[ಇಂದು ಗಾಂಧಿ ಜಯಂತಿ. ಈ ಪ್ರಯುಕ್ತ ಬೊಗಳೆ ರಗಳೆ ಬ್ಯುರೋದಿಂದ ವಿಶೇಷ ಲೇಖನ. ಗಾಂಧಿ ತತ್ವಗಳನ್ನು ಇಂದು ದೇಶ ಯಾವ ರೀತಿ ಪಾಲಿಸುತ್ತಿದೆ ಎಂಬ ಬಗೆಗೊಂದು ವಾರೆ ನೋಟ...]

ಬೊಗಳೂರು, ಅ.2- ಅಹಿಂಸಾ ಪರಮೋ ಧರ್ಮ, ನ್ಯಾಯದ ಪಥದಲ್ಲಿ ನಡೆಯೋಣ ಎಂದು ಜಗತ್ತಿಗೆ ಸಾರುತ್ತಾ, ರಘುಪತಿ ರಾಘವ ರಾಜಾರಾಮ ಎಂಬ ಮಂತ್ರೋಚ್ಚರಿಸುತ್ತಾ, ಕೊನೆಗಾಲದಲ್ಲಿ ಹೇ ರಾಮ್ ಎನ್ನುತ್ತಲೇ ಹುತಾತ್ಮರಾದ ಮಹಾತ್ಮಾ ಗಾಂಧಿ ಆದರ್ಶಗಳನ್ನೇ ತಮಿಳುಕಾಡು ಮುಖ್ಯಮಂತ್ರಿ ಕರುಣಾಕಿಡಿ ಅನುಸರಿಸುವತ್ತ "ಸಾಗು"ತ್ತಿದ್ದಾರೆ ಎಂದು ಕೇಂದ್ರ ಸರಕಾರವು ಪ್ರಮಾಣಪತ್ರ ನೀಡಿದೆ.

ಇದಕ್ಕೆ ಕೇಂದ್ರ ಸರಕಾರವು ಪಟ್ಟಿ ಮಾಡಿರುವ ಕಾರಣಗಳನ್ನು ಬೊಗಳೆ ಓದುಗರಿಗಾಗಿ ವಿಶೇಷವಾಗಿ ನೀಡಲಾಗಿದೆ. ಈ ಕಾರಣಗಳು ಇಂತಿವೆ:

* ಶ್ರೀರಾಮನ ಏಕಪತ್ನೀ ವ್ರತದ ಆದರ್ಶ ಪಾಲಿಸುತ್ತಿರುವ ಕರುಣಾಕಿಡಿ ಅವರು ಈಗಾಗಲೇ ಕೇವಲ ಒಬ್ಬ ಪತ್ನಿಯನ್ನು ಮಾತ್ರವೇ ಅಧಿಕೃತವಾಗಿ ಹೊಂದಿದ್ದಾರೆ.

* ಗಾಂಧೀಜಿ ಅವರು ಹುತಾತ್ಮರಾದಾಗ ಹೇ ರಾಮ್ ಎಂದಿದ್ದರು. ಆದರೆ ಕರುಣಾಕಿಡಿಯವರಿಗೆ ವಯಸ್ಸಾಗಿದೆ ಎಂಬುದು ಒತ್ತಟ್ಟಿಗಿರಲಿ, ಕರುಣಾಕಿಡಿ ಮಾತ್ರ, ತಮಿಳಿನಲ್ಲಿ "ಹ" ಅಕ್ಷರದ ಕೊರತೆಯಿರುವುದರಿಂದಾಗಿ "ನೋ ರಾಮ್" ಎಂದಷ್ಟೇ ಹೇಳುತ್ತಿದ್ದಾರೆ ಮತ್ತು ಮುಂದೆಯೂ ಹೇಳುತ್ತಾರೆ.

* ಕರುಣಾಕಿಡಿ ತುಂಬಾ ಹಿರಿಯ ನಾಯಕ (ವಯಸ್ಸಾಗಿರುವುದರಿಂದ). ಅವರು ಯುಪಿಎ ಸರಕಾರದ ಅಳಿವು ಉಳಿವಿಗೆ ಏಕೈಕ ಆಧಾರಸ್ತಂಭ. ಅವರನ್ನು ನಾವು ಕೈಬಿಡುವುದುಂಟೇ? ಅವರು ಮಾಡಿದ್ದೇ ಸರಿ. ಯಾಕೆಂದರೆ ಎಲ್ಲಾದರೂ ಚುನಾವಣೆ ನಡೆದಲ್ಲಿ ನಮ್ಮ ಗತಿ ಯಾರಿಗೂ ಬೇಡದಂತಿರುತ್ತದೆ.

* ಕರುಣಾಕಿಡಿ ಗಾಂಧಿವಾದ ಅನುಸರಿಸುತ್ತಿದ್ದಾರೆ. ಅವರು ತುಳಿದ ಹಾದಿಯನ್ನೇ ನಾವೂ ಅನುಸರಿಸುತ್ತಿದ್ದೇವೆ. ನ್ಯಾಯಾಂಗಕ್ಕೆ ತಲೆಬಾಗಲೇಬೇಕು ಎಂದು ಗಾಂಧೀಜಿ ಹೇಳಿಲ್ಲ. ನ್ಯಾಯಮಾರ್ಗದಲ್ಲಿ ನಡೆಯಬೇಕು ಎಂದಷ್ಟೇ ಹೇಳಿದ್ದಾರೆ. ಹಾಗಿರುವಾಗ ನಾವು ನಡೆದ ಹಾದಿಯೇ ನ್ಯಾಯಯುತ ಮಾರ್ಗ.

* ನ್ಯಾಯಾಂಗವು ರಜಾ ದಿನವೂ ಕೆಲಸ ಮಾಡಿದೆ. ಅವರು ಕೆಲಸ ಮಾಡುತ್ತಾರೆಂದು ನಾವೇಕೆ ಕೆಲಸ ಮಾಡಬೇಕು? ನ್ಯಾಯಾಂಗ ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಈಗಾಗಲೇ ರಜೆ ಘೋಷಿಸಿದ್ದೇವೆ. ತಮಿಳುಕಾಡಿನ ಕರುಣಾಕಿಡಿ ಬೆಂಬಲಿಗರೂ ಮಜಾ ಮಾಡೋದು ಬೇಡವೆ? ಅಷ್ಟಕ್ಕೂ ನಾವೇನೂ ಬಂದ್ ಮಾಡಿಲ್ಲ. ತಾನಾಗಿಯೇ ಬಂದ್ ಆಗಿದೆ ಅಂತ ಕರುಣಾಕಿಡಿ ಹೇಳಿದ್ದಾರೆ. ನಾವದನ್ನು ನಂಬಲೇಬೇಕು.

* ಒಂದು ಕಾಲದಲ್ಲಿ ಹಿಂದಿಯನ್ನೇ ಹಿಂದುಸ್ತಾನದಿಂದ ಓಡಿಸಿಬಿಡಬೇಕು ಎಂಬಷ್ಟರಮಟ್ಟಿಗೆ ಗದ್ದಲವೆಬ್ಬಿಸಿದ್ದ ತಮಿಳುಕಾಡು ಮುಖ್ಯಮಂತ್ರಿಗಳು ಈಗ, ನಮ್ಮತ್ತಲೂ ಕೃಪಾದೃಷ್ಟಿ ಬೀರಿದ್ದಾರೆ. ಅವರ ಬಾಯಿಯಿಂದಲೇ ಭಾಯಿಭಾಯಿ ಎಂಬ ಹಿಂದಿ ಅಣಿಮುತ್ತುಗಳು ಉದುರಿವೆ. ಅವನ್ನು ಹೆಕ್ಕಿಕೊಂಡು ನಾವು ಕೃತಾರ್ಥರಾಗಿದ್ದೇವೆ.

* ಕರುಣಾಕಿಡಿಯವರೇನೂ ವಯಸ್ಸಾಗಿ ಹಸಿವು ತಾಳಲಾರದೆ ಉಪವಾಸ ಬಿಟ್ಟಿಲ್ಲ, ಅವರು ಉಪವಾಸ ಬಿಟ್ಟದ್ದು ನ್ಯಾಯಾಲಯಕ್ಕೆ "ಕಿಂಚಿತ್ ಗೌರವ ಕೊಡುವುದಕ್ಕಾಗಿ"! ಮಾತ್ರವಲ್ಲ, ಅಂದು ಬಂದ್ ಇದ್ದದ್ದರಿಂದ ಅಂಬ್ಯುಲೆನ್ಸ್‌ಗಳು ಕೂಡ ಕೈಗೆ ಸಿಗುತ್ತಿರಲಿಲ್ಲ, ಆಸ್ಪತ್ರೆಗಳು ಕೂಡ ಬಂದ್ ಆಗಿದ್ದರೆ ಎಂಬ ಚಿಂತೆ ನಮಗೆ ಆವರಿಸಿತ್ತು.

* ನ್ಯಾಯಾಲಯದ ಕಟ್ಟಡದ ವಿಸ್ತೀರ್ಣವು ನಮ್ಮ ಶಾಸಕಾಂಗ (ಸಂಸತ್) ಕಟ್ಟಡಕ್ಕಿಂತ ತೀರಾ ಕಿರಿದು. ಹಾಗಾಗಿ ನಮ್ಮದೇ ದೊಡ್ಡದು. ನ್ಯಾಯಾಂಗ ನಮಗೆ ಗೌಣ. ನ್ಯಾಯಾಂಗಕ್ಕೆ ಬೆಲೆ ಕೊಟ್ಟರೆ ನಮ್ಮ ಡೊಳ್ಳು ಹೊಟ್ಟೆ ತುಂಬುವುದು ಹೇಗೆ? ಸಾಧ್ಯವಾದರೆ ಸಂವಿಧಾನ ಬದಲಿಸಲು ಯತ್ನಿಸುತ್ತೇವೆ ಎಂದು ಹೇಳಿದ ಕೇಂದ್ರದ ವಕ್ತಾರರು ಮಾತು ಮುಗಿಸಿದರು.

2 Comments

ಏನಾದ್ರೂ ಹೇಳ್ರಪಾ :-D

 1. "ಗಾಂಧಿ ಜಯಂತಿಯ ದಿನ ಸತ್ಯವನ್ನಾಡೋಣ,
  ಸುಳ್ಳಿಗೊ ಇಡಿ ವರುಷ ತೆರವೆ ಇಹುದು."
  -----------ಅಂಬಿಕಾತನಯದತ್ತ .

  ಕರುಣಾಕಿಡಿ ಹುಟ್ಟಿದ ಮೇಲೆ ಒಮ್ಮೆಯಾದರೂ ಸತ್ಯ ಹೇಳಿದ್ದಾನೆಯೆ ಎನ್ನುವದು ಸಂಶೋಧನೆಯಾಗಬೇಕಿದೆ.

  ReplyDelete
 2. ಸುಧೀಂದ್ರರೆ,

  ಕರುಣಾಕಿಡಿ ಸತ್ಯ ಹೇಳಿದ್ದಾರೆಯೇ ಎಂಬುದನ್ನು ಸಂಶೋಧನೆ ಮಾಡಬೇಕಾದ ಅಗತ್ಯವೇ ಇಲ್ಲ. ಉತ್ತರ ಶತಃಸಿದ್ಧ ಮತ್ತು ಪ್ರಶ್ನೆಯಲ್ಲೇ ಅಡಕವಾಗಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post