(ಬೊಗಳೂರು ನ್ಯೂಸ್ ಬ್ರೇಕ್ ಮಾಡೋ ಬ್ಯುರೋದಿಂದ)
ಬೊಗಳೂರು, ಜ.25- ನಮ್ಮ ಬೊಗಳೂರಿನ ನಿಧಾನಿಯವರು ತಮ್ಮ ಹೃದಯವನ್ನು ರಿಪೇರಿ ಮಾಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಬೊಗಳೂರು ಟಿವಿ ಚಾನೆಲ್‌ಗೆ ಫೀಡ್ ಮಾಡಲಾಗಿರುವ

ಬ್ರೇ"ಸಿಂಗ್" ನ್ಯೂಸ್ :
ಬ್ರೇಕಿಂಗ್ ನ್ಯೂಸ್: ನಿಧಾನಿಯವರ ಬ್ರೇಕಿಂಗ್ ಹೆಲ್ತ್ ಬುಲೆಟಿನ್!
ಫ್ಲಾಶ್ ನ್ಯೂಸ್: ನಿಧಾನಿಯವರು ಈಗಷ್ಟೇ ಎಐಐಎಂಎಸ್‌ಗೆ ತಮ್ಮ ಒಂದು ಕಾಲು ಇಟ್ಟರು
ಅವರು ಬಂದದ್ದು ಕಾರಿನಲ್ಲಿ!
ಅವರ ಸುತ್ತಮುತ್ತ ಭಾರಿ ಭದ್ರತೆ!
ಈಗಷ್ಟೇ ಅವರ ಸಹಾಯಕನ ಹೇಳಿಕೆ!
ನಿಧಾನಿಯವರು ತಮ್ಮ ಎರಡೂ ಕಾಲುಗಳನ್ನು ಆಸ್ಪತ್ರೆಯೊಳಗೆ ಇಟ್ಟರು
ಇದೇ ಸಂದರ್ಭದಲ್ಲಿ ಒಂದು ದೊಡ್ಡ ನಿಟ್ಟುಸಿರು ಕೂಡ ಅವರ ಮೂಗಿನಿಂದ ಹೊರಬಿತ್ತು
ಆಸ್ಪತ್ರೆಗೆ ಸೇರುವಾಗ ಅವರ ಮುಖ ಎಂದಿನಂತೆ ನಿರ್ಭಾವುಕವಾಗಿತ್ತು
ಅವರ ಎರಡೂ ಕಣ್ಣುಗಳು ಅತ್ತಿತ್ತ ಸುಳಿದಾಡುತ್ತಿದ್ದವು

ಬಾರ್ಕಿಂಗ್ ನ್ಯೂಸ್: ನಿಧಾನಿ ಈಗಷ್ಟೇ ಆಪರೇಶನ್ ಥಿಯೇಟರಿಗೆ ಹೊಕ್ಕರು
ಅವರನ್ನು ಅಲ್ಲಿ ಮಲಗಿಸಲಾಯಿತು
ದೇಶಾದ್ಯಂತ ಪೂಜೆ, ಹೋಮ, ಹವನ, ಪ್ರಾರ್ಥನೆ, ಭಜನೆ!
ಆದರೆ ಆಪರೇಶನ್ ಥಿಯೇಟರ್ ಬದಲಾಗಿ ಸಿನಿಮಾ ಥಿಯೇಟರಿಗೆ ಅವರನ್ನು ಕರೆದೊಯ್ಯಲಾಗಿತ್ತು!
ಈಗಷ್ಟೇ ಅವರು ಮತ್ತೆ ಆಪರೇಶನ್ ಥಿಯೇಟರಿಗೆ ಮರಳಿದ್ದಾರೆ.
ಅವರನ್ನು ಮತ್ತೆ ಮಲಗಿಸಲಾಯಿತು. ಅವರಿಗೆ ಅರಿವಳಿಕೆ ಕೊಡಲು ವಿದೇಶದಿಂದ ಒಬ್ಬ ತಜ್ಞರನ್ನು ತರಿಸಿಕೊಳ್ಳಲಾಗಿದೆ.
ಅವರಿರುವ ಕೊಠಡಿಯನ್ನು ಕಸಗುಡಿಸಿ, ಕ್ಲೀನ್ ಮಾಡುವುದಕ್ಕಾಗಿಯೇ ಅಮೆರಿಕದಿಂದ ತಜ್ಞ ಕಸಗುಡಿಸುವವರನ್ನೂ ತರಿಸಿಕೊಳ್ಳಲಾಗಿದೆ.

ನ್ಯೂಸ್ ಬ್ರೇಕ್: ನಿಧಾನಿ ಅವರ ಆಪರೇಶನ್‌ಗೆ ಏಳೆಂಟು ಗಂಟೆ ತಗುಲುವ ಸಾಧ್ಯತೆ
ಆಪರೇಶನ್ ಥಿಯೇಟರಿನಲ್ಲಿ ನಿಧಾನಿಯವರು ಅಮೋಘ ಎರಡನೇ ಗಂಟೆಗೆ ಪಾದಾರ್ಪಣೆ
ಥಿಯೇಟರಿನೊಳಗೆ ಶಸ್ತ್ರಾಸ್ತ್ರಗಳ ಕೊರತೆ ಇಲ್ಲವಾಗಿತ್ತು!
ಆಸ್ಪತ್ರೆ ವೈದ್ಯರು ಹೇಳುವಂತೆ, ಇದೊಂದು ನಾರ್ಮಲ್ ಸರ್ಜರಿಯಾದರೂ, ಅದನ್ನು ಬೈಪಾಸ್ ಮಾಡಬೇಕಾಗುತ್ತದೆ

ನ್ಯೂಸ್ ಅಪ್‌ಡೇಟ್: ನಿಧಾನಿಯವರ ನಿಧಾನವೇ ಪ್ರಧಾನವಾಗಿರುವ ಸರ್ಜರಿ ಅಮೋಘ ಎರಡನೇ ಗಂಟೆ ಮುಗಿಸಿ ಮೂರನೇ ಗಂಟೆಗೆ ಪಾದಾರ್ಪಣೆ.
ಅವರಿಗೇನೂ ಆಗಿಲ್ಲ!
ಅವರು ಉಸಿರಾಡುತ್ತಿದ್ದಾರೆಯೇ ಎಂಬುದು ಇನ್ನೂ ಅರಿವಿಗೆ ಬಂದಿಲ್ಲ.... ಯಾಕೆಂದರೆ ಅರಿವಳಿಕೆ ನೀಡಲಾಗಿದೆ.
ಕೆಲವೇ ಕ್ಷಣಗಳಲ್ಲಿ ನಮ್ಮ ವರದ್ದಿಗಾರರು ಅಲ್ಲಿಗೆ ತಲುಪಿ, ಅದನ್ನು ಕನ್ಫರ್ಮ್ ಮಾಡಿಕೊಳ್ಳಲಿದ್ದಾರೆ.

ನ್ಯೂಸ್ ಫ್ಲ್ಯಾಶ್: ನಿಧಾನಿಯವರಿಗೇನೂ ಅಪಾಯವಿಲ್ಲ. ಆದರೂ ಅವರನ್ನು ಆಸ್ಪತ್ರೆಗೆ ಸೇರಿಸಿರುವುದು ಹಲವರ ಹುಬ್ಬೇರಿಸಿದೆ.
ಆಪರೇಶನ್‌ಗೋಸ್ಕರ ಥಿಯೇಟರಿನೊಳದೆ ಕೊಂಡೊಯ್ದದ್ದು ನಿಜವಾದರೂ, ಅವರು ಅದುವರೆಗೂ ಚೆನ್ನಾಗಿಯೇ ಮಾತಾಡುತ್ತಾ ಇದ್ರು.
ಅಷ್ಟು ಸಣ್ಣ ರಕ್ತ ನಾಳದೊಳಗೆ ತಡೆಯೊಂದು ಹೇಗೆ ಸಿಲುಕಿಕೊಂಡಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತದೆ.
ರಕ್ತನಾಳದೊಳಗೆ ದೊಡ್ಡ ಬಂಡೆಕಲ್ಲು ತಂದು ಹಾಕಿರುವುದರಲ್ಲಿ ಪಾಕಿಸ್ತಾನದ ಕೈವಾಡ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬ್ರೇಕಿಂಗ್ ನ್ಯೂಸ್: ಆಪರೇಶನ್ ನಿಧಾನಿ!
ಮಹತ್ವದ ಸುಳಿವು ಪತ್ತೆ!
ನಿಧಾನಿಯವರ ರಕ್ತನಾಳಕ್ಕೆ ಅಡ್ಡಿ ಪಡಿಸಿದ್ದು ಬಂಡೆಕಲ್ಲು ಅಲ್ಲ!
ರಕ್ತನಾಳ ಅಡ್ಡಿ ಪಡಿಸಿದ್ದು ಗಡ್ಡದ ಕೂದಲು!
ಈ ಕೂದಲು ಲಫಡಾನಿಸ್ತಾನದಿಂದ ಬಂದಿರುವ ನಿರೀಕ್ಷೆ!
ಲಫಡಾನಿಸ್ತಾನದಲ್ಲಿ ಗಡ್ಡ ಬೋಳಿಸಿದರೆ ಸಾಯಿಸುವ ಶಿಕ್ಷೆ!
ಬೇತಾಳೀ ಬಾನ್‌ಗಳ ವಿಶಿಷ್ಟ ಕ್ರಮವಿದು!
ಪಾತಕಿಸ್ತಾನದ ಮೂಲಕ ಈ ಗಡ್ಡದ ಕೂದಲು ಬಂದಿರುವ ಸಾಧ್ಯತೆ.
ತನಿಖೆ ಪ್ರಗತಿಯಲ್ಲಿ, ಮಹತ್ವದ ಸುಳಿವು ಪತ್ತೆ

(ಬ್ರೇಕಿಂಗ್ ನ್ಯೂಸ್ ಸತತ ಫ್ಲ್ಯಾಶ್ ಆಗುತ್ತಿರುತ್ತದೆ)

ಸ್ಫೋಟಕ ಸುದ್ದಿ: ನಿಧಾನಿಯವರ ಶಸ್ತ್ರಕ್ರಿಯೆಯ ಶಾಸ್ತ್ರ ಪೂರ್ಣ!
ಸತತ ಎಂಟು ಗಂಟೆಗಳ ಅವಿರತ ಸಾಧನೆ!
ಇಂಥ ಶಸ್ತ್ರಕ್ರಿಯೆ ಬೇರಾರಿಗೂ ನಡೆದಿಲ್ಲ!
ವೈದ್ಯ ಲೋಕದ ಚರಿತ್ರೆಯಲ್ಲೇ ಹೊಸದೊಂದು ವಿಕ್ರಮ!
ಸಾವು ಗೆದ್ದು ಬಂದ ನಿಧಾನಿ! ದೇಶಾದ್ಯಂತ ಕುತೂಹಲ, ಸಂಭ್ರಮ, ಸಡಗರ!
ಆದ್ರೆ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ವಿಭ್ರಮೆ, ದಿಗ್ಭ್ರಮೆಯಾಗಿರುವ ಸಾಧ್ಯತೆ!

ನ್ಯೂಸ್ ಫ್ಲ್ಯಾಶ್: ನಿಧಾನಿ ಮನೆಗೆ!
ಆಸ್ಪತ್ರೆಯಿಂದ ಹೊರಬಿದ್ದ ನಿಧಾನಿ...
ತಮ್ಮದೇ ಮನೆಗೆ ತೆರಳಲಿರುವ ನಿಧಾನಿ!
ಪೂರ್ಣಕುಂಭ ಸ್ವಾಗತಕ್ಕೆ ಸಿದ್ಧತೆ
ಆಸ್ಪತ್ರೆಯಿಂದ ಒಂದು ಕಾಲು ಹೊರಗಿಟ್ಟಕೂಡಲೇ ಪೂರ್ಣಕುಂಭದ ಸುರಿಮಳೆ!
ಪಟಾಕಿ ಹಚ್ಚಿ ಸಡಗರ, ನಗರದಲ್ಲಿ ದಿವಾಳಿಯ ವಾತಾವರಣ!

ಬಾರ್ಕ್ ನ್ಯೂಸ್ continues....
ಆಸ್ಪತ್ರೆಯಿಂದ ಹೊರಬಿದ್ದ ಬಳಿಕ ಮೊದಲ ಬಾರಿ ಕಚೇರಿಗೆ ಭೇಟಿ ನೀಡಿದ ನಿಧಾನಿ!
ಎದೆ ಭಾಗದಲ್ಲಾದ ಗಾಯದ ಬಗ್ಗೆ ಸುದ್ದಿ ಚಾನೆಲ್‌ಗಳಿಗೆ ಗಂಭೀರ ಚಿಂತೆಯ ಸಂಗತಿ
ಎದೆಭಾಗದಲ್ಲೇ ಗಾಯವಾಗಿದ್ದೇಕೆ? ಹೃದಯದ ಶಸ್ತ್ರಕ್ರಿಯೆಗೆ ಆ ಭಾಗದಲ್ಲೇಕೆ ವೈದ್ಯರು ಕತ್ತರಿಸಿದ್ದು? ಉತ್ತರ ಸಿಗದ ಪ್ರಶ್ನೆಗಳು!
ಮುಂದಿನ ಬ್ರೇಕಿಂಗ್ ನ್ಯೂಸ್‌ಗಾಗಿ, ನಿರಂತರ ಕಾಯ್ತಾ ಇರಿ... ಬೊಗಳೆ ನ್ಯೂಸ್!

10 Comments

ಏನಾದ್ರೂ ಹೇಳ್ರಪಾ :-D

 1. ಬಾರ್ಕಿಂಗ್ ನ್ಯೂಸ್: ಆಪರೇಶನ್ ನಿಧಾನಿ !
  ಬಾರ್ಕಿ‌oಗ್ ನ್ಯೂಸ್: ಆಪರೇಷನ್ ನಿಧಾನಿ !

  ಇವೆರಡರಲ್ಲಿ ವ್ಯತ್ಯಾಸ ಇದೆ ಅನ್ವೇಷಿಗಳೇ...ಸ್ವಲ್ಪ ಅನ್ವೇಷಣೆ ಮಾಡಿ ನನಗೆ ಫೋನ್ ಮಾಡಿ....

  ಗೊತ್ತಾಯ್ತಾ?...ಇಲ್ವಾ?....ಸ್ವಲ್ಪ ತಲೆಕೆಡಿಸಿಕೊಳ್ಳಿ....

  ReplyDelete
 2. ಬೊಗಳೂರು ಠೀವಿ ಚಾನೆಲ್‌ದಲ್ಲಿ ಮಿಂಚಿದ ಸ್ಕೂಪ್:
  ಇದು ಕೇವಲ sting operation! ನಿಧಾನಿಯವರ ಅರಕ್ತನಾಳದಲ್ಲಿ ಸಿಕ್ಕಿದ್ದು stingಏ ಹೊರತು ಗಡ್ಡದ ಕೂದಲಲ್ಲ! ನಿಧಾನಿಯವರ heart ಕೂಡ ಅವರ ಕೋಟಿನ ಒಳಗೆ ಇರಲಿಲ್ಲ. ಅದು ಶೋಣಾಳ ಚರಣಕಮಲಗಳ ಮೇಲೆ ಹೊರಳಾಡುತ್ತಿತ್ತು!

  ReplyDelete
 3. ಬಾರ್ಕಿಂಗ್ ಸುದ್ದಿಯ 'ಬಾರ್ಕಿಂಗ್' ಶಬ್ದ ಎಲ್ಲಿಂದ ಕದ್ದದ್ದು? ನಿಜ ಹೇಳಿ. ಇಲ್ಲವಾದರೆ ಸುಳ್ಳು ಹೇಳಿ

  ReplyDelete
 4. ನಿಮ್ಮ ವರದ್ದಿಗಾರರು ತುಂಬಾ fasstu. ಅಷ್ಟ್ ಬೇಗ ಆಪರೇಶನ್ ಮುಗಿಸಿ ಬಿಟ್ಟಿರಿ.
  ಮಿಂಚಿನ ವೇಗದಲ್ಲಿ ಬಾರ್ಕಿಂಗ್ ನ್ಯೂಸ್ ತಲುಪಿಸಿದ್ದೀರಾ. ಅದಕ್ಕೆ ನಿಮ್ಮ ಏಕ ಸದಸ್ಯ ಸರ್ವ ಸದಸ್ಯ ಬ್ಯೂರೋಗೆ ಅಭಿನಂದನೆಗಳು :-)

  ReplyDelete
 5. ಚೆನ್ನಾಗಿದೆ...

  ಓದಿ ನಗು ಬಂತು...

  ಕೆಲವು ಸತ್ಯಗಳನ್ನು "ಹೀಗೂ " ಹೇಳಬಹುದು ..

  ಭೇಷ್...!

  ಅಭಿನಂದನೆಗಳು...

  ReplyDelete
 6. ಗುರುಗಳೇ,
  ನಮ್ಮಲ್ಲಿ ಸೊನ್ನೆಗೆ ಬೆಲೆ ಇಲ್ಲ. ಆ ಕಾರಣಕ್ಕೆ ಎರಡೂ ಬಾರ್ಕಿಂಗ್‌ನಲ್ಲಿರೋ ಸೊನ್ನೆಯನ್ನು ಆಚೀಚೆ ಮಾಡಿ, ಸರಿಯಾಗಿ ಬರೆದದ್ದಕ್ಕೆ ನಿಮ್ಮನ್ನು ನಾವು ಮನ್ನಿಸುತ್ತೇವೆ.

  ಆದ್ರೂ ಇಲ್ಲದ ತಲೆ ಕೆಡಿಸಿಕೊಳ್ಳೋದು ಹೇಗೆ ಎಂಬುದೇ ನಮಗೆ ಇದುವರೆಗೆ ಗೊತ್ತಾಗದ ಸಂಗತಿ!

  ReplyDelete
 7. ಸುನಾಥರೆ,
  ನೀವು ಹೇಳಿದಂತೆಯೇ ಇದು SING ಆಪರೇಶನ್... ಹಾರ್ಟು ಎಲ್ಲಿತ್ತೂಂತ ಈಗಷ್ಟೇ ವೈದ್ಯರಿಗೆ ನಿಮ್ಮಿಂದಾಗಿ ತಿಳಿದಿದೆ. ಸೋ... ರಿಪೇರಿ ಮಾಡ್ಲಿಕ್ಕೆ ದೌಡಾಯಿಸಿದ್ದಾರಂತೆ.

  ಆದ್ರೆ ಆ ಸಿಂಗ್- ರೇಶನ್‌ನಲ್ಲಿ ಸಿಕ್ಕಿದ್ದು ಮಾತ್ರ ಕೂದಲು, ಕಲ್ಲು,ಹುಳ, ಹುಪ್ಪಟೆ... ಇತ್ಯಾದಿ.

  ReplyDelete
 8. ಅನಾನಿಮಸ್ಸರೇ,
  ನಾವು ಬಾರ್ ಕಿಂಗ್ ಎಂಬುದನ್ನು ಕದ್ದಿದ್ದು ವಿಜಯಮಲ್ಯರ ಖೋಡೇಯಿಂದ. ಅವರೇ ಬಾರುಗಳಿಗೆ ಕಿಂಗಲ್ವಾ? ಮತ್ತೆ ನಾವೇನೂ ಶ್ವಾನದ ಬಾಯಿಯಿಂದ ಖಂಡಿತಾ ಕದ್ದಿಲ್ಲಪ್ಪ...

  ReplyDelete
 9. ಜ್ಯೋತಿ ಅವರೆ,
  ಬೊಗಳೂರು ಬೊಗಳೆ ತಾಣಕ್ಕೆ ಸ್ವಾಗತ.
  ಅದು ಆಕ್ಚುವಲಿ ನಾವು ಬ್ರೇಕಿಂಗ್ ನ್ಯೂಸುಗಳನ್ನು ಹತ್ತು ದಿನ ಮೊದಲೇ ಸಿದ್ಧಪಡಿಸಿಟ್ಟುಕೊಳ್ಳುತ್ತೇವೆ. ಯಾವಾಗ ಬೇಕಾದ್ರೂ ಬ್ರೇಕ್ ಮಾಡ್ತಾ, ಕನಿಷ್ಠ ಇಪ್ಪತ್ತು ದಿನಗಳಿಗೆ ಆಗುವಷ್ಟು ಸರಕು ಸಿದ್ಧವಾಗಿರುತ್ತೆ ನಮ್ಮಲ್ಲಿ.

  ReplyDelete
 10. ಸಿಮೆಂಟಿಗರೇ,
  ನಾವು ಹೇಳಿದ್ದೇ ಸತ್ಯ ಅಂತ ಹೇಳಿ ನಮ್ಮ ಬ್ಯುರೋಗೆ ಅವ-ಮಾನನಷ್ಟ ಮಾಡಿದ್ದೀರಿ. ನಗು ಬಂತು ಅಂತ ಹೇಳಿ ನಮ್ಮದು ಅಪ-ಹಾಸ್ಯ ಬ್ಯುರೋ ಅನ್ನೋದನ್ನೂ ಸಾಬೀತುಪಡಿಸಿದ್ದೀರಿ. ಇನ್ನು ಮುಂದೆ ನಗುಬಂದರೂ ನಗತಾರದಂತೆ ಪ್ರಯತ್ನಿಸ್ತೇವೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post