(ಸಂತಾಪಕೀಯ)
2009 ಬಂದು ಆಗಲೇ ಒಂದು ವಾರವೇ ಆದರೂ ಬೊಗಳೂರಿನಲ್ಲಿ ಏನೂ ಸುದ್ದಿ ಕೇಳುತ್ತಿಲ್ಲ. ಗ್ಲೋಬಲ್ ಕ್ರೈಸಿಸ್‌ನಿಂದಾಗಿ ಬೊಗಳೂರು ಗೊಟಕ್ ಅಂದಿದೆ, ಬೊಗಳೂರು ಏಕ ಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳಿಗೂ ಗಂಟು-ಮೂಟೆ ಕಟ್ಟುವಂತೆ ಹೇಳಲಾಗಿದೆ ಅಂತೆಲ್ಲಾ ಸತ್ಯ ಪ್ರಚಾರ ಮಾಡುತ್ತಿರುವುದಕ್ಕೆ ಬೊಗಳೂರು ಸಂತಾಪಕರು, ಓದುಗರು, ಪ್ರೂಫು ರೀಡರು, ಬೆರಳಚ್ಚುಕೋರ, ಕರಡಚ್ಚುತಜ್ಞ, ಕಾರ್ಯಮರೆತ ಮುಖ್ಯ ಸಂಪಾದಕರು, ಉಪ ಸಂಪಾದಕರು, ಕಿರಿಯ ಉಪ ಸಂಪಾದಕರು, ಕಿರಿಕಿರಿಯ ಉಪ ಉಪ ಸಂಪಾದಕರೂ ಆಗಿರುವ ಟ್ರೈನೀ ಕಿರಿಯ ಕಿರು ಸಂಪಾದಕರು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದಾರೆ.

ಹೊಸ ವರ್ಷ ಆಗಮಿಸುತ್ತಿರುವಾಗಲೇ, ಈ ವರ್ಷ ಏನೂ ಬರೆಯಬಾರದೆಂದು ತೀರ್ಮಾನಿಸಲಾಗಿತ್ತಾದರೂ, ಆ ಬಳಿಕ ನಿರ್ಧಾರ ಚೇಂಜ್ ಮಾಡಲಾಯಿತು. ಏನಾದರೂ ಹೊಸಾ ರೆಸೊಲ್ಯುಷನ್ ಕೈಗೊಳ್ಳಬೇಕೆಂದು ಹಪಹಪಿಸಿ, ಲೆಕ್ಕಾಚಾರ ಹಾಕಿ, ಕೂಡಿಸಿ, ಕಳೆದು, ಅಳೆದು ತೂಗಿ ನಿರ್ಣಯವೊಂದು ಕೊನೆಗೂ ಹೊಳೆಯುವಲ್ಲಿ ಮತ್ತು ಅದನ್ನು ಅನುಷ್ಠಾನಗೊಳಿಸುವಲ್ಲಿ ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳೆಲ್ಲಾ ಸೇರಿ ಯಶಸ್ವಿಯಾಗಲು ಇಷ್ಟು ಸಮಯ ತಗುಲಿತು ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಇಷ್ಟೊಂದು ತೂಕದ, ತೂಕಡಿಸದ ಮತ್ತು ಪೊಳ್ಳು ಪೊಳ್ಳಾಗಿ ಯೋಚಿಸುತ್ತಾ ಕೈಗೊಂಡ ನಿರ್ಣಯ ಕೈಗೊಳ್ಳಲು ಇಷ್ಟು ಸಮಯ ಬೇಕಾಗಿದೆ. ಹೀಗಾಗಿ ಬೊಗಳೂರೋದುಗರಿಗೆ ಮುಖ ತೋರಿಸಲಾಗಲಿಲ್ಲ ಎಂದು ಸಂತಾಪಕರು ಸಂತಸ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ ಅಂಥ ಉದಾತ್ತ ನಿರ್ಣಯ ಏನು ಕೈಗೊಳ್ಳಲಾಗಿದೆ ಎಂದು ಕೇಳುವ ಮತ್ತು ಕೇಳದಿರುವ ಓದುಗರಿಗಾಗಿ ಉತ್ತರ ಇಲ್ಲಿದೆ. ಬೊಗಳೂರು ಬ್ಯುರೋ ತಲೆ ಕೆರೆದು ಕೆರೆದೂ ಕೆರೆದೂ ಕೈಯಲ್ಲಿ ತಗೊಂಡ ರೆಸೊಲ್ಯುಷನ್: ಯಾವುದೇ ರೀತಿಯ ರೆಸೊಲ್ಯುಷನ್ ಕೈಗೊಳ್ಳಬಾರದು!

6 Comments

ಏನಾದ್ರೂ ಹೇಳ್ರಪಾ :-D

 1. ಸುಳ್ಳು ಹೇಳಬೇಡಿರಿ, ಅನ್ವೇಷಿ.
  ನಿಮ್ಮದು ಹೊಸದಾದ resolution ಏನಲ್ಲ!

  ReplyDelete
 2. ನಂಗೊತ್ತಿತ್ತು ಹೀಗೇ ಆಗೋದು ಅಂತ. ನೀವು ಸತ್ಯವಾಕ್ಯಕ್ಕೆ ನೆಚ್ಚಿನಡೆದರೆ ಪ್ರಳಯ ಗ್ಯಾರಂಟೀ....

  ReplyDelete
 3. ಹೋದ ವರ್ಷವೇ, ನೀವು ಯಾವುದೇ ನಿರ್ಧಾರವೂ ಇರುವುದಿಲ್ಲ, ಇದ್ದರೂ ಅದನ್ನು ಪಾಲಿಸಬೇಕಾಗಿಲ್ಲ! ಎಂಬ ಘನ ಬೊಗಳೆಯನ್ನು ಕೇಳಿ, ಅದನ್ನೇ ನಾವು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೆವು.

  ಈ ವರ್ಷ, ಯಾವುದೇ ರೆಸಲ್ಯೂಷನ್ ಇಲ್ಲ, ಇದ್ದರೂ ಅದು ಕೇವಲ ಹೊಸ ವರ್ಷದ ಮೊದಲ ದಿನವಷ್ಟೇ ಎನ್ನುವ ಬೊಗಳೆಯಿಂದ ಮನಸ್ಸಿಗೆ ಸಮಾಧಾನವಾಯಿತು.

  ಅಂದ ಹಾಗೆ " ಹೊಸ ವರ್ಷದ ಭವಿಷ್ಯ" ಯಾವಾಗ ಅನ್ವೇಷಿಗಳೇ?

  ReplyDelete
 4. ಸುನಾಥರೆ,
  ಇದು ನಮ್ಮ ಡೀಫಾಲ್ಟ್ ನಿರ್ಣಯ.
  ಆದ್ರೆ, ಸುಳ್ಳು ಹೇಳಬಾರ್ದು ಅಂತ ಕಂಡಿಷನ್ ಹೇರಿ ನಮ್ಮ ಮರ್ಯಾದೆ ಕಳೆಯಬೇಡಿರಿ...

  ReplyDelete
 5. ಲಕ್ಷ್ಮಿ ಅವರೆ,

  ನಮ್ಮ ಬ್ರ್ಯಾಂಡ್ ಸ್ಲೋಗನ್ನೇ ಅದು. ಸತ್ಯವಾಕ್ಯಕೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು.

  ReplyDelete
 6. ನೀಲಗಿರಿಯವರೆ,
  ನಿಮ್ಮ ಭವಿಷ್ಯ ಇನ್ನೂ ನಮ್ಮ ಕೈಯಲ್ಲೇ ಇದೆ. ಅದನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ ನಿಮಗೊಂದು ಭವಿಷ್ಯ ನುಡಿ: "ಸ್ವಲ್ಪ ಸಮಯ ಕಾದರೆ, ಬೊಗಳೆ ಬ್ಯುರೋದಿಂದ ನಿಮ್ಮ ಭವಿಷ್ಯ ತಿಳಿಯುತ್ತದೆ."

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post