Subscribe Us

ಜಾಹೀರಾತು
header ads

2009 ರೆಸೊಲ್ಯುಷನ್: ಬೊಗಳೆ ಬ್ಯುರೋ ಬಂದ್

(ಬೊಗಳೂರು ಹೊಸವರ್ಷ ಬ್ಯುರೋದಿಂದ)
ಬೊಗಳೂರು, ಡಿ.31- ಹೊಸ ವರ್ಷ ಬರುತ್ತಿರುವಂತೆಯೇ, ಬೊಗಳೂರು ಮುಂದಿನ ವರ್ಷಕ್ಕೆ ಯಾವ ನಿರ್ಣಯ ಕೈಗೊಳ್ಳುತ್ತದೆ? ಅದರ ರೆಸೊಲ್ಯುಷನ್ ಹೇಗಿರಬಹುದು ಎಂಬ ಕುತೂಹಲ, ಹಪಹಪಿಕೆ, ಗ್ರಹಿಕೆ, ಪೂರ್ವಗ್ರಹಿಕೆ, ವಾಕರಿಕೆ ಎಲ್ಲ ಇರುವವರಿಗೆ ಇದೋ ಇಲ್ಲಿದೆ ಉತ್ತರ.

ಒಂದು ಸಂಗತಿ ಸ್ಪಷ್ಟಪಡಿಸುತ್ತಿದ್ದೇವೆ. ಇದು ಸ್ಮೋಕಿಂಗ್ ಬಿಟ್ಟು ಬರೇ ಕಿಂಗ್ ಆಗುತ್ತೇನೆ, ಕಿಂಗ್ ಫಿಶರ್ ಡ್ರಿಂಕಿಂಗ್ ಬಿಟ್ಟು ಓಲಾಡದ ಕಿಂಗ್ ಮಾತ್ರ ಆಗುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದೆಲ್ಲಾ ಹೊಸ ವರ್ಷದ ಹಿಂದಿನ ದಿನವೇ ರಾತ್ರಿ ಪಾರ್ಟಿ ಆರಂಭವಾಗುವ ಮುನ್ನ ನಿರ್ಣಯ ಕೈಗೊಂಡು, ಪಾರ್ಟಿಯಲ್ಲಿ ತೇಲಾಡಿದ ಬಳಿಕ "ನಾನು ವಾಗ್ದಾನ ಮಾಡಿದ್ದು ಕಳೆದು ಹೋದ ವರ್ಷದಲ್ಲಿ ಅಲ್ವಾ? ನಾನು ಕಳೆದ ವರ್ಷದ ಬಗ್ಗೆಯೇ ಹೇಳಿದ್ದು. ಈ ವರ್ಷ ಏನಿದ್ರೂ ಹೊಸಾ ವರ್ಷ ಅಲ್ವಾ" ಅಂತ ಜಾರಿಕೊಳ್ಳುವವರು, "ಹೌದಾ? ನಾನು ಇಂತಹ ರೆಸೊಲ್ಯುಶನ್ ಕೈಗೊಂಡಿದ್ದೇನೆಯೇ?" ಎಂದು ನಮ್ಮನ್ನೇ ಯಾಮಾರಿಸಿ ಮರು ಪ್ರಶ್ನಿಸುವವರು, "ಈ ರೀತಿ ನಿರ್ಣಯ ಕೈಗೊಂಡಿದ್ದಿರಲೂಬಹುದು, ಆಗ ನಾನು ಅಮಲಿನಲ್ಲಿದ್ದಿರಬಹುದು" ಎಂದು ಸಮಜಾಯಿಷಿ ನೀಡುವವರು, "ನಾನು ಬೇರೆಯೇ ಹೇಳಿದ್ದೆ, ಇದನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ' ಅನ್ನೋ ಪಕ್ಕಾ ರಾಜಕಾರಣಿಗಳು--- ಮುಂತಾದವರಂತಲ್ಲ ಈ ಬೊಗಳೂರು ಬ್ಯುರೋ.

ಸದಾ ಸತ್ಯ ಹೇಳಿ ಹೇಳಿ ಬೋರಾದವರು, ಆಗೊಮ್ಮೆ ಈಗೊಮ್ಮೆ ಸುಳ್ಳು ಹೇಳುತ್ತಾರೆ. ಇದೇ ಮಾದರಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ಅಪರೂಪಕ್ಕೊಮ್ಮೆ ಸತ್ಯ ಹೇಳಲು ನಿರ್ಧರಿಸಿದೆ. ಹೀಗಾಗಿ ಈ ನಿರ್ಣಯ.

ಬೊಗಳೂರಿನ ನಿರ್ಣಯ:
ಈ ಸಂಚಿಕೆಯೊಂದಿಗೆ, ಬೊಗಳೂರು ಬ್ಯುರೋದಿಂದ ಪ್ರಕಟವಾಗುವ ಪತ್ರಿಕೆಯನ್ನು ಸದ್ಯಕ್ಕೆ ಈ ವರ್ಷ ನಿಲ್ಲಿಸಲಾಗುತ್ತದೆ.

ಆದರೆ, ಈ ರೆಸೊಲ್ಯುಶನ್‌ಗೆ ಮತ್ತೊಂದು ಲೈನು ಕೂಡ ಸೇರಿಸಲಾಗುತ್ತದೆ. ಅದೆಂದರೆ, ಮುಂದಿನ ವರ್ಷದಿಂದ ಯಥಾ ಪ್ರಕಾರ ಕೊರೆತ ಮುಂದುವರಿಸಲಾಗುತ್ತದೆ. ಓದುಗರು ಸಹಿಸಿ"ಕೊಲ್ಲಲು" ಕೋರಲಾಗಿದೆ.

ಓದುಗರಿಗೆ, ಓದದವರಿಗೆ, ಬರುವವರಿಗೆ, ಬಾರದವರಿಗೆ, ಬ್ಲಾಗೊಳು ಇಣುಕುವವರಿಗೆ, ಕಮೆಂಟಿಸುವವರಿಗೆ, ಬೈಯುವವರಿಗೆ, ತೆಗಳುವವರಿಗೆ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Post a Comment

12 Comments

 1. ನಿಮಗೂ ಶುಭಾಶಯ.

  - ಓದುವ ಅನಾಮಿಕ

  ReplyDelete
 2. ನಾನೂ ಕೂಡ ಈ ವರ್ಷ ಇನ್ನು ನಿಮ್ಮ ಬ್ಲಾಗಿಗೆ ಭೇಟಿಕೊಡಬಾರದೆ೦ದು ನಿರ್ಧರಿಸಿದ್ದೇನೆ... ಮು೦ದಿನ ವರ್ಷ ಬರುತ್ತೇನೆ...

  ReplyDelete
 3. ಮುಗಿಯಿತು ನಾನು ನಿಮ್ಮ ಕೊರೆತ ಸಹಿಸಿಕೊಂಡದ್ದು.
  ಹೊಸಾ ವರ್ಷದಾಗ ಹೊಸಾ ಸತ್ಯಗಳು(!) ಬರಲಿ.
  ನಿಮಗ ಹೊಸ ವರ್ಷದ ಶುಭಾಶಯಗಳು(ಖರೇನ!)

  ReplyDelete
 4. ನಿಮ್ಮ ಕೊರೆತ ಈ ವರ್ಷಕ್ಕೆ ಸಾಕು. ನಾನೂ ಸದ್ಯ ಒಂದು ವರ್ಷ ಬಿಟ್ಟು ನಿಮ್ಮ ಬ್ಲಾಗಿಗೆ ಭೇಟಿ ಕೊಡುತ್ತೇನೆ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು. (ಆದರೆ ಇದು ಹಿಂದುಗಳ ಹಬ್ಬ ಅಲ್ಲ. ಕ್ಯಾಲೆಂಡರ್ ವರ್ಷ).
  ಏಕೆಂದರೆ ನಾವಿನ್ನೂ ಬ್ರಿಟಿಷರ ಜೀತದಿಂದ ಹೊರ ಬಂದಿಲ್ಲ. ಪ್ರತೀ ವರ್ಷ ಯುಗಾದಿಯ ಬದಲು ಈ ಕ್ಯಾಲೆಂಡರ್ ವರ್ಷವನ್ನು ಆಚರಿಸಿಕೊಳ್ಳುತ್ತೇವೆ. ಅದೂ ಕುಡಿದು ತೂರಾಡಿ, ಚರಂಡಿಯಲ್ಲಿ ಬಿದ್ದು ಹೊರಳಾಡಿ ಬೆಳಿಗ್ಗೆ ಎದ್ದು ಕುಡಿದ ಮತ್ತಿನಲ್ಲೇ ನಿತ್ಯ ಕೆಲಸಕ್ಕೆ ಹಾಜರ್. .....ಛೀ...ನಾಚಿಕೆ ಆಗಬೇಕು ಈ ಜನಕ್ಕೆ.

  ReplyDelete
 5. ಈ ವರ್ಷದ ಕೊರೆತ ಇಲ್ಲಿಗೆ ಸ್ಟಾಪಾ ? ಸದ್ಯ !!!!!!!

  ಮುಂದಿನ ವರ್ಷದ ಕೊರೆತ ನೋಡಲು ನಾನು ಮುಂದಿನ ವರ್ಷ ಬರ್ತಿನಿ.

  ReplyDelete
 6. ನಿಮಗೆ ಹೊಸವರ್ಷದ ಶುಭಾಶಯಗಳು...

  ನಿಮ್ಮ "ಇದು" ತುಂಬಾಚೆನ್ನಾಗಿ ಬರುತ್ತಿದೆ..
  ಇನ್ನುಮುಂದೆ ನಾನು ನಿಮ್ಮ ಇದಾಗಿದ್ದೇನೆ..

  ಧನ್ಯವಾದಗಳು..

  ReplyDelete
 7. ಅನಾಮಿಕರಿಗೂ ಬೊಗಳೂರು ಬ್ಯುರೋ ಶುಭಾಶಯ...

  ReplyDelete
 8. ಶ್ರೀನಿಧಿ ಅವರೆ,
  ಓಹ್.. ಕಳೆದ ವರ್ಷ ಭೇಟಿಯಾಗಿದ್ದಲ್ವಾ...?

  ಶುಭಾಶಯಗಳು

  ReplyDelete
 9. ಸುನಾಥರೆ,
  ಹೊಸಾಸತ್ಯ (ಸವರ್ಣದೀರ್ಘ ಸಂಧಿ) ಬಂದೇ ಬರುತ್ತವೆ....
  ನಿಮಗೂ ಶುಭಾಶಯಗಳು ಕಣ್ರೀ...

  ReplyDelete
 10. ಗುರುಗಳೆ,
  ನಿಮ್ಮ ಆಣತಿಯಂತೆ ಕೊರೆತಕ್ಕೆ ಕೊರತೆ ಮಾಡಿದ್ದೇವೆ. ನಮಗೆ ಹೊಸ ವರ್ಷ ಅಲ್ಲದ ಕಾರಣ, 2009 ಶುಭಾಶಯಗಳು ಅಂತಲೇ ಅನ್ನೋಣ.
  ಕುಡಿದು ತೂರಾಡಿದವರು ಮರುದಿನವೇ ಏಳುತ್ತಾರಾದುದರಿಂದ ಹೋದ ವರ್ಷ ಮಲಗಿದವರು ಈ ವರ್ಷ ಎದ್ದ ಹಾಗೆಯೇ...

  ReplyDelete
 11. ಲಕ್ಷ್ಮಿ ಅವರೆ,
  ಸದ್ಯ ನಮಗೂ ಕೊರೆತ ನಿಲ್ಲಿಸಲು ಬರುತ್ತದೆ... ನಿಮಗೆ ಮಾತ್ರ ಮೌನ ವ್ರತ ಮಾಡಲು ಬರೋದೂಂತ ತಿಳ್ಕೊಂಡ್ರಾ...

  ಶುಭಾಶಯಗಳು

  ReplyDelete
 12. ಸಿಮೆಂಟು ಮರಳುಗಳ ಮಧ್ಯೆಯೇ ಅದು ಇದು ಮಾತನಾಡುತ್ತಿರುವವರೆ, ನಿಮಗೆ ಸ್ವಾಗತ.

  ನಿಮ್ಮ ಅದು-ಇದು ಎದುರು ನಮ್ಮ ಇದು ಏನೂ ಅಲ್ಲ... ನೀವು ಆಗಾಗ್ಗ ಇದು ಬರೀತಾ ಇರಿ...

  ReplyDelete

ಏನಾದ್ರೂ ಹೇಳ್ರಪಾ :-D