ಬೊಗಳೆ ರಗಳೆ

header ads

ಬಾಲ ಅಪರಾಧಿಗಳ ವಯೋಮಿತಿ ಏರಿಸಲು ಆಗ್ರಹ

(ಬೊಗಳೂರು ಜುವಿನೈಲ್ ಬ್ಯುರೋದಿಂದ)
ಬೊಗಳೂರು, ಮೇ 6- ಸುಪ್ರೀಂಕೋರ್ಟೇ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ನೂರಾರು ಜನರ ಸಾವಿಗೆ ಕಾರಣವಾದ ಉಗ್ರಗಾಮಿ ಕಸಬ್‌ಗೆ ಕೂಡ ವಯಸ್ಸಿನಲ್ಲಿ ರಿಯಾಯಿತಿ ನೀಡಬೇಕು ಎಂದು ಬೊಗಳೂರು ಸರಕಾರ ಒತ್ತಾಯಿಸಿದೆ. ಇದಕ್ಕೆ ಕಾರಣವೆಂದರೆ, ಬಾಲಾಪರಾಧಿಯಾದರೆ ಶಿಕ್ಷೆಯ ಪ್ರಮಾಣವೂ ಕಡಿಮೆ, ಜನರು ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂಬ ಕಳಕಳಿಯೇ ಆಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ದಿಢೀರ್ ರದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಗಳೂರು ನಿಧಾನಮಂತ್ರಿಗಳು, ಅಲ್ಪಸಂಖ್ಯಾತ ಸಮುದಾಯದವರು ಯಾವತ್ತೂ ಈ ದೇಶದ ಆಸ್ತಿಯ ಮೊದಲ ವಾರಸುದಾರರು, ಅವರಿಗೆ ಎಲ್ಲದರಲ್ಲಿಯೂ ರಿಯಾಯಿತಿ ನೀಡುವಂತೆ, ವಯಸ್ಸಿನಲ್ಲಿಯೂ ರಿಯಾಯಿತಿ ನೀಡಲೇಬೇಕು ಎಂದು ಒತ್ತಾಯಿಸಿದರು. ಇಲ್ಲವಾದಲ್ಲಿ, ಜುವಿನೈಲ್‌ಗಳ ವಯೋಮಿತಿ ಏರಿಸಲು ಆಗ್ರಹಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.

ಈ ಮಧ್ಯೆ, ಎಲ್ಲ ಜೈಲು ಹಕ್ಕಿಗಳು ಕೂಡ, ನಮ್ಮನ್ನೂ ಕೂಡ ಬಾಲಾಪರಾಧಿಗಳು ಎಂದು ಪರಿಗಣಿಸಬೇಕು. ಇದರಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ನಮಗೆ ಮೀಸಲಾತಿಯನ್ನೂ ಕಲ್ಪಿಸಬೇಕು ಎಂದು ಒತ್ತಾಯಿಸತೊಡಗಿರುವುದಾಗಿ ಎಲ್ಲಿಯೂ ವರದಿಯಾಗಿಲ್ಲ.

ಹಕ್ಕಿಗಳೆಲ್ಲವೂ ಇತ್ತಿತ್ತಲಾಗಿ, ಕಾಡಿ ಬೇಡಿ ಬೇಡಿಯ ಬಂಧ ಕಳಚಿಕೊಂಡು, ರಾಜಕೀಯ ಕ್ಷೇತ್ರದಲ್ಲಿ ಮಿಂಚುತ್ತಿವೆ. ಕೆಲವರು ಜೈಲಿನೊಳಗಿದ್ದುಕೊಂಡೇ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. ಕಷ್ಟ ಪಟ್ಟು ಕೊಲೆ, ಸುಲಿಗೆ, ಅಪಹರಣ ಇತ್ಯಾದಿಗಳಲ್ಲಿ ತೊಡಗಿದವರಿಗೆ ರಾಜಕೀಯ ಕ್ಷೇತ್ರದಲ್ಲಿ 'ಸೇವೆ' ಸಲ್ಲಿಸಲು ಮುಂದಕ್ಕೆ ಕಷ್ಟವಾಗಬಾರದು. ಇದಕ್ಕಾಗಿ ಅವರನ್ನೂ ಜುವಿನೈಲ್ ಅಂತ ಪರಿಗಣಿಸಿ, ಅವರ ವಯೋಮಿತಿಯನ್ನೂ ತಗ್ಗಿಸಬೇಕು ಎಂದು ಅಖಿಲ ಭಾರತ ಮೂರನೇ ಕ್ಲಾಸ್ ಪಕ್ಷದ ಅಧ್ಯಕ್ಷರು ಒತ್ತಾಯಿಸಿದ್ದಾರೆ.

ಅಷ್ಟು ಮಾತ್ರವಲ್ಲ, ಓಟು ಹಾಕುವ ವಯೋಮಿತಿಯನ್ನೂ ಇಳಿಸಬೇಕು. ಈ ರೀತಿ ಜುವಿನೈಲ್ ವರ್ಗಕ್ಕೆ ಸೇರಿದವರಿಗೂ ಮತದಾನದ ಹಕ್ಕು ದೊರಕಿಸಬೇಕು ಎಂದೂ ಅವರು ಆಗ್ರಹಿಸಲು ನಿರ್ಧರಿಸಲು ಯೋಚಿಸಲು ಚಿಂತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಅದ್ಭುತವಾದ ವಿಚಾರವಿದು, ಅನ್ವೇಷಿಗಳೆ! juvenile ವಯಸ್ಸನ್ನು ೯೦ಕ್ಕೆ ಏರಿಸಬೇಕು ಎಂದು ನನ್ನ ಕೋರಿಕೆ. ಹಾಗೆ ಮಾಡುವದರಿಂದ ಮರಣಶಯ್ಯೆಯಲಿರುವ ಮರಣಾನಿಧಿ, ರೈಲು ಬಿಡುತ್ತಿರುವ ಪರಸಾದ್, ವೇದೇಗೌಡ, ಮಣಮೋನ ಸಿಂಗ್ ಇವರೆಲ್ಲ ಯುವ ರಾಜಕಾರಣಿಗಳಾಗಿ ಬಿಡುತ್ತಾರೆ. ರಾಹು ಗಂದಿಯು ತೊದಲುಮಾತಿನ ಬಾಲನಾಗುತ್ತಾನೆ. ಯಡ್ಡಿಯು ಚಡ್ಡಿಯಿಲ್ಲದ ಹುಡುಗನಾಗುತ್ತಾನೆ!

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ನಮ್ಮ ನಿಮ್ಮ ಸಲಹೆಗಳನ್ನು ಚುಚ್ಚುವಾಣೆ ಆಯೋಗಕ್ಕೆ ಸಲ್ಲಿಸಲಾಗಿದೆ. ಅದು ಅಲ್ಲಿ ಮತ್ತು ಆ ಬಳಿಕ ಸುಪ್ರೀಂ ಕೋರ್ಟಿನಲ್ಲಿ ತಿರಸ್ಕೃತವಾದ ಬಳಿಕ ಖಂಡಿತವಾಗಿಯೂ ಅದನ್ನು ಕೇಂದ್ರ ಸರಕಾರ ಜಾರಿಗೆ ತರುತ್ತದೆ ಎಂಬ ವಿಶ್ವಾಸ ನಮ್ಮದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D