ಬೊಗಳೆ ರಗಳೆ

header ads

ಸೆರೆಸಿಕ್ಕಿದ್ದಕ್ಕಿಂತಲೂ ಬಿಡುಗಡೆಯಾದ ಶ್ವಾನಗಳೇ ಹೆಚ್ಚು !

(ಬೊಗಳೂರು ಬೌವೌ ಬ್ಯುರೋದಿಂದ)
ಬೊಗಳೂರು, ಮಾ.9- ಮಗುವನ್ನು ಕಚ್ಚಿಕೊಂದ ಶ್ವಾನ ಸಮುದಾಯದ ದುಷ್ಕರ್ಮಿಯೊಬ್ಬನ ಕೃತ್ಯದಿಂದಾಗಿ ಇಡೀ ಶ್ವಾನಕುಲವೇ ನಿರ್ನಾಮವಾಗುವ ಹಂತ ತಲುಪಿದ್ದು, ಶ್ವಾನ ಸಂಘಟನೆಯು ಮತ್ತೊಂದು ತುರ್ತು ಸಭೆ ಕರೆದು ಚರ್ಚಿಸಿದೆ.

ಈ ಬಾರಿ ನಿನ್ನೆಯಂತಲ್ಲ. ಅವುಗಳು ತುರ್ತು ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನೂ ಕೈಗೊಂಡಿವೆ. ಅದರ ಪ್ರಕಾರ, ಶ್ವಾನಗಳಿಗೆ ಮಂತ್ರಿಮಹೋದಯರು ಓಡಾಡುವ ವಿಧಾನಸೌಧದ ಆವರಣದಲ್ಲೇ ಪುನರ್ವಸತಿ ಕಲ್ಪಿಸಬೇಕು ಎಂಬುದೂ ಸೇರಿದೆ.
ತಮ್ಮಂತೆಯೇ ಸದನದೊಳಗೆ ಕಚ್ಚಾಡುವವರನ್ನು ನೋಡಿ ನಾವು ಕಲಿತುಕೊಳ್ಳಬೇಕಾದದ್ದು ಬಹಳಷ್ಟಿದೆ. ಇದಕ್ಕಾಗಿ ತಮಗೆ ಈ ಸ್ಥಾನವನ್ನೇ ಒದಗಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ತಮ್ಮನ್ನು ಹಿಡಿಯುವುದರ ಹಿಂದೆ ಕಳ್ಳಕಾಕರ ಕೈವಾಡವಿದೆ. ತಾವು ಮನೆಯಲ್ಲಿದ್ದರೆ ಬೊಗಳುತ್ತಾ ಕಳ್ಳರ ಕಾರ್ಯಾಚರಣೆಗೆ ತಡೆಯೊಡ್ಡುತ್ತೇವೆ ಎಂಬ ಕಾರಣಕ್ಕೆ ಈ ತಂತ್ರ ಅನುಸರಿಸಲಾಗುತ್ತಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

ಅಂತೆಯೇ, ಈ ಆಡಳಿತಕ್ಕೆ ಬುದ್ಧಿ ಬರಬೇಕಿದ್ದರೆ ಮಕ್ಕಳನ್ನು ಮನೆಯಲ್ಲಿ ಕಟ್ಟಿಹಾಕಬೇಕು, ನಾಯಿಗಳನ್ನು ಬೀದಿಯಲ್ಲಿ ಆಟವಾಡಲು ಅನುಮತಿಸಬೇಕು ಎಂಬ ಜನತೆಯ ಆಕ್ರೋಶಭರಿತ ಒತ್ತಾಯವನ್ನು ಅವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿವೆ.

ಇನ್ನೊಂದೆಡೆ, ಅಡ್ಡಾಡಿ, ಬೀಡಾಡಿ ನಾಯಿಗಳ ಜತೆಗೆ ಜೈಲು ಸೇರಿರುವ ಸಾಕುನಾಯಿಗಳು ಕೂಡ ಜೈಲಿನೊಳಗೆ ಸಭೆ ನಡೆಸಿ, ತಮಗೂ ಗುರುತಿನ ಚೀಟಿ ಬೇಕು, ಇಲ್ಲವಾದಲ್ಲಿ ಕನಿಷ್ಠಪಕ್ಷ ಬಿಳಿ ಕಾಲರ್ ಆದರೂ ಅಳವಡಿಸಬೇಕು ಎಂದು ಒತ್ತಾಯಿಸಿರುವುದಾಗಿ ಜೈಲು ಸೇರಿರುವ (ಸಂದರ್ಶನಕ್ಕಾಗಿ!!!) ನಮ್ಮ ಬ್ಯುರೋ ಸಿಬ್ಬಂದಿ ಒದರಿದ್ದಾರೆ.

ಬೊಗಳೆ ರಗಳೆ ತನಿಖೆ
ನಾಯಿ ಹಿಡಿಯಲು ತಲಾ ಶ್ವಾನವೊಂದಕ್ಕೆ 50 ರೂ. ಎಂದು ಅಧಿಕಾರಿಗಳು ಘೋಷಿಸಿದ್ದರೂ, ಹಿಡಿದ ನಾಯಿಗಳ ಸಂಖ್ಯೆಗಿಂತ ಬಿಟ್ಟ ನಾಯಿಗಳ ಸಂಖ್ಯೆಯೇ ಹೆಚ್ಚಾಗಿರುವುದು ಏಕೆ ಎಂಬ ಕುರಿತು ಬೊಗಳೆ ಬ್ಯುರೋ ತನಿಖೆ ನಡೆಸಿದಾಗ ಭಯಂಕರವಾದ ಅಸತ್ಯವೊಂದು ಬಯಲಾಗಿದೆ.

ಇದಕ್ಕೆ ಕಾರಣವೆಂದರೆ, ಹಿಡಿದ ನಾಯಿಗಳನ್ನು ಬಿಡಲು ಕೆಲವರು 25 ರೂ. ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಅದೇ ನಾಯಿಯನ್ನು ಹಲವಾರು ಬಾರಿ ಬಿಡುವುದು ಮತ್ತು ಅದನ್ನೇ ಮತ್ತೆ ಒಳಗೆ ಹಾಕುವುದು ನಡೆಯುತ್ತಾ ಇತ್ತು. ಅಂದರೆ ಒಂದು ನಾಯಿಯೇ ಮೂರ್ನಾಲ್ಕು ಬಾರಿ ಒಳಗೆ ಹೊರಗೆ ಹೋಗುವುದರಿಂದ ಆಗುವ ವ್ಯವಹಾರ ಭರ್ಜರಿಯೇ ಸಾಗಿದ್ದು, ಒಟ್ಟಿನಲ್ಲಿ ಈ ಕೋಟ್ಯಂತರ ರೂಪಾಯಿಯ ಕೊಡು-ಕೊಳ್ಳುವಿಕೆ ವ್ಯವಹಾರವು ಸೆನ್ಸೆಕ್ಸ್ ಏರಲು ಕಾರಣವಾಗಿದೆ ಎಂಬ ಕುರಿತು ತನಿಖೆ ಮಾಡಲಾಗುತ್ತಿದೆ.

ಪೊಲೀಸ್ ನಾಯಿಗಳ ಪ್ರತಿಭಟನೆ
ಈ ಮಧ್ಯೆ, ಶ್ವಾನ ನಿರ್ಮೂಲನೆ ಹೆಸರಿನಲ್ಲಿ ಉನ್ನತ ಹುದ್ದೆಯಲ್ಲಿರುವ ತಮ್ಮನ್ನೂ ನಾಯಿಗೆ ಒದ್ದಂತೆ ಒದ್ದು ಒಳಗೆ ಹಾಕುವುದರ ವಿರುದ್ಧ ಪೊಲೀಸ್ ನಾಯಿಗಳು ತಿರುಗಿಬಿದ್ದಿವೆ. ತಮ್ಮನ್ನು ಕಂಡರಾಗದವರು ನೀಡಿದ ದೂರಿನನ್ವಯ ಪೋಲಿ ನಾಯಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಶ್ವಾನದಳದ ಪೊಲೀಸ್ ನಾಯಿಗಳ ಮೇಲೇ ಅಧಿಕಾರಿಗಳು ಕೆಂಗಣ್ಣು ಹರಿಸುತ್ತಿದ್ದಾರೆ ಎಂದು ಅವು ಆರೋಪಿಸಿವೆ.
ಹಾಟ್ ಡಾಗ್
ಬಂಧಿಸಿ ಜೈಲಿಗೆ ತಳ್ಳಲ್ಪಟ್ಟ ನಾಯಿಗಳನ್ನು ಏನು ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ, ಪ್ರಾಣಿ ಪ್ರಿಯರಾದ ಮೇನಕಾ ಗಾಂಧಿ ಮತ್ತು Peta ಸಂಘಟನೆಗಳು ಆಕ್ಷೇಪಿಸದಿದ್ದರೆ ಅವುಗಳು 'ಹಾಟ್ ಡಾಗ್'ಗಳಾಗಿ ಪರಿವರ್ತನೆಗೊಳ್ಳಲಿವೆಯೇ ಎಂಬುದನ್ನು ಇದುವರೆಗೆ ಯಾರೂ ಪತ್ತೆ ಹಚ್ಚಿಲ್ಲ.

(ಕನ್ನಡ ಬ್ಲಾಗೋದುಗರಲ್ಲಿ ಮನವಿ: ಕೆಳಗಿನ ಬ್ಲಾಗಾ'ಸುರ'ರ ಪಟ್ಟಿಯಲ್ಲಿ ಇಲ್ಲದಿರುವ ಯಾವುದಾದರೂ ಕನ್ನಡ ಬ್ಲಾಗುಗಳಿದ್ದರೆ ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ. ಬ್ಲಾಗಿನ ಹೆಸರು ಹಾಗೂ url ಕೊಡಲು ಮನವಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

 1. ಎಲ್ಲ ನಾಯಿಗಳೂ ಮಕ್ಕಳನ್ನು ಕಚ್ಚಿ ಕೊಳ್ಲುವುದಿಲ್ಲ. ಕೆಲವೊಮ್ಮೆ ಅನಾಥ ಮಗುವನ್ನು ಜೋಪಾನವಾಗಿ ನೋಡಿಕೊಂಡ ಘಟನೆಯೂ ಸಂಭವಿಸುತ್ತದೆ. ಹೆಚ್ಚಿನ ವಿವರಗಳಿಗೆ ಕನ್ನಡಪ್ರಭ ಓದಿ.

  -ಪಬ್

  ಪ್ರತ್ಯುತ್ತರಅಳಿಸಿ
 2. ವರದಿಯನ್ನು ಓದುತ್ತಿದ್ದರೆ - ನಿಮ್ಮ ವರದಿಗಾರರು ಸಭೆಯಲ್ಲಿ ಪಾಲ್ಗೊಂಡಂತಿದೆ. ನಾಯಿ ಸಮುದಾಯಕ್ಕೆ ಸೇರಲು ಏನು ಮಾಡಬೇಕು ಎಂದು ಇಲ್ಲೊಬ್ಬರು ಕೇಳುತ್ತಿದ್ದಾರೆ. ಸ್ವಲ್ಪ ವಿವರಗಳನ್ನು ಕೊಡುವಿರಾ?

  ಪ್ರತ್ಯುತ್ತರಅಳಿಸಿ
 3. ಪಬ್ಬಿಗರೇ,
  ಹೌದು, ಶ್ವಾನ ಸಂಘದವರದ್ದೂ ಅದೇ ಅಳಲು. ಯಾವುದೋ ದುಷ್ಕರ್ಮಿ ನಾಯಿಯೊಂದು ಈ ರೀತಿ ಮಾಡಿ ತಮ್ಮ ಸಮುದಾಯಕ್ಕೆ ಮಸಿ ಬಳಿಯುತ್ತಿದೆ ಎಂಬ ಬೇಸರ ಅವರದು. :)

  ಪ್ರತ್ಯುತ್ತರಅಳಿಸಿ
 4. ಶ್ರೀನಿವಾಸರೆ,
  ನಮ್ಮ ಒದರಿಗಾರರಿಗೆ ಬಾಲ ಮಡಚಲು ಸ್ಥಳವಿರಲಿಲ್ಲವಂತೆ.

  ಮಾನವ ಬುದ್ಧಿ ಬಿಟ್ಟರೆ ಶ್ವಾನ ಸಮುದಾಯಕ್ಕೆ ಸೇರಿದಂತೆಯೇ!!!

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D