ಬೊಗಳೆ ರಗಳೆ

header ads

ಈಡಿಯಟ್ ಪದವಿಗೆ ವ್ಯಾಖ್ಯಾನ: ಬೊಗಳೆ ಹರ್ಷ!

(ಬೊಗಳೂರು ಈಡಿಯಟ್ ಬ್ಯುರೋದಿಂದ)
ಬೊಗಳೂರು, ಸೆ.1- ಬೊಗಳೂರು ಬ್ಯುರೋದ ಅವ್ಯವಸ್ಥಾಪಕ ಮುಖ್ಯ ಕಿರಿ ಕಿರಿ ಸಂಪಾದಕರ ಹುದ್ದೆಯ ಘನತೆಯ ಬಗ್ಗೆ ಪರಮೋಚ್ಚನ್ಯಾಯಾಲಯದಲ್ಲಿ ತೀವ್ರ ಚರ್ಚೆ ನಡೆದಿರುವುದು ಬೊಗಳೆ ರಗಳೆಗೆ ಸಂದ ಗೌರವ ಎಂದು ನಮ್ಮ ಬ್ಯುರೋ ಹರ್ಷ ವ್ಯಕ್ತಪಡಿಸಿದೆ.

'ನಿಜವಾಗಿಯೂ ಈಡಿಯಟ್' ಎಂಬ ಪದವು ಮತ್ತು ಈಡಿಯಟ್ ಎಂಬ ಪದವು ನಿಜವಾಗಿಯೂ, ಅತ್ಯಂತ ಹೆಚ್ಚು ದುರ್ಬಳಕೆಗೀಡಾದ ಗೌರವಾರ್ಹ ಶಬ್ದವಾಗಿದೆ. ಬೊಗಳೆ ರಗಳೆ ಬ್ಯುರೋ ಸೊಂಪಾದಕರು ಹುಟ್ಟಿದ ಇಷ್ಟು ವರ್ಷಗಳ ಬಳಿಕ ಇದಕ್ಕೆ ಹೊಚ್ಚ ಹೊಸ ವ್ಯಾಖ್ಯಾನವನ್ನು ಕಲ್ಪಿಸಲು ಹೊರಟಿರುವುದು ತಮ್ಮ ಸಾಧನೆಗೆ ಸಂದ ಅಗೌರವ ಎಂದು ಸೊಂಪಾದ ಕರುಗಳು ಬೆನ್ನು ತಟ್ಟಿಕೊಂಡಿದ್ದಾರೆ.

ಆದರೆ, 20ರವರೆಗೆ 'ಒಂದುಎರಡು' ಹೇಳಲು ಬರಬೇಕು ಎಂಬ ಶರತ್ತಿನ ಬಗ್ಗೆ ಮಾತ್ರ ಒಂದಷ್ಟು ಅಸಮಾಧಾನವಿದೆ. ಹಲವಾರು ಎದುರಾಳಿ ಪತ್ರಿಕೆಗಳು ಬೊಗಳೆ ರಗಳೆ ಸೊಂಪಾದಕರ ವಿರುದ್ಧ ಕೇಸುಗಳನ್ನು ಜಡಿದಿರುವುದರಿಂದ, ಬಹುಶಃ ಮುಂದೊಂದು ದಿನ ಇದು ಕಂಬಿ ಎಣಿಸಲು 'ಪೂರ್ವಾಭ್ಯಾಸ' ಮಾಡಿದಂತಾಗುತ್ತದೆ ಎಂಬುದು ನಿಜವಾದರೂ, 20ರವರೆಗೆ ಎಣಿಸುತ್ತಾ ಕೂತರೆ, ಬೊಗಳೆ ರಗಳೆ ಪತ್ರಿಕೆ ಹೊರತರುವುದಾದರೂ ಹೇಗೆ? ಅಷ್ಟೊಂದು ಸಂಖ್ಯೆಗಳನ್ನು ಯೋಚನೆ ಮಾಡುವಷ್ಟರಲ್ಲಿ ನಾಲ್ಕೈದು ದಿನಗಳು ಕಳೆದುಹೋಗಬಹುದು ಎಂಬುದು ಸೊಂಪಾದಕರ ಆತಂಕ.

ಇದೂ ಅಲ್ಲದೆ, ಇಲ್ಲಿ ಗಮನ ಸೆಳೆದಿರುವ ಮತ್ತೊಂದು ಅಂಶವೂ ಇದೆ. ದಿನ ಎಣಿಕೆ ಮಾಡುತ್ತಿರಬೇಕು ಎಂಬುದು ಕೂಡ ದಯನೀಯ ಸಲಹೆ. ಇದು ಅಂತಿಮ ದಿನ ಎಣಿಕೆಯೋ, ಅಥವಾ ಕ್ಷಣಗಣನೆಯೋ ಎಂಬುದನ್ನು ಸ್ಪಷ್ಟೀಕರಿಸಬೇಕು ಎನ್ನುವುದು ನಮ್ಮ ಬ್ಯುರೋದ ಏಕೈಕ ಸಂತಾಪಕರ ಅಭಿಮತ.

ಸೂಚನೆ: ಬಲಬದಿಯಲ್ಲಿ ಬೊಗಳೆ ರಗಳೆ ಬ್ಯುರೋ ನಡೆಸಿದ ಸಮೀಕ್ಷೆಯಲ್ಲಿ, ಬ್ಲಾಗ್ ಎಂಬ ಪದಕ್ಕೆ ಬೊಗಳೆ ಎಂಬ ಪದವೇ ಸೂಕ್ತ ಎಂದೆಲ್ಲಾ ಬೊಗಳೆ ಬಿಟ್ಟು ಗುಂಡಿ ಒತ್ತಿದ ನಮ್ಮ ಮೂರಾಬಟ್ಟೆ ಓದುಗರಿಗೆಲ್ಲರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಪರಮಹುಚ್ಚ ನ್ಯಾಯಾಲಯಕ್ಕೆ ನನ್ನದೊಂದು ಅರಿಕೆ:
  ಚುನಾವಣೆಯಲ್ಲಿ ವೋಟು ಹಾಕಿ ಬರುವ ಪ್ರತಿಯೊಬ್ಬ ಭಾರತೀಯನನ್ನು ಹೆಡ್ಡ ಎಂದು ಗಣಿಸಬೇಕಾಗಿ ವಿನಂತಿ.

  ಪ್ರತ್ಯುತ್ತರಅಳಿಸಿ
 2. ಬೊಗಳೇ ರಗಳೆಯ ಏಕಸದಸ್ಯ ಬ್ಯೂರೋ ಗೆ ಇಂಥಾ ಅತ್ಯದ್ಭುತ ಅಗೌರವ ಸಂದಿರುವುದನ್ನು ಅಭಿಮಾನಿ ವರ್ಗ ಬಾಲ ಬಡಿದು ಸ್ವಾಗತಿಸುತ್ತದೆ. ಇಪ್ಪತ್ತರವರೆಗೆ ಎಣಿಸುವುದು ನಿಮಗೆ ಕಷ್ಟ ಎಂದು ಗೊತ್ತು, ಎಣಿಸಲು ಕೂತರೆ ಬ್ಯುರೋ ನಡೆಯುವುದು ಕಷ್ಟ...ಅದಕ್ಕೆ, ಬರೀ ಇಪ್ಪತ್ತು ಅನ್ನೋ ಶಬ್ದವನ್ನು ಗಟ್ಟು ಹೊಡೆದು ಹೇಳುತ್ತಾ ಹೋಗಿ, ಎಷ್ಟು ಸರ್ತಿ ಹೇಳಿದಿರೆಂದು ನೀವು ಏಣಿಸುವ ಅವಶ್ಯಕತೆಯಿಲ್ಲ ;-)

  ಅಸತ್ಯ ಅನ್ವೇಷಿಗಳೇ, ಕಳೆದ ಪೋಸ್ಟಿನ ರೀಕಮೆಂಟಿನಲ್ಲಿ ಸೂಪರ್ ಪೋಸ್ಟುಗಳನ್ನು ಮುಂದೆ ಹಾಕೊಲ್ಲವೆಂದು ನುಡಿದು, ವಾಕ್ಯಕ್ಕೆ ನೆಚ್ಚಿ ನಡೆಯದೇ ಬ್ಲಾಗಿನ ಟ್ಯಾಗ್ ಲೈನಿನ "ಸತ್ಯ" ಉಳಿಸಿದ್ದೀರಿ...ಭೇಷ್ !
  ಭೇಷ್ ಅಂದಿದ್ದಕ್ಕೆ ನಿಮ್ಮ ಹೊಟ್ಟೆ ಚುರುಗುಟ್ಟಿರುತ್ತದೆ ಎಂದು ಗೊತ್ತು, ಪರವಾಗಿಲ್ಲ ಅಲ್ವಾ ?

  ಪ್ರತ್ಯುತ್ತರಅಳಿಸಿ
 3. ಸುನಾಥರೆ,
  ನಿಮ್ಮ ಅರಿವಳಿಕೆಯನ್ನು ಅಲ್ಲಿಗೆ ತಲುಪಿಸಲಾಗಿದೆ. ಆದರೆ, ಈ ಸಲಹೆಗೆ ಮಾತ್ರ ಓಟಿಗೆ ನಿಲ್ಲುವವರು ಕಾಪಿರೈಟ್ ಕೇಳಬಹುದು ಎಚ್ಚರಿಕೆ...

  ಪ್ರತ್ಯುತ್ತರಅಳಿಸಿ
 4. ಲಕ್ಷ್ಮಿ ಅವರೆ,
  ನೀವು ನಮ್ಮ ಬ್ಯುರೋದ ಮಂದಿಯ ಇಲ್ಲದ ಮೆದುಳಿಗೆ ಸಾಕಷ್ಟು ಕಸರತ್ತು ಕೊಟ್ಟಿರಿ. ಇದನ್ನು ಎಣಿಸುವ ಆಘಾತದಿಂದ ನಾವಿನ್ನೂ ಚಹಾತರಿಸಿಕೊಂಡಿಲ್ಲ.

  ಆಮೇಲೆ, ವೆದರ್ ಚೇಂಜ್ ಅಂತ ನೆಪ ಹೇಳಿ, ಮಲಗುವುದನ್ನೇ ಉದ್ಯೋಗವಾಗಿಸಿಕೊಂಡ ನಿಮ್ಮ ಬ್ಯುರೋದವರ ಸೂಪರ್ ಪೋಸ್ಟುಗಳಿಗೆ ಹೋಲಿಸಿಯೇ ನಾವು ಕಳೆದ ಪೋಸ್ಟಿನ ರೀಕಮೆಂಟಿನಲ್ಲಿ ಹಾಗೆ ಹೇಳಿದ್ದು. ಸೋ... ಯಾರೇ ಅಡಿಗೆ ಬಿದ್ದರೂ ನಮ್ಮ ಮೂಗು ಮೇಲೆಯೇ ಇರುತ್ತದೆ ಅಂತ ಬಿದ್ದು ಬಿದ್ದು ಹೇಳುತ್ತಿದ್ದೇವೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D