ಬೊಗಳೆ ರಗಳೆ

header ads

ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

(ಬೊಗಳೂರು ಪೂರ್ವಜನ್ಮ ಬ್ಯುರೋದಿಂದ)
ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು.
 
ನೂರಾರು ವರ್ಷಗಳ ಹಿಂದೆ ಅರಣ್ಯ ನಾಶಪಡಿಸಿದ ಪ್ರಕರಣದ ಕುರಿತು ಅಂದೇ ತನಿಖೆ ಆರಂಭಿಸಿದ ಪೊಲೀಸರು ಶತಮಾನಗಳ ಶೋಧನೆಯ ಬಳಿಕ ಕೇಸು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಗು ಆಟವಾಡಲು ಕೋರ್ಟಿಗೆ ಬರಬೇಕಾಯಿತು.
 
ಅವರು ಕೊನೆಗೂ ಡಿಎನ್ಎ ಪರೀಕ್ಷೆ ಎಲ್ಲವನ್ನೂ ಕೈಗೊಂಡು ಒಂದು ಮಗುವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖವುಳಿಸಿಕೊಳ್ಳುವ ನಿಟ್ಟಿನಲ್ಲಿ, ಈ ಹುಡುಗ 14 ತಿಂಗಳಿನವನಾಗಿದ್ದಾಗ ಅರಣ್ಯ ನಾಶ ಮಾಡಿದ್ದಾನೆ ಎಂದು ಎಫ್ಐಆರ್‌ನಲ್ಲಿ ಹೇಳುತ್ತಿದ್ದಾರೆ.
 
ಆದರೆ ನಿಜಕ್ಕೂ ಅವರಿಗೆ ಪುರಾತನ ಕೇಸೊಂದನ್ನು ಭೇದಿಸಿ ಕೈತೊಳೆದುಕೊಳ್ಳಬೇಕಾಗಿತ್ತು ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.
 
541 ಸಸ್ಯರಾಶಿಯನ್ನು ಈ ಪುಟ್ಟಹುಡುಗ ನಾಶಪಡಿಸಿದ್ದಾನೆ ಎಂಬುದು ಪೊಲೀಸರ ಆರೋಪ. ಅರಣ್ಯ ರಕ್ಷಕರ ಕೈಗೂ ಸಿಗದಷ್ಟು ವೇಗವಾಗಿ ಈ ಮಗು ಓಡಿತ್ತು ಎಂದು ಪೊಲೀಸರು ಎಫ್ಐಆರ್‌ನಲ್ಲಿ ಹೇಳಿದ್ದರೂ, ನಿಜಕ್ಕೂ ಪೊಲೀಸರು ಅರಣ್ಯದಲ್ಲಿದ್ದ ಚಳ್ಳೆ ಹಣ್ಣನ್ನು ತಿಂದಿದ್ದರು ಎಂಬುದು ದೃಢಪಟ್ಟಿದೆ.
 
ಈ  ಕಳೆದ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಜನ್ಮದಲ್ಲಿ ಬಲು ಬೇಗನೆ ಶಿಕ್ಷೆ ದೊರಕಿಸುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರೂ, ಮನಸು ಕದ್ದ ಹಸುಳೆ ಮೇಲೂ ಅವರು ಕೇಸು ದಾಖಲಿಸಿದ್ದನ್ನು ಈ ಹಿಂದೆ ಬೊಗಳೆ ಬಿಡಲಾಗಿತ್ತು ಎಂಬುದನ್ನಿಲ್ಲಿ ಸಂಸ್ಮರಣೆ ಮಾಡಿಕೊಳ್ಳಬಹುದಾಗಿದೆ.
 
ಈ ಬಗ್ಗೆ ಪುಟ್ಟ ಮಗುವನ್ನು ಮಾತನಾಡಿಸಿದಾಗ, ನಾನೀಗಾಗಲಷ್ಟೇ ಕಳೆದ ಜನ್ಮದ ಪೊರೆ ಕಳಚಿಕೊಂಡು ಭೂಮಿಗೆ ಬಂದಿದ್ದೇನಷ್ಟೇ. ನನಗೇನೂ ಗೊತ್ತಿಲ್ಲ ಎನ್ನುತ್ತಾ ಚೆಂಡೆತ್ತಿಕೊಂಡು ಆಟವಾಡಲು ಹೊರಟಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

 1. ಹೆಹ್ಹೆ! ಹಾಗಾದರೆ ಇನ್ನು ಮಕ್ಕಳಾಟ ಎಂದು ಯಾವುದನ್ನೂ ಪರಿಗಣಿಸುವಂತಿಲ್ಲ... :)

  ಪ್ರತ್ಯುತ್ತರಅಳಿಸಿ
 2. ಸುಶ್ರುತರೇ,

  ಮಕ್ಕಳಿಗೆ ಚಾಕಲೇಟು ಕೂಡ ತಿನ್ನಲಾಗದಂತೆ ಮಾಡ್ತಾ ಇದ್ದಾರೆ ಕಣ್ರೀ... ಏನು ಮಾಡೋದು?

  ಪ್ರತ್ಯುತ್ತರಅಳಿಸಿ
 3. ಈ ಮಗು ಕಳೆದ ಜನ್ಮದಲ್ಲಿ ವೀರಪ್ಪನ್ ಆಗಿದ್ದನೇ? ಅಥವಾ ಜಾರಕಾರಣಿಯಾಗಿದ್ದನೇ?
  ಹಾಗಿದ್ದರೆ ಕಾಡಿಗೆ ಮುಕ್ತಿ ಕೊಟ್ಟದ್ದು ಸರಿಯೇ.

  ಪ್ರತ್ಯುತ್ತರಅಳಿಸಿ
 4. ಜಾಮೀನು ರಹಿತ ವಾರೆಂತ್ ಕಳುಹಿಸಿದ ನ್ಯಾಯಾಧಿಶನಿಗೆ ಶಹಬಾಸ್ ಗಿರಿ ಕೊಡುತ್ತ.

  ಇಂತಿ
  ಭೂತ

  ಪ್ರತ್ಯುತ್ತರಅಳಿಸಿ
 5. ಶ್ರೀನಿವಾಸರೆ,

  ವೀರಪ್ಪನ್ ಅಪರಾವತಾರಗಳು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿರುವುದರಿಂದ ಈ ಪೋರ ಆ ಅವತಾರ ಎತ್ತಲು ಖಂಡಿತಾ ಕೇಳಲಿಕ್ಕಿಲ್ಲ.

  ಪ್ರತ್ಯುತ್ತರಅಳಿಸಿ
 6. ಭೂತೋತ್ತಮರೆ,

  ನ್ಯಾಯಾಧೀಶರು ಎಲ್ಲಾದರೂ ಜಮೀನು ಸಹಿತ ವಾರಂಟ್ ಕಳುಹಿಸಿದ್ದರೆ, ಅದು ಆ ಪೋರನಿಗೆ ತಲುಪುವ ಮೊದಲೇ ಎಲ್ಲಾ ಜಮೀನನ್ನೂ ಕಬಳಿಸಿಬಿಡಲಾಗುತ್ತಿತ್ತು.

  ಪ್ರತ್ಯುತ್ತರಅಳಿಸಿ
 7. ಅನ್ವೇಷಿಗಳೇ, ಈ ಕೇಸಿನ ಇನ್ನಷ್ಟು ವಿವರಗಳನ್ನು ತಿಳಿಸಿ.ನನಗಂತೂ ಏನೂ ಅರ್ಥವಾಗಲಿಲ್ಲ.

  ಅಂದ ಹಾಗೆ, ಕನ್ನಡ ಸಾರಥಿಗಳೆಲ್ಲಿ ಹೋದರು ಅಂತಾನೂ ಪತ್ತೆ ಹಚ್ಚಿ.

  ಪ್ರತ್ಯುತ್ತರಅಳಿಸಿ
 8. ಶ್ರೀತ್ರೀ ಅವರೆ,
  ಇದು 5ರ ಪುಟ್ಟ ಹುಡುಗ 14 ತಿಂಗಳಿನವನಾಗಿದ್ದಾಗ ಅರಣ್ಯ ನಾಶ ಮಾಡಿದ್ದಾನೆ ಎಂಬ ಆರೋಪದ ಕೇಸು. ಆದರೆ ನಮ್ಮ ಬ್ಯುರೋ ತನಿಖೆ ನಡೆಸಿದಾಗ, ಬಹುಶಃ ಆತ ಪೂರ್ವಜನ್ಮದಲ್ಲಿ ಮಾಡಿದ ಕೃತ್ಯಕ್ಕೆ ಪೊಲೀಸರು ಈಗ ಕೇಸು ದಾಖಲಿಸಿದ್ದಾರೆ ಎಂಬುದು ತಿಳಿದುಬಂತು.

  ಕನ್ನಡ ಸಾರಥಿಗಳು, ಮೇಲಿನ Busyನೆಸ್ ವರದಿಯಿಂದ ಪೀಡಿತರಾಗಿ, ಹಾಯಾಗಿ ಕೆಲಸದಲ್ಲಿ ಮುಳುಗಿದ್ದಾರೆ ಎಂಬುದು ಪತ್ತೆಯಾಗಿದೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D