(ಬೊಗಳೂರು ಗೊಂದಲಮಯ ಬ್ಯುರೋದಿಂದ)
ಬೊಗಳೂರು, ಮಾ.8- ಎಂಪಿಯಾಗಿದ್ದುಕೊಂಡೇ ಡಿಸಿಎಂ ಆಗಿದ್ದ ಪ್ರಕಾಶರು ಬೇರೆ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದನ್ನು ಟಿವಿ ಚಾನೆಲ್‌ಗಳು ಬಿತ್ತರಿಸಿದ್ದು, ಅವುಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ರೇಡಿಯೋ ವಾರ್ತೆಗಳಲ್ಲೂ ಪ್ರಸಾರವಾಗಿದ್ದು, ಅಲ್ಲಿಂದ ಜೆಡಿಎಸ್ ಪಕ್ಷದ ಮೂಲಗಳು ಈ ಬಗ್ಗೆ ಮಾತನಾಡಿದ್ದನ್ನು ಕಾಂಗ್ರೆಸ್ ಮೂಲಗಳು ಉಲ್ಲೇಖಿಸಿ ಬಿಜೆಪಿ ಮೂಲಗಳ ಮುಖಾಂತರ ಅಲ್ಲಿ ಇಲ್ಲಿ ಪ್ರಕಟವಾಗಿರುವ ವರದಿಯನ್ನು ನಮ್ಮ ವರದ್ದಿಗಾರರು ತಂದೊಪ್ಪಿಸಿದ ಸುದ್ದಿಯನ್ನು ನಮ್ಮ ಸಂತಾಪಕರು ತಿದ್ದಿ ತೀಡಿ ಪತ್ರಿಕೆ ಅಚ್ಚಿಗೆ ಹೋಗುವ ವೇಳೆಗೆ ನಿರ್ಧಾರ ಬದಲಿಸಿದ್ದು ದಿಲ್ಲಿ ಯಾತ್ರೆ ಕೈಗೊಂಡ ಪ್ರಕಾಶರು ದಿಲ್ಲಿಯಿಂದ ಮರಳಿ ಬಂದು ತಮ್ಮ ಬೆಂಬಲಿಗರೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಹಲವು ಹಬ್ಬ ಹರಿದಿನಗಳನ್ನು ಉಲ್ಲೇಖಿಸಿ ಆ ದಿನದೊಳಗೆ ಬೇರೆ ಪಕ್ಷ ಸೇರುವುದಾಗಿ ತಿಳಿಸಿದ್ದು, ಯಾವ ಪಕ್ಷ ಎಂಬುದನ್ನು ತೀರ್ಮಾನಿಸುವುದು ಇನ್ನೂ ಸಾಧ್ಯವಾಗದ ಕಾರಣ ಮತ್ತೂ ಗೊಂದಲದಲ್ಲಿ ಮುಳುಗಿದ್ದಲ್ಲದೆ, ಈ ಸುದ್ದಿ ಓದಿದ ಎಲ್ಲರನ್ನೂ ಗೊಂದಲದ ಗೂಡಿನೊಳಗೆ ತೂರಿಸಿದ್ದು, ಅಂತಿಮವಾಗಿ ತಾವು ಯಾವ ಪಕ್ಷ ಸೇರಬೇಕು ಎಂಬುದನ್ನು ಮಾತ್ರವೇ ಅಲ್ಲ, ಈಗ ತಾನಿರುವ ಪಕ್ಷ ಯಾವುದು ಎಂಬುದನ್ನೇ ಮರೆತುಬಿಟ್ಟಿರುವುದಾಗಿ ನಮ್ಮ ಬೊಗಳೆ ರಗಳೆ ರದ್ದಿಗಾರರು ಯಾವ್ಯಾವುದೋ ಮೂಲಗಳನ್ನು ಉಲ್ಲೇಖಿಸಿ ತಲೆ ಕೆರೆದುಕೊಂಡು ಯಾವುದೇ ಉತ್ತರ ಹೊಳೆಯದೆ ತತ್ತರಿಸುತ್ತಾ ವರದಿ ಕಳುಹಿಸಿದ್ದಾರೆ. ಆದರೆ ಸಂತಾಪಕರು ಈ ಸುದ್ದಿ ನಿಖರವೇ ಎಂದು ತಿಳಿಯದೆ ಗೊಂದಲದ ಗೂಡಿನಿಂದಲೇ ತಲೆ ಹೊರಗೆ ಹಾಕಿ ಪ್ರಕಟಿಸಲು ಹಿಂದೆ ಮುಂದೆ ನೋಡುತ್ತಿರುವುದರಿಂದ ಈ ಗೊಂದಲಮಯ ಸುದ್ದಿ ಪ್ರಕಟವಾಗಿದೆ ಎಂದು ತಿಳಿಸಲು ವಿಷಾದಿಸುವುದಾಗಿಯೂ, ಕೊನೆಯ ಕ್ಷಣದ ಬದಲಾವಣೆ ಹೊರತಾಗಿ ಎಂದು ಒಂದು ಸಾಲನ್ನು ಸೇರಿಸಲೂ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ!!!! ಉಫ್....!!!

2 Comments

ಏನಾದ್ರೂ ಹೇಳ್ರಪಾ :-D

 1. ಪ್ರಕಾಶರಿಗೆ confuse ಆಗಿದೆಯೋ, ಅಥವಾ ನಿಮಗೇ confuse ಆಗಿದೆಯೋ ಎಂದು ಓದುಗರಿಗೆ confuse ಆಗುತ್ತಿದೆಯಾಗುವದೇಕೆಂದರೆ, ಪ್ರಕಾಶರು ಯಾವಾಗಲೂ
  "ಆನು ಹೊರಗಣವನು, ದೇವೆ(ಗೌಡಾ)", ಎಂದು ಹೇಳುತ್ತಲೆ,ಮಂತ್ರಿಪದವಿಯನ್ನು ಗಿಟ್ಟಿಸಿಕೊಂಡೆ ಇರುವ ಕಂತ್ರಿಬುದ್ಧಿಯವರಾಗಿದ್ದರೆಂದು ಕೆಲವು ಕು-ತಂತ್ರಿಗಳು ವರದ್ದಿ ಮಾಡುತ್ತಲೆ ಇದ್ದು ಅದೀಗ ದೆಹಲಿಯ ಸುಲ್ತಾನಾಳನ್ನು ಸಹ ತಲುಪಿ ಬಿಟ್ಟಿದೆಯಂತೆ.

  ReplyDelete
 2. ಸುನಾಥರೆ,
  ನಾವಂತೂ ಇಲ್ಲಿ ಕಾಮೆಂಟ್ ಬರೆದವರು ಯಾರು ಅಂತಲೇ ಕನ್ ಫ್ಯೂಸ್ ಆಗೋ ಹಂತದಲ್ಲಿದ್ದೇವೆ.

  ಹೊರಗಿದ್ದುಕೊಂಡೇ ಮಂತ್ರಿಯಾದವರು, ಒಳಗೆ ಬಂದರೆ ಏನೇನು ಆಗಬಲ್ಲರು ಎಂಬುದೇ ಪ್ರಕಾಶರ ಎಂಟ್ರಿ ಡಿಲೇ ಆಗುವುದಕ್ಕೆ ಕಾರಣ ಎಂದೂ ನಿಮ್ಮ ಹೇಳಿಕೆಯಿಂದ ಪತ್ತೆ ಹಚ್ಚಲಾಗಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post