(ಬೊಗಳೂರು ವಿವಾಹ-ಬಂಧನ ಬ್ಯುರೋದಿಂದ)
ಬೊಗಳೂರು, ಮಾ.7- 2004ರಿಂದಲೂ ರೂಮರ್ ಮಿಲ್ ನಡೆಸುತ್ತಿದ್ದ ಜವುಳಿ ಮಿಲ್ ದೊರೆ ನರುಣ್ ಆಯರ್ ಈ ರೂಮರ್ ಮಿಲ್ ಅನ್ನು ನಿಲ್ಲಿಸಿದ್ದು, ಜವುಳಿ ಮಿಲ್ ಅನ್ನೇ ನಿಲ್ಲಿಸುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿದೆ.

ಇದಕ್ಕೆ ಕಾರಣ ಅವರು, ಕನಿಷ್ಠ ಈಜುಡುಗೆಗಳಿಂದಾಗಿಯೇ ವಿಶ್ವವಿಖ್ಯಾತಿ ಪಡೆದಿರುವ "ಜವುಳಿರಹಿತ" ಮಾಡೆಲ್ ಒಬ್ಬಾಕೆಯನ್ನು ವಿವಾಹವಾಗಿರುವುದು! ಪತ್ನಿ ಏನನ್ನೂ ತೊಡದೇ ಇದ್ದರೆ ಜವುಳಿ ಉದ್ಯಮವನ್ನೇ ನಿಲ್ಲಿಸಬೇಕಾಗುತ್ತದೆ ಎಂಬುದು ಇದರ ಹಿಂದಿರುವ ತರ್ಕವಾಗಿದೆ.

ಈ ಹಿಂದೆ ಇಟಾಲಿಯನ್ ಮಾಡೆಲ್ ಒಬ್ಬಳನ್ನು ವಿವಾಹವಾಗಿ ಆಕೆಗೆ ಬಟ್ಟೆ ತೊಡಿಸಲು ವಿಫಲವಾದ ಬಳಿಕ ನರುಣ್ ಆಯರ್, ಈ ಈಜುಡುಗೆ ಸುಂದರಿಗೆ ಬಟ್ಟೆ ತೊಡಿಸಲು ಹೊರಟಿದ್ದಾರೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.

ಅಂತೆಯೇ 13 ವರ್ಷಗಳ ಕಾಲ ಬ್ರಿಟಿಷ್ ನಟನೊಂದಿಗೆ ನಟನೆ ಜೀವನ ಸಾಗಿಸಿದ ಈ ಉಡುಗೆದ್ವೇಷಿ ಮಾಡೆಲ್, ಇದೀಗ ಉಡುಗೆ ಉದ್ಯಮಿಯ ಕೈಹಿಡಿಯಲು ಹೊರಟಿರುವುದಾಗಿ ನಮ್ಮ ಬ್ಯುರೋ ವರದಿ ಮಾಡುವುದಿಲ್ಲ.

ಈಗಾಗಲೇ ಅಂತರ್-ಖಂಡೀಯ ವಿವಾಹವಾಗಿರುವ ಜವುಳಿ ತಯಾರಿಸುವ ವರ ಮತ್ತು ಜವುಳಿ ಬೇಡವೆನ್ನುವ ವಧು ಇಬ್ಬರೂ ಮುಂಬಯಿಗೆ ಬಂದು ಭಾರತೀಯ ಸಂಪ್ರದಾಯದಲ್ಲಿ ವಿವಾಹವಾಗಿ ನೋಡಲಿದ್ದಾರೆ ಎಂದು ವರದಿಯಾಗಿದೆ.

2 Comments

ಏನಾದ್ರೂ ಹೇಳ್ರಪಾ :-D

  1. ಅನ್ವೇಷಿಗಳೇ, ಈ ಸುದ್ದಿಗೆ ಹೆಚ್ಚಿನ ಪ್ರಚಾರ ಕೊಡಬೇಡಿ. ಇದನ್ನು ನೋಡಿಕೊಂಡು ಉಳಿದ ಉದ್ಯಮಿಗಳು ಜವುಳಿ ಮಾಡುವುದನ್ನು ನಿಲ್ಲಿಸಿದರೆ ಕಷ್ಟ.

    ReplyDelete
  2. ಶ್ರೀತ್ರೀ ಅವರೆ,
    ನಾವು ಈ ಬಗ್ಗೆ ಪ್ರತಿದಿನವಲ್ಲದಿದ್ದರೂ ಆಗಾಗ್ಗೆ ಅಲ್ಲೋ ಇಲ್ಲೋ ಪ್ರಕಟಿಸುತ್ತೇವೆಯೇ ಹೊರತು, ಯಾವುದೇ ರೀತಿಯಲ್ಲಿ ಪ್ರಚಾರ ನೀಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತಿದ್ದೇವೆ.

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post