ಬೊಗಳೆ ರಗಳೆ

header ads

ಪದಕೋಶಕ್ಕೆ ತಿದ್ದುಪಡಿ: ವೇದೇಗೌಡ್ರ ಒತ್ತಾಯ

(ಬೊಗಳೂರು ಅಸಭ್ಯ ಪದಕೋಶ ಬ್ಯುರೋದಿಂದ)
ಬೊಗಳೂರು, ಜ.11- ಬಾಸ್ಟರ್ಡ್, ಬ್ಲಡಿ, ಬೋ... ಮಗ ಇತ್ಯಾದಿಗಳನ್ನು ಸಾಂವಿಧಾನಿಕ ಪದಕೋಶಕ್ಕೆ ಮತ್ತು ಸಾಧ್ಯವಾದರೆ ಆಕ್ಸ್‌ಫರ್ಡ್ ಪದಕೋಶಕ್ಕೂ, ಇದ್ದರೆ ಅದಕ್ಕಿಂತ ದೊಡ್ಡ ದೊಡ್ಡ ಡಿಕ್ಷನರಿಗೆ, ಫ್ರೆಂಚ್, ಗ್ರೀಸ್, ಇಟಲಿ, ಚೀನೀ ಇತ್ಯಾದಿ ಎಲ್ಲಾ ಭಾಷೆಗಳ ನಿಘಂಟುಗಳಿಗೂ ಸೇರಿಸಬೇಕು ಎಂದು ಪ್ರಾಂತೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಗೌರವಾನ್ವಿತ ಮಣ್ಣಿನ ಮಗನಾಗಿರುವ ಮಾಜಿ ನಿಧಾನಿಯೂ ಆಗಿರುವ ಶ್ರೀಶ್ರೀಮಾನ್‌ಮಾನ್ ವೇದೇಗೌಡರು ಮುಖ್ಯಮಂತ್ರಿಯನ್ನು ಬಹಳ ಆತ್ಮೀಯತೆಯಿಂದ, ಅತಿ ಸಲುಗೆಯಿಂದ ಈ ಮೇಲಿನ ಪದಗಳನ್ನು ಉಪಯೋಗಿಸಿ ಸಂಬೋಧಿಸಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಬೊಗಳೂರು ಸಿಬ್ಬಂದಿ ಈ ಕುರಿತು ತನಿಖೆ ಆರಂಭಿಸಿದ್ದರು.

ತನಿಖೆ ಆರಂಭಿಸಿರುವಾಗ ತಿಳಿದುಬಂದ ಅಂಶವೆಂದರೆ, ಮಾಜಿ ನಿಧಾನಿಗಳೂ, ಮಣ್ಣಿನಿಂದಲೇ ಚಿನ್ನ ಮಾಡಿಕೊಂಡ ರೈತಪುತ್ರರೂ ಆದ ವೇದೇಗೌಡರು ಹೊಸ ಹೊಸ ಮತ್ತು ಹಳೆ ಹಳೆಯ ಶಬ್ದಕೋಶಗಳನ್ನು ಹುಡುಕಿ ಹುಡುಕಿ ಜರೆದಿದ್ದಾರೆ ಎಂಬುದು ಪತ್ತೆಯಾಗಿದೆ. ತಾವು ಯಾವತ್ತಿಗೂ ಅಧ್ಯಯನ ನಿರತರಾಗಿದ್ದು, ಈ ಹೊಸ ಪದಗಳನ್ನು ಯಾರೂ ಹೆಚ್ಚಾಗಿ ಯಾಕೆ ಬಳಸುತ್ತಿಲ್ಲವೆಂಬುದು ನಮಗೇ ಅಚ್ಚರಿಯಾದ ಕಾರಣದಿಂದ ಅವುಗಳನ್ನು ಬಳಸಿ, ಬೆಳೆಸಲು ಪ್ರಯತ್ನಿಸಿರುವುದಾಗಿ ಹೇಳಿದರು.

ಮತ್ತೊಂದು ವರದ್ದಿ ಮೂಲಗಳ ಪ್ರಕಾರ, ವೇದೇಗೌಡರು ಇಂತಹ ವೇದವಾಕ್ಯಗಳನ್ನು ಉದುರಿಸಿರುವುದಕ್ಕೆ ಬೇರೆ ಕಾರಣಗಳೂ ಇವೆ. ಅವರು ಇತ್ತೀಚೆಗೆ ತಮ್ಮ ರೈತಪುತ್ರರೊಂದಿಗೆ ಸೇರಿಕೊಂಡು ನೈಸಾಗಿರುವ ರಸ್ತೆಯ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಮಾಜಿ ನಿಧಾನಿ ಪಟ್ಟದ ಮೇಲಿದ್ದವರು ಧಡಕ್ಕನೇ ಬೀದಿಗಿಳಿದು ಹೋರಾಟ ಮಾಡುವುದೇನೂ ಸಣ್ಣ ಪುಟ್ಟ ವಿಷಯವಲ್ಲ. ಅದೊಂದು ದಿನ ತಾವು ದಿಢೀರನೇ ಈ ಪಟ್ಟಕ್ಕೇರಿದಾಗ, ಹಿಂದಿ ಕಲಿಯಲು ಹೋಗಿ ಸೋತು ಸುಣ್ಣವಾಗಿದ್ದು ಇನ್ನೂ ನೆನಪಿನಲ್ಲಿತ್ತು. ಆವತ್ತು 'ಏರಿದ' ಸಂದರ್ಭ ಎದುರಾದ ಬಿಕ್ಕಟ್ಟು ಈ ಬಾರಿ ಬೀದಿಗೆ 'ಇಳಿದಾಗ' ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಅವರು, ಬೀದಿ ಭಾಷೆಯನ್ನು ಬೀದಿಯಲ್ಲಿದ್ದುಕೊಂಡೇ ತಕ್ಷಣ ಪ್ರಯೋಗಿಸಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ನಮ್ಮ ವರದ್ದಿಗಾರರು ಎಲ್ಲಿಯೂ ವರದಿ ಮಾಡಿಲ್ಲ.

ಇನ್ನೊಂದು ದೃಷ್ಟಿಕೋನದಿಂದ ತಪಾಸಣೆ ನಡೆಸಿದಾಗ ಬೇರೆಯೇ ವಿಷಯ ಹೊರಬಿದ್ದಿದೆ. ತಾವೊಬ್ಬ ಮಣ್ಣಿನ ಮಗನಾಗಿ ಇಷ್ಟು ದಿನಗಳಿಂದ ಬೀದಿಗಿಳಿದು ತಮ್ಮ ತಮ್ಮ ರೈತರ ಪರವಾಗಿ ಹೋರಾಟ ಮಾಡುತ್ತಿದ್ದಾರೆ, ತಾವೊಬ್ಬ ಮಾಜಿ ನಿಧಾನಿ ಎಂಬ ಪರಿಜ್ಞಾನವೂ ಇಲ್ಲದೆ ರಾಷ್ಟ್ರೀಯ ಸುದ್ದಿ ವಾಹಿನಿಗಳು, ರಾಷ್ಟ್ರೀಯ ಸುದ್ದಿ ಪತ್ರಿಕೆಗಳು ಈ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ, ಒಂದೇ ಒಂದು ಸುದ್ದಿಯನ್ನೂ ಮಾಡುತ್ತಿಲ್ಲ, ಬಿತ್ತರಿಸುತ್ತಿಲ್ಲ. ಹೀಗಾಗಿ ಏನಾದರೂ ಮಾಡಬೇಕಲ್ಲ ಎಂದು ಕೂದಲಿಲ್ಲದ ತಲೆ ಕೆರೆದುಕೊಂಡು ಯೋಚಿಸಿದವರೇ, ಈ ಪದ ಪ್ರಯೋಗದ ಸಾಹಿತ್ಯಕೃಷಿಗೆ ಕೈಹಚ್ಚಿದ್ದರು ಎಂದು ಮೂಲಗಳು ವರದ್ದಿ ಮಾಡಿವೆ. ಇದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದು, ಆದರೂ ಕೆಲವು ಚಾನೆಲ್‌ಗಳು ತಾವು ಕಷ್ಟಪಟ್ಟು ಹುಡುಕಿ ಕಾಯಿನ್ ಮಾಡಿದ್ದ ಈ ಹೊಸ ಶಬ್ದಗಳು ಬರುವಾಗ 'ಕೀಂssss....' ಎಂಬ ಸದ್ದು ತೂರಿಸಿ, ಅದೇನೆಂದು ಜನರು ತಿಳಿಯದಂತೆ ಮಾಡಿದ್ದಾರೆ ಎಂದೂ ಅವರು ಅಸಮಾಧಾನ ಹೊರಗೆಡಹಿದ್ದಾರೆ.

ಮಾತ್ರವಲ್ಲದೆ, ಈಗೀಗ ಜನರಲ್ಲಿ ರಾಜಕಾರಣಿಗಳ ಬಗ್ಗೆ ಹಾಗೂ ರಾಜಕಾರಣಿಗಳಲ್ಲಿ ಎದುರಾಳಿಗಳ ಬಗ್ಗೆ ಅಸಹನೆ ಹೆಚ್ಚಾಗುತ್ತಿದೆ, ಇಂತಹ ಸಂದರ್ಭದಲ್ಲಿ ಈ ರೀತಿಯ ಪದಗಳೇ ಕೆಲಸ ಮಾಡುತ್ತವೆ. ಹೀಗಾಗಿ ಅವುಗಳನ್ನು ಅಸಾಂವಿಧಾನಿಕ ಪದಕೋಶದಿಂದ ಕಿತ್ತೆಸೆದು ಸಾಂವಿಧಾನಿಕ ಪದಕೋಶಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

 1. ವೇದೇಗೌಡ್ರು ಇಂಥದ್ದೇ ಇನ್ನಷ್ಟು ವೇದಪದಗಳನ್ನು ಕಲಿಯೋದಕ್ಕೆ ಅನ್ವೇಶಿಗಳ ಬಳಿಯೇ ಬರಲಿದ್ದಾರಂತೆ ಎನ್ನೋದು ಬರಿ ಬೊಗಳೆ ಸುದ್ದಿ ಅಂತ ನಮ್ಮ ವೇದಾಂತಿಗಳಲ್ಲದ ಚುದ್ದಿಗಾರರು ತಿಳಿಸಿದ್ದಾರೆ ಅನ್ನೋದು ಶುಧ್ಹ ರಗಳೆಯಂತೆ !! ಅನ್ವೇಶಿಗಳೇ "ವೇದೇಗೌಡ್ರು " ಅನ್ನೋ ಪದ ನಿಮ್ಗೆ ಹೊಳೆದದ್ದು ಹೇಗೆ ಅಂತಾ ಸ್ವಲ್ಪ ಹೇಳ್ತೀರಾ !!?

  ಪ್ರತ್ಯುತ್ತರಅಳಿಸಿ
 2. ಕಿಟ್ಟೆಲ್ ಸಾಹೇಬರು ಸ್ವರ್ಗಲೋಕದಿಂದ ಧರೆಗಿಳಿದು ಬಂದು, ಮಣ್ಣಿನ ಮಗನ ಪಾದಗಳ ಬಳಿ ಹೊರಳಾಡಿ, ಹೊಸದೊಂದು ಶಬ್ದಕೋಶ ಸಿದ್ಧಪಡಿಸುತ್ತಿದ್ದಾರಂತೆ. ಈ ಹೊಸ ಶಬ್ದಕೋಶದ ಹೆಸರು:"ಬೋ..ಮಗನ ಶಬ್ದಕೋಶ"!

  ಪ್ರತ್ಯುತ್ತರಅಳಿಸಿ
 3. ವೇದೇಗೌಡರ ಮಗ ಜೋಕುಮಾರಸ್ವಾಮಿ ಎಲ್ಲಿ ಹೋಗಿದ್ರೋ ಈ ಗಲಾಟೆ ನಡೀವಾಗ.. ಅಂದ್ರೂ ವೇದೇಗೌಡ್ರನ್ನ ಈ ರೀತಿ ಕಡೆಗಣಿಸೋದು ತಪ್ಪು! ತಪ್ಪು ತಪ್ಪು! ಲೇಖನ ಬಹಳ ವಿಡಂಬನಾತ್ಮಕವಾಗಿದೆ. ಅನ್ವೇಷಿಗಳ ಅನ್ವೇಷಣೆ ಆಹಾ..!

  ಪ್ರತ್ಯುತ್ತರಅಳಿಸಿ
 4. ಸುಬ್ರಹ್ಮಣ್ಯ ಅವರೆ,
  ವೇದೇಗೌಡ್ರು ಇತ್ತ ಬರಲಿದ್ದಾರೆ ಎಂಬ ನಿಮಗೆ ಗೊತ್ತಾಗಿರೋ ಈ ರಹಸ್ಯದಿಂದಾಗಿಯೇ ನಾವು ತಲೆಮರೆಸಿಕೊಂಡೇ ಓಡಾಡುತ್ತಿದ್ದೇವೆ. ನಿಮ್ಮ ಪ್ರಶ್ನೆಗೆ ಉತ್ತರ: ಪ್ರಾಚೀನ ಕಾಲದಲ್ಲಿ ಮಂಗನಿಂದ ಮಾನವ ಎಂಬ ಪದವು ನಾವು ಅದಕ್ಕೆ ಮೊದಲೇ ವೇದಗಳ ಕಾಲದಲ್ಲಿದ್ದಾಗಲೇ ಗೊತ್ತಿದ್ದ ಕಾರಣದಿಂದಾಗಿ, ಆಗೀಗ್ಗೆ ಕನ್ನಡ ನಾಡಿನಲ್ಲಿ ನಾನು ಹುಟ್ಟಬಾರದಾಗಿತ್ತು ಎಂಬಿತ್ಯಾದಿ ವೇದವಾಕ್ಯಗಳನ್ನು ಉದುರಿಸೋ ಹೆಸರೇ ನಮಗೆ ಸೂಕ್ತ ಅನ್ನಿಸಿತು.

  ಪ್ರತ್ಯುತ್ತರಅಳಿಸಿ
 5. ಸುನಾಥರೆ,
  ನಿಮ್ಮ ಸಜೆಶನ್ ಕೇಳಿ ನಮ್ಮ ಬೊಗಳೂರು ಬ್ಯುರೋದ ಮಂದಿ ನೆಲದ ಮೇಲೆ ಹೊರಳಾಡತೊಡಗಿದ್ದಾರೆ. ಏನೆಂದು ಪರಿಶೀಲಿಸಿದಾಗ, ಅವರು ಬಿದ್ದು ಬಿದ್ದು ನಗುತ್ತಿರುವುದು ಎಂದು ತಿಳಿದುಬಂತು!

  ಪ್ರತ್ಯುತ್ತರಅಳಿಸಿ
 6. ಕಾರ್ತಿಕ್ ಅವರೆ, ಬೊಗಳೂರಿಗೆ ಸ್ವಾಗತ.
  ಲೇಖನ ವಿಡಂಬನಾತ್ಮಕವಾಗಿದೆ ಎಂದೆಲ್ಲಾ ಹೇಳಿ ನಮ್ಮ ಬೊಗಳೂರಿನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 7. ಹ ಹ..ಬೊಗಳೂರಿನಲ್ಲಿ ಬರೋ ಪಾತ್ರಗಳಿಗೆ, ಅರ್ಥಾತ್ ವೇದೇಗೌಡ ಮತ್ತು ಕುಟುಂಬಕ್ಕೆ ಮಸಿಯೇ ಮೇ'ಕಪ್ಪು'! ಧನ್ಯವಾದಗಳು. ಬೊಗಳೆಯ ರಗಳೆ ನಮ್ಮನ್ನು ಸದಾ ಆಕರ್ಷಿಸಲಿ ಎಂದು ಹಾರೈಸುತ್ತೇನೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D