(ಬೊಗಳೂರು ಕುರುಡುನಾಡು ಬ್ಯುರೋದಿಂದ)
ಬೊಗಳೂರು, ಮೇ 25- ತಮಿಳುಕಾಡಿನ ಪ್ರಥಮ ಕುಟುಂಬವು ತನ್ನೆಲ್ಲಾ ಶಕ್ತಿ-ಸಾಮರ್ಥ್ಯ-ಜನಬಲ-ಕುಟುಂಬ ಬಲಗಳನ್ನೆಲ್ಲವನ್ನೂ ದೆಹಲಿಗೆ ವರ್ಗಾಯಿಸಿರುವ ಕಾರಣದಿಂದಾಗಿ ತಮಿಳುಕಾಡು ಬಿಕೋ ಎನ್ನುತ್ತಿದ್ದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿದ್ದು, ಅದನ್ನು ಬೊಗಳೂರು ವರದ್ದಿಗಾರರು ಪತ್ತೆ ಹಚ್ಚಿರುವುದಾಗಿ ಅನ್ಯ ಪತ್ರಿಕೆಗಳಲ್ಲಿ ವರದ್ದಿಯಾಗಿದೆ.

ದೇಶದ ಪ್ರಥಮ ರಾಜಕೀಯ ಕುಟುಂಬದ ಸಾನಿಯಾ ಗಾಂಧಿ ಮತ್ತವರ ಮಕ್ಕಳು ಕೇಂದ್ರದಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಹೀಗಾಗಿ ತಮಿಳುಕಾಡಿಗೆ ಸೀಮಿತವಾಗಿದ್ದ ನಮ್ಮ ಕುಟುಂಬವೂ ಕೇಂದ್ರದಲ್ಲಿ ಹೆಚ್ಚು ಅಧಿಕಾರ ಚಲಾಯಿಸಬೇಕಾಗುತ್ತದೆ. ಯಾಕೆಂದರೆ, ಅವರ ಕುಟುಂಬದಲ್ಲ ಸದ್ಯಕ್ಕೆ ಮೂವರು ಪ್ಲಸ್ 2 (ಮನೇಕಾ-ವರುಣ್) ಮಾತ್ರ ಇದ್ದಾರೆ. ನಮ್ಮ ಕುಟುಂಬದ ಸದಸ್ಯ ಬಲ ಅದಕ್ಕಿಂತ ದೊಡ್ಡದು ಎಂಬುದು ಕರುಣಾಕಿಡಿ ವಾದವಾಗಿತ್ತು.

ಈಗಷ್ಟೇ ಚುನಾವಣೆಗೆ ನಿಂತ ಎರಡನೇ ಹೆಂಡತಿಯ ಒಬ್ಬ ಮಗನಿಗೆ ಕೇಂದ್ರದಲ್ಲಿ ಗೃಹಸಚಿವ ಪಟ್ಟ ಕೊಟ್ಟರೂ ಸಾಕು. ಸಾಧ್ಯವೇ ಇಲ್ಲದಿದ್ದರೆ, ಅಳಗಿರಿ ರಂಗನಿಗೆ ಶಿಕ್ಷಣ ಖಾತೆಯನ್ನು ಒಪ್ಪಿಸಬೇಕು. ಯಾಕೆಂದರೆ ಆತನಿಗೆ ಇಂಗ್ಲಿಷ್ ಅಥವಾ ಹಿಂದಿ ಬರುವುದಿಲ್ಲ. ತಮಿಳು ಮಾತ್ರ ಬರುವುದರಿಂದ ಇಡೀ ರಾಷ್ಟ್ರದಲ್ಲಿ ತಮಿಳು ಕಡ್ಡಾಯ ಮಾಡಿ, ಇಡೀ ದೇಶದ ಜನತೆ ಕೇಂದ್ರ ಮಂತ್ರಿಗಳೊಂದಿಗೆ ತಮಿಳಿನಲ್ಲಿ ಬೆರೆಯುವಂತಾಗಬಹುದು, ಸಮುದಾಯ ಸಾಮರಸ್ಯ ಇದರಿಂದ ಸಾಧ್ಯವಾಗುತ್ತದೆ ಎಂದು ಅವರು ಅಪ-ವಾದಿಸಿರುವುದನ್ನು ಬೊಗಳೂರು ಅನ್ವೇಷಣಾ ಬ್ಯುರೋದವರು ಪತ್ತೆ ಹಚ್ಚಿದ್ದಾರೆ.

ಮೂರನೇ ಹೆಂಡತಿಯ ಒಬ್ಬ ಮಗ ಈಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದರೂ, ಕೇಂದ್ರದಲ್ಲಿಯೂ ಆತನಿಗೆ ಪಾಲು ನೀಡಬೇಕು ಎಂದು ನಾವು ಯುಪಿಎ ಸರಕಾರದ ಒಡತಿಯನ್ನು ಒತ್ತಾಯಿಸಿರುವುದಾಗಿ ಕುರುಣಾನಿಧಿ ಬೊಗಳೂರಿಗೆ ತಿಳಿಸಿದ್ದಾರೆ.

ಇನ್ನು, ಸೋದರ ಸಂಬಂಧಿಗಳಾದ ನಿರ್ದಯನಿಧಿ ಮಾರನ್‌ಗೆ, ಕಳೆದ ಸರಕಾರದಲ್ಲಿ ಸಚಿವರಾಗಿ ತಮ್ಮ ತಮ್ಮ ಕುಟುಂಬದವರಿಗೆ ಸಾಕಷ್ಟು 'ಗಳಿಕೆ'ಗೆ ಕಾರಣವಾಗಿದ್ದ ಟಿ.ಆರ್.ಬೋಲು ಮತ್ತು ಧೀ...ರಜರಿಗೂ ಒಂದೊಂದು ಸಂಪುಟ ಕೊಡಬೇಕು. ಸಾಧ್ಯವಾದರೆ, ನನಗೂ ಒಂದು ಸ್ಥಾನವನ್ನು ಡೆಲ್ಲಿಯ ತಮಿಳುಭವನದಲ್ಲಿ ನೀಡಬೇಕು. ಯಾಕೆಂದರೆ ಕೇಂದ್ರ ರಾಜಕಾರಣದ ಪ್ರಥಮ ಕುಟುಂಬದ ಒಡತಿ ಯಾವ ರೀತಿ ಯಾವುದೇ ಖಾತೆ ಇಲ್ಲದೆ ಕೇಂದ್ರದ ಎಲ್ಲ ಸವಲತ್ತು ಪಡೆಯುತ್ತಿದ್ದಾರೋ, ಅದೇ ರೀತಿ ನನಗೂ ಒಂದು ವ್ಯವಸ್ಥೆಯಾಗಬೇಕು. ಯಾಕೆಂದರೆ ನನ್ನ ಕುಟುಂಬ ಸದಸ್ಯರ ಸಂಖ್ಯೆ ಅವರಿಗಿಂತ ಹೆಚ್ಚಲ್ಲವೇ ಎಂದು ಪ್ರಶ್ನಿಸಿರುವುದಾಗಿಯೂ ತಿಳಿಸಿದ್ದಾರೆ.

ತಾವು ಕಪ್ಪು ಕನ್ನಡಕ ಹಾಕಿಕೊಂಡಿರುವ ಮೇಲ್ ಆಗಿರುವುದರಿಂದಾಗಿಯೇ ಬಹುಶಃ ಬೊಗಳೆ ರಗಳೆ ಸೇರಿದಂತೆ ದೇಶದ ಅಂತಾರಾಷ್ಟ್ರೀಯ ಖ್ಯಾತಿಯ ಮಾಧ್ಯಮಗಳೆಲ್ಲ ನಮ್ಮನ್ನು 'ಬ್ಲ್ಯಾಕ್ ಮೇಲ್' ಅಂತ ಇಂಗ್ಲಿಷಿನಲ್ಲಿ ಕರೆಯುತ್ತಿವೆ ಎಂದು ಸಂತಸದಿಂದ ತಮಿಳಿನಲ್ಲಿಯೇ ನುಡಿದ ಕುರುಣಾನಿಧಿ, ಓಹ್, ಮೊದಲ ಹೆಂಡತಿಯ ಮಗಳು ಕಾಣೆಮೋಳಿಯನ್ನು ಮರೆತೇಬಿಟ್ಟೆನಲ್ಲ, ಆಕೆಗೆ ಮಕ್ಕಳಿಗೆ ಕಲ್ಯಾಣ ಮಾಡಿಸುವ ಖಾತೆ ನೀಡಬೇಕು ಎಂದೂ ಒತ್ತಾಯಿಸಿರುವುದಾಗಿ ನೆನಪಿಸಿಕೊಂಡರು.

4 Comments

ಏನಾದ್ರೂ ಹೇಳ್ರಪಾ :-D

 1. ಇದು ಮರಣಾಸನ್ನನಾದವನ ಮೃತ್ಯುಪತ್ರದಂತಿದೆ!
  ಹೆಂಡರಿಗೆ ಯಾವ ಜಾಗೀರನ್ನೂ ಕೇಳಿಲ್ಲವಲ್ಲ!

  ReplyDelete
 2. ಸುನಾಥರೆ,
  ಹೆಂಡರಿಗೆ ಇಲ್ಲದಿದ್ದರೂ, ಅತಿದೂರದಲ್ಲಿದ್ದೂ, ಅತ್ಯಂತ ಹತ್ತಿರದ ಸಂಬಂಧಿಕ ಎಂದು ಕರೆಸಿಕೊಳ್ಳುವ ರಾಜರಿಗೆ ದೊಡ್ಡ ಪೋಸ್ಟೇ ಬೇಕು ಎಂದು ಪಟ್ಟು ಹಿಡಿದಿರುವ ಹಿಂದೆ, ದೂರದ ಹೆಂಡರ ಕೈವಾಡವಿದೆ ಎಂದು ಬಲ್ಲಮೂಲಗಳು ತಿಳಿಸಿಲ್ಲ.

  ReplyDelete
 3. ಅನ್ವೇಷಿಗಳೇ, ನಿಮ್ಮ ಬ್ಲಾಗ್ ಗುರುತೇ ಸಿಗದಂತೆ ಬದಲಾಗಿರುವುದರ ಹಿಂದೆ ಯಾರ ಕೈವಾಡವಿರಬಹುದೆಂದು ಯೋಚಿಸಿ, ಉತ್ತರ ಸಿಗದೆ ಕಂಗಾಲಾಗಿದ್ದೇನೆ. ಮುಖಪುಟದಲ್ಲಿ ರಾರಾಜಿಸುತ್ತಿದ್ದ ಸ್ಲಂ ಕ್ಯಾಟ್, ಸ್ಲಂ ಮಂಗಗಳೆಲ್ಲಾ ಕಾಡುಪಾಲಾಗಿ, ಅಲ್ಲೊಂದು ಹಸಿರು ಗಿಡ ಪ್ರತ್ಯಕ್ಷವಾಗಿದೆ. ಅದು ನನ್ನ ತೋಟದಿಂದ ಕದ್ದೊಯ್ದ ತುಳಸಿಗಿಡವಿರಬಹುದೇ ಎಂಬ ಗುಮಾನಿ ನನಗೆ.

  ReplyDelete
 4. ಶ್ರೀತ್ರೀ ಅವರೆ,
  ನಿಮ್ಮ ತುಳಸೀವನ ಸಿಕ್ಕಾಪಟ್ಟೆ ಪರಿಮಳ ಬೀರುತ್ತಿದ್ದುದು ಗಮನಕ್ಕೆ ಬಂದ ಕಾರಣ, ಅದರಲ್ಲಿ ಒಂದನ್ನು ಕದ್ದು ತಂದು ನೆಟ್ಟಿದ್ದೆವು. ನಿಮ್ಮ ಬೆದರಿಕೆಯ ಕಾರಣ ಅದನ್ನು ಅಡಗಿಸಿಟ್ಟಿದ್ದೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post