(ಬೊಗಳೂರು ಭಯಭೀತ ಬ್ಯುರೋದಿಂದ)
ಬೊಗಳೂರು, ಜೂ.14- ನಮ್ಮಲ್ಲೀಗ ಅಧಿಕಾರವಿದೆ, ನಮ್ಮದು ರಾಷ್ಟ್ರ ಪಿತನ ಪಕ್ಷ, ನಾವು ಯಾರನ್ನು ಬೇಕಾದರೂ ನಾವು ರಾಷ್ಟ್ರಕ್ಕೆ ಪತಿಯಾಗಿಸುತ್ತೇವೆ ಎಂದು ಹೊರಟಿರುವ ಕಾಂguess ತಂತ್ರದಿಂದ ತೀರಾ ಕಳವಳಕ್ಕೀಡಾಗಿರುವ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ಕಣ್ಣಿಗೆ ತೋಚಿದ ಜಾಗದಲ್ಲಿ ತಲೆ ಮರೆಸಿಕೊಳ್ಳಲು ಶುರುಹಚ್ಚಿಕೊಂಡಿದ್ದಾರೆ.ಸಂವಿಧಾನದ ಪರಮೋಚ್ಚ ಹುದ್ದೆಗೆ ಕಳಂಕ ತರುವ ಇಂಥಹ ಪ್ರಯತ್ನಗಳಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿರುವಂತೆಯೇ, ಇದನ್ನು ಬಲವಾಗಿ ವಿರೋಧಿಸಿರುವ ಬೊಗಳೆ ರಗಳೆ ಬ್ಯುರೋ ಸಂಪಾದಕರು, ಎಲ್ಲಿಯಾದರೂ ತಮ್ಮನ್ನೂ ಆ ಹುದ್ದೆಗೇರಿಸಿದರೆ ಎಂಬ ಭೀತಿಯಲ್ಲಿ ಪರಾರಿಯಾಗಿದ್ದಾರೆ.
ಅದೂ ಅಲ್ಲದೆ, ತಮ್ಮನ್ನು ಆ ಹುದ್ದೆಗೇರಿಸಿ, "ಕಳಂಕಗಳಲ್ಲೇ ನಂ.1" ಎಂಬ ಅತ್ಯಂತ ಅಮೂಲ್ಯವಾದ ಪಟ್ಟವನ್ನು ತಾನೇ ಅಲಂಕರಿಸಿ ದೇಶ ವಿದೇಶದಲ್ಲಿ ಕೀರ್ತಿ ಪತಾಕೆ ಹಾರಿಸುವ ಕಾಂguess ತಂತ್ರದ ಸಂಚಿಗೆ ಬಲಿಯಾಗದಿರಲು ಬೊಗಳೆ ಬ್ಯುರೋ ನಿರ್ಧರಿಸಿದೆ.
ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರ "ದೆಹಲಿ ಭೇಟಿ" ಎಂಬ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಿದಾಗ ಅತ್ಯಮೂಲ್ಯ ಸಂಗತಿಯೊಂದು ಬಯಲಾಗಿದೆ. "ಆ ಹುದ್ದೆಗಾಗಿ ನಾವು ಇನ್ನೂ ಹುಡುಕಾಟ ಮುಂದುವರಿಸಿದ್ದೇವೆ. ಯಾರು ಸಿಗುತ್ತಾರೋ ಕಾದು ನೋಡಬೇಕು, ಯಾರು ಬೇಕಾದರೂ ಆಗಬಹುದು" ಎಂದು ಬಹಿರಂಗವಾಗಿ ಘೋಷಿಸುತ್ತಾ, "ಒಟ್ಟಿನಲ್ಲಿ ಅವರಿಗೆ ರಾಜಕೀಯ ತಿಳಿದಿರಬೇಕು" ಎಂದು ಯಾರಿಗೂ ಕೇಳಿಸದಂತೆ ಪಕ್ಷವು ಈಗಾಗಲೇ ಸ್ಪಷ್ಟಪಡಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ನಾವೀಗಾಗಲೇ ಗೋವಾ, ಜಾರ್ಖಂಡ್ ಮತ್ತು ಬಿಹಾರಗಳಲ್ಲಿ ಆಯಾ ರಾಜ್ಯಗಳ ಸಾಂವಿಧಾನಿಕ ಪ್ರಧಾನ ಹುದ್ದೆಯಾದ ರಾಜ್ಯಪಾಲರಿಗೆ ರಾಜಕೀಯ ಕಲಿಸಿ ಎಲ್ಲೆಲ್ಲೂ ಕೀರ್ತಿಯ ಪತಾಕೆ ಹಾರಿಸಿದ್ದೇವೆ. ಈ ಕಾರಣಕ್ಕೆ ಈಗ ರಾಜಕೀಯ ಮಾಡಲು ಬೇರಾವುದೇ ಸಮರ್ಥ ಅಭ್ಯರ್ಥಿಗಳು ಕಾಣಿಸುತ್ತಿಲ್ಲ. ಹಾಗಾಗಿ ನಮ್ಮವರನ್ನೇ ಆ ಸ್ಥಾನದಲ್ಲಿ ಕೂರಿಸಿದರೆ, ಯಾವುದೇ ಅನ್ಯ ಪಕ್ಷಗಳ ಆಡಳಿತವಿರುವ ಸರಕಾರಗಳನ್ನು ಸುಲಭವಾಗಿ ವಜಾ ಮಾಡಬಹುದು, ಅಥವಾ ಚುನಾವಣೆಯಲ್ಲಿ ಜಯ ಗಳಿಸಿದರೂ ಸರಕಾರ ರಚನೆಗೆ ಅವಕಾಶವನ್ನು ಸುಲಭವಾಗಿ ನಿರಾಕರಿಸಬಹುದು ಎಂದು ಪಕ್ಷದ ವಕ್ತಾರರು ನಮ್ಮ ರದ್ದಿಗಾರರಿಗೆ ತಿಳಿಸಿದ್ದಾರೆ.
ಓದುಗರಲ್ಲಿ ವಿನಂತಿ: ಯಾರೇ ಕೇಳಿದರೂ ಬೊಗಳೆ ಬ್ಯುರೋ ಮುಖ್ಯಸ್ಥರು ಎಲ್ಲಿದ್ದಾರೆ ಎಂಬುದನ್ನು ಆ ಪಕ್ಷಕ್ಕೆ ತಿಳಿಸಬಾರದಾಗಿ ನಿವೇದನೆ. ಕುತ್ಗೆ ಕುಯ್ಸಿ... ನಾಲ್ಗೆ ಸೀಳ್ಸಿ... ಬೊಗಳೋರ್ ಎಲ್ಲಿ ಅಂತ ಕೇಳಿದ್ರೂನೂ... ನೀವು ಮಾತ್ರ ಮೂಗ್ನಲ್ಲೂ ಆ ವಿಷಯ ಬಾಯಿ ಬಿಡಬಾರದಾಗಿ ಕಳಕಳಿಯ ವಿನಂತಿ.
6 ಕಾಮೆಂಟ್‌ಗಳು
ಇನ್ನೂ ಪತಿಯಾಗದವರು, ಸತಿಯ ಪದದ ಅರ್ಥವೇ ಗೊತ್ತಿರದವರು ರಾಷ್ಟ್ರಪಿತನಾಗಲು - ಕ್ಷಮಿಸಿ ರಾಷ್ಟ್ರಪತಿಯಾಗಲು ಯೋಗ್ಯರಂತೆ. ಏಕೆಂದರೆ ಅವರಿಗೆ ಲಟ್ಟಣಿಗೆ, ಸೌಟುಗಳ ಏಟಿನ ಅನುಭವ ಇರುವುದಿಲ್ಲ. ಹಾಗಿದ್ದ ಮೇಲೆ ಬೊಗಳೆ ದಾಸಯ್ಯನವರಿಗೇಕೆ ಹೆದರಿಕೆ. ಅವರ ಜೊತೆ ಬೊಗಳಮ್ಮ ಇರೋವರೆವಿಗೆ, ಆ ಸ್ಥಾನಕ್ಕೆ ಅವರು ಅಯೋಗ್ಯರಲ್ಲ ಕ್ಷಮಿಸಿ ಯೋಗ್ಯರಲ್ಲ.
ಪ್ರತ್ಯುತ್ತರಅಳಿಸಿಕಾಂ-ಗುಸ್ಸುಗಳು ಸರ್ವಸಂಗ ಪರಿತ್ಯಾಗಿಯಾಗಿರುವವರ ಬಗ್ಗೆ ಹುಡುಕಾಟ ನಡೆಸಿದ್ದಾರೆಂದು ವದಂತಿ.
ವರದಿಗಾರರೇ, ನಿಮಗೆ ಅಷ್ಟು ಹೆದರಿಕೆ ಆದರೆ, ಇಂದಿನ ಊರಿಗೆ ಹೋಗಿ ಇದ್ದುಬಿಡಿ. ಯಾರಿಗೂ ತಿಳಿಯೋದಿಲ್ಲ :)
ಹೇಗಿದ್ರೂ ನಮ್ಮ ನಿಮ್ಮ ಸಂಬಂಧ ಹಳೆಯದಾದ್ದರಿಂದ, ನಾನೂ ಯಾರಿಗೂ ಹೇಳೋದಿಲ್ಲ.
ನಮ್ಮ ಲೆಕ್ಕಾಚಾರ ಆಮೇಲೆ ಚುಕ್ತಾ ಮಾಡಿಕೊಳ್ಳೋಣ.
ನಮ್ಮದೇ ಮಣ್ಣಿನಲ್ಲಿ ಉರುಳಾಡುತ್ತಿರುವ ಮಣ್ಣಿನ ಮಗನಿಗೆ ತಿಳಿದಷ್ಟು ರಾಜಕೀಯ ಈ ಟೋಪಿ ಪಕ್ಷದ ಬಚ್ಚಾಗಳಿಗೇನು ತಿಳಿದಿದೆ? ರಾಷ್ಟ್ರಪತಿ ಪಟ್ಟಕ್ಕೆ ನಮ್ಮ ಮಣ್ಣಿನ ಮಗನಷ್ಟು ಅಯೋಗ್ಯರು ಯಾರೂ ಸಿಕ್ಕಲಾರರು. ಪಕ್ಷಭೇದ ಮರೆತು ಅವರನ್ನು ರಾಷ್ಟ್ರಪತಿ ಮಾಡಿದರೆ ಮರುದಿನವೇ ಎಲ್ಲಾ ರಾಜ್ಯಗಳಿಗೂ ತಮ್ಮ ಕುಮಾರರನ್ನೆ ಮೂಕ ಮಂತ್ರಿ ಮಾಡುತ್ತಾರೆ. "ಸಿಂಹದಂತೆ ಗುಡುಗು ಮಗಾ,ಆದರೆ ನರಿಯಂತೆ ವಿಚಾರ ಮಾಡು!"
ಪ್ರತ್ಯುತ್ತರಅಳಿಸಿಶ್ರೀನಿವಾಸರೆ
ಪ್ರತ್ಯುತ್ತರಅಳಿಸಿನಾವು ಕೂಡ ಅಯೋಗ್ಯರು ಎಂದು ತಿಳಿದ ಪರಿಣಾಮವಾಗಿಯೇ ಅವರೆಲ್ಲಾ ನಮ್ಮನ್ನು ಹುಡುಕುತ್ತಿದ್ದಾರೆ ಅಂತ ನಮಗೆ ಗೊತ್ತಾಗಿದೆ. ಹಾಗಾಗಿ ತಲೆಮರೆಸಿಕೊಂಡಿದ್ದು.
ಇನ್ನು ಚಿಂತೆ ಇಲ್ಲ ಅಂತ ಕಾಣಿಸುತ್ತದೆ, ಮಹಿಳೆಯೊಬ್ಬರನ್ನು ಆ ಸ್ಥಾನಕ್ಕೆ ಏರಿಸಲು ನಿರ್ಧರಿಸಿರುವುದು ಹೊಸ ಬೆಳವಣಿಗೆ. ಇನ್ನು ನೆಮ್ಮದಿಯಿಂದಿರಬಹುದು.
ಸುನಾಥರೆ,
ಪ್ರತ್ಯುತ್ತರಅಳಿಸಿಮಣ್ಣಿನ ಮಗನ ಬದಲು ಮಣ್ಣಿನ ಮಗಳನ್ನು ಕೇಂದ್ರ ಸರಕಾರವು ಉಚ್ಚ ಸ್ಥಾನದಲ್ಲಿ ಕೂರಿಸಿ ಪಾಪ ತೊಳೆದುಕೊಳ್ಳಲು ಯತ್ನಿಸಿರುವುದು ಸ್ವಾಗತಾರ್ಹ ಬೆಳವಣಿಗೆ.
ರಾಷ್ಟ್ರಪತಿ ಹೋಗಿ ರಾಷ್ಟ್ರಪತ್ನಿ ಆದದ್ದು ಬೊ.ರ.ಗೆ ಯಾಕೆ ಇನ್ನೂ ತಿಳಿಯಲಿಲ್ಲ?
ಪ್ರತ್ಯುತ್ತರಅಳಿಸಿ-ಪಬ್
ಪಬ್ಬಿಗರೇ
ಪ್ರತ್ಯುತ್ತರಅಳಿಸಿಇನ್ನೂ ಕಾಯ್ತಾ ಇದ್ದೇವೆ... ಕೊನೆ ಕ್ಷಣದಲ್ಲಿ ಯಾರನ್ನು ಬೇಕಾದ್ರೂ ರಾಷ್ಟ್ರಪತಿಯಾಗಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಹಾಗಾಗಿ ತಲೆಮರೆಸಿಕೊಳ್ಳುವಿಕೆಯ ಯತ್ನವು ಇನ್ನೂ ಮುಂದುವರಿಯುತ್ತಿದೆ.
ಏನಾದ್ರೂ ಹೇಳ್ರಪಾ :-D