(ಬೊಗಳೂರು ಸ್ಪಷ್ಟನೆ ಬ್ಯುರೋದಿಂದ)
ಬೊಗಳೂರು, ಫೆ.21- ನಮ್ಮ ನಿನ್ನೆಯ ಈ ಸುದ್ದಿಗೆ ತೀವ್ರವಾಗಿ ಪ್ರತಿಕ್ರಿಯಿಸುವ ಧಾರಾವಾಹಿ ನಿರ್ದೇಶಕರು, ಕನಿಷ್ಠ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು ಎಂಬುದನ್ನು ಸಂಶೋಧಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಾನೆಲ್ ಮಾಲಿಕರ ಸ್ಪಷ್ಟನೆ
ಇನ್ನೊಂದೆಡೆಯಿಂದ ಚಾನೆಲ್ ಮಾಲೀಕರು ಸ್ಪಷ್ಟನೆ ನೀಡಿ, ಜಾಹೀರಾತುಗಳ ನಡುನಡುವೆ ಧಾರಾವಾಹಿಗಳನ್ನು ಪ್ರದರ್ಶಿಸಲು ತಾವು ಎಷ್ಟು ಕಷ್ಟಪಡುತ್ತಿದ್ದೇವೆ ಎಂಬುದು ನಮಗೇ ಗೊತ್ತು. ವೀಕ್ಷಕರಿಗೆ ಅರ್ಧ ಗಂಟೆಯ ಅವಧಿಯಲ್ಲಿ ಕನಿಷ್ಠ 5-10 ನಿಮಿಷವಾದರೂ ಧಾರಾವಾಹಿ ತೋರಿಸಬೇಕೆಂಬುದು ನಮ್ಮ ಪ್ರಬಲ ಇಚ್ಛೆ ಎಂದು ಹೇಳಿದ್ದಾರೆ.
ಸಂಘೀಥ ಣಿರ್ಧೇಷಖರ ಸ್ಪಷ್ಟನೆ
ಧಾರಾವಾಹಿಗಳ ಮಧ್ಯೆ ಮಧ್ಯೆ ಝಾಂಯ್.... ಠೈಂಯಯಯ್... ಧಡ್... ಧಢಾರ್... ಲಬ್---ಡಬ್... ಎಂಬಿತ್ಯಾದಿ ಖರ್ಣ ಖಠೋರ ಸಂಗೀತವನ್ನು ಅಳವಡಿಸದಿದ್ದರೆ ಪ್ರೇಕ್ಷಕರೆಲ್ಲಿ ನಿದ್ದೆ ಹೋಗಿ ಅಮೂಲ್ಯವಾದ ಸಂಭಾಷಣೆಯೊಂದನ್ನು ಕಳೆದುಕೊಳ್ಳುತ್ತಾರೋ ಎಂಬುದು ನಮಗೆ ಭಯ. ಅದಕ್ಕಾಗಿ ಈ ರೀತಿ ಕಿವಿಗಡಚಿಕ್ಕುವ ಮೆಲುದನಿಯ ಸಂಗೀತವನ್ನು ಅಳವಡಿಸುತ್ತಿದ್ದೇವೆ ಎಂದು ಸಂಗೀತ ನಿರ್ದೇಶಕರು ಸ್ಪಷ್ಟಿಸಿದ್ದಾರೆ.
ಓಹ್! ನಿನ್ನೆ ರಾತ್ರಿ ಪೂರ್ತಿ ನಮ್ಮ ಮನೆಯ ಪಕ್ಕದಲ್ಲಿ ಗಲಾಟೆಯೋ ಗಲಾಟೆ. ಇದೇ ಕಾರಣಾನಾ?
ReplyDeleteನಮ್ಮ ಮನೆಯ ಪಕ್ಕದಲ್ಲಿರುವವರು ಯಾವುದೋ ಡೋರ್‍ದರ್ಶನಕ್ಕೆ ಸಂಗೀತ ನೀಡುತಾರಂತೆ. ಬಹುಶಃ ಸಂಗೀತ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಅಭ್ಯಾಸ ನಡೆಸುತ್ತಿದ್ದಿರಬೇಕು (ಅಥವಾ ಧಾರಾವಾಹಿ).
ಸಾವಿನ ಸರದಾರ ಮನೆ ಎದುರು ಚೇರ್ ಹಾಕಿ ಕುಳಿತುಕೊಂಡು ಕಾಲಿಂಗ್ ಬೆಲ್ ಒತ್ತಿ ಕರೆದರೂ, `ಧಾರಾ'ವಾಹಿ ಮುಗಿದ ಮೇಲೆ ಬರುತ್ತೀನಿ ಎನ್ನುವ ಮುದುಕಿಯರ ಸಂಖ್ಯೆ ಹೆಚ್ಚಾಗಿ ಯಮರಾಜನಿಗೆ ತುಂಬಾ ಕಿರಿಕಿರಿಯುಂಟಾಗುತ್ತಿರುವುದಾಗಿ `ಹುದಯ' ವಾರ್ತೆಯವರು ವರದಿ ಮಾಡಿದ್ದು. ನಮ್ಮ ಮಚ್ಚಿನ ನಿರ್ದೇಶಕ ಎನ್. ಸಾರಾಯಣ್‍ರವರು ಯಮರಾಜನಿಗಾಗಿ ಅಂತಲೇ ಒಂದು ಮೆ.....ಗಾ.... ಸೀರಿಯಲ್ ಮಾಡುವುದಾಗಿ ಘೋಷಿಸಿದ್ದಾರೆ.
ReplyDeleteಶ್ರೀನಿವಾಸರೆ,
ReplyDeleteಪಾತ್ರೆ ಪಗಡೆ ಎಲ್ಲವನ್ನೂ ಕುಕ್ಕಿ ಕುಕ್ಕಿ ಇಟ್ಟ ಅನುಭವವಾಗಿತ್ತೇ? ಮತ್ತೊಮ್ಮೆ ಶೋಧಿಸಿ ನೋಡಿ.
ಸುಪ್ರೀತರೆ,
ReplyDeleteಅನಿರ್ದೇಶಕರು ಮೆ... ಮಾತ್ರ ಹೇಳಿದ್ದಾರೆ. ಗಾ... ಎಂಬ ಅಕ್ಷರ ಬಹುಶಃ ಮುಂದಿನ ವರ್ಷವೇ ಇಲ್ಲಿಗೆ ತಲುಪುವ ನಿರೀಕ್ಷೆ ಇದೆ. ಅಷ್ಟು ಉದ್ದದ ಸೀರಿಯಲ್ ಕಿಲ್ಲಿಂಗ್ ಅಂತೆ!!!
ಅನ್ವೇಶಿಗಳೇ, ವೀಕ್ಷಕರಿಗೆ ಅರ್ಧ ಗಂಟೆಯ ಅವಧಿಯಲ್ಲಿ ಕನಿಷ್ಠ 5-10 ನಿಮಿಷವಾದರೂ ಧಾರಾವಾಹಿ ತೋರಿಸಬೇಕೆಂಬ ಪ್ರಬಲ ಇಚ್ಛೆ ನಿರ್ದೇಶಕರಿಗಿದ್ದರೂ, ಒಂದೊಂದು ಸಂಭಾಷಣೆ ಮುಗಿದ ನಂತರ , ಪಾತ್ರಧಾರಿಗಳ ಮುಖಭಾವವನ್ನು ಕರ್ಣ ಕಠೋರ ಸಂಗೀತದೊಡನೆ ತೋರಿಸಲು ಮತ್ತೂ ೨-೩ ನಿಮಿಷಗಳು ಬೇಕಾಗುವುದರಿಂದ ಅವರು ಅಸಹಾಯಕರಾಗಿದ್ದಾರೆಂದು ತಿಳಿದು ಬಂದಿದೆ.
ReplyDeleteಶ್ರೀತ್ರೀ ಅವರೆ,
ReplyDeleteಹೇಗಾದರೂ ಕರ್ಣಕಠೋರ ಸಂಗೀತವನ್ನು ತೂರಿಸಬೇಕೆಂದು ಪಣತೊಟ್ಟಿರುವ ನಿರ್ದೇಶಕರು, ಕೇಳಲು ಸಾಧ್ಯವಿರುವ ಮಾದರಿಯಲ್ಲಿರುವ ಜಾಹೀರಾತುಗಳ ಸಂಗೀತದ ಮಧ್ಯೆಯೇ ಅದನ್ನು ಸೇರಿಸಲು ನಿರ್ಧರಿಸಿರುವುದರಿಂದ ಈಗಾಗಲೇ ಕಿವಿ ಒಡೆದುಕೊಂಡಿರುವ ವೀಕ್ಷಕರ ಹೃದಯ ಒಡೆಯಲೂ ಸಿದ್ಧತೆ ನಡೆದಿದೆಯಂತೆ.
ಈ ಸುದ್ದಿ ಕರ್ಣ ವಿದ್ರಾವಕವಾಗಿದೆ
ReplyDeleteಜಗಲಿ ಭಾಗವತರೆ,
ReplyDeleteಧಾರಾವಾಹಿ ಸುದ್ದಿಗಳು ಚೂಯಿಂಗ್ ಗಮ್ ನಂತಿರುವುದರಿಂದ ಬಾಯಿ ವಿದ್ರಾವಕವೂ, ಹಲ್ಲು ವಿದ್ರಾವಕವೂ ಜತೆಗೆ ಮನಸು ವಿದ್ರಾವಕವೂ ಆಗಿದೆ.
Post a Comment
ಏನಾದ್ರೂ ಹೇಳ್ರಪಾ :-D