ಬೊಗಳೆ ರಗಳೆ

header ads

ಜನ್ಮದಿನವಲ್ಲ : ಬೊಗಳೆ ಬ್ಯುರೋ ಸ್ಪಷ್ಟನೆ

ಅಬ್ಬ!
ಇಂದು ಏಪ್ರಿಲ್ 1. ಅಂತಾರಾಷ್ಟ್ರೀಯ ಪರ್ವ. ಎಲ್ಲರೂ ಸಂಭ್ರಮ, ಸಡಗರೋತ್ಸಾಹಗಳಿಂದಲೇ ಆಚರಿಸಲೇಬೇಕಾದ ಒಂದು ಶುಭ ದಿನ.

ಆದರೆ "ಬೊಗಳೆ ರಗಳೆ ಬ್ಯುರೋ"ಕ್ಕೂ ಈ ದಿನಾಚರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಲಬೋ ಲಬೋ ಅಂತ ಎಷ್ಟೇ ಬೊಬ್ಬೆ ಹೊಡೆದರೂ ಕೇಳದ ನಮ್ಮ ಪತ್ರಿಕೆಯ ಓದುಗರು, ರಾಶಿ ರಾಶಿ ಶುಭಾಶಯ ಕಳುಹಿಸುತ್ತಿದ್ದು, ಈಗಾಗಲೇ ಪತ್ರಿಕಾ-ಲಾಯದ ಕಸದಬುಟ್ಟಿ ತುಂಬಿ ತುಳುಕಾಡುತ್ತಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ನಾವು ವಿಶೇಷ ವರದಿ ಪ್ರಕಟಿಸುವುದಾಗಿ ಹೇಳಿದ್ದು ನಿಜವಾಗಿದ್ದರೂ "ಬೊಗಳೆ ರಗಳೆ ಜನ್ಮದಿನ ಇಂದೇ" ಎಂದು ಘೋಷಿಸುತ್ತೇವೆಯೇ ಎಂಬುದನ್ನು ಓದುಗರು ಕಾಯುತ್ತಾ ಕೂತಿರುವುದು ಮಾತ್ರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮ್ಮಜ್ಜ ಹೇಳುತ್ತಿದ್ದುದನ್ನು ನಿಮಗೀಗ ನೆನಪಿಸುತ್ತಿದ್ದೇವೆ.

ಅನ್ವೇಷಿಯ ಹುಟ್ಟಿದ ಹಬ್ಬದ ಬಗ್ಗೆ ಶೇ.99.9 ಮಂದಿಯೂ ಏಪ್ರಿಲ್ 1ಕ್ಕೇ ಮತ ಹಾಕಿದ್ದಾರೆ ಎಂಬುದು ಇಂದಿನ ಮತದಾನದ ಸಂದರ್ಭ ನಮ್ಮ ಅರಿವಿಗೆ ಬಂದಿದೆ. ಆದರೆ ಉಳಿದಿರುವ 0.01 ಶೇಕಡಾದಷ್ಟು ಮಂದಿ ಬೇರೆಯೇ ದಿನವೊಂದನ್ನು ಹೇಳುತ್ತಿರುವುದರಿಂದ (ಬಹುಶಃ ನಮ್ಮ ವರದಿಗಾರ ಅನ್ವೇಷಿಯ ಮತವೇ ಇರಬಹುದು!) ಈ ಬಗ್ಗೆ ಸಮಗ್ರ ತನಿಖೆಯೊಂದು ನಡೆಯುತ್ತಿದೆ. ಹಾಗಾಗಿ ಓದುಗರು ಗಹಗಹಿಸಿ ನಗಬೇಕಾಗಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

ವಿಶ್ವ ಕಪ್ ಕ್ರಿಕೆಟಿನಲ್ಲಿ ಬಾಂಗ್ಲಾ ಮತ್ತು ಬರ್ಮುಡಾ ನಡುವಿನ ಮ್ಯಾಚ್ ಫಿಕ್ಸ್ ಆಗಿತ್ತು, ಹಾಗಾಗಿ ಶಾಲಾ ತಂಡಗಳ ವಿರುದ್ಧ ಹೆಣಗ್ಆಡಿ ಜಯಿಸಿರುವ ಭಾರತಕ್ಕೆ ಸೂಪರ್ 8ಕ್ಕೆ ಏರುವ ಅವಕಾಶ ದೊರೆತಿದ್ದು, ತಂಡವು ವಿಶ್ವ ಕಪ್‌ನ ಸೋಲಿನ ಅಭಿಯಾನ ಮುಂದುವರಿಸಲಿದೆ ಎಂಬ ಸಂದೇಶ ಕಳುಹಿಸುವ ಮೂಲಕ ನಮ್ಮ ಬ್ಯುರೋವನ್ನು ಮೂರ್ಖರನ್ನಾಗಿಸಲು ತೀವ್ರ ಯತ್ನಗಳು ನಡೆದಿವೆಯಾದರೂ, ಅದು ಪರಮಾಮವಧಿ ತಲುಪಿರುವುದರಿಂದ ಬ್ಯುರೋವನ್ನು "ಮತ್ತಷ್ಟು" ಮೂರ್ಖರಾಗಿರುವ ಯತ್ನ ಸಫಲವಾಗುವುದಿಲ್ಲ ಹಾಗೂ ಸಾಬೀತುಪಡಿಸಬೇಕಾದ ಅಗತ್ಯವೇ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗುತ್ತದೆ.

ಬಹುತೇಕ ಪತ್ರಿಕೆಗಳು ರಾಜಕಾರಣಿಗಳ ಭರವಸೆಗಳನ್ನು (ಶೀಘ್ರವೇ ಬೆಲೆ ಇಳಿಸುತ್ತೇವೆ, ಬಡತನ ನಿವಾರಿಸುತ್ತೇವೆ, ಉದ್ಯೋಗಾವಕಾಶ ಹೆಚ್ಚಿಸುತ್ತೇವೆ, ನ್ಯಾಯ ದೊರಕಿಸಿಕೊಡುತ್ತೇವೆ ಎಂಬಿತ್ಯಾದಿ) ಪ್ರಕಟಿಸುವ ಮೂಲಕ ಓದುಗರನ್ನು ದಿನಂಪ್ರತಿ ಫೂಲ್ ಮಾಡುತ್ತವೆಯಾದರೂ, ಏಪ್ರಿಲ್ 1ರಂದು ವಿಶೇಷವಾಗಿ ಫೂಲ್ ಮಾಡುವ ಪತ್ರಿಕೆಗಳು ಕೂಡ ಇರುತ್ತವೆ ಮತ್ತು ಅಂದು ಮಾತ್ರ ವಿಶೇಷವಾಗಿ ಫೂಲ್ ಆಗುವವರೂ ಇರುತ್ತಾರೆ. ಆದರೆ ಅವುಗಳ ಸಾಲಿಗೆ ನಮ್ಮ ಪತ್ರಿಕೆ ಸೇರಬಾರದು, ನಮ್ಮ ಓದುಗರೂ ಸೇರಬಾರದು ಎಂದು ತೀವ್ರ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ನಮ್ಮ ಬ್ಯುರೋ, ನಮ್ಮ ಪತ್ರಿಕೆಯು ಯಾರನ್ನೂ ತಾನಾಗಿಯೇ ಫೂಲ್ ಮಾಡಲು ಹೋಗುವುದಿಲ್ಲ ಎಂದು ಒತ್ತಿ ಒತ್ತಿ ಹೇಳುತ್ತಿದೆ.

ಮತ್ತು ಏಪ್ರಿಲ್ 1ರಂದು ವಿಶೇಷ ವರದಿ ಪ್ರಕಟವಾಗಲಿದೆ ಎಂದು ನಾವು ಘೋಷಿಸಿಲ್ಲ, ಬೇರಾರೋ ಘೋಷಿಸಿಬಿಟ್ಟಿದ್ದಾರೆ. ನಾವು ನೀಡಿದ ಈ ಭರವಸೆ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಯನ್ನು ಮೂರ್ಖರನ್ನಾಗಿಸುವ ಉದ್ದೇಶ ಹೊಂದಿತ್ತೇ ಹೊರತು, ಓದುತ್ತಿರುವ ನಿಮ್ಮನ್ನು ಅಲ್ಲ. ಹಾಗಾಗಿ ಯಾರು ಕೂಡ ಹೆಗಲು ಮುಟ್ಟಿಕೊಳ್ಳಬಾರದೆಂದು ಈ ಮೂಲಕ ಸೂಚಿಸಲಾಗುತ್ತದೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ನಿಮ್ಮ ವದರಿಗಾರ ಅನ್ವೇಷಿ ಎಂದು ಹುಟ್ಟಿದ್ದು ಎಂದು ತನಗೇ ಗೊತ್ತಿಲ್ಲ. ಇದೊಂದು ಗುಟ್ಟಿನ ವಿಷಯ. ಅನ್ವೇಷಿ ಅನ್ನೋರು ಇಲ್ಲವೇ ಇಲ್ಲ - ಪತ್ರಿಕಾ ಲಾಯದ ಕುದುರೆಯೊಂದು ಅದು ಎಂದು ಎಷ್ಟೋ ಜನಗಳಿಗೆ ಗೊತ್ತೇ ಇಲ್ಲ

    ಅಂದ ಹಾಗೆ ನಾನು ಮಾತ್ರ ಮೂರ್ಖನಾಗಿಲ್ಲ - ಏಕೆಂದರೆ ಮೂರ್ಖ ಎಂದರೆ ಏನು ಎಂತಲೇ ಗೊತ್ತಿಲ್ಲ. ಆದರೆ ಇತರರು ಹೇಳೋದು - ಮೂರ್ಖ ಎಂದರೆ ಪಂಗನಾಮಧಾರಿ ಅಂತೆ.

    ಏನೇ ಆಗಲಿ, ಬೊ-ರ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ಶುಭಾಶಯ ಕೋರುತ್ತಾ ಕೇಕಿಗಾಗಿ ಕ್ಯೂನಲ್ಲಿ ನಿಲ್ಲುವೆ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಓದುಗರನ್ನು ನೀವು ಮೂರ್ಖರನ್ನಾಗಿಸಲು ಸಾಧ್ಯವೇ ಇಲ್ಲ. ಯಾಕೆ ಹೇಳಿ? ಮೂರ್ಖರನ್ನು ಮೂರ್ಖರನ್ನಾಗಿಸಲು ಅಸಾಧ್ಯ.

    ಸೂರ್ಯಂಗೇ ಟಾರ್ಚಾ?

    ಪ್ರತ್ಯುತ್ತರಅಳಿಸಿ
  3. ಅಸತ್ಯಿಗಳೇ,

    ನಿಮ್ಮ ಹುಟ್ಟುಹಬ್ಬವಲ್ಲವೆಂದು ಹೇಳಿ ಓದುಗರನ್ನು ಮೂರ್ಖರನ್ನು ಮಾಡುವ ನಿಮ್ಮ ಪ್ರಯತ್ನ ಶಾಘ್ಲನೀಯ.ಆದರೆ perfection ko improve karna mushkil hai ಅಂತಾ ದಿಲ್ ಚಾಹ್ತ ಹೈ ಅಮೀರ್ ಖಾನ್ ಹೇಳಿದಾನೆ.

    ಪ್ರತ್ಯುತ್ತರಅಳಿಸಿ
  4. ನೀವೇನೇ ಹೇಳಿ, ಏಪ್ರಿಲ್ ಒಂದರಂದೇ ಹುಟ್ಟು ಹಬ್ಬ ಇರಬೇಕು ಕಣ್ರೀ. ಈ ಪ್ರಪಂಚದಲ್ಲಿ ಹುಟ್ಟುವುದು, ಸಾಯುವುದು ಎಲ್ಲಾ ಅವನ ಲೀಲೆ. ಎಲ್ಲಾ ನಶ್ವರ...ನಾನು..ನೀವು...ಈ ಕಂಪ್ಯೂಟರ್ರು...ಎಲ್ಲಾ ನಶ್ವರ ಕಣ್ರೀ. ಇದನ್ನೆಲ್ಲಾ ನೆಚ್ಚಿಕೊಂಡ ನಾವು ಮೂರ್ಖರಲ್ಲದೆ ಮತ್ತೇನೂ ಅಲ್ಲ. ನಾನು ಅದನ್ನು ಒಂದು ಕಾಲದಲ್ಲಿ ನೆಚ್ಚಿಕೊಂಡಿದ್ದೆ, ಈಗ ಸಕಲ (ಅಂಡರ್‌ವೇರು, ಖಾವಿ ಬಟ್ಟೆ ಬಿಟ್ಟು) ಪರಿತ್ಯಾಗಿಯಾಗಿದ್ದೇನೆ. ನಾನೆಂದೂ ಮೂರ್ಖನಾಗಿಲ್ಲ ........
    ಹೊಸದಾಗಿ ಪ್ರಕಟಣೆಗೆ ತಯಾರಾಗಿರುವ ಶ್ರೀ ಶ್ರೀ ಶ್ರೀ ಅಸತ್ಯಾನ್ವೇಷಿ ಮಹಾರಜರ ಜೀವನ ಚರಿತ್ರೆ ಇದಾಗಿದ್ದು ಆಸಕ್ತರು ಭಕ್ತಾದಿಗಳು ಕೂಡಲೇ ಹಣ ಪಾವತಿಸಿ ತಮ್ಮ ಹೆಸರು ನೊಂದಾಯಿಸಿಬಿಡಬೇಕೆಂದೂ, ಇಲ್ಲದಿದ್ದರೆ ತಮಗೆಲ್ಲರಿಗೂ ಈ ಪುಸ್ತಕದ ಪ್ರತಿಗಳನ್ನು ತಲುಪಿಸಲಾಗುವುದೆಂದು ಮಹಾರಾಜರು ಬೆದರಿಸಿದ್ದಾರೆ.

    ಪ್ರತ್ಯುತ್ತರಅಳಿಸಿ
  5. ನೂರಾ ಇಪ್ಪತ್ಮೂರು ಕಡೆ ತಿರುಗುವವರೆ,
    ನೀವು ಮಾತ್ರ ಮೂರ್ಖ...
    ...
    .
    ..
    ...
    ..
    ..
    ಆಗಿಲ್ಲ ಅಂತ ತಿಳಿದು ವೇದನೆಯಾಯಿತು.
    ತಿರುಗ್ತಾ ಬರ್ತಾ ಇರಿ,

    ಪ್ರತ್ಯುತ್ತರಅಳಿಸಿ
  6. ಪಬ್ಬಿಗರೆ,
    ಟಾರ್ಚಾದರೂ ಆಗಾಗ್ಗೆ ಉರಿಯುತ್ತೆ...
    ಆದ್ರೆ... ನಮ್ಮ ಮಂಡೆ?

    ಪ್ರತ್ಯುತ್ತರಅಳಿಸಿ
  7. ಶಿವ್,
    ನಮ್ಮ ಜನ್ಮದಿನವಲ್ಲ ಅಂತ ಸ್ಪಷ್ಟಪಡಿಸುವಲ್ಲಿ ವಿಫಲವಾಗಿದ್ದೇವೆ ಎಂದು ತಿಳಿಸಲು ಹರ್ಷವಾಗುತ್ತಿದೆ.

    ಏಕ್ ಹೀರಾ ಹೀ ದೂಸ್ರಾ ಹೀರಾ ಕೋ ಪಹಚಾನ್ತಾ ಹೈ ಅಂತ ನೀವೇ ಹೇಳಿದ್ದು ಸತ್ಯ.

    ಪ್ರತ್ಯುತ್ತರಅಳಿಸಿ
  8. ಅತ್ಯುತ್ತಮ ಭಕ್ತಿವೇದಾಂತ ಸಿದ್ಧಾಂತದ ಮೂಲಕ ನಮ್ಮ ಜನ್ಮದಿನವನ್ನು ಸಾಬೀತುಪಡಿಸಲು ಶ್ರಮಿಸಿದ ಸುಪ್ರೀತರೆ,

    ನಿಮ್ಮ ಪುಸ್ತಕ ಉಚಿತವಾಗಿಯೇ ತಲುಪಿಸುವ ಬೆದರಿಕೆಗೆ ಜಗ್ಗಿದ ಓದುಗರು ತಕ್ಷಣವೇ ಹಣ ಪಾವತಿಸಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D