Subscribe Us

ಜಾಹೀರಾತು
header ads

ಬೊಗಳೆ ಪದಕ್ಕೆ ಅವಮಾನ ಮಾಡಿದರು!!!

(ಬೊಗಳೂರು ವಿಶ್ವಾಸ ದ್ರೋಹಿ ಬ್ಯುರೋದಿಂದ)
ಬೊಗಳೂರು, ನ.21- ಸರಕಾರ ರಚನೆಯಾಗುವ ಮುನ್ನ "20 ತಿಂಗಳ ನಂತರ ಅಧಿಕಾರ ಹಸ್ತಾಂತರಿಸುತ್ತೇವೆ", ಆ ನಂತರ, ಸರಕಾರ ಉರುಳೇ ಹೋಯ್ತು ಎಂದಾದಾಗ, "ಕಾಂಗ್ರೆಸಿಗರು ತಮ್ಮ ಪಕ್ಷವನ್ನು ಒಡೆಯುತ್ತಿದ್ದಾರೆ" ಎಂಬ ನೆಪ ಹೇಳಿ, "ನೀವು ಸರಕಾರ ಮಾಡಿ, ನಾವು ಬೇಷರತ್ ಬೆಂಬಲ ನೀಡುತ್ತೇವೆ" ಮುಂತಾಗಿ ಇಲ್ಲ ಸಲ್ಲದ್ದೆಲ್ಲಾ ಬೊಗಳೆ ಬಿಟ್ಟು, ಈಗ ಕೈಕೊಟ್ಟು ಬೊಗಳೆ ಎಂಬ ಪದಕ್ಕೇ ಅವಮಾನ ಮಾಡಿರುವ ಸಂಚನ್ನು ಬೊಗಳೆ ಬ್ಯುರೋ ಬಯಲಿಗೆಳೆದಿದೆ.

ತಾವೇ ಬೊಗಳೆ ಬಿಟ್ಟು, ನಮ್ಮ ಬ್ಯುರೋಗೆ ಬೊಗಳೆ ಬಿಡಲು ಅವಕಾಶವೇ ದೊರೆಯದಂತೆ ಜೇಡೀಸ್ ಸಂಚು ರೂಪಿಸಿದ ಪ್ರಹಸನವು ಇಡೀ ಬೊಗಳೂರು ಸರಕಾರವನ್ನೇ ಅಲ್ಲಾಡಿಸಿರುವುದರಿಂದ ಕರುನಾಟಕ ಪ್ರಹಸನ ನಿರ್ದೇಶಕ ವೇದೇಗೌಡರನ್ನು ವಿಶೇಷವಾಗಿ ಸಂದರ್ಶಿಸಲಾಯಿತು. ಸಂದರ್ಶನದ ನಿದ್ರಾರೂಪ ಇಲ್ಲಿದೆ:

ನೀವು ಈ ರೀತಿಯೆಲ್ಲಾ ಬೊಗಳೆ ಬಿಟ್ಟು ನಮ್ಮನ್ನೇ ಏಕೆ ಮಟ್ಟ ಹಾಕಲು, ನಮಗೆ ಪರ್ಮನೆಂಟಾಗಿ ರಜೆ ಕೊಡಲು ಯೋಚಿಸುತ್ತಿದ್ದೀರಿ?

(ಆsssssಕಳಿಸುತ್ತಾ...) ನಿಮ್ಮ ಪತ್ರಿಕೆ ಬಿಡುತ್ತಿರುವ ಬೊಗಳೆಯಿಂದ ಜಾರಕಾರಣಿಗಳು ಯಾರು ಕೂಡ ತಲೆ ಎತ್ತದಂತಾಗದಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಹಾಗಾಗಿ ನಾವು ನಿಮಗಿಂತ ಜೋರಾಗಿ ಬೊಗಳೆ ಬಿಟ್ಟು, ಬೀಜಪೀಗೆ ಅಧಿಕಾರದ ಆಸೆ ತೋರಿಸಿದೆವು. ಅದರ ಕೈಗೆ ತುಪ್ಪ ಹಚ್ಚಿದ ಪರಿಣಾಮ, ಅಧಿಕಾರದ ವಾಸನೆ ಗ್ರಹಿಸಿದ ಅದು ಅತ್ತಿತ್ತ ಶತಪಥ ಹಾಕಿತು.

ಹೋಗಲಿ, ನೀವೇಕೆ ಅಧಿಕಾರದ ಆಸೆ ತೋರಿಸಿ ಅವರಿಗೆ ಕೈ ಕೊಟ್ಟಿರಿ?

ನಾವು ಹಸ್ತ ಲಾಘವದ ರೀತಿ ಕೈ ಕೊಟ್ಟದ್ದು, ಅವರು ಕೈ ಹಿಡಿದೆಳೆದರು, ನಮಗೂ ಕಬಡ್ಡಿ ಆಟದ ನೆನಪು ಬಂದು ಕಾಲು ಹಿಡಿದೆಳೆದೆವು. ಒಟ್ಟಿನಲ್ಲಿ ಅವರು ಔಟ್ ಆದರಲ್ಲಾ...

ಅವರ ಮೇಲೆ ನಿಮಗೇಕೆ ಅಷ್ಟೊಂದು ಪ್ರೀತಿ?

ನೋಡಿ, ಅವರು ಬಹು ಸಂಖ್ಯಾತರಾದುದರಿಂದ ಅಲ್ಪ ಸಂಖ್ಯಾತರ ವಿರೋಧಿಗಳು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಾರೆ ಅಂತ ಎಲ್ಲರೂ ಹೇಳುತ್ತಾರೆ. ಅವರಿಗೆ ಸದನದಲ್ಲಿ 79 ಸ್ಥಾನವಿದೆ. ಅವರು ಬಹು ಸಂಖ್ಯಾತರು. ನಮಗೆ ಕೇವಲ 58 ಸ್ಥಾನಗಳು, ನಾವು ಅಲ್ಪ ಸಂಖ್ಯಾತರು. ಹಾಗಾಗಿ ನಮ್ಮ ಮೇಲೆ ದೌರ್ಜನ್ಯ ನಡೆಸಬಹುದಾಗಿದೆ. ಇದಕ್ಕಾಗಿಯೇ ಕಾಲಡಿಯ ಹಾಸಿಗೆಯನ್ನು ನಾವು ಹಿಡಿದೆಳೆದೆವು.

ಮತ್ತೆ ಅವರು, ಅಲ್ಪಸಂಖ್ಯಾತರಾದ ನಮ್ಮನ್ನು ಮಾಧ್ಯಮಗಳೆದುರು ಅಲ್ಪರು ಮತ್ತು ಸಂಖ್ಯಾತರು ಎಂದು ಪ್ರತ್ಯೇಕವಾಗಿ ವಿಭಜಿಸಲೂ ನೋಡಿದರು. ಈ ಹಿಂದೆ ನಾವು ಮಾತು ಮುರಿದದ್ದಕ್ಕೆ ನಮ್ಮನ್ನು ಅಲ್ಪರು ಎಂದು ಹೊಗಳಿದರು. ನೀವೇ ಹೇಳಿ, ಹೀಗೆ ಮಾಡಿದರೆ ನೀವಾದರೂ ಸುಮ್ಮನಿರುತ್ತಿದ್ದಿರಾ?

ಈ ಮಧ್ಯೆ, ವಚನಭ್ರಷ್ಟ ಶ್ರೇಷ್ಠ ಪ್ರಶಸ್ತಿಯ ಬಳಿಕ ವಿಶ್ವಾಸದ್ರೋಹಿ ಪ್ರಶಸ್ತಿಯನ್ನೂ ಜಂಟಿಯಾಗಿ ಪಡೆದುಕೊಂಡಿರುವ ಜೇಡೀಸಿನ ಅಪ್ಪ-ಮಕ್ಕಳಿಗೆ ವಿಶ್ವಾದ್ಯಂತದಿಂದ ಕ್ಯಾಕರಿಸಿ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ವಿಧಾನಸೌಧದಲ್ಲಿ ಅತೀ ಕಡಿಮೆ ಶಾಸಕರನ್ನು ಹೊಂದಿದ ಪಕ್ಷವಾಗಿ ಒಂದು ರಾಷ್ಟ್ರೀಯ ಪಕ್ಷವನ್ನೇ ಗಡಗಡ ನಡುಗಿಸಿದ, ಅವರ ಬಾಯಿಗೆ ಮಣ್ಣು ಹಾಕಿದ ವಿಶೇಷ ಸಾಧನೆ ಮಾಡಿದ್ದಕ್ಕಾಗಿ ಮಣ್ಣಿನ ಮಗನನ್ನು ಅಲ್ಲಲ್ಲಿ ಅಭಿನಂದಿಸಲಾಗಿದೆ ಮತ್ತು ಅಭಿನಂದಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Post a Comment

2 Comments

  1. ಅಸತ್ಯಿಗಳಿಗೆ ನಮಸ್ಕಾರಗಳು !!

    ಎನ್ರೀ ಇದು...ನೀವು ಬೇಗ ಬೇರೆ ಕೆಲಸ ನೋಡಿಕೊಳ್ಳೋ ಪರಿಸ್ಥಿತಿ ಬಂದುಬಿಟ್ಟಿದೆ..ಬೊಗಳೆಯನ್ನು ಈ ರೀತಿ ಬಿಡೋಕೇ ಆಗುತ್ತೆ ಅಂತಾ ಮಣ್ಣಿನ ಮಗ ಮತ್ತು ಅವರ ಮಗ ತೋರಿಸಿದ ಮೇಲೆ..ನಿಮ್ಮ ಬೊಗಳೆ ತುಂಬಾ ಸಪ್ಪೆ ಅನಿಸುತ್ತಿದೆ..

    ReplyDelete
  2. ಅಬ್ಬಾ... ಕೊನೆಗೂ ಭಕ್ತರ ಮೊರೆ ಕೇಳಿ ಶಿವ ಪ್ರತ್ಯಕ್ಷ!!!

    ಈಗ ನಮ್ಮನ್ನು ಕೆಲ್ಸದಿಂದ ತಗೆಯೋ ಬಗ್ಗೆ ಮಾತಾಡ್ತಿದೀರಿ... ಇರ್ಲಿ... ನಮ್ಮ ಕೆಲ್ಸಕ್ಕೆ ಕುತ್ತು ತಂದಿರೋ ಈ ಜಾರಕಾರಣಿಗಳ್ಗೆ ಪಾಠ ಅಂದ್ರೆ ಅ ಆ ಇ ಈ ಕಲಿಸೇ ಕಲಿಸ್ತೀವಿ....

    ReplyDelete

ಏನಾದ್ರೂ ಹೇಳ್ರಪಾ :-D