(ಬೊಗಳೂರು ಬಯ್ಯಾಲಜಿ ಬ್ಯುರೋದಿಂದ)
ಬೊಗಳೂರು, ಜು.26- "ಅಮ್ಮನಿಗೆ ಹುಟ್ಟಿದ್ದಕ್ಕೆ ಪಶ್ಚಾತ್ತಾಪ ಪಡಬೇಕು, ನಿನ್ನನ್ನು ಈ ನೆಲದಿಂದಲೇ ಗುಡಿಸಿ ಸಾರಿಸುತ್ತೇನೆ..." ಎಂಬಿತ್ಯಾದಿ ಶಬ್ದಗಳನ್ನು "ಪಾರ್ಲಿಮೆಂಟರಿ" ಶಬ್ದಕೋಶಕ್ಕೆ ಸೇರಿಸಬೇಕು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದಿಯಾಗಿ ಆ ಪಕ್ಷದ ಎಲ್ಲಾ ಸದಸ್ಯರು ಸ್ಪೀಕರ್ ಅವರನ್ನು ಒತ್ತಾಯಿಸಿದ ಘಟನೆ ತಡವಾಗಿ ವರದಿಯಾಗಿದೆ.

ಕಲಾಪದ ಕಡತದಿಂದ ಮುಖ್ಯಮಂತ್ರಿಯವರ ಅಣಿಮುತ್ತುಗಳನ್ನು ಅಳಿಸಿಬಿಡುವುದೆಂದರೇನು ಹುಡುಗಾಟಿಕೆಯ ವಿಷಯವೇ ಎಂದು ಪ್ರಶ್ನಿಸಿರುವ com-guess ಪದಾಧಿಕಾರಿಗಳು, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ರೀತಿ ಶಬ್ದವನ್ನೇ ಅಳಿಸುವ ಮೂಲಕ ನಮ್ಮ ಪಕ್ಷದ ಸಂಸ್ಕೃತಿಯನ್ನು ತಿರುಚಲು ಅವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿರುವ ಅವರು, ಹೊಸ ಹೊಸ ಪದ ಪ್ರಯೋಗಗಳಿಂದ ಭಾಷೆ ಬೆಳವಣಿಗೆಯಾಗುತ್ತದೆ. ಬಡವಾಗಿದ್ದ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪದಗಳು ಅನ್‌ಪಾರ್ಲಿಮೆಂಟರಿ ಎಂಬ ಆಪಾದನೆ ಸತ್ಯಕ್ಕೆ ದೂರ. ಇದು ನಮ್ಮ ಪಕ್ಷದ ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿದ್ದು, ಇದು ಅನ್‌ಪಾರ್ಲಿಮೆಂಟರಿ ಶಬ್ದ ಎಂಬುದಕ್ಕೆ ಪುರಾವೆ ಸಲ್ಲಿಸಲಿ ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿರುವ ಅವರು, ಎಲ್ಲರೂ ಕೂಗಾಡುತ್ತಾರೆಂದು ಹೇಳಿ ಈ ಬಾರಿ ಕ್ಷಮೆ ಕೇಳುತ್ತೇವೆ, ಮುಂದಿನ ಬಾರಿ ನೋಡಿಕೊಳ್ಳುತ್ತೇವೆ ಎಂದು ಪ್ರೀತಿಯಿಂದ ನುಡಿದಿದ್ದಾರೆ.

ಮುಖ್ಯಮಂತ್ರಿ ಮಾಡಿದ್ದು ತಪ್ಪು ಎಂದು "ಅನ್‌ಪಾರ್ಲಿಮೆಂಟರಿ" ಯಾಗಿ ವರ್ತಿಸುತ್ತಾ, ಕೂಗಾಡುತ್ತಿದ್ದ ಶಾಸಕರನ್ನು ಸದನದಿಂದ ಹೊರಗೆ ಹಾಕಿದ ಅವರು, ಏನೇ ಆದರೂ ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. ನಿಮ್ಮ ಬ್ಲಾಗಿನಲ್ಲಿ ಉಜ್ಜೈಯಿನಿಯ 'ತೀರ್ಥ'ಪಾನಿ ಕಾಳಭೈರವ ದೇವರ ಪ್ರಸ್ತಾಪವಿದೆ ಎಂದು ಗೊತ್ತಾದಾಗ 'ನಿಮ್ಮ' ಇತಿಹಾಸವನ್ನೇ ಕದಕಲಾರಂಭಿಸಿದೆ. ಕದಕಿಕೆದಕಿ ಬೊಗಳೆರಗಳೆಯ ಮೂಲವನ್ನೇ ಪತ್ತೆಮಾಡುವಷ್ಟರಲ್ಲಿ ನನ್ನ ದೃಷ್ಟಿದೋಷದ ಕಣ್ಣಿಗೆ ಬಿದ್ದ ವದರಿ Mr. ಬೊಗಳಿಗರಿಗೆ ಒಂದು ಖಾರದ ಪತ್ರ ಕಂ ನೋಟಿಸ್ ನೀಡುವಂತೆ ತೀವ್ರ ಪ್ರಚೋದನೆ ನೀಡಿದೆ. ಹಾಗಾಗಿ ಇದನ್ನು ಕೊರೆಯುವ ಅನಿವಾರ್ಯತೆ ಜಾರಿಬಿದ್ದಿದೆ.
  ನಿಮ್ಮ ತೀರ್ಥ ರಾತ್ರೆ ಅಲ್ಲಲ್ಲ ಯಾತ್ರೆಯನ್ನು ಹುಡುಕಿ ಬೊಗಳೆ ಬ್ಯೂರೋಗೆ ಪ್ರಯಾಸ ಮಾಡಿದ ವೇಳೆ ಅದರ ಸಂಗ್ರಹಗಳತ್ತ ಕಾಲು ಹಾಕಿದಾಗ ವಿಷಮವೊಂದನ್ನು ಕಂಡು ಶಿಖ, ನಖ ಎಲ್ಲವೂ ಹುರಿಯುತ್ತಿದೆ. ಹಾಗಾಗಿ ನಿಮ್ಮ ಮೇಲೆ (ಇಲ್ಲದ)ಮಾನ ನಷ್ಟ ಮೊಕದ್ದಮೆ ಹಾಡಲು ತಯಾರಾಗಿದ್ದೇವೆ. ಅಲ್ಲಸ್ವಾಮಿ, ನೀವು ಒಂದು ಮಸುದಾಯಕ್ಕೇ ಅವನಾಮ ಮಾಡಿದ್ದೀರಿ... ನಿಮಗೆ ಅದೆಷ್ಟು ಅಧೈರ್ಯ ಇರಬಹುದು? ಅದು ಯಾಕೆ ನೀವು ನಿಮ್ಮ ಖನಿತಾ ವರದಿ ಮಾಡಲು ಕಾಲೇಜು ಕ್ಯಾಂಟೀನಿಗೇ ನುಗ್ಗಬೇಕು? ಹಾಗೆ ನುಗ್ಗಿದಾಗ ನಿಮಗೆ ಹುಚ್ಚೇ'ಗೌಡ'ನ ಸಮಸ್ಯೆಯೇ ಯಾಕೆ ಕಣ್ಣಿಗೆ ರಾಚಬೇಕು? ಕರ್ನಾಟಕದ ಒಂದು ಸಮುದಾಯದ ಮೇಲೆ (ಅದೂ ರಾಜ್ಯವನ್ನಾಳುವ ಮುಖ್ಯಮಂತ್ರಿ ಪ್ರತಿನಿಧಿಸುತ್ತಿರುವ) ನಿಮ್ಮ ಕುಂಗಣ್ಣು ಯಾಕೆ? ಇದು ದುರುದ್ದೇಶ ರೂಪಿತವೇ? ಅದು ಯಾಕೆ ಹುಚ್ಚೇ ಗೌಡನೇ ಆಗಬೇಕು? ಅದು ಹುಚ್ಚೇ ಪಾಟೀಲನೋ, ಕುಲಾಲೋ, ಶೆಟ್ಟಿಯೋ, ಅಂಚನೋ, ಬಾಗೇವಾಡವೂ ಯಾಕಾಗಬಾರದು? ಎಂಬುದಾಗಿ ವರದಿಯನ್ನು ಓದಿ ತಲೆ ಇಲ್ಲದ ಮಂದಿ ಪ್ರಶ್ನಿಸಿದ್ದಾರೆ. ಅದು ಅಲ್ಲದೇ ಅಷ್ಟಕ್ಕೇ ಹುಚ್ಚನ್ನು ನಿಲ್ಲಿಸದೇ ಹುಚ್ಚನ್ನು ಹೆಚ್ ಮಾಡಿದ್ದೀರಿ... ಅಬ್ಬಾ ಒದ್ದಾಟ ತನವೇ? ಇದರ ಹಿಂದಿನ ರಾಕಣವೇನು ಎಂದು ನಿಮ್ಮ ಪ್ರಯಾಸ ಥಕನ ಓದುತ್ತಿರುವ ವೇಳೆ ಅಲ್ಲಿ ಅಂಟಿಕೊಂಡ ಬೇತಾಳ ಪ್ರಶ್ನಿಸುತ್ತಿದೆ........

  ReplyDelete
 2. ಪಾರ್ಲಿಮೆಂಟರಿ ನಿಘಂಟು ಎನ್ನುವ ಹೊಸ ಶಬ್ದಕೋಶವನ್ನೇ ರಚಿಸಿದರೆ, ನಮ್ಮ ಭಾಷೆಗಳು ಇನ್ನಷ್ಟು ಶ್ರೀಮಂತವಾಗುವದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ಸದಸ್ಯರು ಬರೀ ವಾಗ್ಯುದ್ಧಕ್ಕೆ ಮಾತ್ರ ಸೀಮಿತರಾಗಿಲ್ಲ.ತಮಿಳು ಕಾಡು ಅಸೆಂಬ್ಲಿಯಲ್ಲಿ ಲಯಜಯಿತ ಎನ್ನುವ ಖಳನಾಯಕಿ ನಟಿಯ
  ವಸ್ತ್ರಾಪಹರಣ ಸೀನನ್ನು ಅಭಿನಯಿಸಲಾಗಿತ್ತು. ಆ ಸಿನೆಮಾಕ್ಕೆ ಹೀರೋ ಆಗಿದ್ದ ನಾಯಕ ನಟರು ಮಹಾಭಾರತದ ಕಾಲದಿಂದಲೂ ನಮ್ಮಲ್ಲಿ ರಾಜಸಭೆಗಳಲ್ಲಿ ವಸ್ತ್ರಾಪಹರಣದ ಪರಂಪರೆ ಇದೆ ಎಂದು ಸಮರ್ಥಿಸಿಕೊಂಡಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ "ಶಾಸನ ಸಭೆಯ ಸದಸ್ಯನಾಗಿ ಬೈಗುಳಕ್ಕಂಜಿದೊಡೆಂತಯ್ಯಾ? ಬಟ್ಟೆಯ ಬಿಚ್ಚಲು ಬೇಕಯ್ಯಾ!" ಎನ್ನುವ ವಚನವು ಇಲ್ಲಿ ಸಂಪೂರ್ಣವಾಗಿ ಅನ್ವಯವಾಗುತ್ತದೆ.

  ReplyDelete
 3. ಅನಾನಿಮಸ್ಚಂದ್ರರೇ,
  ನೀವು ಹಳೆಯದನ್ನೆಲ್ಲಾ ಕೆದಕಿದ್ದೀರೆಂದರೆ.... ಖಂಡಿತವಾಗಿಯೂ ನಮ್ಮ ಬಗ್ಗೆ ತನಿಖೆ ನಡೆಸುತ್ತಿದ್ದೀರೆಂದು ಅರ್ಥ. ಆದರೆ ಮೊದಲೇ ನೋಟಿಸ್ ನೀಡಿದ್ದು ಒಳ್ಳೆಯದಾಯಿತು. ನೀವು ಕೂಡ ನಮ್ಮ ಲೋಕಾಯುಕ್ತ ಇಲಾಖೆಯಂತೆಯೇ ಮುನ್ನೆಚ್ಚರಿಕೆಯನ್ನು ಪ್ರಕಟಿಸಿಯೇ ದಾಳಿ ನಡೆಸುವ ಯೋಜನೆ ಹಾಕಿಕೊಂಡದ್ದು ಸ್ವಾಗತಾರ್ಹ ಬೆಳವಣಿಗೆ.

  ಆಮೇಲೆ ನಿಮ್ಮ ಬೇತಾಳ ಕೇಳಿದ ಪ್ರಶ್ನೆಗೆ ಉತ್ತರಿಸಿದರೆ ನಮ್ಮಲ್ಲಿ ಇಲ್ಲದ ತಲೆಯು ಸಾವಿರ ಹೋಳಾಗುವ ಸಾಧ್ಯತೆಯಿರುವುದರಿಂದ ಹೇಳಿಬಿಡುತ್ತೇವೆ. ಆದರೂ ನೀವು ಆ ಹುಚ್ ಅನ್ನು ತಲೆಗೆ ಹಚ್ಚ್ಇ ಕೊಳ್ಳುತ್ತಿರುವುದೇಕೆಂಬ ಪ್ರಶ್ನೆ ಹಾಗೆಯೇ ಉಳಿದಿದೆಯಾದುದರಿಂದ ಬೇತಾಳನೂ ಸೇಫ್.

  ReplyDelete
 4. ಸುಧೀಂದ್ರರೆ,
  ನೀವು ಹಳೆಯ ಸೀರೆಯನ್ನೆಲ್ಲಾ ಎಳೆದೆಳೆದು ಉದ್ದವಾಗಿಸುತ್ತಾ ಇದ್ದೀರಿ. ಬಹುಶಃ ಮುಂದಿನ ಬಾರಿ ವಸ್ತ್ರಾಪಹರಣಕ್ಕೆ ತಯಾರಿ ನಡೆಸುತ್ತಿದ್ದಿರಬಹುದೇ, ಅಥವಾ ಆ ಪರಂಪರೆಯನ್ನು ಮುಂದುವರಿಸಲು ನರುಣಾಕಿಡಿ ನಿಮಗೇನಾದರೂ ಗುಟ್ಟಿನಲ್ಲಿ ನೀಡಿರಬಹುದೇ ಎಂಬ ಸಂದೇಹ ನಮಗೆ. ಈ ಸೀನು ಸೀನರಿಗಳು ತಮಿಳುಕಾಡಿನಲ್ಲಿ ನಡೆದಿದ್ದರಿಂದಾಗಿ ಪ್ರತ್ಯೇಕ ಸ್ಟೇಜ್ ಸೆಟ್ಟಿಂಗ್ ಅವಶ್ಯಕತೆಯಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post