ಬೊಗಳೆ ರಗಳೆ

header ads

ವಿನೂತನ ಉದ್ಯೋಗ ಯೋಜನೆ: ನಿಧಾನಿ ಪ್ರಶಂಸೆ

(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ನ.13- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಎಂಬ ಪಿಡುಗು ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಉಗ್ರಗಾಮಿಗಳಿಗೆ ಭಾರತದ ನಿಧಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಪೂಜಾ ಕ್ಷೇತ್ರ ಅಥವಾ ಪ್ರಾರ್ಥನಾ ಮಂದಿರಕ್ಕೆ ಗ್ರೆನೇಡ್ ಎಸೆದರೆ 1000 ರೂ. ನೀಡುವ ಈ ಯೋಜನೆಯು ಪಾಕ್ ಪರವಾಗಿರುವ ನಿರುದ್ಯೋಗಿಗಳಲ್ಲಿ ಆಶಾವಾದ ಮೂಡಿಸಿದೆ ಎಂದು ಹೇಳಿದರು.

ಇದುವರೆಗೆ ಈ ದೇಶವಾಳಿದ ಯಾರು ಕೂಡ ಕಂಡುಹಿಡಿಯಲಾಗದ ಈ ಹೊಸ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಿರುವುದಕ್ಕೆ ಯೋಜನೆಯ ಪ್ರವರ್ತಕರಾದ ಉಗ್ರರಿಗೆ ವ್ಯಗ್ರತಾಭಾವದಿಂದ ಧನ್ಯವಾದ ಎಸೆದ ಅವರು, ಇದರಿಂದ ಅಲ್ಪಸಂಖ್ಯಾತರ ಕಲ್ಯಾಣ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆದರೆ, ಇದೇ ಉದ್ಯೋಗ ನೀತಿಯನ್ನು ಪೂಜಾ ಅಥವಾ ಪ್ರಾರ್ಥನಾ ಮಂದಿರಗಳ ಬದಲು ಶಾಸನಸಭೆಗಳಾದ ಸಂಸತ್ತು/ವಿಧಾನಸಭೆ ಮೇಲೆ ಪ್ರಯೋಗಿಸದಂತೆ ಅವರು ಈ ಸಂದರ್ಭ ಕಳಕಳಿಯ ಸಲಹೆ ನೀಡಿದರು.

ಈಗಾಗಲೇ ಕಟ್ಟಾ ಧಾರ್ಮಿಕತೆಯನ್ನು ಅನುಸರಿಸುತ್ತಾ, ಮಾರಣ ಹೋಮ ಮುಂತಾದ ಯಜ್ಞ-ಯಾಗಾದಿಗಳನ್ನು ನೆರವೇರಿಸುತ್ತಾ, ಪವಿತ್ರ ಯುದ್ಧ (ಜಿಹಾದ್) ನಡೆಸುತ್ತಿರುವ ಪ್ರತ್ಯೇಕತಾವಾದಿ ಮತ್ತು ಹಿಂಸಾವಾದಿ ಸಮಾಜ ನಿರ್ಮಾಣಕ್ಕೆ ಮುಂದಾಗಿರುವವರನ್ನು ಗದ್ಗದಿತರಾಗಿ ತೆಗಳಿದ ಅವರು, ಒಂದಷ್ಟು ಕ್ಯಾಕರಿಸಿ ಪ್ರಶಂಸಿಸಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ!!!
ಚಿಕ್ಕ ಮಕ್ಕಳು ಮತ್ತು ದೊಡ್ಡ ಮಕ್ಕಳಿಗಾಗಿ ವಿಶೇಷ ವರದಿ ನಾಳೆ ಪ್ರಕಟವಾಗಲಿದೆ.
ನಿಮ್ಮ ಪ್ರತಿ ಕಾದಿರಿಸಬೇಡಿ.
ಸೂಚನೆ: ಈ ವರದಿ ಮೊದಲೇ ಬೇಕಾದವರಿಗೆ ಕ್ರೆಡಿಟ್ ಕಾರ್ಡ್ ಮೂಲಕ ವಿಶೇಷ ವ್ಯವಸ್ಥೆ ಏರ್ಪಡಿಸಲಾಗಿದ್ದು, ಯಾರು ಬೇಕಾದರೂ, ಎಷ್ಟು ಬೇಕಾದರೂ ತೆರಬಹುದು.ಆದರೆ ವರದಿ ಪ್ರಕಟವಾಗಲು ಕನಿಷ್ಠ ಒಂದು ದಿನ ತಗುಲುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಒಂದು ದಿನಕ್ಕೆ ಇಪ್ಪತ್ನಾಲ್ಕೇ ಗಂಟೆ ಎಂಬ ನಂಬಿಕೆಯೊಂದಿಗೆ ಮಕ್ಕಳ ದಿನಾಚರಣೆ ವಿಶೇಷ ವರದಿಗಾಗಿ ನಾಳೆಯವರೆಗೆ ಕಾಯಲು ತಯಾರಾಗುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  2. ಸುಶ್ರುತರಿಗೆ ಸ್ವಾಗತ.

    ಆದರೆ ಚರಕರೊಂದಿಗೆ ಸೇರಿ ಮದ್ದು ಅರೆಯುತ್ತಿರುವ ನಿಮ್ಮಲ್ಲಿ ಮದ್ದು ಕೇಳಲು ಬರೋಣ ಅಂದ್ಕೊಂಡ್ರೆ.... Profile not available ಅಂತ ಅಮೂಲ್ಯವಾದ ಸಂದೇಶವೊಂದು ಬರುತ್ತಿದೆ.

    ಹಾಗಾಗಿ ಇದೆಂಥಾ ಮಾಯಾವಿ ಮದ್ದು ಅಂತ ತಿಳಿಸಲು ಕೋರಲಾಗಿದೆ.

    ಪ್ರತ್ಯುತ್ತರಅಳಿಸಿ
  3. ನಾನಂತೂ ನಿಧಾನಿಗಳ ನಿಲುವನ್ನು ಅನುಮೋದಿಸುತ್ತಿದ್ದೇನೆ. (ನನಗೂ ಸ್ವಲ್ಪ ಏನೋ ಸಿಗುವ ಹಾಗೆ ಕಾಣುತ್ತಿದೆ. ಅದೇನೆಂದು ನೀವು ಕೇಳಬೇಡಿ, ಕೇಳಿದರೆ ಹೇಳಿಬಿಡಬೇಕಾಗುತ್ತದೆ).

    ಪ್ರತ್ಯುತ್ತರಅಳಿಸಿ
  4. ಶ್ರೀಗಳೇ,
    ನಿಧಾನಿಗಳ ನಿಲುವು ಅನುಮೋದನೆ ಮಾಡಲು ನಿಮಗೆ ಭಾರಿ ಪ್ರಮಾಣದಲ್ಲಿ ಕೊಟ್ಟ ಮೋದಕವನ್ನು ಅನುನಯದಿಂದ ಭೋಜನ ಮಾಡಿದ್ದೀರಿ ಅಂತ ತಿಳಿದುಬಂದಿದೆ.
    ಹಾಗಾಗಿ (ಮಾರಣ) ಹೋಮಕ್ಕೆ ನಿಮ್ಮ ಕಡೆಯಿಂದ ಹವಿಸ್ಸು ಸಿಗಲಾರದು ಅಲ್ವೇ?

    ಪ್ರತ್ಯುತ್ತರಅಳಿಸಿ
  5. ದೇಶವನ್ನು ಕಾಡುತ್ತಿರುವ ನಿರುದ್ಯೋಗ, ಜನಸಂಖ್ಯಾ ಸಮಸ್ಯೆಯ ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಈ ಉತ್ಸಾಹಿ ಯುವಕರಿಗೆ ಕೇವಲ 1,000 ರೂಪಾಯಿಗಳನ್ನು ಕೊಡುತ್ತಿರುವುದು ಸ್ವಲ್ಪವೂ ಸರಿಯಿಲ್ಲ. ಯಾರೊಬ್ಬರೂ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸದೆ ಇರುವುದನ್ನು ನೋಡಿ ಇನ್ನೂ ಬೇಸರವಾಗುತ್ತಿದೆ.

    ಪ್ರತ್ಯುತ್ತರಅಳಿಸಿ
  6. ಶ್ರೀತ್ರೀ ಅವರೆ,
    1000ಕ್ಕಿಂತ ಒಂದು ರೂ. ಹೆಚ್ಚು ಕೊಟ್ಟಿದ್ದರೆ ಬೊಗಳೆ ರಗಳೆಯ ಏಕಸದಸ್ಯ ಬ್ಯುರೋದಲ್ಲಿ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲರೂ ಪರಾರಿಯಾಗುವ ಸಾಧ್ಯತೆಗಳಿದ್ದುದರಿಂದ ಬಾಗಿಲು ಮುಚ್ಚಬೇಕಾಗಿಬರುತ್ತಿತ್ತು. ಹಾಗಾಗಿ 1000ಕ್ಕಿಂತ ಒಂದು ಪೈಸೆ ಹೆಚ್ಚು ನೀಡದಂತೆ ತಾಕೀತು ಮಾಡಲಾಗಿತ್ತು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D