ಬೊಗಳೆ ರಗಳೆ

header ads

ಸಾಮಾನ್ಯ ಪ್ರಜೆ, ಊರಿಗೇ ಅರಸನಾದಾಗ!

(ಬೊಗಳೂರು ಜನಸಂಖ್ಯಾ ಸ್ಫೋಟಕ ಬ್ಯುರೋದಿಂದ)
ಬೊಗಳೂರು, ಜ.7- ವಸುಧೈವ ಕುಟುಂಬಕಂ ಎಂಬ ತತ್ವ ಪಾಲನೆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿರುವ ಮಿಜೋರಾಂನ ಮಹಾಶಯನೊಬ್ಬ ಸದ್ಯಕ್ಕೆ ಹಳ್ಳಿಯೇ ತನ್ನ ಕುಟುಂಬ ಎಂದು ಸಾಧಿಸಿತೋರಿಸುವಲ್ಲಿ ಸಫಲನಾಗಿರುವ ಅಂಶ ಇಲ್ಲಿ ಬಯಲಾಗಿದೆ.
 
ಆದರೆ ಇದರ ಹಿಂದಿನ ನೈಜತೆ ಅರಿಯಲು ತೆರಳಿದಾಗ ಸಿಕ್ಕಿದ ಅಸತ್ಯ ಬೇರೆಯೇ ಆಗಿತ್ತು. ಜಿಯೋನಾ ಎಂಬ ಈ ಮಹಾಶಯನಿಗೆ ರಾಜ ಅಥವಾ ಒಬ್ಬ ಆಡಳಿತಗಾರ ಅನ್ನಿಸಿಕೊಳ್ಳುವ ಹುಚ್ಚು. ಬೇರೆಯವರು ಯಾರು ಕೂಡ ಆತನ ನಾಯಕತ್ವ ಸ್ವೀಕರಿಸುತ್ತಿರಲಿಲ್ಲ. ಇದಕ್ಕಾಗಿ ತನ್ನ ಹಿಂಬಾಲಕರನ್ನು ತಾನೇ ಸೃಷ್ಟಿಸಿಕೊಂಡರೆ ಆಟೋಮ್ಯಾಟಿಕ್ ಆಗಿ ನಾಯಕನಾಗಬಹುದು ಎಂದು ಚಿಂತಿಸಿದವನೇ... ವಿವಾಹಾಂದೋಲನಕ್ಕೆ ಕಾಲಿಟ್ಟ. ಸಾಲು ಸಾಲು ಮದುವೆಯಾದ. ಪತ್ನಿಯರ ಸಂಖ್ಯೆಯೇ ಲೆಕ್ಕಕ್ಕೆ ಸಿಗದಷ್ಟಿತ್ತು.
 
ಆದರೆ ಇತ್ತೀಚೆಗೆ ಬಹಳ ಕಷ್ಟಪಟ್ಟು ಮಕ್ಕಳ ಸಂಖ್ಯೆಯನ್ನು ಎಣಿಸಲಾಗಿದೆ. 109 ಮಕ್ಕಳು ಇದುವರೆಗೆ ಪತ್ತೆಯಾಗಿದ್ದಾರಾದರೂ ಇದು ಕೂಡ ಖಚಿತ ಸಂಖ್ಯೆ ಆಗಿರುವ ಸಾಧ್ಯತೆಗಳಿಲ್ಲ. ಯಾಕೆಂದರೆ ಮಕ್ಕಳನ್ನು ಲೆಕ್ಕ ಹಾಕುವಾಗ ಕೆಲವು ಬಚ್ಚಲಕೋಣೆಯಲ್ಲೋ, ಕೆಲವು ಮಕ್ಕಳು ಟಾಯ್ಲೆಟ್‌ನಲ್ಲೋ ತಮ್ಮ ತಮ್ಮ ಕೆಲಸದಲ್ಲಿ ನಿರತವಾಗಿದ್ದವು. ಆ ಕೊಠಡಿಯಿಂದ ಹೊರ ಬಂದಾಗ ಮತ್ತೊಂದು ಮಗು ಅದರೊಳಗೆ ಹೋಗುತ್ತಿತ್ತು. ಹೀಗಾಗಿ ಈ ಸಂಖ್ಯೆಯ ಖಚಿತತೆ ತಿಳಿದುಕೊಳ್ಳುವುದು ಸಾಧ್ಯವಾಗಲಿಲ್ಲ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ಹಳ್ಳಿಯ ಮಾಜಿ ನಿವಾಸಿಗಳು, ಈ ಭೂಪ ತನ್ನ ಕುಟುಂಬದ ಜನಸಂಖ್ಯೆ ಹೆಚ್ಚಿಸಿ ತಮ್ಮನ್ನು ಈ ಹಳ್ಳಿಯಿಂದ ಹೊರದಬ್ಬಿ ಹಳ್ಳಿಯ ಮೇಲೆ ಪ್ರಭುತ್ವ ಸಾಧಿಸಲು ಸಂಚು ಹೂಡಿದ್ದಾನೆ ಎಂದು ಆರೋಪಿಸಿದ್ದಾರೆ.
 
ಮತ್ತಷ್ಟು ವಿವರವಾದ ತನಿಖೆ ನಡೆಸಿದಾಗ, ಈ ಬಹುಪತ್ನೀವಲ್ಲಭನದು ಗಿನ್ನೆಸ್ ದಾಖಲೆಗೂ ನಿಲುಕದ ದಾಖಲೆ ಎಂಬುದು ತಿಳಿದುಬಂತು. ಗಿನ್ನೆಸ್ ತಂಡದವರು ಅಲ್ಲಿ ತೆರಳಿದರೂ ಅವರಿಗೆ ತಮ್ಮ ಪುಸ್ತಕದಲ್ಲಿ ಈ ದಾಖಲೆ ದಾಖಲಿಸಲು ಸಾಧ್ಯವಾಗಿರಲಿಲ್ಲ.
 
ಇದೀಗ ಈ ಬಪವ (ಬಹುಪತ್ನಿವಲ್ಲಭ) ತನ್ನದೇ ಮನೆಯಾಗಿಬಿಟ್ಟಿರುವ ಊರಿನಲ್ಲಿ ತನ್ನ ಮಕ್ಕಳನ್ನು ಸಾಕಲು ಒಂದು ಪಾಕಶಾಲೆ ಮತ್ತು ಮಕ್ಕಳಿಗೆ ಬುದ್ಧಿ ಕಲಿಸಲು ಒಂದು ಪಾಠ ಶಾಲೆ ತೆರೆಯುವ ಯೋಜನೆ ಹಾಕಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಪಾಪ ಆ ಪುಣ್ಯಾತ್ಮನಿಗೆ ಈ ಯೋಜನೆ ಬಗ್ಗೆ ಯಾರಾದರೂ ತಿಳಿಸಿ

  ಪ್ರತ್ಯುತ್ತರಅಳಿಸಿ
 2. ಅಸತ್ಯಿಗಳೇ,

  ಇಂತಹ ಇನ್ನೂ ಅನೇಕರಿದ್ದಾರೆ ನಮ್ಮ ಜಗತ್ತು ಒಂದು ಸುಖಿ ಸಂಸಾರ ಆಗೋದರಲ್ಲಿ ಸಂಶಯವೇ ಇಲ್ಲಾ..

  ನಮ್ಮ ಶ್ರೀಯುತ ಲಾ.ಪ್ರ.ಯಾ ಅವರು ಸಹ ಅದೇ ರೀತಿ ಒಂದು ಪ್ರಯತ್ನ ಮಾಡಿ ತಮ್ಮದೇ ಒಂದು ಚಿಕ್ಕ ಪಕ್ಷ ಕಟ್ಟಿಕೊಳ್ಳುವಷ್ಟು ಮಕ್ಕಳ ಸೈನ್ಯ ಮಾಡಿರಲಿಲ್ಲವೇ?

  ಪ್ರತ್ಯುತ್ತರಅಳಿಸಿ
 3. ಬಹುಬೇಗ ಮಕ್ಕಳ್‍ಅನ್ನು ನೋಡಲು ಬಂದ ನಿಮಗೆ ಸ್ವಾಗತ

  ಪ್ರತ್ಯುತ್ತರಅಳಿಸಿ
 4. ಕೇಸರಿ ಅವರೆ,
  ನಿಮ್ಮ ಯೋಜನೆಯನ್ನು ತಿಳಿಸಿದರೂ ಆತ ಕಿವಿಗೊಡುವ ಸ್ಥಿತಿಯಲ್ಲಿಲ್ಲ. ಯಾಕೆಂದರೆ ಆತನಿಗೆ ಮನೆಯಲ್ಲಿನ ಗಲಾಟೆಯಿಂದಾಗಿ ಯಾರು ಏನು ಹೇಳುತ್ತಿದ್ದಾರೆಂಬುದೇ ಕೇಳಿಸುತ್ತಿಲ್ಲ. !!!!

  ಪ್ರತ್ಯುತ್ತರಅಳಿಸಿ
 5. ಶಿವ್ ಅವರೆ,
  ಲಾಲು ಅವರ ಮಕ್ಕಳು ಕೂಡ ಮಕ್ಕಳನ್ನು ಮಾಡುವ ನಿಟ್ಟಿನಲ್ಲಿ ಒಂದು ಹೆಜ್ಜೆಯಿರಿಸಿ ಒಂದು ಪ್ರಾಣವೇ ಹೋಗಿದೆ ಅಂತಾನೂ ವರದಿಗಳು ಬರುತ್ತಿವೆ.

  ಪ್ರತ್ಯುತ್ತರಅಳಿಸಿ
 6. ಮಾವಿನರಸರೆ,
  ಪಾಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ)ಯ ರಾಮದಾಸ್ ಅವರು ಮಕ್ಕಳನ್ನು ಕಚ್ಚಲೆಂದು ಅಲ್ಲಿಗೇ ಹೋಗುತ್ತಿದ್ದಾರಂತೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D