(ಬೊಗಳೂರು ವೇಸ್ಟ್ಇ-ಬ್ಯುರೋದಿಂದ)
ಬೊಗಳೂರು, ಜೂ.8- ವೇಸ್ಟಿಯನ್ನು ವೇಸ್ಟ್ ಎಂದು ಪರಿಗಣಿಸಿದ ಚೆನ್ನೈನ ಕ್ಲಬ್‌ನ ಹೆಸರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಗೆ ಹಾರುವ ಪಂಚೆಯಂತೆಯೇ ಹಾರಾಡತೊಡಗಿದೆ.

ಕ್ರಿಕೆಟ್ ಕ್ಲಬ್ ಪ್ರವೇಶಿಸಬೇಕಾದರೆ ಪಂಚೆ/ಧೋತಿ/ವೇಸ್ಟಿಯನ್ನು ಕಳಚಿಯೇ ಒಳಪ್ರವೇಶಿಸಬೇಕೆಂಬ ನಿಯಮವು ಇದೀಗ ರಾಷ್ಟ್ರೀಯ ಸುದ್ದಿಯಾಗಿದ್ದು, ಎಲ್ಲಾ ಬಿಚ್ಚಿ ಹಾಕಿ ಪ್ರವೇಶಿಸಲು ಇದೇನು ಈಜುಕೊಳವಾಗಿರಬಹುದೇ? ಎಂದು ನೋಡಲು ಬೊಗಳೂರು ಬ್ಯುರೋ ಅತ್ತ ಕಡೆ ತೆರಳಿತು.

ಅತ್ತ ಧಾವಿಸಿದಾಗ ತಿಳಿದು ಬಂದ ಅಂಶವೆಂದರೆ, ಈ ಕ್ಲಬ್ ಕ್ರಿಕೆಟ್‌ಗೆ ಮೀಸಲಾಗಿದೆ. ಕ್ರಿಕೆಟ್ ಆಡುವಾಗ ಪಂಚೆ ಗಾಳಿಗೆ ಹಾರುತ್ತದೆ ಎನ್ನುವ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಮೇಲ್ನೋಟಕ್ಕೆ ತಿಳಿದುಬಂದ ಅಂಶ.

ಕ್ಲಬ್ ಡ್ಯಾನ್ಸರ್‌ಗಳನ್ನು.... ಅಲ್ಲಲ್ಲ.... ಕ್ಲಬ್ ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಲಾಯಿತು. ಅವರು ಕೂಡ ಬೊಗಳೆ ಸಂದೇಹವನ್ನು ಖಚಿತಪಡಿಸಿದರು. ಕ್ರಿಕೆಟ್ ಸಂದರ್ಭದಲ್ಲಿ ಪ್ರೇಕ್ಷಕರು ಆಯಾ ದೇಶದ ಧ್ವಜಗಳನ್ನು ಬೀಸಿ ಹರ್ಷ ವ್ಯಕ್ತಪಡಿಸುತ್ತಿರುವಂತೆಯೇ, ಇಲ್ಲಿ ಕ್ರಿಕೆಟ್ ನಡೆಯುತ್ತಿರುವಾಗ ಪಂಚೆ ಎತ್ತಿ ಹರ್ಷ ವ್ಯಕ್ತಪಡಿಸಿದರೆ ಎಂಬ ಭೀತಿಯೂ ಇದಕ್ಕೆ ಕಾರಣ ಎಂದು ಅವರು ಸೇರಿಸಿದರು.

ಇನ್ನೇನು, ಕ್ಲಬ್‌ನಿಂದ ಬೊಗಳೂರು ಬ್ಯುರೋ ಪಲಾಯನ ಮಾಡಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಸಿನಿಮಾ ತಾರೆಯರು ಮತ್ತು ಬಿಚ್ಚೋಲೆ ಗೌರಮ್ಮಗಳ ದಂಡೊಂದು ಆಗಮಿಸಿತು.

ಕೈಯಲ್ಲಿ ಫಲಕಗಳು, ಬ್ಯಾನರ್‌ಗಳನ್ನು ಹಿಡಿದು, ಘೋಷಣೆ ಕೂಗುತ್ತಾ ಅವರು ತಮ್ಮಲ್ಲಿದ್ದ ಉಡುಗೆ-ತೊಡುಗೆಯನ್ನೆಲ್ಲಾ ಗಾಳಿಯಲ್ಲಿ ಬೀಸುತ್ತಾ ಧಾವಿಸಿ ಬರುತ್ತಿತ್ತು. ಬಹುಶಃ ಚೆನ್ನೈಯಲ್ಲಿ ಸಿಕ್ಕಾಪಟ್ಟೆ ತಾಪಮಾನ ಹೆಚ್ಚಿರಬೇಕು ಎಂದು ಭಾವಿಸಲಾಗಿತ್ತು. ಆದರೆ ವಿಷಯ ಬೇರೆಯೇ!

ಅವರ ಘೋಷಣೆ ಒಂದೇ ಆಗಿತ್ತು : ನಮಗೂ ಸಮಾನತೆ ನೀಡಿ!!! ಮಹಿಳಾ ತಾರತಮ್ಯ ನೀತಿ ಅನುಸರಿಸದಿರಿ!!! ನಮಗೂ ಉಡುಗೆ ನಿಷೇಧಿಸಿ!!! ನಾವೂ ಉಡುಗೆ ಕಳಚಿ ಕ್ಲಬ್ ಪ್ರವೇಶಿಸುತ್ತೇವೆ!!!

6 Comments

ಏನಾದ್ರೂ ಹೇಳ್ರಪಾ :-D

 1. ನಿಮ್ಮ ವದರಿಗಾರ ಅಲ್ಲಿಗೆ ಹೋಗಿದ್ದಾಗ ತಾರೆಯರು ಬಿಚ್ಚೋಲಮ್ಮನವರುಗಳೂ ವೇಸ್ಟ್ ಹಾಕಿದ್ರಾ? ತಾರೆಯರು ಅಂದ್ರೆ ಗಂಡಸರೋ ಅಥವಾ ಹೆಂಗಸರೋ? ಬಿಚ್ಚೋಲಮ್ಮ ಅಂದ್ರೆ ದೊಡ್ಡ ಹೆಂಗಸರೋ ಅಥವಾ ಚಿಕ್ಕ ಹೆಣ್ಣುಮಕ್ಕಳೋ?

  ಏಕೋ ನಿಮ್ಮ ವದರಿಗಾರ ಕೂಲಂಕಷವಾಗಿ ವದರುತ್ತಿಲ್ಲ ಎನಿಸುತ್ತಿದೆ. ಅವರನ್ನೇ ನೀವು ಹೆಚ್ಚಾಗಿ ನಂಬಿದರೆ, ನಿಮ್ಮ ಪತ್ರಿಕೆ ಪಡ್ಚ ಆಗೋದು ಗೋರಂಟಿ. ನಮ್ಮಲ್ಲಿ ಜನ ಕಾಯುತ್ತಿದ್ದಾರೆ, ಕಳುಹಿಸಲೇನು?

  ReplyDelete
 2. ಸೋ, ಹಿಂದೊಮ್ಮೆ ಹರಿಕೃಷ್ಣ ಪುನರೂರರ ಪಂಚೆ ಬಿಚ್ಚಿಸಿದ್ದು ಕ್ರಿಕೆಟ್ ಆಡಲಿಕ್ಕೆ? ಚೆಂಡು ಯಾವ(ರ) ಕೋರ್ಟ್‌ನಲ್ಲಿದೆ ಎಂದು ನೋಡಲಿಕ್ಕೆ??

  ReplyDelete
 3. ಕಾವೇರಿ ಸ್ಟೇಡಿಯಮ್‍ದಲ್ಲಿ ನಡೆಯುತ್ತಿರುವ ಕ್ರಿಕೆಟ್ ನೋಡಲು ಶ್ರೀಮಾನ(ಹೀನ) ದೇವೆಗೌಡರು ಹಾಗು ತಿರು(ಕ)ಕರುಣಾನಿಧಿಯವರು ಹೋಗಿದ್ದರಂತೆ.ಅಂಪೈರ್ ನಿರ್ಣಯ ಕೇಳಿದ ಕರುಣಾನಿಧಿ ಪಂಚೆಯನ್ನು ಮೇಲೆ ತೂರಿ ಸಂತಸ ತೋರಿಸಿದರೆ,ದೇವೆಗೌಡರು ಪಂಚೆ ಬಿಚ್ಚಿ ಮುಖ ಮುಚ್ಚಿಕೊಂಡು ಹೊರಬಂದರಂತೆ.

  ReplyDelete
 4. ಶ್ರೀನಿವಾಸರೆ,
  ತಾರೆಯರು ಏನು ಹಾಕಿದ್ದಾರೆ ಅಂತ ತಿಳ್ಕೊಳ್ಳೋ ಅವಕಾಶವೇ ಸಿಗಲಿಲ್ಲ... ಯಾಕೆಂದ್ರೆ ಏನೂ ಇರಲಿಲ್ಲ....

  ನಿಮ್ಮಲ್ಲಿ ಕಾಯೋ ಜನರನ್ನು ಕೂಡಲೇ ಇತ್ತ ಕಳಿಸಿ... ಅವರಿಗೆ ಗತಿ ತೋರಿಸ್ತೇವೆ... :)

  ReplyDelete
 5. ಜೋಷಿ ಅವರೆ,
  ಪುನರೂರರ ಪಂಚೆ ಬಿಚ್ಚಿದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿರುವಾಗ, ನೀವು ಮತ್ತೆ ಮತ್ತೆ ಅದನ್ನು ಬಿಚ್ಚೋ ಹಿಂದೆ ಯಾವ ಒಳಸಂಚು ಇದೆ ಎಂಬುದು ತಿಳಿಯುತ್ತಿಲ್ಲ.

  ReplyDelete
 6. ಸುನಾಥರೆ,
  ನೀವು ಹೇಳಿರುವುದು ಮೊದಲೇ ಫಿಕ್ಸ್ ಆಗಿದ್ದ ಪಂದ್ಯವಾಗಿದ್ದು, ಕಾವು ಏರಿದ ಕಾರಣದಿಂದಾಗಿ ಮಾನಹೀನರು ಪಂಚೆ ತೆಗೆದು ಮುಖ ಮುಚ್ಚಿಕೊಂಡು ಬಂದಿದ್ದು ಎಂಬುದನ್ನು ನಮ್ಮ ಅಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post