(ಬೊಗಳೂರು ಕಿರಿಕೆಟ್ಟ ಬ್ಯುರೋದಿಂದ)
ಬೊಗಳೂರು, ಮಾ.5- ವಿಶ್ವಕಪ್ ಎತ್ತಿಕೊಳ್ಳಲೆಂದು ವೆಸ್ಟಿಂಡೀಸಿಗೆ ಪ್ರಯಾಣ ಬೆಳೆಸಿರುವ ಭಾರತೀಯ ಕ್ರಿಕೆಟ್ ತಂಡದ ಕಪ್ಪು ಗೆಲ್ಲುವ ಸಾಧ್ಯತೆಗಳು ಕುಸಿದ ಸೆನ್ಸೆಕ್ಸ್‌ನಂತೆ ಇಳಿಮುಖವಾಗಿದೆ.

ಇದಕ್ಕೆ ಕಾರಣವೆಂದರೆ ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ "ಓ ಕ್ರಿಕೆಟಿಗರೇ, ಕಪ್ ಗೆಲ್ಲಲೇಬೇಕಿದ್ದರೆ ದಯವಿಟ್ಟು ಸಂಸತ್ಸದಸ್ಯರ ದುಂಡಾವರ್ತನೆಯನ್ನು ಅನುಕರಿಸಬೇಡಿ" ಎಂಬ ಹೇಳಿಕೆ ನೀಡಿರುವುದಾಗಿದೆ. ಇದಕ್ಕೂ ಕ್ರಿಕೆಟಿಗರ ಸಾಮರ್ಥ್ಯ ಪ್ರದರ್ಶನಕ್ಕೂ ಯಾವ ಬಾದರಾಯಣ ಸಂಬಂಧ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಬೊಗಳೆ ರಗಳೆ ಬ್ಯುರೋ ಸ್ಪಷ್ಟಪಡಿಸುತ್ತಿದೆ.

ಲೋಕಸಭೆಯಲ್ಲಿ ಸಂಸದರು ಮೈಕುಗಳನ್ನು, ಕಾಗದ ಪತ್ರಗಳನ್ನು ಎಸೆಯುತ್ತಾ ಯಾವ ರೀತಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಾರೆ, ಕುರ್ಚಿಗಳನ್ನು ಮೇಲಕ್ಕೆತ್ತಿ ತೂರಿ ಬಂದ ಮೈಕುಗಳನ್ನು ಸಿಕ್ಸರ್ ಗೆರೆ ದಾಟಿಸಲು ಯಾವ ರೀತಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಾರೆ ಮತ್ತು ಕೋಲಾಹಲದ ನಡುವೆಯೂ ಏಕಾಗ್ರತೆ ಸಾಧಿಸಿ ತೂರಿ ಬರುತ್ತಿರುವ ಮೈಕುಗಳನ್ನು ಕ್ಯಾಚ್ ಹಿಡಿದು, ಪ್ರತಿಪಕ್ಷಗಳ ವಿಕೆಟ್ ಇರುವತ್ತ ಹೇಗೆ ಎಸೆಯಬೇಕು ಎಂಬಿತ್ಯಾದಿಗಳು ನಡೆದ ಉದಾಹರಣೆಗಳು ಸಾಕಷ್ಟಿವೆ. ನಮ್ಮ ಕ್ರಿಕೆಟಿಗರು ಕೂಡ ಅದನ್ನು ನೋಡುತ್ತಲೇ ಬೆಳೆದಿದ್ದಾರೆ. ಅವರು ಕೂಡ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ಗೆ ಸಂಸದರು ಅನುಸರಿಸುತ್ತಿದ್ದ ಮಾರ್ಗವನ್ನೇ ಅನುಕರಿಸುತ್ತಿದ್ದರು. ಈಗ ನೋಡಿದರೆ ಸಂಸತ್ ಮುಖ್ಯಸ್ಥರು ಈ ರೀತಿ ಹೇಳುತ್ತಿದ್ದಾರೆ ಎಂದು ಕ್ರಿಕೆಟಿಗರು ಚಿಂತಾಕ್ರಾಂತರಾಗಿರುವುದಾಗಿ ತಿಳಿದುಬಂದಿದೆ.

ಇದೂ ಅಲ್ಲದೆ, ಪೂರ್ಣ ಬಹುಮತವಿಲ್ಲದೆಯೂ ಬೇರೆ ಬೇರೆ ಪಕ್ಷಗಳನ್ನು ಸೇರಿಸಿಕೊಂಡು ಎಡಪಕ್ಷಗಳ ಉರಿದಾಳಿಯ ನಡುವೆಯೂ ಸರಕಾರದ ವಿಕೆಟ್ ಕೀಪಿಂಗ್ ಮಾಡುವ ಸಂಸದರ ಕ್ರಮವೇ ತನಗೆ ಪ್ರೇರಣೆ ಎಂದು ದೋಣಿಯಲ್ಲಿ ಸಾಗುತ್ತಿರುವ ಕೀಪರ್ ಧೋನಿ ಬೊಗಳೆ ರಗಳೆ ಬ್ಯುರೋದೆದುರು ಆರ್ದ್ರ ಕಂಗಳಿಂದ ಹೇಳಿಕೊಂಡಿದ್ದಾರೆ.

ಅಂತೆಯೇ ಸರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸರಕಾರಗಳನ್ನು ಸಂವಿಧಾನದ 356ನೇ ಗೂಗ್ಲಿ ಚೆಂಡು ಎಸೆದು ಔಟ್ ಮಾಡಿಸುವ ವಿಧಾನ ತನಗೆ ಇದುವರೆಗೆ ಭಾರಿ ಪ್ರೇರಣೆ ನೀಡಿತ್ತು ಎಂದು ಖ್ಯಾತ ಸ್ಪಿನ್ನಿಗ ಅನಿಲ್ ಕುಂಬ್ಳೆ ಮತ್ತು ಹರಭಜನ್ ಸಿಂಗ್ ತಡವರಿಸುತ್ತಾ ಹೇಳಿದ್ದು, ಇನ್ನು ನಾವು ಹೇಗೆ ಗೂಗ್ಲಿ ಎಸೆತ ಪ್ರಯೋಗಿಸುವುದು ಎಂದು ತತ್ತರಿಸಿದ್ದಾರೆ.

ಆದರೆ, ಅವರ ಮಾತಿಗೆ ಬೆಲೆ ಕೊಡುವ ಸಲುವಾಗಿ, ಎದುರಾಳಿಗಳು ಸರಿಯಾಗಿ ಚೆಂಡು ಎಸೆಯಲಿಲ್ಲ, ಅಥವಾ ಆಡಳಿತ ಪಕ್ಷಗಳು ಸರಿಯಾಗಿ ಬ್ಯಾಟಿಂಗ್ ಮಾಡಿಲ್ಲ ಎಂದು ಕೂಗಾಡುತ್ತಾ ಸದನದಿಂದ ಹೊರನಡೆಯುವಂತಹ ಸಂಸದರ ಕ್ರಮವನ್ನು ತಾವೆಂದಿಗೂ ಅನುಕರಿಸುವುದಿಲ್ಲ ಎಂದು ಕ್ರಿಕೆಟಿಗರು ಪಣ ತೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

6 Comments

ಏನಾದ್ರೂ ಹೇಳ್ರಪಾ :-D

 1. ವಿಶ್ವಕಪ್ ಬೇಕಿದ್ರೆ ಆಟ ಆಡ್ಬೇಕಾ? ಯಾರಿಗೂ ತಿಳಿಯದಂತೆ, ಮೈಯಲ್ಲಿ ಸ್ವಲ್ಪವೂ ಬೆವರು ಸುರಿಸದಂತೆ ವಿಶ್ವ ಕಪ್ ಎತ್ತಿಕೊಂಡು ಬರುವ ಚಾಣಾಕ್ಷತೆಯನ್ನು ನಮ್ಮ ಬ್ಯೂರೋದವರು ಹೇಳಿಕೊಡುತ್ತಾರೆ. ಇಷ್ಟಕ್ಕೆಲ್ಲಾ ದೊಡ್ಡ ರಗಳೆ ಮಾಡೋದು ಯಾಕೆ? ಛೇ! ಈ ಜನಗಳಿಗೆ ಬುದ್ಧಿ ಬರೋದೇ ಇಲ್ಲ ಅನ್ಸತ್ತೆ.

  ReplyDelete
 2. ಕ್ರಿಕೆಟ್ ಬೋರ್

  ReplyDelete
 3. ಶ್ರೀನಿವಾಸರೆ,
  ನೀವು ಈ ವಿಷಯವನ್ನು ಬೊಗಳೆ ರಗಳೆಯಲ್ಲಿ ಬೊಗಳೆ ಬಿಡಬಾರದಿತ್ತು.... ಇನ್ನು ವಿಶ್ವದ ಎಲ್ಲಾ ತಂಡಗಳು ಕೂಡ ನಿಮ್ಮ ವಿಳಾಸ ಕೇಳಿದ್ರೆ ನಾವೇನು ಮಾಡೋದು...???

  ReplyDelete
 4. ಅನಾನಿಮಸ್ಗಿರಿಯವರೆ,
  ಕೆಲವರಿಗೆ ಅದು well ಆಟ
  ನಿಮಗೆ ಮಾತ್ರ ಬೋರ್ ಆಟ
  ಹಾಗಾಗಿ ಬೋರ್ ವೆಲ್ ಕಂಪನಿಗಳಿಗೆ ಸುಗ್ಗಿ.

  ReplyDelete
 5. ನಿಮ್ಮ ಬ್ಯುರೋದವರು ವರದಿ ಮಾಡಿಕೊಂಡು ಪಲಾಯನ ಮಾಡಿದ ನಂತರ ಪ್ರವೇಶಿಸಿದ ನಮ್ಮವರಿಗೆ ಸಿಕ್ಕ ಸ್ಪೋಟಕ ಮಾಹಿತಿಯ ಪ್ರಕಾರ ದೇಶದ ಸಮಸ್ತ ಮಂತ್ರಿ ಮಹೋದಯರು ಕ್ರಿಕೆಟ್ಟಿಗರು ನಮ್ಮಿಂದ ಪ್ರೇರಣೆ ತೆಗೆದುಕೊಂಡಂತೆ ನಾವೂ ಅವರಿಂದ ಪ್ರೇರಣೆ ತೆಗೆದುಕೊಳ್ಳ ಬೇಕು. ವಿದೇಶಿ ಜಾಹೀರಾತುಗಳಿಂದ ಕೋಟ್ಯಂತರ ರೂಪಾಯಿ ಪಡೆಯ ಬೇಕು. ಆಗ ಲಂಚ ತಿನ್ನುವ ಶ್ರಮ ಸ್ವಲ್ಪ ಕಡಿಮೆಯಾಗುತ್ತದೆ ಎಂಬುದಾಗಿ ತೀರ್ಮಾನಿಸಿದ್ದಾರೆ. ಹಾಗೆಯೇ ಆಟಕ್ಕೂ ಮುನ್ನವೇ ಫಲಿತಾಂಶ ತಿಳಿಸಿ ಬಿಡುವ `ಮ್ಯಾಚ್ ಫಿಕ್ಸಿಂಗ್'ಎಂಬ ಮಾಂತ್ರಿಕ ಕಲೆಯನ್ನು ಪ್ರೋತ್ಸಾಹಿಸಲು ಮುಂದಿನ ಬಜೆಟ್‍ನಲ್ಲಿ ಅನುದಾನ ನೀಡಲಾಗುವುದು ಎಂದು ಪೀಚಿ ದಂಬರಂ ಘೋಷಿಸಿದ್ದಾರೆ.

  ReplyDelete
 6. ಸುಪ್ರೀತರೆ,
  ನಿಮ್ಮವರಿಗೆ ಸಿಕ್ಕ ಸ್ಫೋಟಕವನ್ನು ಎತ್ತ ಎಸೆದಿದ್ದಾರೆ ಎಂಬುದನ್ನು ಸ್ವಲ್ಪ ವಿಚಾರಿಸಿ ನೋಡಿ.

  ಮ್ಯಾಚ್ ಫಿಕ್ಸಿಂಗನ್ನು "ಪ್ರಶ್ನೆಗಾಗಿ ಲಂಚ"ದ ಮೂಲಕ ಅವರು ಕೂಡ ಅನುಸರಿಸುತ್ತಿದ್ದಾರೆ.

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post