(ಬೊಗಳೂರು ವಿದ್ಯಾರ್ಥಿ ಬ್ಯುರೋದಿಂದ)
ಬೊಗಳೂರು, ಮಾ.29- ರಾಜಕಾರಣಿಗಳ ತೀವ್ರ ಒತ್ತಡದಿಂದಾಗಿ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ನೀರಿಲ್ಲದೂರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಭರದ ಚಾಲನೆ ದೊರೆತಿದೆ. ಇದಕ್ಕೆ ಹಿನ್ನೆಲೆ ಎಂದರೆ, ಸೌಲಭ್ಯ ಇಲ್ಲದ ಕಾಲೇಜಿನಿಂದ ಬೇರೆಡೆಗೆ ವರ್ಗ ಬಯಸಿದ ವಿದ್ಯಾರ್ಥಿಗೆ ನ್ಯಾಯಾಲಯ ನ್ಯಾಯ ಒದಗಿಸಿರುವುದರ ಬಗ್ಗೆ ಇಲ್ಲೊಂದು ವರದಿ ಪ್ರಕಟವಾಗಿತ್ತು.

ಉತ್ತಮವಾಗಿ ಓದುತ್ತಿರುವ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೇಬಿನಿಂದ ಒಂದು ತೊಟ್ಟು ಹನಿಯೂ ಬೀಳದಿರುವುದರಿಂದಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಧನವಂತರ ಆಲಿಯಾಸ್ ರಾಜಕಾರಣಿಗಳ ಮಕ್ಕಳು ಎಂಬ ಹೆಗ್ಗಳಿಕೆ ಹೊತ್ತಿರುವವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಯ ಪ್ರಕಾಶದಿಂದ ಕಣ್ಣು ಕುಕ್ಕಿದಂತಾಗಿ ಕನ್ನಡಕ ಧರಿಸುವಂತಾಗುತ್ತಿದೆ. ಈ ಕಾರಣಕ್ಕೆ ಕಾಲೇಜಿನಿಂದ ಇಂಥವರನ್ನು ಎತ್ತಂಗಡಿ ಮಾಡಿಸಿದರೆ ಅಳಿದವರಿಗೆ ಉಳಿದವನೇ ರಾಜ ಎಂಬಂತೆ ಪ್ರಥಮ, ದ್ವಿತೀಯ ಸಹಿತ ಕೊನೆಯ ಸ್ಥಾನವು ಕೂಡ ತಮ್ಮ ಪಾಲಾಗುತ್ತದೆ ಎಂದು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಕಾಲೇಜು ಮಟ್ಟದಲ್ಲೇ ರಾಜಕಾರಣಿಯಾಗತೊಡಗುತ್ತಿರುವ ಮರಿ ಪುಡಾರಿಗಳು ಕೂಡ ಪ್ರತಿಭಾನ್ವಿತರ ವರ್ಗಾವಣೆಗೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗುತ್ತಿದ್ದು, ಇವರ ಕಾಟದಿಂದ ಬೇಸತ್ತ ಕೆಲವು ವಿದ್ಯಾರ್ಥಿಗಳು ತಾವಾಗಿಯೇ ಸ್ವಯಂ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದರ ಮಧ್ಯೆ, ತಮಗರಿವಿಲ್ಲದಂತೆ ಹಠಾತ್ ಆಗಿ ವರ್ಗಾವಣೆಗೊಂಡ ಕೆಲವು ವಿದ್ಯಾರ್ಥಿಗಳು ವರ್ಗ ರದ್ದು ಮಾಡಲು ಹರ ಸಾಹಸ ಮಾಡುತ್ತಿದ್ದರೆ, ಇನ್ನು ಕೆಲವರು ತಮಗೆ ಬೇಕಾದೆಡೆಗೆ ತಮ್ಮನ್ನು ವರ್ಗಾಯಿಸಲು ರಾಜಕಾರಣಿಗಳ ಪಾದಬುಡಕ್ಕೆ ಪಾದಯಾತ್ರೆ ಕೈಗೊಳ್ಳತೊಡಗಿರುವುದು ಹೊಸ ಬೆಳವಣಿಗೆ.

4 Comments

ಏನಾದ್ರೂ ಹೇಳ್ರಪಾ :-D

 1. ಕೇವಲ ಸರಕಾರಿ ಶಿಕ್ಷಕರಷ್ಟೇ ನೀರಿಲ್ಲದ ಊರಿಗೆ ಟ್ರಾನ್ಸ್ ಪರಾಗ್ತಿದ್ದರು.ಈಗ ಪಾಪ ವಿದ್ಯಾರ್ಥಿಗಳಿಗೂ ಅದೇ ಪಾಡೇ?
  ಇದರ ಬದಲು ಸಂಚಾರಿ ಗ್ರಂಥಾಲಯ, ಸಂಚಾರಿ ಅಸ್ಪತ್ರೆ ಶೈಲಿಯಲ್ಲಿ ಸಂಚಾರಿ ಕಾಲೇಜ್ ಮನೆ ಹತ್ತಿರ ಬಂದು ಹೇಳಿಕೊಡಬಾರದೇಕೆ?

  ReplyDelete
 2. ನೀರಿಲ್ಲದೇ ಇದ್ರೇನಂತೆ - ಆ ಊರುಗಳಲ್ಲಿ ಪೆಪ್ಸಿ ಕೋಲ ಸಿಗತ್ತೆ ಅಲ್ವಾ? ವರ್ಗ ರದ್ದು ಮಾಡಲು ಹರಸಾಹಸ ಮಾಡಲು ಕಷ್ಟವಾದರೆ ಹರಿ ಸಾಹಸ ಮಾಡಲಿ, ಶ್ರೀ ಹರಿಯೇ ಎಲ್ಲವನ್ನೂ ನಿವಾರಿಸುವನು.
  ಜಾರಕಾರಣಿಗಳ ಪಾದ ಬುಡಕ್ಕೆ ಪಾದಯಾತ್ರೆ ಮಾಡುವ ಬದಲು, ಅವರ ತಲೆ ಮೇಲೆ ಏರಿ ಕುಳಿತುಕೊಂಡ್ರೆ ಎಲ್ಲ ಸರಿ ಹೋಗತ್ತೆ.
  ಆಂದ ಹಾಗೆ ಈ ಸುಲಭ ಸೂತ್ರಗಳನ್ನು ಯಾರಿಗೂ ತಿಳಿಸಬೇಡಿ. ನಮ್ಮಿಬ್ಬರಲ್ಲಿಯೇ ಇರಲಿ.

  ReplyDelete
 3. ಶಿವ್ ಅವರೆ,
  ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆಗಾಗ್ಗೆ ಟ್ರಾನ್ಸ್-ಪರಾರಿಯಾಗ್ತಿರೋ ಸುದ್ದಿಗಳು ಬರುತ್ತಿರುವುದರಿಂದ ನಿಮ್ಮ ಮೊಬೈಲ್ ಕಾಲೇಜಿನ ಎಂಜಿನ್ ಅತ್ಯಂತ ವೇಗದಲ್ಲಿ ಸಂಚರಿಸಬೇಕಾಗುತ್ತದೆ.

  ReplyDelete
 4. ಶ್ರೀನಿವಾಸರೆ,
  ಜಾರಕಾರಣಿಗಳ ಮೇಲೆ ಏರಿ ಕುಳಿತುಕೊಳ್ಳುವಂತಾಗಲು ಏಣಿಗಳನ್ನು ಸಿದ್ಧಪಡಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡಿದಲ್ಲಿ ನೀವು ಕೂಡ ಜೀವನದಲ್ಲಿ ಮೇಲೇರುವುದು ಸುಲಭ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post