ಬೊಗಳೆ ರಗಳೆ

header ads

ಬೊಗಳೆ: ವಚನಭ್ರಷ್ಟ ಪದ ಕನ್ನಡದ್ದಲ್ಲ, ಸಂಸ್ಕೃತದ್ದು!

(ಬೊಗಳೂರು ಬೊಗಳೆ ಬೊಗಳೋ ಬ್ಯುರೋದಿಂದ)
ಬೊಗಳೂರು, ಅ.30- ಬೊಗಳೆ ಬ್ಯುರೋಗೆ ಸುದ್ದಿ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ ಎಂದು ನಮ್ಮ ಏಕಸಿಬ್ಬಂದಿ ಬ್ಯುರೋದ ಎಲ್ಲರೂ ಸೇರಿಕೊಂಡು ಕರುನಾಟಕದಲ್ಲಿ ಅಲವತ್ತುಕೊಂಡ ಹಿನ್ನೆಲೆಯಲ್ಲಿ ಮಾಜಿ ಕಿಲಾಡಿ ಜೋಡಿಗಳಾದ ಗಮಾರಸ್ವಾಮಿ ಮತ್ತು ಬಿ.ಎಸ್.ಕುರ್ಚಿಯೂರಪ್ಪ ಅವರುಗಳು ಹೊಸ ಛೀಥೂ ನಾಟಕಕ್ಕೆ ಮುಂದಾಗಿರುವುದರಿಂದ, ರಾಜ್ಯದ ಪ್ರಜೆಗಳಿಗೆ ಪುಕ್ಕಟೆ ಮನರಂಜನೆಯೂ, ಬೊಗಳೆ ರಗಳೆಯ ಸಮಸ್ತ ಪ್ರಾಣಿಗಳಿಗೆ ಒಂದಿಷ್ಟು ಮೇವು ಕೂಡಾ ಲಭಿಸಿದೆ.

ಪ್ರಜೆಗಳ ದುರದೃಷ್ಟ ಮೇರೆ ಮೀರಿರುವ ರಾಜ್ಯದಲ್ಲಿ ಹೇಗಾದರೂ ಕುರ್ಚಿಯ ಮೇಲೆ ಕುಕ್ಕರಿಸಬೇಕೆಂಬ ಅವಕಾಶವಾದ ರಾಜಕಾರಣದ ಹೊಸ ವ್ಯಾಖ್ಯಾನ ಬರೆದಿರುವ ಉಭಯ ಹತಾಶ ನಾಯಕರನ್ನು ಬೊಗಳೆಗಾಗಿ ಸಂದರ್ಶಿಸಲಾಯಿತು.

ಅವರಿಬ್ಬರೂ ಬಹುತೇಕ ಒಂದೇ ರೀತಿಯ ಉತ್ತರ ನೀಡಿದ್ದು, ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದರೂ, ವ್ಯಕ್ತವಾದ ರಾಜಕಾರಣದ ದೃಷ್ಟಿಕೋನವನ್ನು ನೋಡಿದರೆ ಇಬ್ಬರೂ ಒಂದೇ ಪಕ್ಷದಲ್ಲಿರಬೇಕಿತ್ತು ಎಂಬುದನ್ನು ನಮ್ಮ ಬ್ಯುರೋ ಕಂಡುಕೊಂಡಿದೆ.

ಪ್ರಶ್ನೆ: ನಿಮಗೆ ನಾಚಿಕೆಯಾಗುವುದಿಲ್ಲವೇ?

ಉತ್ತರ: ಹ್ಹೆ ಹ್ಹೆ... ಏನ್ರೀ ನೀವು, ಬಹುಶಃ ಅಂಗನವಾಡಿ ಶಿಕ್ಷಣವನ್ನೂ ಪಡೆದಿಲ್ಲಾಂತ ಕಾಣುತ್ತೆ. ನಾಚಿಕೆ ಅಂದರೇನು ಎಂಬುದನ್ನು ನಮಗಂತೂ ಯಾವುದೇ ಮೇಷ್ಟ್ರು ಕೂಡ ಹೇಳಿಕೊಟ್ಟಿಲ್ಲ. ರಾಜಕೀಯಕ್ಕೆ ಸೇರಿದ್ರೆ ನಾಚ್ಕೆ, ಮಾನ, ಮರ್ಯಾದೆ ಎಲ್ಲಾ ಬಿಟ್ಟಿರಬೇಕಾಗುತ್ತೆ ಎಂಬುದು ಡೀಫಾಲ್ಟ್ ಆಗಿರೋ ಅಲಿಖಿತ ನಿಯಮ. ರಾಜಕಾರಣದಲ್ಲಿ ಏನಿದ್ದರೂ ನಾಚಿಕೆ ಬಿಟ್ಟೇ ಮಾಡಬೇಕು. ನಾಚಿಕೆ ಬಿಟ್ಟವನೇ ಊರಿಗೆ ದೊಡ್ಡವನು ಅಂತ ನಮ್ಮ ಕರುನಾಟಕದ ಪ್ರಜೆಗಳಿಗೆ ಸಾರಿ ಸಾರಿ ಹೇಳಬೇಕಾಗಿದೆ ಮತ್ತು ಅವರಿಗೆ ಅದನ್ನು ಮಾಡಿಯೂ ತೋರಿಸಬೇಕಾಗಿತ್ತು. ಇದಕ್ಕಾಗಿಯೇ ನಾವಿಬ್ಬರೂ ಮತ್ತೆ ಜತೆ ಸೇರಿದ್ದೇವೆ. ಇನ್ನು ಮುಂದೆ ನಮ್ಮ ಪ್ರಜೆಗಳಿಗೆ ನಾವು ನೀಡುವ ಬಹುದೊಡ್ಡ ಸಂದೇಶ ಇದೇ: ಏನೇ ಮಾಡಿ, ನಾಚ್ಕೆ ಬಿಡಿ!

ಪ್ರಶ್ನೆ: 20 ತಿಂಗಳ ಹಿಂದೆ ರಾಜಭವನದಲ್ಲಿ ಕಂಡುಬಂದ ವಾತಾವರಣವೇ ಮತ್ತೆ ಕಂಡುಬಂದಿದೆ. ವಿಶ್ವಾಸಘಾತಕರ ಅಲ್ಲಲ್ಲ... ಸಾರಿ, ಅದು ಬಾಯಿ ತಪ್ಪಿ ಬಂದ ಮಾತು... ಕ್ಷಮಿಸಿ... ವಿಶ್ವಾಸಭರಿತ ಶಾಸಕರ ಮುಖದಲ್ಲಿ ಅದೇನು ಕಳೆ, ಅದೇನು ನಗು... ಅದೇನು ಉತ್ಸಾಹ... ಇದಕ್ಕೇನು ಕಾರಣ?

ಉತ್ತರ: ಹೌದು, ಅಂದು ನಮ್ಮ ಗಮಾರನಿಗೆ ಮುಖ್ಯಮಂತ್ರಿಯಾಗಬೇಕಿತ್ತು. ಇಂದು ನಮಗೆ ಕುರ್ಚಿಯ ರುಚಿ ನೋಡಬೇಕಿದೆ. ಹಾಗಾಗಿ ಸ್ವಲ್ಪದಿನದ ವಿರಹ ವೇದನೆ ಎಲ್ಲಾ ಕಳೆದಿದೆ. ಕ್ಷಣಿಕ ಕೋಪ ಶಮನವಾಗಿದೆ. ಮತ್ತೆ ನಾವೆಲ್ಲಾ (ಕುರ್ಚಿಗಾಗಿ) ಒಂದುಗೂಡಿದ್ದೇವೆ. ಅದಕ್ಕೆ ಸಂತಸ ಪಡದೆ ದುಃಖ ವ್ಯಕ್ತಪಡಿಸಲಾಗುತ್ತದೆಯೇ? ಆವತ್ತು ನಮ್ಮ ಗಮಾರನ ಪ್ರೇಮ ವಿವಾಹಕ್ಕೆ ಅವರಪ್ಪ ಬಾಹ್ಯಾಡಂಬರದ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಅವರು ಓಡಿ ಹೋಗಿ ಜೋಡಿಯಾಗಬೇಕಾಗಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ, ನಾವು ಉಳಿಯಬೇಕಿದ್ದರೆ ಜೋಡಿಯಾಗಲೇಬೇಕು.

ಪ್ರಶ್ನೆ: ಜಡಿಯೋರಪ್ನೋರೇ, ವಚನಭ್ರಷ್ಟರೊಂದಿಗೆ ಮತ್ತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಅಂದಿದ್ದರಲ್ಲಾ?

ಉತ್ತರ: ನೋಡಿ... ಅಲ್ಲೇ ನೀವು ತಪ್ಪಿರುವುದು. ನಾವು ಹೇಳಿವುದು ಮತ್ತೆ ಕೈಜೋಡಿಸುವ ಪ್ರಶ್ನೆ ಇಲ್ಲ ಅಂತ ಮಾತ್ರ. ಆದರೆ ಉತ್ತರ ಇಲ್ಲ ಅಂತ ಎಲ್ಲಿಯೂ ಹೇಳಿಲ್ಲವಲ್ಲ. ಅದೆಲ್ಲಾ ಇರಲಿ... ವಚನಭ್ರಷ್ಟ, ವಿಶ್ವಾಸದ್ರೋಹ ಅಂದರೇನು? ನಂಗಂತೂ ಗೊತ್ತಿಲ್ಲ. ಆ ಶಬ್ದ ಕೇಳುವುದಕ್ಕೆ ಚೆನ್ನಾಗಿದೆ ಅಂತ ನಾವು ಹೇಳಿಬಿಟ್ಟೆವು. ಮತ್ತು ಅವೆರಡೂ ಕನ್ನಡ ಶಬ್ದಗಳಲ್ಲ. ಸಂಸ್ಕೃತದಿಂದ ಬಂದವು. ಕನ್ನಡದಲ್ಲಿ ಹೇಳಿದ್ದನ್ನು ಮಾತ್ರ ನೀವು ಪ್ರಶ್ನಿಸಬೇಕು. ಸಂಸ್ಕೃತದ ಉಸಾಬರಿ ನನಗೆ ಈಗ ಬೇಡ.

ಪ್ರಶ್ನೆ: ಗಮಾರರೇ, ಬೀಜೇಪಿ ಕೋಮುವಾದಿ ಪಕ್ಷ, ನಮ್ಮ ಪಕ್ಷದ ನಿರ್ನಾಮಕ್ಕೆ ಸಜ್ಜಾಗಿತ್ತು. ಅದಕ್ಕೆ ಅಧಿಕಾರ ಕೊಟ್ಟರೇ ರಾಜ್ಯವೇ ಹೊತ್ತಿ ಉರಿಯುತ್ತದೆ ಅಂತೆಲ್ಲಾ ಹೇಳಿದ್ದೀರಲ್ಲಾ?

ಉತ್ತರ: ಅದೊಂದು ದೊಡ್ಡ ಜೋಕ್. ನನಗೂ ಜೋಕ್ ಮಾಡಲು ಬರುತ್ತದೆ ಅಂತ ನೀವೆಲ್ಲಾ ತಿಳಿದುಕೊಳ್ಳಬೇಕು. ಹೇಗಿದ್ದರೂ ನಮ್ಮ ಅಪ್ಪನೇ ತಾನೇ ಮೊದಲ ಗುರುವು? ನಾವೂ ಕೋಮುವಾದಿಗಳೇ ಅಲ್ವಾ? ನಾವು ಅಲ್ಪಸಂಖ್ಯಾತರನ್ನು ಓಲೈಸುತ್ತೇವೆ, ಅವರು ಬಹು ಸಂಖ್ಯಾತರನ್ನು ಓಲೈಸುತ್ತಾರೆ. ಹಾಗಾಗಿ ಎಲ್ಲರೂ ಕೋಮುವಾದಿಗಳೇ ಆಗಿರುವಾಗ, ಅದನ್ನು "ದೂಷಣೆ" ಅಂತ ಕರೆಯೋದಾದ್ರೂ ಹೇಗೆ? ಅದು ನಾವು ನೀಡೋ ಸರ್ಟಿಫಿಕೆಟ್ ಅಂತ ತಿಳ್ಕೊಳಿ.

ಪ್ರಶ್ನೆ: ಜಡಿಯೋರಪ್ನೋರೇ, ಈ ಟ್ವೆಂಟಿ20 ನಾಟಕೀಯ ಪಂದ್ಯದಲ್ಲಿ ನೀವು ಇನ್ನಿಂಗ್ಸ್ ಪೂರ್ಣಗೊಳಿಸುವ ಭರವಸೆಯಿದೆಯೇ? ಅದೂ ಇದೂ ಕಾರಣ ಹೇಳಿ ಜೇಡಿಎಸ್ ನಿಮಗೆ ಕೈಕೊಟ್ಟು, ಕುರ್ಚಿಗೆ ಜೇಡಿ ಮಣ್ಣು ಹಚ್ಚಲಿದೆ ಎಂಬುದನ್ನು ನೀವೇಕೆ ನಂಬುವುದಿಲ್ಲ?

ಉತ್ತರ: ನಂಬಿಕೆಯೇ? ಛೆ, ಎಂಥ ಮಾತೂಂತ ಆಡ್ತಾ ಇದ್ದೀರಿ? ರಾಜಕಾರಣದಲ್ಲಿ ಯಾರೂ ಯಾರನ್ನೂ ನಂಬುವುದಿಲ್ಲ. ನಾನಂತೂ ನಾಲ್ಕು ಘಳಿಗೆಯಾದರೂ ಮುಖ್ಯಮಂತ್ರಿ ಆಗುತ್ತೇನಲ್ಲಾ... ಅದಕ್ಕಿಂತ ದೊಡ್ಡ ಭಾಗ್ಯ ಏನಿದೆ. ಟ್ವೆಂಟಿ ಮಂತ್ಸ್ ಅಧಿಕಾರ ನಡೆಸೋದು ನಂಗೇನೂ ಭರವಸೆಯಿಲ್ಲ,ಅವರು ವಚನಭ್ರಷ್ಟಶ್ರೇಷ್ಠ ರತ್ನ ಎಂಬ ಪ್ರಶಸ್ತಿಪಡೆದರೂ, ಅವರು ನಮಗೆ ಕೈಕೊಡುವುದು ಸಾಧ್ಯವಿಲ್ಲ. ಯಾಕೆಂದರೆ ಅವರೇ ಈ ಹಿಂದೆ ಕೊಟ್ಟಿದ್ದ ಕೈ ಎಂಬುದು ಕಾಂಗ್ರೆಸ್ ಬಳಿಯೇ ಇದೆ.

ಪ್ರಶ್ನೆ: ಕೊನೆಯದಾಗಿ ಒಂದು ಪ್ರಶ್ನೆ. ಏನೇ ಆದ್ರೂ ಅಪ್ಪ-ಮಗನ ಪಕ್ಷದ ಜತೆ ಸೇರಲಾರೆ, ಅವರು ಮಿತ್ರದ್ರೋಹ ಮಾಡಿದ್ದಕ್ಕೆ ಜನತೆಯ ಕ್ಷಮೆ ಕೇಳಬೇಕು ಅಂತೆಲ್ಲಾ ಹೇಳಿ, ಈಗ ದಿಢೀರ್ ಆಗಿ ಮತ್ತು ನಿಗೂಢ ಕಾರಣಕ್ಕೆ ನಿಮ್ಮ ಬೆಂಬಲಕ್ಕೆ ಬಂದಿದ್ದಾರೆ. ಹೀಗಿರುವಾಗ ಬಡ ರಾಜ್ಯದ ಪ್ರಜೆಗಳ ಗತಿಯೇನು?

ಉತ್ತರ: ಶಟಪ್... ಯಾರ್ರೀ ಆ ಪ್ರಜೆಗಳು? ನಮಗೆ ಓಟು ಕೊಡೋದಷ್ಟೇ ಅವರ ಕೆಲಸ. ಆನಂತ್ರ ತೆಪ್ಪಗೆ ಟಿಕೆಟ್ ತಗೊಂಡು ನಮ್ಮ ನಾಟಕ ನೋಡಿ ಮುಚ್ಕೊಂಡು ಕೂತಿರ್ಬೇಕು. ನಾವು ಏನು ಬೇಕಾದ್ರೂ ಮಾಡ್ತೀವಿ. ಪ್ರಜೆಗಳ ಹೆಸರನ್ನೇಕೆ ಇಲ್ಲಿ ತಂದು ನಮ್ಮ ಮೂಡ್ ಹಾಳು ಮಾಡುತ್ತೀರಿ. ಅವರು ಏನು ಬೇಕಾದ್ರೂ ಆಗಲಿ, ನಮಗೆ ಕುರ್ಚಿ ಮುಖ್ಯ. ಅವಕಾಶವಾದಿತನ ಎಂಬ ಪದದ ಅರ್ಥ ಎಲ್ಲ ಜನರಿಗೂ ತೋರಿಸ್ಕೊಡೋದು ಮುಖ್ಯ. ಅವರಿಗಂತೂ ಮತ್ತಷ್ಟು ದಿನ ಮನರಂಜನೆ ಕೊಡಿಸೋ ನಮ್ಮ ಬಹುದಿನಗಳ ಕನಸು ನನಸಾಗ್ತಾ ಇದೆ. ಸಂತಸಪಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಬ್ರಸ್ತ ಕನ್ನಡ ಪದಾನಾ ಗುರುವೇ!!! ಗೊತ್ತೇ ಇರ್ಲಿಲ್ಲ.

    ಸಕ್ಕತ್ತಾಗಿ ಬರೀತೀರ ಸೋಮಿ.

    ಪ್ರತ್ಯುತ್ತರಅಳಿಸಿ
  2. ಸಂದರ್ಶನ ಸ್ವಾರಸ್ಯಕರವಾಗಿದೆ. ಈ ಸಂದರ್ಶನವನ್ನೆ Guide ಎಂದು ಕಿರಿಯ ರಾಜಕಾರಣಿಗಳಿಗೆ ಕಳುಹಿಸಿಕೊಟ್ಟರೆ,ಅವರಿಗೆ ಒಬ್ಬ ’ಗುರು’ ಸಿಕ್ಕಂತಾಗುವದರಲ್ಲಿ ಸಂದೇಹ ವಿಲ್ಲ.

    ಪ್ರತ್ಯುತ್ತರಅಳಿಸಿ
  3. ಅನಾನಿಮಸ್ಸರೆ,

    ಗುರು ಅನ್ನೋದು ಕೂಡ ಸಂಸ್ಕೃತ ಪದ ಅಂತ ನಮಗೂ ಗೊತ್ತಿಲ್ಲ.

    ನೀವು ನಮ್ಮನ್ನು ಸೋಮಿಗೆ ಹೋಲಿಸಿರುವುದರಿಂದ ಎಲ್ಲಾ ಬಿಡಲು ತೀರ್ಮಾನಿಸಿದ್ದೇವೆ.

    ಬರ್ತಾ ಇರಿ ಸೋಮಿಗಳೇ...

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೆ,

    ಮತ್ತಷ್ಟು ಸ-ರಸಕರವಾದ ಘಟನೆ ನವೆಂಬರ್ ಒಂದರಂದು ಸಂಭವಿಸಿದೆ. ಅದರಲ್ಲಿ ಟೊಮೆಟೋ ಮತ್ತು ಮೊಟ್ಟೆಯ ರಸಗಳೂ ಸೇರಿಕೊಂಡಿವೆ.

    ಎಲ್ಲಾ ಜಾರಕಾರಣಿಗಳೂ ಈ ಸಂದರ್ಶನದ ಪ್ರತಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಕೆಲವರು ಧಮಕಿಯನ್ನೂ ನೀಡಿದ್ದಾರೆ. ಹಾಗಾಗಿ ಪೂರೈಸಲಾಗದೆ ಬಳಲುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D