(ಬೊಗಳೂರು ನಿಷ್ಕ್ರಿಯ ದಳದಿಂದ)
ಬೊಗಳೂರು, ಸೆ.26- ಕೇವಲ ಬಾಂಬ್ ಪತ್ತೆ ದಳದಿಂದಲೇ ಬಾಂಬ್ ನಿಷ್ಕ್ರಿಯ ದಳದ ಕೆಲಸ ಮಾಡಿಸಿದ ಬೊಗಳೂರು ಪೊಲೀಸರ ಸಂಶೋಧನೆಯನ್ನೇ ಬೊಗಳೆ ರಗಳೆ ಬ್ಯುರೋದ ಸಂಶೋಧಕರು ಪತ್ತೆ ಹಚ್ಚಿ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ.

ವಾಸ್ತವವಾಗಿ ಧಾರವಾಡದಲ್ಲಿ ಬಾಂಬ್ ಇದೆ ಎಂದು ಗೊತ್ತಾದಾಗ, ಬಾಂಬ್ ನಿಷ್ಕ್ರಿಯ ದಳವು ಬೆಂಗಳೂರಿನಿಂದ ಬರಲು ಏಳೆಂಟು ಗಂಟೆ ಹಿಡಿಯುತ್ತದೆ ಎಂಬುದು ಪೊಲೀಸರ ಚಿಂತೆಗೆ ಕಾರಣ. ಹೀಗಾಗಿ ಧಾರವಾಡದಲ್ಲೇ ಲಭ್ಯವಿದ್ದ ನಾಯಿಯೊಂದನ್ನು ಕರೆದೊಯ್ದ ಅವರು, ಬಾಂಬ್ ಪತ್ತೆ ದಳವನ್ನಾಗಿ ಮಾಡಿಕೊಂಡರು.

ಈ ನಾಯಿಗೆ ಸ್ಥಳದಲ್ಲೇ ಚೆನ್ನಾಗಿ ನೀರೋ/ಬೀರೋ ಕುಡಿಸಿದ ಅವರು, ಬಾಂಬ್ ಹುಡುಕಲಾರಂಭಿಸಿದರು. ಅರ್ಧ ಗಂಟೆ ಕಳೆಯುವಷ್ಟರಲ್ಲಿ ನಾಯಿಗೆ ಹೊಟ್ಟೆಯಲ್ಲಿ ಜಳಜಳವಾದ ಸದ್ದು. ತಡೆಯಲಾಗದೆ ಕಾಲೆತ್ತಿಯೇ ಬಿಟ್ಟಿತು. ಆದರೆ ಅದೃಷ್ಟವಶಾತ್ ಅದೇ ಸ್ಥಳದಲ್ಲಿ ಬಾಂಬ್ ಇದ್ದಿತ್ತು. ಅದು ನೀರು ಬಿದ್ದ ದೀಪಾವಳಿ ಪಟಾಕಿಯಂತೆ ಠುಸ್ ಎಂದಿತು. ಅಲ್ಲಿಗೆ ಬಾಂಬ್ 'ನಿಷ್ಕ್ರಿಯ'ವಾಯಿತು. ಇದನ್ನು ಪತ್ತೆ ಹಚ್ಚಿದ್ದು ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಚಹಾ ಸೇವಿಸುತ್ತಿದ್ದಾಗ!

ಇದರಿಂದ ತಾವೇ ಬಾಂಬ್ ನಿಷ್ಕ್ರಿಯ ದಳವೊಂದನ್ನು ಸಂಶೋಧಿಸಿದ್ದೇವೆ ಮತ್ತು ಅದನ್ನು ಪ್ರಯೋಗ ಮಾಡಿ ಯಶಸ್ಸೂ ಸಾಧಿಸಿದ್ದೇವೆ ಎಂದು ಪೊಲೀಸರು ತಮ್ಮ ಬೆನ್ನು ತಟ್ಟಿಕೊಂಡು, ನಾಯಿಯ ಬೆನ್ನು ಸವರಿದ್ದಾರೆ.

ಈ ಮಧ್ಯೆ, ಪೊಲೀಸರು ಬೀಡಾಡಿ ನಾಯಿಗಳನ್ನೆಲ್ಲಾ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳಕ್ಕೆ ಸೇರಿಸುತ್ತಿದ್ದಾರೆ ಎಂಬುದರ ಸುಳಿವು ಪಡೆದ ಉಗ್ರಗಾಮಿಗಳು, ನಾಯಿಗಳ ದಾರಿ ತಪ್ಪಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದೆಂದರೆ ಗಂಡು ನಾಯಿಗಳಿಗೆ ತುಂಡು ನೀಡುವುದು ಮತ್ತು ಬೊಗ್ಗಿ ನಾಯಿಗಳನ್ನು ಹೆಚ್ಚು ಹೆಚ್ಚು ಈ ಶ್ವಾನ ದಳದತ್ತ ಛೂಬಿಡುವುದು.

ಅವರ ಕಾರ್ಯತಂತ್ರದ ಪ್ರಕಾರ, ಶ್ವಾನ ದಳದವರಿರುವೆಡೆಯಲ್ಲೆಲ್ಲಾ ಜೇಬಿನಲ್ಲಿ ಚಿಕನ್ ತುಂಡು ಇಟ್ಟುಕೊಂಡು ತಿರುಗಾಡುತ್ತಿರುವುದು. ಚಿಕನ್‌ನ ವಾಸನೆ ಗ್ರಹಿಸುವ ಈ ನಾಯಿಗಳು, ಹಣವಿರುವೆಡೆ ರಾಜಕಾರಣಿಗಳು ಸಕ್ರಿಯರಾಗುವಂತೆ, ಅವರನ್ನೇ ಹಿಂಬಾಲಿಸುವಂತೆ ಮಾಡುವುದು. ಶ್ವಾನ ದಳದ ಮತ್ತೊಂದು ಬಣವು ಬೊಗ್ಗಿ ನಾಯಿಗಳ ಹಿಂದೆ ಹೋಗುತ್ತಾ, ಬಾಂಬ್ ಮರೆತುಬಿಡುತ್ತವೆ. ಈ ರಣತಂತ್ರಕ್ಕೆ ಪ್ರತಿತಂತ್ರವೊಂದು ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ವರದಿಯಾಗಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಈ ಶ್ವಾನಕ್ಕೆ ಈ ಸಲ ರಾಷ್ಟ್ರಪತಿಗಳ ಸುವರ್ಣಪದಕ ಗ್ಯಾರಂಟಿ!

  ಇನ್ನು ಖರೇ ಸುದ್ದಿ ಏನಂದರ,ಧಾರವಾಡದಲ್ಲಿ ಗ್ಯಾಸ್ ಸಿಲಿಂಡರಗಳ ಕಾಳಸಂತೆಕೋರರು, ಈ ಸಿಲಿಂಡರಗಳನ್ನು ನೆಲದಲ್ಲಿ ಹೂತಿಟ್ಟಿದ್ದರು.ಅದನ್ನ ಬಾಂಬ್ ಎಂದು ತಪ್ಪಾಗಿ ತಿಳಿಯಲಾಗಿದೆ.

  ReplyDelete
 2. ರಶ್ಯಾ ದೇಶದ ಸೈಬೀರಿಯಾದಲ್ಲಿ ಯಾವಾಗಲೂ ಸೊನ್ನೆಗಿಂತ ಅತಿ ಕಡಿಮೆ ಉಷ್ಣತೆ ಇರುತ್ತದೆ. ಆದುದರಿಂದ ಅಲ್ಲಿ ನಾಯಿಯಿಂದ ಬೀಳುವ ಬಾಂಬ್ ನಿಷ್ಕ್ರಿಯ ದ್ರವವು ಭೂಮಿಗೆ ತಲುಪುವ ಮೊದಲೇ ಘನೀಕೃತವಾಗಿ ಬಿಡುತ್ತದೆ. ಅಲ್ಲಿ ಈ ಸಂಶೋಧನೆಯು ಪರಿಣಾಮಕಾರಿಯಾಗಲಿಕ್ಕಿಲ್ಲ. ಹಾಗೆಂದು ಭಯಪಡಬೇಕಾದ ಅಗತ್ಯವಿಲ್ಲ. ಸೈಬೀರಿಯಾದಲ್ಲಿ ಇದು ತನಕ ಭಯೋತ್ಪಾದನೆ ಸಹಿತ ಯಾವುದೇ ಉತ್ಪಾದನೆ ಆದ ಬಗ್ಗೆ ವರದಿಯಾಗಿಲ್ಲ.

  -ಪಬ್

  ReplyDelete
 3. ಸುನಾಥರೆ,
  ಈ ಕುವರ್ಣ ಪದಕಕ್ಕಾಗಿ ಈಗಾಗಲೇ ಮಾನವಪ್ರೇರಿತ ಲಾಬಿ, ಜಟಾಪಟಿ ಆರಂಭವಾಗಿದೆಯಂತೆ.

  ನಿಮ್ಮ ಸಂಶೋಧಿತ ಸುದ್ದಿಯನ್ನು ನಂಬುವುದಾದರೆ, ನಮ್ಮೂರಲ್ಲಿ ಗ್ಯಾಸಿನ ಕೊರತೆಗೆ ಕಾರಣವೆಂಬುದು ಕೂಡ ಪತ್ತೆಯಾಗಿಹೋಯಿತು.

  ReplyDelete
 4. ಪಬ್ಬಿಗರೆ,
  ಸೈ-ಬೀರ್ಇಯಾದಲ್ಲಿ ಇದಕ್ಕೆ ಕಂಡುಕೊಂಡಿರುವ ಪರಿಹಾರದ ಪ್ರಕಾರ, ಅಲ್ಲಿ ಹಾಟ್ ಹಾಟ್ ಸೆಕ್ಸೀ ತಾರೆಯರನ್ನು ಕಳುಹಿಸಲಾಗುತ್ತದೆ. ಅಲ್ಲಿಗೆ ಗಟ್ಟಿಯಾದ ಬೀರ್ ಎಲ್ಲ ಬಿಸಿ ಬಿಸಿಯಾಗಿ ಕರಗುತ್ತದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post