ಬೊಗಳೆ ರಗಳೆ

header ads

ನಿದ್ದೆ ಕಳ್ಳರ ಪತ್ತೆಗೆ ಭಾರಿ ಅಂತರ-ಜಾಲ!

(ಬೊಗಳೂರು ನಿದ್ದೆಗೆಟ್ಟ ಬ್ಯುರೋದಿಂದ)
ಬೊಗಳೂರು, ಡಿ.27- ಲಗ್ಗೆರೆ ಎಂಬಲ್ಲಿ ನಿದ್ದೆ ಕದಿಯುವ ಕಳ್ಳರ ಪತ್ತೆಗಾಗಿ ಪೊಲೀಸರು ಭಾರೀ ಬಲೆ ಬೀಸಿದ್ದಾರಾದರೂ, ಅವರು ಬೀಸಿರುವ ಜಾಲವು ಅಂತರ್ಜಾಲ ತಾಣಗಳತ್ತಲೂ ವ್ಯಾಪಿಸತೊಡಗಿದೆ ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.

ಈ ನಿದ್ದೆ ಕದಿಯುವವರ ಗುಂಪಿನಲ್ಲಿ ಹಲವಾರು ತಂಡಗಳಿರುವುದು ಬೊಗಳೆ ಬ್ಯುರೋ ತನಿಖೆ ವೇಳೆ ಶೋಧನೆಯಾಗಿದೆ. ಈ ತಂಡಗಳಲ್ಲಿ ಮುಖ್ಯವಾಗಿ ಮಾನಿನಿಯರ ತಂಡ ಮತ್ತು ಕಿಲಾಡಿಗಳ ತಂಡ ಪ್ರಮುಖವಾದದ್ದು. ಮಾನಿನಿಯರ ತಂಡದಲ್ಲಿ ಹಲವಾರು ಉಪ ತಂಡಗಳಿವೆ. ಅವುಗಳಲ್ಲಿ ಕಾಲೇಜು ಕನ್ಯೆಯರು, ಸಿನಿ-ಕನ್ಯೆಯರು, ಟೆನಿ-ಸ್‌ಕನ್ಯೆಯರು (ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದು) ಮತ್ತು ಪಕ್ಕದ್ಮನೆಯವರು (ಅಥವಾ ಎದುರುಮನೆ) ಹಾಗೂ (ಅಂತರ)ಜಾಲದೊಳು ಕಣ್ಣು ಮಿಟುಕಿಸುವವರ ತಂಡಗಳಿವೆ.

ಕಿಲಾಡಿಗಳ ತಂಡದಲ್ಲಿಯೂ ಇದೇ ಮಾದರಿಯ ವಿಭಾಗಗಳಿದ್ದು, ಎರಡೂ ತಂಡಗಳ ಸದಸ್ಯರು ಪರಸ್ಪರರ ನಿದ್ದೆ ಕದಿಯುತ್ತಿರುವುದು ಇವರ ಕಳ್ಳತನ ಪ್ರಕ್ರಿಯೆಯಲ್ಲಿ ಕಂಡು ಬರುವ ಸಾಮ್ಯತೆ.

ಲಗ್ಗೆರೆಯಂತೆಯೇ ಎಲ್ಲೆಡೆಯೂ ಅವರು ಇವರ ಮತ್ತು ಇವರು ಅವರ ಹೃದಯಗಳಿಗೆ ಲಗ್ಗೆ ಹಾಕಿ ನಿದ್ದೆ ಕದ್ದ ಪರಿಣಾಮವಾಗಿ ಕಾಲೇಜುಗಳಲ್ಲಿ ತೂಕಡಿಸುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ತರುಣ-ತರುಣಿಯರು, ಇ-ಮೇಲ್ - ಚಾಟಿಂಗಿನಲ್ಲಿ ಕಚೇರಿ ಕಾಲ ವ್ಯಯಿಸುತ್ತಿರುವವರು, ಓರ್ಕುಟಿನಲ್ಲಿ ಸರಿದಾಡುತ್ತಿರುವವರು, ಎಸ್ಎಂಎಸ್‌ನಲ್ಲಿ ಅಕ್ಷರಗಳ ಜತೆ ಆಟ ಆಡುತ್ತಿರುವವರು ಹಾಗೂ ಮೊಬೈಲನ್ನು ಕಿವಿಗೆ ಅಂಟಿಸಿಕೊಂಡೇ ಇರುವವರ ಸಂಖ್ಯೆ ಹೆಚ್ಚಾಗತೊಡಗಿರುವುದು ಪೋಲಿ ಇಲಾಖೆಗೆ ನಿದ್ದೆ ಗೆಡಿಸಿದ ಸಂಗತಿ.

ಈ ನಡುವೆ, ನಿದ್ದೆ ಕದಿಯುವ ಪ್ರಕ್ರಿಯೆಯಲ್ಲಿ ಮುಳುಗಿ ಹೋಗುವವರನ್ನು ಸುಲಭವಾಗಿ ಪತ್ತೆ ಹಚ್ಚಲು ಸೂಕ್ತವಾದ ಐಡಿಯಾವೊಂದನ್ನು ಬೊಗಳೆ ಬ್ಯುರೋ ಕಂಡು ಹಿಡಿದು ಪೊಲೀಸ್ ಇಲಾಖೆಗೆ ಒಪ್ಪಿಸಿದೆ. ಆ ಎರಡು ಪ್ರಮುಖ ವಿಧಾನಗಳೆಂದರೆ, ಎಲ್ಲರ ಮೊಬೈಲ್ ಫೋನ್ ಪರಿಶೀಲಿಸುವುದು ಮತ್ತು ಅವರ ಕೈಬೆರಳುಗಳನ್ನು ಪರೀಕ್ಷಿಸುವುದು. ಮೊಬೈಲ್ ಫೋನ್ ಕೀ ಪ್ಯಾಡ್ ಸವೆದು, ಯಾವುದೇ ಅಕ್ಷರ ಕಾಣಿಸದಿದ್ದರೆ ಮತ್ತು ಕೈಬೆರಳುಗಳ ತುದಿಗಳು ಸವೆದು ಹೋಗಿದ್ದರೆ... ನಿದ್ದೆ ಕದಿಯೋ ಕಳ್ಳ/ಳ್ಳಿ ಸಿಕ್ಕಿಬಿದ್ದ ಹಾಗೆಯೇ!

ಈ ಮಧ್ಯೆ, ಪೋಲಿ-ಸರಿಗೆ ದೂರು ನೀಡಿದವರನ್ನು ಬೊಗಳೆ ರಗಳೆ ಮಾಡದೆ ಮಾತನಾಡಿಸಿತು. ಬೆಚ್ಚಿ ಬಿದ್ದ ಅವರು ತಮ್ಮ ಗೋಳು ತೋಡಿಕೊಂಡಿದ್ದು ಹೀಗೆ:

"ಅವರೆಲ್ಲಾ ಮಧ್ಯರಾತ್ರಿ ನಮ್ಮ ಹೃದಯದ ಬೀಗ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಕೆಲವು ಬಾರಿ ಅವರು ನೀಡುವ ಆಘಾತವನ್ನು ತಡೆದುಕೊಳ್ಳಲಾಗುವುದಿಲ್ಲ. ಅಪ್ಪ-ಅಮ್ಮಂದಿರು ಗಸ್ತು ತಿರುಗುತ್ತಿದ್ದರೂ ಕಳ್ಳತನ ವಿಪರೀತವಾಗಿದೆ. ಹೃದಯದಂಗಡಿಯಲ್ಲಿ ಬೆಲೆಬಾಳುವ ಭಾವನೆಗಳನ್ನು ಇರಿಸಿಕೊಳ್ಳಲು ಹೆದರಿಕೆಯಾಗುತ್ತಿದೆ. ಕೆಲವೊಮ್ಮೆ ರಾತ್ರಿಯಿಡೀ ಕಳ್ಳತನ ನಡೆಯುತ್ತದೆ. ಈ ಬಗ್ಗೆ ಎಷ್ಟೇ ದೂರು ನೀಡದಿದ್ದರೂ, ಯಾರು ಕೂಡ ಗಮನ ಹರಿಸುತ್ತಿಲ್ಲ" ಎಂಬುದು ಅವರ ಅಳಲು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು