(ಬೊಗಳೂರು ಡಬ್ಬಾ ಪ್ರತಿಭಟನೆ ಬ್ಯುರೋದಿಂದ)
ಬೊಗಳೂರು, ಸೆ.25- ಕೇವಲ ಬೊಗಳೂರೆಂಬ ಪುಟ್ಟದಾದ ಆದರೆ ಬ್ರಹ್ಮಾಂಡದಂತಹ ಊರಿಗೆ ಸೇರಬೇಕಾಗಿದ್ದ ಬಿರುದು ಮತ್ತು ಬಾವಲಿಯು ಇಡೀ ದೇಶಕ್ಕೇ ದೊರೆತರೆ ಏನಾಗುತ್ತದೆ? ಬೊಗಳೂರಿನ ಮಂದಿಯಾದ ನಾವು ಖಂಡಿತವಾಗಿ ಪ್ರತಿಭಟಿಸಲೇಬೇಕಾಗುತ್ತದೆ.

ಆದರೆ ಇದೀಗ ನಮ್ಮದು ಡಬ್ಬ(ಲ್) ಪ್ರತಿಭಟನೆಗೆ ಯೋಜನೆ ರೂಪುಗೊಳ್ಳುತ್ತಿದೆ. ಯಾಕೆ ಗೊತ್ತೆ? ಬೊಗಳೂರಿಗೆ ದೊರೆಯಬೇಕಾದ ಪದವಿಯನ್ನು ಭಾರತಕ್ಕೆ ನೀಡಿದ್ದಾರೆ. ಅದೆಂದರೆ ಭ್ರಷ್ಟಾಚಾರದಲ್ಲಿ 85ನೇ ರಾಷ್ಟ್ರ ಭಾರತ ಎಂಬ ಸ್ಥಾನ-ಮಾನ. ವಿಶ್ವದಲ್ಲೇ ಹಣದುಬ್ಬರ ಏರುತ್ತದೆ, ಸೆನ್ಸೆಕ್ಸ್ ಧರಾಶಾಯಿಯಾಗುತ್ತದೆ, ವಹಿವಾಟುಗಳೆಲ್ಲಾ ತೋಪು ಹೊಡೆಯುತ್ತವೆ. ಆದರೆ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಕ್ಷೇತ್ರವೊಂದರಲ್ಲಿ ವ್ಯವಹಾರವಂತೂ ಎಗ್ಗಿಲ್ಲದೇ ಮುಂದುವರಿಯುತ್ತದೆ. ಅದಕ್ಕೆ ಯಾರ ಹಂಗೂ ಇಲ್ಲ.

ಇದೇ ಕಾರಣಕ್ಕಾಗಿ ಮತ್ತು ವಿಶ್ವಾದ್ಯಂತ ಅತ್ಯಂತ ಅಗೌರವಕ್ಕೆ ಪಾತ್ರರಾಗಿರುವುದಕ್ಕಾಗಿಯೇ ಬೊಗಳೂರು ಮಂದಿ ಭ್ರಷ್ಟಾಚಾರವನ್ನೇ ತಮ್ಮ ಜೀವನಾಂಶವಾಗಿ ಮಾಡಿಕೊಂಡಿದ್ದರು. ಆದರೆ ಇಷ್ಟೆಲ್ಲಾ ಶ್ರಮಪಟ್ಟರೂ, ಕಳೆದ ಬಾರಿಗಿಂತ ಭ್ರಷ್ಟಾಚಾರದ ರ‌್ಯಾಂಕಿನಲ್ಲಿ ಈ ಬಾರಿ ಭಾರೀ ಕುಸಿತವೇ ಕಂಡುಬಂದಿದೆ. ಕಳೆದ ವರ್ಷ 72ನೇ ಮಟ್ಟದಲ್ಲಿದ್ದ ನಮ್ಮ ದೇಶ, ಈ ಬಾರಿ 85ನೇ ಸ್ಥಾನಕ್ಕೆ ಇಳಿದಿದೆ (ಏರಿದೆ!).

ಬೊಗಳೂರಿನ ಮಂದಿಗೆ ಮತ್ತು ನಮ್ಮ ಬ್ಯುರೋದವರಿಗೆ ತೀವ್ರ (ಡಬ್ಬಲ್) ಆಕ್ರೋಶಕ್ಕೆ ಕಾರಣವಾಗಿರುವ ಅಂಶವೆಂದರೆ, ನಮಗೆ ದೊರೆಯಬೇಕಾದ ಈ ಪ್ರಶಸ್ತಿಯನ್ನು ಭಾರತ ಕಿತ್ತುಕೊಂಡಿದ್ದಲ್ಲ. ಬದಲಾಗಿ, ಕಿತ್ತುಕೊಂಡರೂ ಅದು ಉತ್ತಮ ನಿರ್ವಹಣೆ ತೋರಲಿಲ್ಲ. ಕಳೆದ ಸಲಕ್ಕಿಂತ ತೀರಾ ಕಳಪೆ ಪ್ರದರ್ಶನ ನೀಡಿ ರ‌್ಯಾಂಕಿನಲ್ಲಿ ಕುಸಿತ ದಾಖಲಿಸಿದೆ ಎಂಬುದಾಗಿದೆ.

ಈ ಕುರಿತು ಅಪ್ರಜ್ಞಾವಂತ ಅನಾಗರಿಕರು ತೀವ್ರ ಪ್ರತಿಭಟನೆ ಮಾಡಲು ನಿರ್ಧರಿಸಿ ನಿದ್ದೆಹೋಗಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. ಇದು ಸೆನ್ಸೆಕ್ಸ್ ಕುಸಿತಕ್ಕಿಂತ ಆಘಾತಕಾರಿ ಸುದ್ದಿ.

  ReplyDelete
 2. ಬೊಗಳೂರಿನ (ಅಪ)ಕೀರ್ತಿ ಕಡಿಮೆ ಮಾಡುವದರಲ್ಲಿ ಮನಮೋಹನ ’ಕೈ’ವಾಡ ಇದೆ ಅಂತ ನನಗೆ ಭಯಂಕರ ಗುಮಾನಿ ಬರ್ತಾ ಇದೆ.
  ಎಲ್ಲಾ ಜಾಲಿ ನೋಟುಗಳನ್ನು ಲೋಕಸಭೆಯಲ್ಲೇ ಹಂಚಿದರೆ, ಇಲ್ಲೇನು ಉಳಿಯಬೇಕು?

  ReplyDelete
 3. ಲಕ್ಷ್ಮಿ ಅವರೆ,
  ನೀವು ಆಘಾತಗೊಂಡಿದ್ದರಿಂದ ನಾವು ಚಾ-ತರಿಸಿಕೊಂಡಿದ್ದೇವೆ.

  ReplyDelete
 4. ಸುನಾಥರೆ,
  ನೀವು ಹೇಳುವುದೂ ಹೌದು. ಎಲ್ಲಾ ನೋಟುಗಳು ಮುಗಿದ ಬಳಿಕ ನಮಗೆ ಉಳಿದಿರುವುದು ಖೋಟಾ ನೋಟು ಮಾತ್ರ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post