(ಬೊಗಳೂರು ಅ(ನ)ರ್ಥ ಬ್ಯುರೋದಿಂದ)
ಬೊಗಳೂರು, ಜೂ.19- ಪತ್ನಿಯ ಆರ್ಥಿಕ ಸ್ಥಿತಿಗೂ ಪತಿಗೂ ಸಂಬಂಧ ಇಲ್ಲ ಎಂದು ಮಾನ್ಯ ನ್ಯಾಯಾಲಯವೇ ತೀರ್ಪು ನೀಡಿರುವುದನ್ನು ಬೊಗಳೂರಿನ ಸ್ತ್ರೀ ಸಮಾಜವು ವ್ಯಾಪಕವಾಗಿ ಸ್ವಾಗತಿಸಿದೆ.

ನ್ಯಾಯಾಲಯವಾದರೂ ಕನಿಷ್ಠಪಕ್ಷ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದೆಯಲ್ಲಾ ಎಂದು ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಬೊಗಳೂರು ಸ್ತ್ರೀ ಸಮಾಜವು, ಬೊಗಳೆ ರಗಳೆ ಎದುರು ಧರಣಿ ನಡೆಸಿ ತನ್ನ ಹರ್ಷ ವ್ಯಕ್ತಪಡಿಸಿದೆ.

ನಮ್ಮ ಪತ್ರಿಕಾ ಕಚೇರಿ ಎದುರೇ ಈ ಸಮಾಜವು ಹರ್ಷಾಚರಣೆಯ ಧರಣಿ ನಡೆಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ನಮ್ಮ ಬ್ಯುರೋ, ಕೆಲವೊಂದು ಮಹತ್ವದ ಅಂಶಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಯಿತು.

ಪ್ರಧಾನ ಅಂಶವೆಂದರೆ, ಪತ್ನಿ ದುಡಿಯಲು ಹೋಗಿ ತರುವ ಹಣವೆಲ್ಲಾ ಆಕೆಯ ಮೇಕಪ್‌ಗೆ ಸಾಕಾಗುತ್ತದೆ. ಹಾಗಾಗಿ ತಾವು ದುಡಿಯಲು ಹೊರಗೆ ಹೋಗುವುದೇ ಮೇಕಪ್‌ಗಾಗಿ. ತಾವು ಸಂಪಾದಿಸುವ ಹಣಕ್ಕೂ ಪತಿಗೂ ಸಂಬಂಧವೇ ಇರಬಾರದು ಎಂಬುದು ಅವರು ಹುಟ್ಟಿದಾರಭ್ಯ ಮಾಡುತ್ತಿದ್ದ ವಾದವಾಗಿತ್ತು.

ಅವರು ಯಾಕಾಗಿ ಬೀದಿಗಿಳಿದರು ಎಂಬುದನ್ನು ಕೂಡ ಅಧ್ಯಯನ ನಡೆಸಲಾಗಿದೆ. ಹೆಂಡಸರಾಯಿ ಕುಡಿಯಲೆಂದೇ ಹೆಂ(ಡ)ಗಸರನ್ನು ಪೀಡಿಸುತ್ತಾ ಮತ್ತು ಅವರ ದುಡಿತದ ಹಣವನ್ನು ಕಿತ್ತುಕೊಳ್ಳಲು ಗಂಗ(ಡ)ಸರು ಯತ್ನಿಸುತ್ತಿರುವ ಪ್ರಕರಣಗಳು ಇತ್ತಿತ್ತಲಾಗಿ ಹೆಚ್ಚಾಗತೊಡಗಿವೆ. ಇದು ಸ್ತ್ರೀ ಸಮಾಜವನ್ನು ಕೆರಳಿಸಿತ್ತು.

ಈ ಸಮಾಜದಲ್ಲಿ ಇನ್ನೊಂದು ವರ್ಗದ ಮಹಿಳಾ ಸಮಾಜವೂ ಸೇರಿಕೊಂಡಿತ್ತು. ಆದರೆ ಅಲ್ಲಿ ಕೇಳಿಬಂದಿದ್ದು ಮಾತ್ರ ತದ್ವಿರುದ್ಧ ಧ್ವನಿ. ಪತ್ನಿಯ ಕೈಯಲ್ಲಿ ನಯಾಪೈಸೆ ಇಲ್ಲದಿದ್ದರೆ ಪತಿಯೇ ಎಲ್ಲವನ್ನು ನೀಡಬೇಕಾಗುತ್ತದೆ. ಆದುದರಿಂದ ಪತ್ನಿಯ ಆರ್ಥಿಕ ಸ್ಥಿತಿಗೂ, ಪತಿಗೂ ಸಂಬಂಧವಿಲ್ಲ ಎಂಬುದನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಕೂಗೆಬ್ಬಿಸಿದ್ದಾರೆ.

ಒಂದು ವೇಳೆ ನಮ್ಮಲ್ಲಿ ನಯಾಪೈಸೆ ಇದ್ದರೆ ಅದು ಮೇಕಪ್ ಕಿಟ್ ಕೊಳ್ಳಲು ಅಲ್ಲಿಂದಲ್ಲಿಗೆ ಸಾಕಾಗಬಹುದಾದ ಸಾಧ್ಯತೆಗಳನ್ನು ಊಹಿಸಬಹುದು, ಆದರೆ ಚಿನ್ನ ಕೊಳ್ಳಲು, ಸೀರೆ ಕೊಳ್ಳಲು ಎಲ್ಲದಕ್ಕೂ ಪತಿಯೇ ಆರ್ಥಿಕ ಸಹಾಯ ಮಾಡಬೇಕು. ಹಾಗಿರುವಾಗ ಸಂಬಂಧವೇ ಇಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದವರು ಪ್ರಶ್ನಿಸಿದ್ದಾರೆ.

4 Comments

ಏನಾದ್ರೂ ಹೇಳ್ರಪಾ :-D

 1. blogspotಗಳೆಲ್ಲಾ ಹಿಂದಿ ಕಲಿತಿವೆಯಲ್ಲಾ ಯಾಕೆ? ಅನ್ವೇಷಿಗಳ ಕೈವಾಡವೇ?

  ReplyDelete
 2. ನ್ಯಾಯಾಲಯಗಳ ಇಂತಹ ತರ್ಕ ಹಾಗು ತೀರ್ಪುಗಳನ್ನು ಕಂಡದ್ದರಿಂದಲೇ ದಾಸರು "ಯಾರಿಗೆ ಯಾರೊ ಪುರಂದರ ವಿಠಲಾ!" ಎಂದು ನೊಂದುಕೊಂಡು ಹಾಡಿದ್ದು.

  ReplyDelete
 3. ಶ್ರೀತ್ರೀ ಅವರೆ,
  ನಮ್ಮ ಕೈವಾಡ ಎಲ್ಲ ಕಡೆ ಇರುವುದರಿಂದಾಗಿ ಇದು ಯಾವ ಸಮಸ್ಯೆ ಎಂದು ಹೊಳೆಯುತ್ತಿಲ್ಲ.... ಏನಿದು ಹಿಂದಿ? ದಯವಿಟ್ಟು ವಿಷದಪಡಿಸಿ.

  ReplyDelete
 4. ಸುನಾಥರೆ,
  ಅದಕ್ಕೇ ತ-ಕರಾರು ಎನ್ನೋದು ಗೊತ್ತೇ?

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post