ಬೊಗಳೆ ರಗಳೆ

header ads

ಗಂಡಾಂತರ ಪದ ನಿಷೇಧಕ್ಕೆ ಪುರುಷರ ಆಗ್ರಹ

(ಬೊಗಳೂರು ಗಂಡಸರು-ಹೆಂಡಸರ ಅಸಮಾನತಾ ಬ್ಯುರೋದಿಂದ)
ಬೊಗಳೂರು, ನ.19- ಇಂದು ಅಂತಾರಾಷ್ಟ್ರೀಯ ಪುರುಷರ ದಿನವಾಗಿರುವುದರಿಂದ ಬೊಗಳೂರಿನ ಬೀದಿ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡ ಅಖಿಲ ಬೊಗಳೆ ಪುರುಷರ ಸಂಘವು, ಗಂಡಾಂತರ ಎಂಬ ಶಬ್ದ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಹಿಳೆಯರು ಯಾವುದೇ ತಪ್ಪು ಮಾಡಿದರೂ ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದನ್ನು ಗಂಡಾಂತರ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮಹಿಳೆಯರು ಗಂಡಂದಿರನ್ನು ಬದಲಾಯಿಸುವ ಪ್ರಕ್ರಿಯೆಗೆ ಮಾತ್ರವೇ ಗಂಡಾಂತರ ಎಂಬ ಪದವನ್ನು ಬಳಸಬೇಕು ಎಂದು ಆ(ಹ್)ಗ್ರಹಿಸಿದ್ದಾರೆ.

ಗಂಡಾಂತರ ಪದವನ್ನು ನಿಷೇಧಿಸದಿದ್ದರೆ, ಅದರ ಜೊತೆಗೆ ಪುರುಷರು ಆಗಾಗ್ಗೆ ಮಾಡುವ ತಪ್ಪುಗಳಿಗೆ ಮತ್ತು ಅವು ಭಾರೀ ತೊಂದರೆಗೆ ಕಾರಣವಾದರೆ, ಅವುಗಳನ್ನು ಹೆಂಡಾಂತರ(ಕಾರಿ) ಎಂದು ಕರೆಯಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.

ಆದರೆ ಇದು ಹೆಂಡವನ್ನು ಪದೇ ಪದೇ ಬದಲಾಯಿಸಿ ಕುಡಿಯುವ ಪ್ರಕ್ರಿಯೆಗೆ ಪರ್ಯಾಯ ಪದವಾಗುತ್ತದೆಯೇ ಎಂದು ಬೊಗಳೂರು ಬ್ಯುರೋ ವರದ್ದಿಗಾರರು ಕೇಳಿದ ಪ್ರಶ್ನೆಗೆ ಅವರ ಬಳಿ ಉತ್ತರವಿರಲಿಲ್ಲ! ಅವರು ನಕ್ಕ ನಗೆ ನೋಡಿದರೆ, ಸಲ್ಮಾನ್ ರಶ್ದೀ ಆಗಾಗ್ಗೆ ಹೆಂಡ್ತೀರನ್ನು ಬದಲಾಯಿಸ್ತಾ ಹೆಂಡಾಂತರ ಮಾಡುವ ಪ್ರಕ್ರಿಯೆ ನೆನಪಿಗೆ ಬಂದಂತೆ ತೋರುತ್ತಿತ್ತು.

ಸಮಾನತೆ ಸಮಾನತೆ ಎಂದು ಹೋರಾಟ ಮಾಡುವ ಹೆಂಡಸರು ಉಫ್.... ಅಲ್ಲಲ್ಲ ಹೆಂಗಸರು, ಈ ಗಂಡಾಂತರದಂತಹುದೇ ಪದ (ಹೆಂಡಾಂತರ) ನಮಗೆ ಬೇಕು ಎಂದು ಒತ್ತಾಯಿಸುತ್ತಿಲ್ಲವೇಕೆ, ಕೂಗಾಡುತ್ತಿಲ್ಲವೇಕೆ ಮತ್ತು ಅರಚಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ ಅವರು, ಆದರೆ, ಹೆಣ್ಣುಗಳ ಪಾನೀಯ ಸೇವನೆ ಪ್ರಕ್ರಿಯೆಗೆ ಹೆಂಗಸರ ಕುಡಿತ ಅಂತ ಕರೀತಾರೆ, ಅದೇ ರೀತಿ ಗಂಡುಗಳ ಪ್ರಕ್ರಿಯೆಗೆ ಗಂಗಸರ* ಕುಡಿತ ಅಂತ ಕರೆಯುವುದಿಲ್ಲವೇಕೆ, ಹೆದರಿಕೆಯೇ? ಎಂದು ಪ್ರಶ್ನಿಸಿದರು.

ಇದೇ ರೀತಿಯಾಗಿ, ಗಂಡಸರನ್ನೆಲ್ಲಾ ಹೆಂಡಸಾರಾಯಿ ಕುಡುಕರು ಅಂತೆಲ್ಲಾ ಹೀಯಾಳಿಸುತ್ತಾರೆ, ಇನ್ನು ಮುಂದೆ ಅದನ್ನು ಗಂಡಸಾರಾಯಿ ಎಂದು ಬದಲಾಯಿಸತಕ್ಕದ್ದು ಎಂದೂ ಅವರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಇಲ್ಲಿಯೂ ಹೆಂಗಸರಿಗೇ ಪ್ರಾಧಾನ್ಯತೆ ಕೊಟ್ಟು, ಸಾಮಾಜಿಕ ಅಸಮತೋಲನಕ್ಕೆ ನಾಂದಿ ಹಾಡುತ್ತದೆ ಎಂದವರು ಹೀಗಳೆದಿದ್ದಾರೆ.

ಈ ರೀತಿಯಾಗಿ ಮಹಿಳೆಯರಿಗೇ ಎಲ್ಲ ಪದಗಳಲ್ಲಿಯೂ ಪ್ರಾಧಾನ್ಯತೆ ನೀಡುವುದರಿಂದ ಸಾಮಾಜಿಕ ಸಮತೋಲನ ತಪ್ಪುತ್ತದೆ ಎಂದವರು ಅಭಿಪ್ರಾಯಪಟ್ಟರು.

* ಗಂಗಸರ = ಕರಾವಳಿ ಭಾಷೆಯಲ್ಲಿ ಹೆಂಡ ಎಂದರ್ಥ

ಕಾಮೆಂಟ್‌‌ ಪೋಸ್ಟ್‌ ಮಾಡಿ

9 ಕಾಮೆಂಟ್‌ಗಳು

  1. ‘ಹೆಂಡ’ತಿಯಲ್ಲಿಯೇ ಹೆಂಡವಿದೆ. ಹೆಂಡ ತಲೆಗೇರಿದ ಗಂಡಸರು
    ’ಹೆಂಡಾಂ’ತರ ಮಾಡಿಕೊಂಡಾರು! ಆದರೆ ‘ಅನ್ಯೋ ಗಂಡ: ಗಂಡಾಂತರಮ್’ ಎನ್ನುವ ಶ್ರೀರಂಗವಾಕ್ಯವನ್ನು ನಂಬುವ ಹೆಂಡತಿಯರು
    ‘ಗಂಡಾಂ’ತರದ ಸಾಹಸ ಮಾಡಲಿಕ್ಕಿಲ್ಲ!

    ಪ್ರತ್ಯುತ್ತರಅಳಿಸಿ
  2. ಸುಮಾರು ಎರಡು ದಶಕದ ಹಿ೦ದೆ,

    ಜಾತ್ರೆಗೆ ಹೊದ ಗ೦ಡ , ಹೆ೦ಡತಿ ....

    ಗ೦ಡ ಮು೦ದೆ ಮು೦ದೆ ಓಡುವ....

    ಹೆ೦ಡತಿ ಹಿ೦ದೆ ಹಿ೦ದೆ ನಡೆಯುವ....

    ನಡುವಿನ ಅ೦ತರ....

    ಹೆ೦ಡತಿಗೆ ಗ೦ಡಾ೦ತರ....!!!

    ಪ್ರತ್ಯುತ್ತರಅಳಿಸಿ
  3. ಗಂಡಸರ ದಿನದ ಬಗ್ಗೆ ಚೆನ್ನಾಗಿ ಮೂಡಿ ಬಂತು ಬೊಗಳೂರು ವಾರ್ತೆ.

    ಆದರೆ ಗಂಡಸರ ದಿನದ ದಿನಾಂಕದಂದೇ ವಿಶ್ವ ಟಾಯ್ಲೆಟ್ ದಿನ ಬಂದಿದ್ದಕ್ಕೆ ಗಂಡಸರೆಲ್ಲಾ ಯಾಕೆ ಸುಮ್ಮನಾಗಿದ್ದಾರೆ ಅಂತ ವಿಶ್ಲೇಷಣೆ ಕೂಡ ಮಾಡಿದ್ದರೆ ಸೊಗಸಿತ್ತು..:)

    ಪ್ರತ್ಯುತ್ತರಅಳಿಸಿ
  4. ಪವನಜ ಅವರೆ,
    ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಗಂಡಾಂ-ತರಕಾರಿ ಕೆಲಸ ನಡೀತಿಲ್ಲ, ಯಾಕಂದ್ರೆ ಅಷ್ಟು ಮೇಲಕ್ಕೇರಿವೆ ತರಕಾರಿ ಬೆಲೆಗಳು.

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ಆದರೆ, ಈಗಿನ ಕಾಲಾನೇ ನೋಡಿ, ಗಂಡಾಂತರಗಳೇ ಹೆಚ್ಚಾಗ್ತಾ ಇವೆ... ಪಾಪ ಶ್ರುತಿ.

    ಪ್ರತ್ಯುತ್ತರಅಳಿಸಿ
  6. ಚುಕ್ಕಿಚಿತ್ತಾರಿಗಳಿಗೆ ಬೊಗಳೂರಿಗೆ ಸ್ವಾಗತ...
    ತುಂಬ ಚೆನ್ನಾಗಿ ಚಿತ್ತಾರ ಬಿಡಿಸಿದ್ದೀರಿ... ಆದರೆ,ಈಗ ಒಂದು ಸ್ವಲ್ಪ ಬದಲಾವಣೆ
    ಹೆಂಡತಿ ಮುಂದೆ ಮುಂದೆ ಓಡುವ
    ಗಂಡ ಹಿಂದೆ ಹಿಂದೆ ನಡೆಯುವ
    ಅಂತರವಿದು..

    ಪ್ರತ್ಯುತ್ತರಅಳಿಸಿ
  7. ಚಕೋರರೇ,
    ವಿಶ್ವ ಟಾಯ್ಲೆಟ್ ದಿನದ ಬಗ್ಗೆಯೂ ಉಲ್ಲೇಖಿಸಬಹುದಿತ್ತು. ಆದ್ರೆ ಅದಾಗ್ಲೇ ಟಾಯ್ಲೆಟ್ ನಲ್ಲಿ ಭರ್ಜರಿ ರಶ್ ಮತ್ತು ಅದು ಕೂಡ ತುಂಬಿ ತುಳುಕಾಡುತ್ತಿತ್ತು ಆ ದಿನದ ಸಂಭ್ರಮದಲ್ಲಿ... ಹೀಗಾಗಿ ಅತ್ತ ಕಡೆ ತಲೆ ಹಾಕಿರಲಿಲ್ಲ!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D