(ಬೊಗಳೂರು ಅವಸರ-ಯುಗ ಬ್ಯುರೋದಿಂದ)
ಬೊಗಳೂರು, ಡಿ.22- ಅತ್ಯಾಧುನಿಕ ಯುಗದ ಅತ್ಯಾಧುನಿಕ ತಂತ್ರಜ್ಞಾನದ ಪರಿಣಾಮಗಳು ಮತ್ತು ಕೆಲಸದೊತ್ತಡಗಳು ಎಂಥೆಂತಹ ಕೆಲಸ ಮಾಡಿಸುತ್ತವೆ ಎಂಬುದಕ್ಕೆ ಹೊಸದೊಂದು ಉದಾಹರಣೆ ಇಲ್ಲಿ ಲಭ್ಯವಾಗಿದೆ.
 
ಬೆಳಗ್ಗೆ ಎದ್ದು ಕಚೇರಿಗೆ ಓಡಿ ಕಂಪ್ಯೂಟರ್ ಕೀಲಿಗಳೊಂದಿಗೆ ಕಟಕಟ ಸದ್ದಿನ ಆಟವಾಡಿ ತಡರಾತ್ರಿ ಮನೆಗೆ ಮರಳಿ ಬಿದ್ದ ತಕ್ಷಣ ನಿದ್ದೆ ಹೋಗುವ ಜಗತ್ತು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಶೋಧನೆ ಕೈಗೊಳ್ಳಲಾಗಿದೆ.
 
ಯಾವುದೇ ಡಾಟ್ ಕಾಮ್ ಎಂಬ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಇತ್ತೀಚೆಗೆ ಕಂಪನಿಯ ಹೆಸರಿನೊಂದಿಗೆ ಥಳುಕು ಹಾಕಿಕೊಂಡಿರುವ ಪ್ರೈವೇಟ್ ಮತ್ತು ಲಿಮಿಟೆಡ್ ಎಂಬ ಪದಗಳಿಗೆ ಅರ್ಥವನ್ನೂ ಕಂಡುಕೊಂಡಿದ್ದಾರೆ.
 
ಯಾವುದೇ ಲಾಭಗಳೆಲ್ಲಾ ಈ ಕಂಪನಿಯ ಪ್ರೈವೇಟ್ ಆಗಿದ್ದು, ಸಿಬ್ಬಂದಿಗಳ ಸಂಖ್ಯೆ ಮಾತ್ರ ಲಿಮಿಟೆಡ್ ಆಗಿರುತ್ತದೆ ಎಂಬ ವ್ಯಾಖ್ಯಾನ ದೊರೆತಿರುವ ಈ ಸಮಯದಲ್ಲಿ, ಕೆಲಸದಲ್ಲಿ ನಿರತರಾದವರಿಗೆ ಮದುವೆಯಾಗಲು, ಹನಿಮೂನ್‌ಗೆ ತೆರಳಲು ಪುರುಸೊತ್ತು ಎಂಬುದು ಪರರ ಸೊತ್ತಾಗಿಬಿಟ್ಟಿದೆ.
 
ಈ ಕಾರಣಕ್ಕಾಗಿಯೇ ಕಾಲ್ಪನಿಕ ಮದುವೆ, ಕಾಲ್ಪನಿಕ ಹನಿಮೂನ್ ಎಲ್ಲವನ್ನೂ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಹಿಂದಿನ ಕಾಲದಲ್ಲಿ ಸಾಂಸಾರಿಕ ಜಗತ್ತಿನ ಕಷ್ಟ ಕೋಟಲೆಗಳಿಂದ ನೊಂದವರು ತಪಸ್ಸು ಮಾಡಲು, ಮನಶ್ಶಾಂತಿ ಅರಸಿ ಕಾಡಿಗೆ ಹೋಗುತ್ತಾರೆ, ಆದರೆ ಈಗಿನದು ಅತ್ಯಾಧುನಿಕ ತಂತ್ರಜ್ಞಾನದ ಯುಗವಾದ್ದರಿಂದ ಅಂಥವರೆಲ್ಲಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಕಂಪ್ಯೂಟರ್ ಎದುರು ತಪಸ್ಸು ಮಾಡುತ್ತಿರುತ್ತಾರೆ ಎಂಬ ವಾದಕ್ಕೆ ಪುಷ್ಟಿ ದೊರೆಯುವ ಯತ್ನವಾಗಿ ಈ ಕಾಲ್ಪನಿಕ ವಿವಾಹ, ಕಾಲ್ಪನಿಕ ಹನಿಮೂನ್ ಇತ್ಯಾದಿ ಏರ್ಪಡಿಸಲಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ಕ್ಯಾತೆ ತೆಗೆದಿದೆ.

4 Comments

ಏನಾದ್ರೂ ಹೇಳ್ರಪಾ :-D

 1. ಅಸತ್ಯಿಗಳೇ !

  Busy-ness,private & limited ಅಂತಾ ಹೊರಗೆ ಬೋರ್ಡ್ ಹಾಕೊಂಡು ಒಳಗೆ ಮಾತ್ರ ಹನಿಮೂನ್ ಅದು ಇದು ಅಂತಾ ಹೇಳೋದಾ ?

  ಇದು ಒಳ್ಳೆ ಹೊರಗೆ ಯಾವುದೋ 'ಒಳ್ಳೆ' ಚಲನಚಿತ್ರದ ಪೋಸ್ಟರ್ ಅಂಟಿಸಿ, ಥಿಯಟರ್‍ನಲ್ಲಿ ಇನ್ನೂ 'ಒಳ್ಳೆ' ಚಲನಚಿತ್ರ ತೋರಿಸಿದಂಗೆ ಇದೆ :)

  ಇರಲಿ..ವರ್ಚೂಲ್ ಹನಿಮೂನ್ ತರ ವರ್ಚ್ಯೂಲ್ ಮಕ್ಕಳು, ಕುಟುಂಬ ಇಲ್ಲಾ ಇರುತ್ತಾ?

  ReplyDelete
 2. ಅತ್ಯಾಧುನಿಕ ಯುಗ, ಅತ್ಯಾಧುನಿಕ ತಂತ್ರಜ್ಞಾನ, ಹೊಸ ಉದಾಹರಣೆ - ಅಂದ್ರೆ ಈ ಒತ್ತಡವೂ ಅತ್ಯಾಧುನಿಕ. ಈ ಮೊದಲು ಎಲ್ಲೂ ಕಂಡುಬಂದಿರಲಿಲ್ಲವೇ? ಇದನ್ನು ಕಂಡುಹಿಡಿದವರು ಯಾರು? ಅವರನ್ನು ನೊಬೆಲ್ ಪುರಸ್ಕಾರಕ್ಕೆ ನಾಮಾಂಕಿತ ಮಾಡಬಹುದೇ?

  ಡಾಟ್‍ಕಾಮ್ ಪ್ರೈವೇಟ್ ಕಂಪೆನಿ ಅಂದ್ರೆ ಏನೋ ವಿಶೇಷ ಅಂತ ಗೊತ್ತಿತ್ತು, ಆದರೆ ಪರರಿಗೆ ಹನಿಮೂನ್ ತೆರಳುವ ಅವಕಾಶ ಎಂದು ತಿಳಿದಿರಲಿಲ್ಲ. ನೀವೀಗ ಹನಿಮೂನಿನಲ್ಲಿದ್ದೀರಾ? ಅಥವಾ ಡಾಟ್‍ಕಾಮ್ ಪ್ರೈವೇಟ್ ಕಂಪೆನಿಯಲ್ಲಿದ್ದೀರಾ?

  ಕಾಲ್ಪನಿಕ ವಿವಾಹ, ಕಾಲ್ಪನಿಕ ಹನಿಮೂನ್ - ಕಾಲ್ಪನಿಕ ಬರಹ - ಬೊಗಳೆ - ಎಲ್ಲಾ ಸೂಪರ್!

  ReplyDelete
 3. ಶಿವ್ ಅವರೆ,
  ನೀವು ಕೊಟ್ಟ ಹೋಲಿಕೆ ನೋಡಿ ನಿಮ್ಮ ರಸಭಂಗದ ಅನುಭವ ಎಷ್ಟರಮಟ್ಟಿಗಿತ್ತು ಎಂಬುದು ತಿಳಿಯಿತು. :)

  ಪ್ರೈವೇಟ್ ಮತ್ತು ಲಿಮಿಟೆಡ್ ಇರೋ ಕಾರಣದಿಂದ್ಲೇ busyನೆಸ್ ಆಗೋದು.

  ಹಾಗಾಗಿಯೇ ವರ್ಚುಯಲ್ ಹನಿಮೂನ್, ವರ್ಚುಯಲ್ ಮಕ್ಕಳು, ಮತ್ತು ಇನ್ನೂ ಏನೇನೋ ವರ್ಚುವಲ್ ಆಗಿರುತ್ವೆ. ಆದರೆ ವೇತನ ಮಾತ್ರ ವರ್ಚುವಲ್ ಇರೋದಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ.

  ReplyDelete
 4. ಶ್ರೀನಿವಾಸರೆ,
  ಕೆಲಸಗಾರರು ಅಂದ್ಕೊಳೋದು ಅತ್ಯಾಧುನಿಕ ಒತ್ತಡ ಬರೋದು ಮನುಷ್ಯರಿಗೆ ಮಾತ್ರವೇ ಅಂತ.

  ಆದರೆ ಕೆಲಸದಾತರು ಕೇಳೋದು, "ಮನುಷ್ಯರು ಕೆಲಸ ಮಾಡ್ತಾರೆ, ಅವರಿಗೇಕೆ ಬಿಡುವು?" ಎಂಬುದಾಗಿ.

  ಹಾಗಾಗಿ ಕೆಲಸದಾತರಿಗೆ ಇಲ್ಲದ ಗಂಟೆ (No-Bell) ಪ್ರಶಸ್ತಿ ಕೊಡಬಹುದು.

  ಇಲ್ಲೀಗ ಮೂನ್ ಮಾತ್ರವೇ ಇದೆ. ಹನಿ ಇಲ್ಲ.!!!!

  ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post