಥ್,
  ನೀವು ಹೇಳೋಹಾಗೆ ಡಿ-ವೋರ್ಸ್ ಕೊಟ್ಟು ಓಡೋಡಿ ಬಂದ್ರೆ..

  ReplyDelete
 9. ಗಿರೀಶರೇ,
  ನಿಮ್ಮ ಮಹಾನ್ ಬ್ರೇಕಿಂಗ್ ನ್ಯೂಸ್‌ಗೆ ಸರಿ ಸಾಟಿ ಇರಲಾರದು!

  ReplyDelete
 10. ಪ್ರಕಾಶಕರೇ,
  ಅದೂ ಹೌದು, ಅದರೊಂದಿಗೆ ಸಾನಿಯಾ ಮಲಿಕ್ -ಶೋಯಬ್ ಮಿರ್ಜಾ ಇಬ್ಬರೂ ಕೂಡ ಉಭಯ ರಾಷ್ಟ್ರಗಳಲ್ಲಿಯೂ ಹಲವು ಹೃದಯಗಳನ್ನು ಬ್ರೇಕ್ ಮಾಡಿಬಿಟ್ಟಿದ್ದಾರಲ್ಲಾ...

  ReplyDelete
 11. ಶಾನಿಯವರೆ,
  ಮೆತ್ತಗೆ ಹೇಳಿಬಿಡಿ, ವಿಷಾದಯೋಗವಿದೆ ಎಂದು ಊರೆಲ್ಲಾ ತಿಳಿದರೆ ದೊಡ್ಡ ಜಂಭರವೇ ಆಗುತ್ತದೆ!

  ReplyDelete
 12. ಸುಬ್ರಹ್ಮಣ್ಯರೇ,
  ನೀವೂ ಈ ರೀತಿ ಹೇಳುವುದಾ? ಮರುಗದಿರಿ, ಸಾನಿಯಾ ಹೋದವಳು ಹೋದಳು. ಇನ್ನು ಇರುವುದರಲ್ಲೇ ಏನಾದರೂ ಸಮಾಧಾನ ಮಾಡಿಕೊಳ್ಳಿ.

  ReplyDelete
 13. ಲಕ್ಷ್ಮೀಸ್ ಅವರೆ,
  ಎಷ್ಟೆಲ್ಲಾ ಹೃದಯಗಳು ಬ್ರೇಕ್ ಆಗೋಕ್ಕೆ ಅವರೆಲ್ಲಾ ಅವಕಾಶ ಕೊಟ್ಟರು? ನೀವು ಕೌಂಟ್ ಮಾಡಿಲ್ವಾ?
  ನಿಮ್ಮ ಗಾಜಿನ ಪುಡಿಯನ್ನೇ ಮತ್ತೆ ಬ್ರೇಕ್ ಮಾಡಬೇಕಾಗಿದ್ದರೆ ಒಂದಿಷ್ಟು ಯೋಚನೆ ಮಾಡಬೇಕಾಗುತ್ತೆ.

  ReplyDelete
 14. ಸುನಾಥರೇ,
  ಶೋಯಬ್ ಕಾಕನೆಂಬ ಅಳಿಯ ಭಾರತವನ್ನು ತೊಳೆಯದಿದ್ದರೆ ಸಾಕು.

  ReplyDelete
 15. ವಿಶ್ವನಾಥರೇ,
  ಬೊಗಳೂರಿಗೆ ಸುಸ್ವಾಗತ.
  ನೀವು ಕೊಟ್ಟ ಭರವಸೆಯ ನುಡಿಗಳಿಂದ ಮನಸ್ಸು ತಹಬದಿಗೆ ಬಂದಿದೆ. ಅದಿರಲಿ, ಅವಳು ಮರಳಿ ಬರುವವರೆಗೆ ತಾಳ್ಮೆಯಿಂದಿರಲು ನೀವು ಹೇಳುತ್ತಿರುವುದು ನಮಗೆಯೇ? ಇದರಲ್ಲೇನೋ ಸಂಚು ಇದ್ದಾಂಗಿದೆಯಲ್ಲಾ?

  ReplyDelete
 16. ಜ್ಞಾನಾರ್ಪಣಮಸ್ತು ಅವರೇ,
  ನಿಮಗೂ ಬೊಗಳೂರಿಗೆ ಸುಸ್ವಾಗತ.
  ಓಡೋಡಿ ಬಂದ್ರೆ, ಅವಳನ್ನು ಚೆಕಪ್ ಮಾಡಬೇಕಾಗುತ್ತೆ. ಎಲ್ಲಾದರೂ ಉಗ್ರರು ಅಡಗಿಕೊಂಡಿದ್ದಾರೆಯೇ ಅಂತ! ಅಷ್ಟೆ.

  ReplyDelete

ಏನಾದ್ರೂ ಹೇಳ್ರಪಾ :-D