ಬೊಗಳೆ ರಗಳೆ

header ads

ಆತ್ಮಹತ್ಯೆಗೆ ಕಠಿಣ ಶಿಕ್ಷೆ ವಿಧಿಸಲು ನಿರ್ಧಾರ

(ಬೊಗಳೂರು ಆತ್ಮದ ಹತ್ಯೆ ಬ್ಯುರೋದಿಂದ)
ಬೊಗಳೂರು, ಜು.6- ಆತ್ಮಹತ್ಯೆಗೆ ಮುನ್ನ ತಮ್ಮ ಆತ್ಮವನ್ನು ಶೋಧಿಸಿಕೊಳ್ಳಬೇಕು ಎಂಬ ನಿರ್ಣಯದ ಬೆನ್ನಿಗೇ, ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಬಿಡಿ ಎಂಬ ಮಾಜಿ ನಿಧಾನಿಗಳ ಸಲಹೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರವು, ಇದೀಗ ಆತ್ಮಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲು ನಿರ್ಧರಿಸಿದೆ ಎಂದು ಒಲ್ಲದ ಮೂಲಗಳಿಂದ ತಿಳಿದುಬಂದಿದೆ.

ಮಣ್ಣಿನ ಮಗನೇ ಮಣ್ಣಿನ ಮಕ್ಕಳಿಗೆ ಸಲಹೆ ನೀಡಿರುವುದರಿಂದ ದೇಶದಲ್ಲಿ ಆತ್ಮಹತ್ಯೆ ಹೆಚ್ಚಾಗಬಹುದೆಂಬ ಶಂಕೆಯಿಂದ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಜಾರಿಗೆ ತರಲುದ್ದೇಶಿಸಿರುವ ಹೊಸ ಕಾನೂನಿನ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ಮಣ್ಣಿನ ಮಕ್ಕಳು, ಚಿನ್ನದ ಮಕ್ಕಳು ಎಂಬೆಲ್ಲಾ ಭೇದಭಾವವಿಲ್ಲ. ಇಲ್ಲಿ ಸಮಾನ ನಾಗರಿಕ ಸಂಹಿತೆ ಅನ್ವಯಿಸಲಾಗುತ್ತದೆ. ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಕಠಿಣ ಶಿಕ್ಷೆಯ ಪ್ರಮಾಣವೂ ವಿಶಿಷ್ಟವಾಗಿರುತ್ತದೆ. ದಿನನಿತ್ಯದ ಆವಶ್ಯಕ ಸಾಮಗ್ರಿಗಳ, ಬೇಳೆ ಕಾಳುಗಳ, ತರಕಾರಿ-ಹಣ್ಣುಗಳೇ ಮುಂತಾದ, ತಿನ್ನಲು ಯೋಗ್ಯವಾದ ವಸ್ತುಗಳ ಬೆಲೆ ಏರಿಸುತ್ತಾ, ಇಲ್ಲೇ ಜೀವನ ನಡೆಸಬೇಕು ಎಂಬ ಆದೇಶವೇ ಶಿಕ್ಷೆಯಾಗುತ್ತದೆ ಎಂದು ಪರಿಭಾವಿಸಲಾಗಿದೆ.

ಬೆಲೆ ಏರಿಕೆ ಸಹಿಸಿಕೊಂಡೂ ಮತ್ತೆ ಮತ್ತೆ ಆತ್ಮಹತ್ಯೆಗೆ ಮುಂದಾಗಿ, ಆತ್ಮಹತ್ಯೆ ಮಾಡಿಕೊಂಡವರಿಗೆ ಗಲ್ಲು ಶಿಕ್ಷೆ ವಿಧಿಸಲು ಕೂಡ ಕೆಲವು ಜಾರಕಾರಣಿಗಳಿಂದ ಅಮೂಲ್ಯ ಸಲಹೆಗಳು ಬಂದವು ಎಂದು ನಮ್ಮ ಸಂಪುಟ ಸಭೆಯ ಬಾತ್ಮೀದಾರರು ಒದರಿ ಮಾಡಿದ್ದಾರೆ.
ಇಷ್ಟೆಲ್ಲಾ ಪರಿಹಾರ-ಪ್ಯಾಕೇಜ್‌ಗಳನ್ನು ವಿತರಿಸಿಯೂ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದು, ಅಂಥವರಿಗೆ ಏನು ಮಾಡಲು ಸಾಧ್ಯ ಎಂಬ ಮಾಜಿ ನಿಧಾನಿಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಪುಟ ಸಭೆಯು, ರೈತರಿಗೆ ಪರಿಹಾರ ವಿತರಿಸದಿದ್ದರೆ, ಸರಕಾರಿ ಅಧಿಕಾರಿಗಳು, ಜಾರಕಾರಣಿಗಳ ಹೊಟ್ಟೆ ತುಂಬುವುದಾದರೂ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿತು.

ರೈತರಿಗೆ ಕೋಟಿ ಕೋಟಿ ಪ್ರಕಟಿಸಿದರೂ, ಅದರಲ್ಲಿ ಅಧಿಕಾರಿಗಳು, ಜಾರಕಾರಣಿಗಳೂ ಪಾಲು ಪಡೆಯುತ್ತಿದ್ದು, ಅವರೂ ಜೀವನ ಮಾಡಬೇಡವೇ ಎಂದು ಸಭೆಯಲ್ಲಿ ಹಾಜರಿದ್ದವರು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

10 ಕಾಮೆಂಟ್‌ಗಳು

  1. ದೇಶದ ಬೆನ್ನೆಲುಬಾದ ರೈತರೇ ಆತ್ಮಹತ್ಯೆ ಮಾಡಿಕೊಂಡರೆ, ದೇಶದ ಹೊಟ್ಟೆಯಾದ ಜಾರಕಾರಣಿಗಳು ಎಲ್ಲಿ ಸಾಯಬೇಕು? ಇಂತಹ ದೇಶದ್ರೋಹ ಮಾಡುವ ರೈತರನ್ನು "ಟಾಡಾ"ದ ಅಡಿಯಲ್ಲಿ ಬಂಧಿಸಬೇಕು. ಅಸತ್ಯಾನ್ವೇಶಿ ತಿಳಿಸಿದ ಕಠಿಣ ಶಿಕ್ಷೆ ಇವರಿಗೆ ಯೋಗ್ಯವಾಗಿದೆ.

    ಪ್ರತ್ಯುತ್ತರಅಳಿಸಿ
  2. ಆತ್ಮಹತ್ಯೆ ಮಾಡಿಕೊಳ್ಳಲು ಅಸಫಲರಾದವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಸಫಲರಾದವರಿಗೆ ಸನ್ಮಾನ ಮಾಡಬೇಕು ಮತ್ತು ಸಫಲತೆಯನ್ನು ತಡೆಯ ಹೊರಟವರಿಗೆ ಮರಣ ದಂಡನೆ

    ಪ್ರತ್ಯುತ್ತರಅಳಿಸಿ
  3. ಆತ್ಮಹತ್ಯೆ ಮಾಡಿಕೊಳ್ಳಬೇಡಿರೆಂದಾಗ ನೇಣು ಬಿಗಿದುಕೊಂಡ ರೈತರು, ನಿಧಾನಿಗಳು, " ಆತ್ಮಹತ್ಯೆ ಮಾಡಿಕೊಳ್ಳಲಿ ಬಿಡಿ" ಎಂದಾಗ ಸುಮ್ಮನಾದರಲ್ಲ??!! " ಚಂಡಿ ಕಥೆ ತರ ಆಯ್ತು ಇದು!

    ಪ್ರತ್ಯುತ್ತರಅಳಿಸಿ
  4. ತಮ್ಮ ಬೊಗಳುವ ವದರಿಯ ಜಾಡು ಹಿಡಿದು ಹೊರಟ ನಮ್ಮ ವದರಿಗಾರನಿಗೆ ಸಿಕ್ಕ ಅಪರೂಪದ ಸುದ್ದಿ: ಆತ್ಮ ಹಾಗೂ ಆತ್ಮಸಾಕ್ಷಿ ಇರುವವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ.ಅದಿಲ್ಲದವರು, ಅದನ್ನು ಮೊದಲೇ ಕೊಂದು ಅದರ ತಿಥಿಯ ದಿನ ಗದ್ದುಗೆಯ ಮೇಲೆ ಕೂತವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಶೇ.೧೦೧% ಇಲ್ಲ. ಆತ್ಮ ಇದ್ದವರು ತಾನೆ ಹತ್ಯೆ ಮಾಡಿಕೊಳ್ಳುವುದು? ಎಂಬುದಾಗಿ ಗಮೇರಿಕದ ಸಿದ್ಧಪ್ರಸಿದ್ಧ ವಿಘ್ನ-ಆನಿಗಳು ಸಂಶೋಧಿಸಿದ್ದು ಅದಕ್ಕೆ ಸ್ಥಳೀಯ ವಿಗ್-ನಾನಿ ಇದು ಶೇ. ೧೦೩% ಸತ್ಯ, ಯಾಕೆಂದರೆ ನಮ್ಮ ಇತಿಹಾಸದಲ್ಲಿ ಇದುವರೆಗೂ ಒಬ್ಬೇ ಒಬ್ಬ ಜಾರಕಾರಣಿ ಆತ್ಮಹತ್ಯೆ ಮಾಡಿಕೊಂಡಿಲ್ಲವೆಂದು ಸಮರ್ಥನೆ ನೀಡಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ಸುನಾಥರೆ,
    ದೇಶದ ಬೆನ್ನೆಲುಬು ಎಂದು ತಿಳಿಯಬೇಕಿದ್ದರೆ, ಅವರಿಗೆ ಹೊಟ್ಟೆಗೆ ಏನೂ ಸಿಗಲಾರದಷ್ಟು ಬೆಲೆಗಳನ್ನು ಏರಿಸಿ, ವಸ್ತುಶಃ ಎಲುಬು ಮಾಡಿಬಿಡುವ ಕೇಂದ್ರದ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

    ಅಂತೆಯೇ, ಜಾರಕಾರಣಿಗಳಿಗೆ ಏನೂ ಸಿಗದಂತೆ, ಅವರನ್ನು ನಡುನೀರಿನಲ್ಲಿ ಮುಳುಗಿಸುವ ರೈತರಿಗೆ ನಿಮ್ಮ ಸಲಹೆಯನುಸಾರದ ಶಿಕ್ಷೆಯೇ ಸೂಕ್ತವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ,
    ನೀವು ಹೇಳಿದ ಶಿಕ್ಷೆಯನ್ನೂ ಕಠಿಣವಾಗಿ ಪರಿಗಣಿಸಲಾಗುವುದು. ಇದರ ಅನುಷ್ಠಾನಕ್ಕೆ ಸಾಕಷ್ಟು ಕಾಲಾವಕಾಶಕ್ಕಾಗಿ ಅನುಮತಿ ಕೋರಲಾಗುತ್ತಿದೆಯಂತೆ.

    ಪ್ರತ್ಯುತ್ತರಅಳಿಸಿ
  7. ಅಪರೂಪವಾದ ಅನಾನಿಮಸರೆ,
    ಇಂಥಹ ಆತ್ಮಹತ್ಯೆಗಳ ಹಿಂದೆ ಜಾರಕಾರಣಿಗಳ ಪೂರ್ಣ ಪ್ರೋತ್ಸಾಹ ಇದೆ. ಯಾಕೆಂದರೆ ಪ್ಯಾಕೇಜ್ ಬಂದರೆ ನುಂಗಬಹುದಲ್ಲಾ ಎಂಬ ದೂರಾಲೋಚನೆ ಅವರದು.

    ಪ್ರತ್ಯುತ್ತರಅಳಿಸಿ
  8. ಸ್ಮಿತಾ ಅವರೆ,
    ಈ ತಾಣಕ್ಕೆ ನಿಮಗೆ ಸ್ವಾಗತ. ರಿಯಲೀ ಗುಡ್ ಎಂದಿದ್ದೀರಿ...
    ಗುಡ್ -ಬೆಟರ್- ಬೆಸ್ಟ್ ಅನ್ನುವ ಬದಲು ಗುಡ್- ಬ್ಯಾಡ್ -ವರ್ಸ್ಟ್ ಎಂಬುದೇ ನಮಗೆ ಪ್ರಿಯವಾಗಿರುವುದರಿಂದ ಮೂರನೇ ಹಂತ ತಲುಪಲು ಪ್ರಯತ್ನಿಸುತ್ತೇವೆ. :)

    ಪ್ರತ್ಯುತ್ತರಅಳಿಸಿ
  9. ಸುಪರೀತರೇ,
    ನೀವು ನಮ್ಮ ಬೊಗಳುವವರ ಹಿಂದೆ ಸುತ್ತಾಡುವುದರ ಹಿಂದಿನ ಸಂಚು ನಮಗೀಗ ಅರ್ಥವಾಗತೊಡಗಿದೆ. ನಮ್ಮ ಒದರಿಗಾರರಿಗಿಂತಲೂ ಖಚಿತವಾದ ವರದಿಯನ್ನು ಅಂಕಿ ಅಂಶ ಸಹಿತ ನೀಡುವುದರ ನಿಮ್ಮ ಸಂಚು ನಮ್ಮ ಅರಿವಿಗೆ ಬಂದಿದ್ದು, ಇದನ್ನು ನಾವು ಖಂಡತುಂಡವಾಗಿ ತುಂಡು ಮಾಡುತ್ತೇವೆ...

    ಯಾವುದೇ ಜಾರಕಾರಣಿಗೆ ನುಂಗುವುದರಲ್ಲೇ ಸಮಯ ಕಳೆಯುತ್ತಿರುವಾದ ಆತ್ಮಹತ್ಯೆ ಮಾಡಿಕೊಳ್ಳಲು ಪುರುಸೊತ್ತಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D