ಬೊಗಳೆ ರಗಳೆ

header ads

ಬೊಗಳೆ Budget: ಐಷಾರಾಮಕ್ಕೆ, ಬೆಲೆ ಏರಿಕೆಗೆ ಒತ್ತು

(ಬೊಗಳೂರು ಹಿಂಗಡ ಪತ್ರ ಬ್ಯುರೋದಿಂದ)
ಬೊಗಳೂರು, ಜು.7- ಕೇಂದ್ರದಲ್ಲಿ ಕಳೆದ ಬಾರಿ ಪೀಚಿ ದಂಬರಂ ಅವರು ಮಂಡಿಸಿದ ರೀತಿಯಲ್ಲಿ ಮತ್ತು ಈ ಬಾರಿ ಒಣಬ್ ಮುಖರ್ಜಿ ಅವರು ಮಂಡಿಸಿದ ರೀತಿಯಲ್ಲಿ ಬೊಗಳೂರಿನಲ್ಲಿಯೂ ಮುಂ-ಕಡ ಪತ್ರವನ್ನು ಜನತೆಗೆ ಮಂಕುಬೂದಿ ಎರಚುವುದಕ್ಕಾಗಿಯೇ ಮಂಡಿಸಲಾಯಿತು. ಪಿತ್ತ ಸಚಿವರು ಅದನ್ನು ಮಂಡಿಸುತ್ತಿದ್ದಾಗ ಕೆಳಗೆ ಬಿದ್ದ ಅಂಶಗಳನ್ನೆಲ್ಲಾ ಹೆಕ್ಕಿ ಹೆಕ್ಕಿ ಮುಖ್ಯಾಂಶಗಳನ್ನಾಗಿ ಪರಿವರ್ತಿಸಿ ಬೊಗಳೋದುಗರಿಗಾಗಿ ಇಲ್ಲಿ ನೀಡಲಾಗಿದೆ:

* ರಜಾಕಾರಣಿಗಳಿಗೆ ಮಜಾ ಕಾರಣಗಳಿಗಾಗಿ ನೀಡುವ ದೇಣಿಗೆಗೆ ಶೇ.200 ತೆರಿಗೆ-ಮುಕ್ತ ಸೌಲಭ್ಯ

* ಕಾರು ಬೈಕಿಲ್ಲದೆ ರಸ್ತೆಗಳಲ್ಲಿ ಓಡಾಡುವವರಿಗೆ ಉಚಿತ ಪಾದಯಾತ್ರೆ ಸೌಲಭ್ಯ

* ದೇಹವನ್ನು ಆರಾಮವಾಗಿ ಚಾಚಲು ಸರಿಯಾಗಿ ಜಾಗ ಮತ್ತು ಮನೆ ಇಲ್ಲದವರು, ಕಾರಿನಲ್ಲೇ ಜೀವನ ಸವೆಸುತ್ತಾ, ಆನಂದ ಅನುಭವಿಸುವಂತಾಗಲು ಕಾರು ಮತ್ತು ಲಾರಿಗಳ ಮೇಲಿನ ಸಂಕ ರದ್ದು.

* ರಜಾಕಾರಣಿಗಳು ಸಂಸತ್ತಿನಲ್ಲಿ ಐದು ವರ್ಷಗಳ ಕಾಲ ಮಾಡುವ ಮಜಾಗಳನ್ನು ನೋಡಿ ಆನಂದಿಸಲು ಸೆಟ್ ಟಾಪ್ ಬಾಕ್ಸ್, ಟೀವಿ ಮತ್ತು ಅದಕ್ಕೆ ಬೇಕಾದ ರಿಮೋಟು ಕಂಟ್ರೋಲರುಗಳನ್ನು ಚೀಪು ಮಾಡುವುದು.

* ರೈತರು ಬೆಳೆದ ಬೆಳೆಗಳಿಗೆ ಮಧ್ಯವರ್ತಿಗಳೇ ಸಾಕಷ್ಟು ನುಂಗಿ ನೀರು ಕುಡಿಯುತ್ತಿರುವ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳುವುದು ಸರಕಾರಕ್ಕೆ ಅಸಾಧ್ಯ ಸಂಗತಿಯಾಗಿರುವುದರಿಂದ ರೈತರಿಗೆ ಕೀಟ ನಾಶಕಗಳನ್ನು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ಪೂರೈಸುವ ಯೋಜನೆ.

* ಹೊಟ್ಟೆ ತುಂಬುವುದಕ್ಕಾಗಿ ಮತ್ತು ಒಂದಷ್ಟು ಹಸಿವು ನೀಗಿಸಿಕೊಳ್ಳಲು ಬಿಸ್ಕತ್ತು, ಶರಬತ್ತು ಇತ್ಯಾದಿ ತಿಂದು ಕುಡಿದು ತೇಗೋಣವೆಂದು ಅಂದುಕೊಂಡವರಿಗೆ ಅದನ್ನು ಕೈಗೆಟುಕದಂತೆ ಮಾಡುವ ಮೂಲಕ ಅವರು ಇದುವರೆಗೆ ಕಣ್ಣೆತ್ತಿಯೂ ನೋಡಲಾಗದಂತಹ ಪಿಜ್ಜಾ, ಬರ್ಗರು ಇತ್ಯಾದಿಗಳ ಮೇಲಿನ ವಿದೇಶೀ ಆಮದು ಸುಂಕ ರದ್ದು.

* ಪ್ರೆಶರ್ ಕುಕರ್ ಹೆಚ್ಚು ಪ್ರೆಶರ್ ನೀಡುವುದರಿಂದ ಅದರೊಳಗಿರುವ ಪ್ರೆಶರನ್ನು ಜನರ ತಲೆಯೊಳಗೂ ವರ್ಗಾಯಿಸುವಂತಾಗಲು ಪ್ರೆಶರ್ ಕುಕರ್ ಬೆಲೆಗಳನ್ನು ಅದರ ಹೊಗೆ ಏರುವಷ್ಟು ಎತ್ತರಕ್ಕೆ ಏರಿಸುವುದು.

* ಬಡ ವರ್ಗದವರು ತಿನ್ನಲು ಉಣ್ಣಲು ಏನಿಲ್ಲದಿದ್ದರೂ ಒಂದಲ್ಲ ಒಂದು ದಿನ ಕಂಪ್ಯೂಟರು ಮುಟ್ಟಬೇಕು ಎಂಬ ಕನಸು ಕಂಡಿರುತ್ತಾರೆ. ಅಂಥವರಿಗೆ ಎಲ್‌ಸಿಡಿ ಕಂಪ್ಯೂಟರುಗಳ ಬೆಲೆಯನ್ನು ಒಂದೆರಡು ರೂಪಾಯಿ ಇಳಿಸುವುದು.

* ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಯಲ್ಲಿಯೂ ಸೌಂದರ್ಯ ಸಾಧನಗಳ ಬಳಕೆ ಹೆಚ್ಚಾಗುತ್ತಿದ್ದು, ಈ ಸಾಂಕ್ರಾಮಿಕ ರೋಗವನ್ನು ತಡೆಯುವ ನಿಟ್ಟಿನಲ್ಲಿ ಅವುಗಳು ಜನ ಸಾಮಾನ್ಯರ ಕೈಗೆಟುಕದಂತೆ ಮೇಲೆ ಇರಿಸುವ ನಿಟ್ಟಿನಲ್ಲಿ ಅವುಗಳ ಮೇಲೆ ಶೇ.11 ಸೌಂದರ್ಯ ತೆರಿಗೆ ಹಾಗೂ ಶೇ. 12 ಮನರಂಜನಾ ತೆರಿಗೆ.

* ಭಿಕ್ಷುಕರೆಲ್ಲರೂ ತಮ್ಮ ಉದ್ಯಮವನ್ನು ಮತ್ತಷ್ಟು ಬಲ ಪಡಿಸಿ, ಸದಾ ಸಂಪರ್ಕದಲ್ಲಿರುವಂತಾಗಲು ಮೊಬೈಲ್ ಫೋನುಗಳ ಮೇಲಿನ ಸೀಮೆಯಿಲ್ಲದ ಸುಂಕ ರದ್ದು.

* ಪ್ರತಿ ವರ್ಷ ಕೋಟಿ ಕೋಟಿ ಉದ್ಯೋಗ ಸ್ಥಾಪನೆ. ಅವುಗಳ ದಾಖಲೆ ಬರೆದಿಡಲು, ಅವುಗಳನ್ನು "ಇದೆ, ಅಸ್ತಿತ್ವದಲ್ಲಿದೆ" ಎಂದು ದಾಖಲೆಯಲ್ಲಿ ತೋರಿಸಿ ಕೇಳಿದಾಗಲೆಲ್ಲಾ ಅದರ ಬಗ್ಗೆ ವರದಿ ಒಪ್ಪಿಸಲು ಒಬ್ಬ ರಾಜಕೀಯ ನಿಷ್ಠನನ್ನು ನೇಮಿಸುವ ಮೂಲಕ ದೇಶದ ನೂರು ಕೋಟಿ ಮಂದಿಯಲ್ಲಿ ಕನಿಷ್ಠ ಒಬ್ಬನಿಗೆ "ಉದ್ಯೋಗ ಸೃಷ್ಟಿ" ಯೋಜನೆ.

* ಮನೆಗಳಲ್ಲಿ ಟಾಯ್ಲೆಟ್ ಇಲ್ಲದವರಿಗೆ ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಟ್ಟಣ ಪ್ರದೇಶಗಳ ಚರಂಡಿ ಬದಿಯಲ್ಲಿ ದಿಢೀರ್ ಶೌಚಾಲಯ ಸ್ಥಾಪಿಸುವ ಬಡ ವರ್ಗದವರ, ಬೀದಿ ವಾಸಿಗಳ ಯೋಜನೆಗೆ ಮತ್ತಷ್ಟು ಕುಮ್ಮಕ್ಕು ನೀಡುವುದು.

* ಬಡತನ ರೇಖೆಯಲ್ಲಿರುವವರು ಅದಕ್ಕಿಂತಲೂ ಕೆಳಗೆ ಹೋಗಲು ಅನುಕೂಲವಾಗುವಂತೆ ಅವರಿಗೆ ಟಿವಿ, ಕಂಪ್ಯೂಟರು, ಲ್ಯಾಪಿಗೊಂದು ಟಾಪು, ಮೊಬೈಲ್, ಕಾರು ಇತ್ಯಾದಿಗಳನ್ನು ಕೊಳ್ಳುವುದಕ್ಕಾಗಿ ಕಡಿಮೆ ದರದ ಬಡ್ಡಿ ಇರುವ ಸಾಲಸೋಲ ಯೋಜನೆ.

* ಜವಾಹರ ರೋಜ್ಗಾರ್, ಇಂದಿರಾ ಆವಾಸ್, ರಾಜೀವ್ ಸಡಕ್, ಸೋನಿಯಾ ಮಾಂಗಲ್ಯಭಾಗ್ಯ, ರಾಹುಲ್ ವಸತಿ, ಪ್ರಿಯಾಂಕ ಯುವಜನ... ಇತ್ಯಾದಿ ಯೋಜನೆಗಳನ್ನು ಹುಡುಕಿ ಹುಡುಕಿ, ಪತ್ತೆ ಹಚ್ಚಿ ಸ್ಥಾಪಿಸುವುದು. ಪಕ್ಷದ ನಿಷ್ಠರಿಗೆಲ್ಲಾ ಈ ಗಾಂಧಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡಿ, ಒರಿಜಿನಲ್ ಗಾಂಧಿಯನ್ನು ಮರೆಯುವಂತೆ ಮಾಡುವುದು ಅಥವಾ "ನಮ್ಮ ರಾಷ್ಟ್ರಪಿತ ಯಾರು" ಎಂದು ಕೇಳಿದಾಗ ಈ ಗಾಂಧಿಗಳಲ್ಲಿ ಯಾರ ಹೆಸರು ಹೇಳುವುದು ಎಂಬುದರ ಬಗ್ಗೆ ಗೊಂದಲ ಮೂಡಿಸುವ ನಾಮಕರಣ ಯೋಜನೆಗಳ ಜಾರಿ.

* ವಿದ್ಯುತ್ ಇಲ್ಲದಿದ್ದರೂ ಮನೆ ಮನೆಗಳಲ್ಲಿ ಬಲ್ಬು ಇರಬೇಕೆಂಬ ಉದ್ದೇಶದಿಂದ ಪ್ರಿಯಾಂಕ ಮಕ್ಕಳಾದ ರೈಹಾನ್ ಹಾಗೂ ಮಿರಾಯಾ ಹೆಸರಿನಲ್ಲಿ ಜ್ಯೋತಿ ಯೋಜನೆ.

* ತಿಂದು ಸಾಯಲು ಅಗತ್ಯವಿರುವ ಅಕ್ಕಿ, ಬೇಳೆ, ತರಕಾರಿ ಬೆಲೆಗಳನ್ನು ಗಗನದಿಂದ ಕೆಳಗೆ ಇಳಿಸಲು ಶೀಘ್ರವೇ ಏಣಿ ಸ್ಥಾಪನೆ ಯೋಜನೆಯನ್ನು ಘೋಷಿಸಲಾಗುತ್ತದೆ. ಈ ನೂರಾರು ಕೋಟಿ ರೂ.ಗಳ ಯೋಜನೆಗೆ ಹತ್ತಾರು ವರ್ಷಗಳೇ ತಗುಲುವುದರಿಂದ ಜನರು ಅಂಜದೆ, ಅಳುಕದೆ, ಭಯಭೀತರಾಗದೆ, ಆತ್ಮಹತ್ಯೆಗೆ ಮೊರೆ ಹೋಗದೆ ಏಳೆಂಟು ವರ್ಷ ಹಸಿವು ತಡೆದುಕೊಳ್ಳುವಂತಾಗಲು ಉಚಿತ ಕೊಳಚೆ ನೀರು ಪೂರೈಕೆ ಯೋಜನೆ.

* ಸಂಸತ್ಸದಸ್ಯರು ಐಷಾರಾಮಿ ಜೀವನ ನಡೆಸುವಂತಾಗಲು ಮತ್ತು ವಯೋವೃದ್ಧ ರಾಜಕಾರಣಿಗಳು, ಏಳಲಾಗದವರು ರಾಜಭವನದಲ್ಲಿ ವಿಶ್ರಾಂತ ಜೀವನ ನಡೆಸುವಂತಾಗಲು, ಅವರ ವೇತನವನ್ನು ಸೊನ್ನೆ ಕಂಡುಹುಡುಕಿದ ಭಾರತೀಯರೂ ಕಂಡುಹುಡುಕಲಾಗದಷ್ಟು ದೊಡ್ಡದಾದ ಮೊತ್ತದಷ್ಟಕ್ಕೆ ಏರಿಸುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ರೈತರಿಗೆ ಉಚಿತ ಟಿಕ್-೨೦ ಪೂರೈಕೆ.

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ಟಿಕ್ ಟ್ವೆಂಟಿ ಬೆಲೆಯನ್ನು ರೈತರ ಕೈಗೆ ಸಿಗದಷ್ಟು ಮೇಲಕ್ಕೆ ಹಾರಿಸಿಬಿಟ್ಟಿದ್ದಾರೆ. ಆದರೆ ಉಚಿತ ಅಂತ ಹೇಳಿದ್ದು ನಕಲಿ ಟ್ವೆಂಟಿ-20ಯನ್ನು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D