ಬೊಗಳೆ ರಗಳೆ

header ads

ಅಯೋಗ್ಯರು ಮನೆಗೆ: ಸರಕಾರಿ ಕಚೇರಿ ಖಾಲಿ ಖಾಲಿ!

(ಬೊಗಳೂರು ದುರಾಡಳಿತ ಸುಧಾರಣೆ ಬ್ಯುರೋದಿಂದ)
ಬೊಗಳೂರು, ಡಿ.15- ದೇಶವನ್ನು ಕಾಡುತ್ತಿರುವ ದುರಾಡಳಿತದ ಸುಧಾರಣೆಗೆ ನೇಮಿಸಲಾಗಿರುವ ಆಯೋಗ್ಯವೊಂದು ತನ್ನ ವರದಿಯಲ್ಲಿ ಇಲ್ಲಿ ಸಲ್ಲಿಸಿದ್ದು, ಇದರಿಂದಾಗಿ ದೇಶದ ಸರಕಾರಿ ಕಚೇರಿಗಳೆಲ್ಲವೂ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸಿವೆ.

ಅಯೋಗ್ಯ ಅಧಿಕಾರಿಗಳನ್ನು ಅವರವರ ಸ್ವಂತ ಮನೆಗೆ ಕಳುಹಿಸಲು ಶಿಫಾರಸು ಮಾಡಿರುವುದರಿಂದ ಈ ರೀತಿಯ ತುರ್ತು ಪರಿಸ್ಥಿತಿ ಉದ್ಭವವಾಗಿದ್ದು, ಸರಕಾರಿ ಕಚೇರಿಗಳಲ್ಲಿ ಇದುವರೆಗೆ ಇದ್ದ ಅರಾಜಕತೆಯು ಮತ್ತಷ್ಟು ಹೆಚ್ಚಾಗಿಬಿಟ್ಟಿದ್ದು, ಬೊಗಳೂರಿನ ಪ್ರಜೆಗಳು ಕಂಗಾಲಾಗಿದ್ದಾರೆ ಎಂದು ಎಲ್ಲಿಯೂ ವರದ್ದಿಯಾಗಿಲ್ಲ.

ಆದರೆ, 14 ಮತ್ತು 20ನೇ ವರ್ಷಗಳಲ್ಲಿ ಸರಕಾರಿ ನೌಕರರ ನಿಷ್ಕ್ರಿಯತೆಯ ಪರಾಮರ್ಶೆ ನಡೆಯಲಿದೆ ಎಂಬುದು ಸಂತಸಕರ ಸಂಗತಿಯಾಗಿದ್ದು, ಕನಿಷ್ಠ ಇಷ್ಟು ವರ್ಷಗಳ ಕಾಲ ತಾವು ಕಚೇರಿಗೆ ಬಂದು ನಿದ್ದೆ ಮಾಡುತ್ತಿದ್ದರೆ, ಮೂರು ಪೀಳಿಗೆಗೆ ಆಗುವಷ್ಟು ಕಬಳಿಸಲು ಸದವಕಾಶ ದೊರೆಯುತ್ತದಲ್ಲಾ ಎಂಬುದು ಬೊಗಳೂರಿನ ಕಾರ್ಯಮರೆತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಅಭಿಪ್ರಾಯ.

ಇಪ್ಪತ್ತು ವರ್ಷಗಳ ಕಾರ್ಯವೈಖರಿ ಪರಾಮರ್ಶೆ ಸಂದರ್ಭವೂ ಅವರು ಅಯೋಗ್ಯರು ಎಂದು ಸಾಬೀತಾಗದಿದ್ದರೆ ದೇಶದ ಪ್ರಜೆಗಳನ್ನು ದೇವರೇ ಕಾಪಾಡಬೇಕು ಎಂದು ಬೊಗಳೆ-ರಗಳೆ ಬ್ಯುರೋ ಸಂತಾಪಕರು ಸಂತಾಪ ಸೂಚಿಸಿದ್ದಾರೆ.

ಆದರೆ, ಈ ದುರಾಡಳಿತ ಸುಧಾರಣಾ ಆಯೋಗವನ್ನೇ ಅಯೋಗ್ಯ ಎಂದು ತಪ್ಪಾಗಿ ಬರೆದ ಸರಕಾರಿ ಮುದ್ರಣಾಲಯದ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹತ್ತು ಹಲವು ವರ್ಷಗಳಿಂದ ದುರಾಡಳಿತ ಸುಧಾರಣೆಗೆ ವರದಿಯ ಮೇಲೆ ವರದಿ ಸಲ್ಲಿಸುತ್ತಲೇ ಬಂದಿರುವ ಕುರಿತು ಈಗಾಗಲೇ ಬೊಗಳೂರು ಬ್ಯುರೋ ಇಲ್ಲಿ ಒಂದೇ ಕಡೆ ನೂರಾರಿ ಬಾರಿ ಎಚ್ಚರಿಸಿದ್ದನ್ನು ಇಲ್ಲಿ ಪುಣ್ಯಸ್ಮರಣೆ ಮಾಡಿಕೊಳ್ಳಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಏನ್ ನೀವು ಅಭಿಜ್ಞಾನ ಶಾಕುಂತಲ ಥರ ಹಳೇ ಬ್ಲಾಗ್ ಪೋಸ್ಟ್ ಲಿಂಕ್ ಹಾಕಿ ಹಾಕಿ ಪುಣ್ಯ ಸ್ಮರಣೆ ಮಾಡಿಸ್ತಿದ್ರೆ....ಹೇಗೆ ಓದೋದು ?

    ಇರ್ಲಿ...ಆಯೋಗ್ಯರು ಮನೆಗೆ ಹೋಗಿ ಕಚೇರಿ ಖಾಲಿ ಆದ್ರೆ,ಅಲ್ಲಿ ನಾನು ನನ್ನ ಆಯಸ್ಕಾಂತಗಳನ್ನಿಟ್ಟುಕೊಂಡು ಲ್ಯಾಬ್ ಮತ್ತು ನನ್ನ ಸಮಸ್ತ ಪುಸ್ತಕ ಭಂಡಾರ ತೆಗೆದುಕೊಂಡು ಲೈಬ್ರರಿ ಶುರು ಮಾಡ್ತಿನಿ.ಆಮೇಲೆ, ಬಾಡಿಗೆ ಕೊಡೋ ಹಾಗಿಲ್ಲ ತಾನೆ ಇದನ್ನೆಲ್ಲಾ ಸ್ಥಾಪಿಸಕ್ಕೆ ?

    ಪ್ರತ್ಯುತ್ತರಅಳಿಸಿ
  2. ಲಕ್ಷ್ಮಿಯವರೆ,

    ಯಾಪ್ಪಾ... ಬೇಡ ಬೇಡ...ನೀವಂತೂ ಈಗಾಗ್ಲೇ ಮನೆ ಕೆಲಸದಾಳು ಇಲ್ಲದ ಕಾರಣ ಗುಡ್ಸೋದು, ಸಾರ್ಸೋದು ಎಲ್ಲವನ್ನೂ ಕಲ್ತು ಬಿಟ್ಟಿದ್ದೀರಾ... ನೀವು ಬೊಗಳೂರಿಗೆ ಬಂದ್ರೆ ಆಯಸ್ಕಾಂತ, ಟೆಸ್ಟ್ ಟ್ಯೂಬು, ಲ್ಯಾಬು ಮತ್ತು ಭಂಡಾರ ಸಮೇತ ಕಾಲಿಟ್ರೆ, ಖಂಡಿತವಾಗಿಯೂ ಬೊಗಳೂರಿನ ಸಮಸ್ತ ಸಿಬ್ಬಂದಿಯನ್ನು ಗುಡಿಸಿ, ಸಾರಿಸಿ, ಸಾಮ್ರಾಜ್ಯ ಸ್ಥಾಪಿಸಿಬಿಡ್ತೀರಿ... ಆಮೇಲೆ ನೀವು ರೀಸರ್ಚ್ ಮಾಡ್ಬಿಟ್ರೆ... ಅಬ್ಬಬ್ಬಾ...ನೆನಸ್ಕೊಂಡ್ರೇ ಭಯವಾತ್ತೆ... ದಯವಿಟ್ಟು ಇಂಥ ಒಳ್ಳೆ ಯೋಚನೆ ಮಾಡ್ಬೇಡಿ.. ನಮ್ಮನ್ನು ಬಿಟ್ಬಿಡಿ...ಅಂತ ಕಟುಶಬ್ದಗಳಲ್ಲಿ ದಯನೀಯ ಮನವಿ ಮಾಡಿಕೊಳ್ಳುತ್ತಿದ್ದೇವೆ...

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಗಳೆ,
    ಮೊ-ಇಲಿಯವರ ಮಾನ(ವಿಲ್ಲದ)ದಂಡದಲ್ಲಿ ಅಯೋಗ್ಯತೆಯನ್ನು ಅಳೆಯುವದು ಹೇಗೆಂದು ನಿಮಗೆ ಗೊತ್ತಾಗಿಲ್ಲವೆ?
    ಯಾವನು (ಸರಕಾರವನ್ನು) ಶೇವ್ ಮಾಡುವ ಯೋಗ್ಯತೆಯುಳ್ಳವನೊ, ಅವನೇ ಸರಕಾರಿ ಸೇವೆಗೆ ಯೋಗ್ಯತೆಯುಳ್ಳವನು!
    ಅಂದ ಮೇಲೆ, ಸರಕಾರಿ ಕಚೇರಿಗಳು ಖಾಲಿಯಾಗುವವು ಎನ್ನುವ ಹೆದರಿಕೆ ಬೇಡ.
    ಯಾರಾದರೂ ಅಯೋಗ್ಯರು ಕಂಡುಬಂದರೆ ಅವರನ್ನು ಪರಲೋಕಾಯುಕ್ತ ಖಾತೆಗೆ ರವಾನಿಸೋಣ!

    ಪ್ರತ್ಯುತ್ತರಅಳಿಸಿ
  4. ಸುನಾಥರೆ,
    ಈಗಾಗಲೇ ಪರಲೋಕಾಯುಕ್ತ ಕಚೇರಿಗೆ ಕಳುಹಿಸುವ ಕಾರ್ಯವು ಪಾಕಿಸ್ತಾನಿ ಮೂಲದ ಧರ್ಮ-ಯುದ್ಧಿಗಳಿಂದ ನಡೆಯುತ್ತಿದೆ. ಆದರೆ, ಅವರು ಮುಗ್ಧರನ್ನೇ ಕಳುಹಿಸ್ತಾ ಇರೋದು ವಿಪರ್ಯಾಸ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D