ಬೊಗಳೆ ರಗಳೆ

header ads

ಇಲ್ಲೊಂದು ಟ್ವೆಂಟಿ20: ವಿದೇಶೀ ಮಾಧ್ಯಮ ನಿರ್ಲಕ್ಷ್ಯ!

(ಬೊಗಳೂರು ತಪ್ಪು ಲೆಕ್ಕಾಚಾರ ಬ್ಯುರೋದಿಂದ)
ಬೊಗಳೂರು, ಸೆ.26- ಈಗಾಗಲೇ ಭಾರತವು ಅವಸರದ ಕ್ರಿಕೆಟ್ ಪಂದ್ಯ ಗೆದ್ದುಕೊಂಡು ವಿಶ್ವಚಾಂಪಿಯನ್ ಆಗಿದ್ದಲ್ಲದೆ, ಆಟಗಾರರೆಲ್ಲರೂ ಕೈಗೆ ನಿಲುಕದಷ್ಟು ಎತ್ತರಕ್ಕೆ ಏರಿದ್ದಾರೆ. (ಶ್ರೀಮಂತಿಕೆಯಲ್ಲಿ ಮತ್ತು ಹೆಸರಿನಲ್ಲಿ!). ಆದರೆ ನಮ್ಮದೇ ನೆಲದಲ್ಲಿ ನಿಧಾನವಾಗಿಯೇ ನಡೆಯುತ್ತಿರುವ ಟ್ವೆಂಟಿ20 ಪಂದ್ಯದ ಬಗ್ಗೆ ಎಲ್ಲಾ ಅಂತಾರಾಷ್ಟ್ರೀಯ ಮಾಧ್ಯಮಗಳು ಅಸಡ್ಡೆ ತೋರಿಸುತ್ತಿರುವುದೇಕೆ ಎಂಬುದು ಬೊಗಳೂರು ಬ್ಯುರೋಗೆ ಅರ್ಥವಾಗದ ಅನರ್ಥಕಾರಿ ವಿಷಯ.

ಈ ಟ್ವೆಂಟಿ20 ಪಂದ್ಯವು ಅನುಕ್ರಮವಾಗಿ ಕಮಲ ಮತ್ತು ತೆನೆ ಹೊತ್ತ ರೈತಮಹಿಳೆಯ ಲಾಂಛನ ಹೊಂದಿರುವ ಭಾಜಪ ಮತ್ತು ಜಾಜದ ತಂಡಗಳ ನಡುವೆ ನಡೆಯುತ್ತಿದ್ದು, ಜಾಜದ ತಂಡವು ಅಕ್ಟೋಬರ್ 3ರಂದು ತನ್ನ ಇನ್ನಿಂಗ್ಸ್ ಬ್ಯಾಟಿಂಗ್ ಪೂರ್ಣಗೊಳಿಸಲಿದೆ. ಕಿರಿಕೆಟ್ಟಾಟದ ಟ್ವೆಂಟಿ20 ಎಂದರೆ ಓವರುಗಳ ಲೆಕ್ಕಾಚಾರವಾದರೆ, ಇಲ್ಲಿ ತಲಾ 20 ತಿಂಗಳುಗಳ ಲೆಕ್ಕಾಚಾರವಾಗಿದೆ.

ಅಕ್ಟೋಬರ್ 3ರಂದು ಜಾಜದವು ಬ್ಯಾಟಿಂಗ್ ಕೊನೆಗೊಳಿಸಿದ ತಕ್ಷಣ ಇದುವರೆಗೆ ಬೌಲಿಂಗ್ ಮಾಡುತ್ತಿದ್ದ (ಅತ್ಯಧಿಕ ಸೀಟುಗಳನ್ನು ಹೊಂದಿರುವ) ಭಾಜಪವು ಬ್ಯಾಟಿಂಗ್ ಆರಂಭಿಸುವುದೆಂದು ನಿರ್ಧಾರವಾಗಿದೆ. ಆ ತಂಡವು ಬ್ಯಾಟನ್ನು ಇದುವರೆಗೆ ಗಾಳಿಯಲ್ಲೇ ಬೀಸುತ್ತಾ ಅಭ್ಯಾಸ ನಡೆಸುತ್ತಿದ್ದು, ಚೆಂಡಿನಲ್ಲೇ ಆಡಲು ಕಾದು ಕೂತಿದೆ. ಆದರೆ ಬ್ಯಾಟಿಂಗ್ ಪೂರ್ಣಗೊಳಿಸಿರುವ ಜಾಜದ ತಂಡದವರು ಬೌಲಿಂಗ್ ನಡೆಸಲು ಕೇಳುತ್ತಾರೋ ಇಲ್ಲವೋ ಎಂಬ ಶಂಕೆ ಮೂಡಲಾರಂಭಿಸಿದೆ. ಇದಕ್ಕೆ ಕಾರಣವೆಂದರೆ, ಜಾಜದ ತಂಡದ ಕೋಚ್ ವೇದೇಗೌಡರು ತಮ್ಮ ತಂಡದ ನಾಯಕ ಕುಮಾರನೇ ಬ್ಯಾಟು ಬೀಸುವುದನ್ನು ಮುಂದುವರಿಸಬೇಕು ಎಂಬಂತೆ ಆಗಾಗ ಹೇಳಿಕೆಗಳನ್ನು ಹೊರಬಿಡುತ್ತಿರುವುದು ಮತ್ತು ತಕ್ಷಣವೇ ಒಳಗೆಳೆದುಕೊಳ್ಳುತ್ತಿರುವುದು!

ಜಾಜದ ತಂಡದವರು ಬ್ಯಾಟಿಂಗ್ ನಡೆಸುತ್ತಿದ್ದಾಗ, ಕೆಲವೊಮ್ಮೆ ಭಾಜಪ ತಂಡದ ಬೌಲರುಗಳು ಯದ್ವಾತದ್ವಾ ಬೌಲಿಂಗ್ ಮಾಡಿದ ಉದಾಹರಣೆಗಳೂ ಅನೇಕ ಇವೆ. ಆದರೆ, ಇವರು ಬೌಲಿಂಗ್ ಮಾಡಿದ್ದಕ್ಕಿಂತಲೂ ಅವರು ಸಿಕ್ಸರ್ ಎತ್ತಿದ ಸಂಖ್ಯೆಯೇ ಹೆಚ್ಚಿರುವುದರಿಂದಾಗಿ, ನಂತರ ಬ್ಯಾಟು ಬೀಸುವ ತಂಡವು ನಿಗದಿತ ಗುರಿ ತಲುಪುವ ಲಕ್ಷಣಗಳು ಕಡಿಮೆ ಇವೆ ಎಂದು ಬೊಗಳೂರು ಟ್ವೆಂಟಿ20 ಲೆಕ್ಕಾಚಾರ ಬ್ಯುರೋದವರು ಲೆಕ್ಕಾಚಾರ ಹಾಕಿದ್ದಾರೆ.

ಟಾಸ್ ಗೆದ್ದ ಜಾಜದ ತಂಡವು ಬ್ಯಾಟಿಂಗ್ ಆರಿಸಿಕೊಂಡು, ಇನ್ನಿಂಗ್ಸ್‌ನ ಸ್ಲಾಗ್ (ಕೊನೆಯ) ಓವರುಗಳಲ್ಲಿ ಯದ್ವಾತದ್ವಾ ಬ್ಯಾಟು ಬೀಸಲಾರಂಭಿಸಿದೆ. ಕೆಲವೊಮ್ಮೆ ಪೆವಿಲಿಯನ್‌ನಲ್ಲಿ ಕೂತ ಕೋಚ್ ವೇದೇಗೌಡ, ದೈಹಿಕ ತರಬೇತುದಾರರಾಗಿ ಇತ್ತೀಚೆಗಷ್ಟೇ ಆಯ್ಕೆಗೊಂಡ ಜೆರಾಮುದ್ದೀನ್ ಪಟೇಲ್ ಅವರು ಕೂಡ ಕುಳಿತಲ್ಲಿಂದಲೇ ಬ್ಯಾಟು ಬೀಸತೊಡಗಿದ್ದಾರೆ. ರಿಟೈರ್ಡ್ ಹರ್ಟ್ ಆಗಿ BCCIನಿಂದ ಸಿಡಿದು ICL ಥರಹ ಬೇರೆಯೇ ತಂಡ ಸೇರಿಕೊಂಡ ಸಿಕ್ಸರ್ ಸಿದ್ದು, ಪೇಜರ್ ಸಿಂಧ್ಯಾ ಕೂಡ ಅದೆಲ್ಲಿಂದಲೋ ಆಗಾಗ ಬೌಲಿಂಗ್ ಮಾಡತೊಡಗುತ್ತಾರೆ. ಚೆಂಡು ಸಿಕ್ಕಿದ್ದೇ ಪುಣ್ಯ ಎಂದುಕೊಂಡ ಬ್ಯಾಟಿಂಗ್ ಪಡೆಯು, ಅದನ್ನೇ ಯದ್ವಾತದ್ವಾ ಬೌಂಡರಿಗಟ್ಟುತ್ತಿತ್ತು. ಇದರಿಂದಾಗಿ ಸ್ಕೋರು ಏರುತ್ತಲೇ ಹೋಗಿದ್ದು, ಮುಂದೆ ಬ್ಯಾಟಿಂಗ್ ಮಾಡುವ ತಂಡವು ಅದನ್ನು ಬೆಂಬತ್ತುವ ಸಾಧ್ಯತೆಗಳು ಹೆಚ್ಚು ಹೆಚ್ಚು ಕ್ಷೀಣವಾಗತೊಡಗಿದೆ.
ನಂತರ ಬ್ಯಾಟ್ ಮಾಡುವ ತಂಡಕ್ಕೆ ಖಂಡಿತವಾಗಿಯೂ ಪಿಚ್ ಸರಿಯಾಗಿ ಇರುವುದಿಲ್ಲ. ಎಲ್ಲಾ ಬೌನ್ಸರುಗಳೇ ಬರುತ್ತವೆ ಎಂದು ಖಚಿತವಾಗಿ ಭವಿಷ್ಯ ನುಡಿದಿರುವ ಬೊಗಳೆ ಬ್ಯುರೋ, ಬೌನ್ಸರುಗಳು ಬೌಲಿಂಗ್ ಮಾಡುವ ತಂಡದಿಂದ ಮಾತ್ರವೇ ಅಲ್ಲ, ಪ್ರೇಕ್ಷಕರ ಗ್ಯಾಲರಿಯಿಂದಲೂ ಆಗಾಗ್ಗೆ ಬರುತ್ತಿರುತ್ತವೆ ಎಂದು ಭವಿಷ್ಯದಲ್ಲಿ ಹೇಳಲಾಗಿದೆ. ಈ ಕಾರಣಕ್ಕೆ ವಿಕೆಟ್ ರಕ್ಷಿಸಿಕೊಳ್ಳಲಾರದ ಭಾಜಪ ತಂಡವು ಬಲುಬೇಗನೇ ಆಲೌಟ್ ಆಗಿ, ಹೊಸ ಪಂದ್ಯಾಟಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ನಮ್ಮ ಬ್ಯುರೋ ಕೂಡ ಇತರ ಟಿವಿ ಚಾನೆಲ್‌ಗಳಂತೆ ತಪ್ಪು ತಪ್ಪು ವಿಶ್ಲೇಷಣೆ ಮತ್ತು ತಪ್ಪು ತಪ್ಪು ಲೆಕ್ಕಾಚಾರ ಹಾಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಸ್ವತಃ ಅಂಪೈರ್ ಸಹಾ ಆಗಿರುವ ವದಿಯೊಗೌಡರು, ಲೆಗ್‌ಲೆಸ್ ಅಂಪೈರ್ ಆದ ಅಡ್ಡವಾಣಿ ಹಾಗು ಚಾರಪಾಯಿಯವರನ್ನು one-way telephoneದಲ್ಲಿ ಸಂಪರ್ಕಿಸಿ, (ನಿಮ್ಮ)ಆಟ ಮುಗಿಯಿತೆಂದು ಡಿಕ್ಲೇರ್ ಮಾಡಿದ್ದಾರಂತೆ!

    ಪ್ರತ್ಯುತ್ತರಅಳಿಸಿ
  2. ಸುಧೀಂದ್ರರೆ,

    ಎಂಥಾ ಕಾಲ ಬಂತು ಅಂತ ಅಡ್ಡವಾಣಿ ತಿಳಿದುಕೊಳ್ಳುವಷ್ಟರಲ್ಲಿ ನಿಜವಾಗಿಯೂ ಆ ಕಾಲ್ ಬಂದೇಬಿಡಬೇಕೇ? ವದಿಯೋಗೌಡರ ಕಾಲು ಅದು. ಇದರಿಂದ ವದಿಯೋವರಿಗೂ (ಕತ್ತೆಗೊಂದು) ಒಂದು ಕಾಲ, ಒದೆಸಿಕೊಳ್ಳುವವರಿಗೂ ಒಂದು ಕಾಲ ಎಂಬ ಬೊಗಳೆ ಗಾದೆಯೂ ಪ್ರಚಲಿತಕ್ಕೆ ಬಂತು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D