ಬೊಗಳೆ ರಗಳೆ

header ads

ತತ್ತರ ಕರ್‌ನಾಟಕದಲ್ಲಿ ನಾಟಕ

(ಬೊಗಳೂರು ತತ್ತರ ಕರ್ನಾಟಕ ಅಭಿವೃದ್ಧಿ ಬ್ಯುರೋದಿಂದ)
ಬೊಗಳೂರು, ಜ.27- ಬೊಗಳೂರು ಕರ್ನಾಟಕದ ಅರಾಜಕಧಾನಿಯಿಂದ ಬಹಳ ದೂರವಿರುವುದರಿಂದ ಆ ಭಾಗದಲ್ಲಿ ಭಾಷೆ ಬೇರೆ, ಅಲ್ಲಿ ಅಭಿವೃದ್ಧಿಯೂ ಆಗುತ್ತಿಲ್ಲ ಎಂಬ ಉದ್ದೇಶದಿಂದ ತತ್ತರ ಕರ್ನಾಟಕದಲ್ಲಿ ಏನಾದರೂ ಒಂದು ಮಾಡಬೇಕು ಎಂಬ ಸದುದ್ದೇಶದಿಂದ "ಆಶ್ವಾ"ಸಕರೆಲ್ಲರೂ ಇತ್ತೀಚೆಗೆ ಬೊಗಳೂರಿನಲ್ಲಿ ಅವಿಧಾನಮಂಡಲದ ವಿಶೇಷ ಅಧಿ"ವೇಷ"ನದಲ್ಲಿ ಭಾಗವಹಿಸಿದರು ಎಂದು ಇಲ್ಲಿ ವರದಿಯಾಗಿದೆ.

ಆದರೆ ರಾಜಧಾನಿಯಲ್ಲಿರುವ ವಿಧಾನ ಮಂಡಲವು ಎಲ್ಲ ರೀತಿಯಲ್ಲಿಯೂ--- ಪರಿಸರಮಾಲಿನ್ಯ, ವಾಕ್‌ಮಾಲಿನ್ಯ,ಮಾನಸಿಕ-ಮಾಲಿನ್ಯ--- ಇತ್ಯಾದಿಗಳಿಲ್ಲದೆ ಸಕಲ ರೀತಿಯಲ್ಲಿಯೂ ಅಮೋಘವಾಗಿ, ಅಪರೂಪವಾಗಿ, ಅನ್ಯಾದೃಶವಾಗಿ, ಅನ್ಯತ್ರ ಅಲಭ್ಯವಿದ್ದಂತೆ ಕ್ಲೀeeeeeeeನ್ ಆಗಿತ್ತು ಎಂಬುದನ್ನು ಯಾರಿಗೂ ತಿಳಿಯದಂತೆ ಬೊಗಳೂರು ಬ್ಯುರೋ ಪತ್ತೆ ಹಚ್ಚಿರುವುದು ಮಾತ್ರ ಅಸತ್ಯವಲ್ಲ ಎಂದು ವರದಿಯಾಗಿದೆ.

ಈಗ ತತ್ತರ ಕರ್ನಾಟಕದಲ್ಲಿ ನಡೆದ ಅಧಿವೇಶನದಲ್ಲಿ ವರದಿಯಾಗಿರದ ಸಂಗತಿಗಳು ನಮ್ಮ ಬೊಗಳೂರು ಬ್ಯುರೋದ ಮಂದಿಗೆ ಅನಾಯಾಸವಾಗಿ ಸಿಕ್ಕಿದ್ದು, ಅದನ್ನು ಹೆಕ್ಕಿ ಹೆಕ್ಕಿ ಇಲ್ಲಿ ಮಂಡಿಸಲಾಗಿದೆ.

ಸಹೋದರರ ಸವಾಲ್
ಆಡಳಿತ ಪಕ್ಷದ ಸದಸ್ಯರ ಪ್ರತಿಯೊಂದು ವಾಕ್ಯಕ್ಕೂ ಎದ್ದು ನಿಲ್ಲುವ ರೇವ್ ಅಣ್ಣನನ್ನು ಆಗಾಗ್ಗೆ ಅಂಗಿ ಹಿಡಿದು ಎಳೆದು ಕೂರಿಸುವ ಪ್ರಯತ್ನದಲ್ಲಿರುವ ರೇವ್ ತಮ್ಮ. ಅವರ ಈ ಕ್ರಿಯೆ-ಪ್ರಕ್ರಿಯೆಯನ್ನು ನೋಡೋದೇ ಜನರಿಗೆ ಒಂದು ಮಜಾ.

ಅಂತೆಯೇ ರೇವ್ ತಮ್ಮ ಎದ್ದು ನಿಂತಾಗ, ಕೈಹಿಡಿದು, "ಏಯ್ ತಮ್ಮಾ, ಸುಮ್ನೆ ಕೂರೋ... ಹಾಗೆಲ್ಲಾ ಮಾತಾಡ್ಬುಟ್ರೆ ಅಷ್ಟೆ. ಅಪ್ಪಂಗ್ ಹೇಳಿಬೀಡ್ತೀನಿ... ಅಪ್ಪ ಸರೀಗೆ ಬಯ್ತಾರೆ ನೋಡು" ಅಂತ ರೇವ್ ಅಣ್ಣ ಉವಾಚ.

ಆಗ ಮತ್ತೆ ರೇವ್ ತಮ್ಮ ಉವಾಚ: ಸುಮ್ನಿರಣ್ಣ, ನನ್ನ ಮರ್ವಾದೆ ತಗೀಬೇಡ, ಸ್ವಲ್ಪಾದ್ರೂ ಮಾತಾಡ್ತೀನಿ. ನನ್ ಹೆಂಡ್ತಿ ಈಗಷ್ಟೇ ವಿಧಾನಸಭೆ ಪ್ರವೇಶಿಸಿದ್ದಾಳೆ, ಅವಳೆದುರು ನನ್ನ ಮರ್ಯಾದೆ ಹೋಗುತ್ತೆ. ಅದನ್ನು ಸ್ವಲ್ಪಾದ್ರೂ ಉಳ್ಸಿಕೊಳ್ತೀನಣ್ಣ...!

ಇದಕ್ಕೆ ಮುನ್ನ, ಹಲವು ಅಶ್ವಾಸಕರು ಹೊಸದಾಗಿ ವಿಧಾನಮಂಡಲಕ್ಕೆ ಬಂದಿದ್ದರು. ಕೆಲವರು ತೂಕ ದೇಹದವರು ಮತ್ತು ಕೆಲವರ ದೇಹವೇ ಭಾರ. ಅವರಲ್ಲಿ ಕೆಲವರಿಗಂತೂ ಎದುರಿನ ಬಾಗಿಲು ಸಣ್ಣದಾಗಿತ್ತು. ಆ ಕಾರಣಕ್ಕೆ ಹಿಂಬಾಗಿಲಿನಿಂದಲೇ ವಿಧಾನ ಮಂಡಲಕ್ಕೆ ಪ್ರವೇಶಿಸಿದ್ದರು. ಇದಕ್ಕೆ ಅತಿಯಾದ ಕಿಸೆಯ ಭಾರವೂ ಪೂರಕವಾಗಿತ್ತು ಎಂಬುದು ಅಲ್ಲಲ್ಲಿ ಕೇಳಿಬರುತ್ತಿದ್ದ ಮಾತು.

ಗಣಿ-ಖನಿ-ಖೇಣಿ ಧೂಳಿನ ನಡುವೆ ಕೆಲವರಿಗೆ ಸದನದಲ್ಲಿ ಭಾಷೆಯ ಬಗ್ಗೆ ಪಕ್ಕದ ಮರಾಠೀ ನಾಡಿನಿಂದ, ಕನ್ನಡ ನಾಡಿನೊಳಗಿರುವ ರಾಜ್ಯದ್ರೋಹಿಗಳಿಂದ ಕಿರಿಕ್ಕು ಬರುತ್ತಿದೆ ಎಂಬುದು ಅದು ಹೇಗೋ ಅಲ್ಪ ಸ್ವಲ್ಪ ಹೊಳೆದಿತ್ತು. ಈ ಕಾರಣಕ್ಕೇ ಇರಬಹುದು ಎಂದು ಅಂದಾಜಿಸಲಾಗುತ್ತಿರುವ ವಿಚಾರ ಮುಂದೆ ಓದಿ: ರಾಜ್ಯದ ಒಂದಿಂಚು ನೆಲವನ್ನು ನಾವು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಯಾಕೆಂದರೆ ನಮಗೇ ಅದು ಬೇಕು--- ಗಣಿಗಾರಿಕೆಗೆ ಎಂಬ ಇಸ್ಟೇಟುಮೆಂಟು ಸರಕಾರದಿಂದ ಬಂದಿತ್ತಂತೆ.

ಅದಲ್ಲದೆ, ಬಹುತೇಕ ಆಶ್ವಾಸಕರ ಬಾಯಲ್ಲಿ ಗುನುಗುತ್ತಿದ್ದ ಘೋಷ'ವ್ಯಾಕ್'ಯವೆಂದರೆ, ಗಡಿ ಒತ್ತುವರಿಗೆ ಬಿಡೆವು, ಗಣಿ ಒತ್ತುವರಿಗೆ ಸೈಎಂಬೆವು!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು