ಬೊಗಳೆ ರಗಳೆ

header ads

ಹೋರಾಟಕ್ಕೆ ಕಿಡಿ ಹಚ್ಚಿಸಿದ ವಿಪರೀತ ಸಿಂಗ್!

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ನ.8- MTVಯಲ್ಲಿ ಕೌಸಲ್ಯಾ ಸುಪ್ರಜಾ ರಾಮ.... ಅಂತ ಸುಪ್ರಭಾತ ಕೇಳಿ ಬಂದರೆ ಹೇಗಿರುತ್ತೆ? ನಿರೀಕ್ಷಿಸುವುದು ಸಾಧ್ಯವೇ ಇಲ್ಲ ಎಂದು ಇಡೀ ಜಗತ್ತು ಅಂದುಕೊಳ್ಳುವ ಮಾತು ಉಲ್ಟಾ ಹೊಡೆದಿದೆ.

ಒಂದು ಕಾಲದಲ್ಲಿ ದೇಶಾದ್ಯಂತ ಮನೆ ಮನೆಯಲ್ಲಿ ಅಡುಗೆ ಮಾಡಲು ಕಿಚ್ಚು ಹತ್ತಿಸಿದ್ದ ಮತ್ತು ಹಲವು ಮನೆಗಳ ದೀಪ ನಂದಿಸಲು ಕಾರಣರಾಗಿದ್ದ ಮಾಜಿ ನಿಧಾನಿ ವಿಪರೀತ ಸಿಂಗ್ ಅವರ ಹೇಳಿಕೆಯೇ ಎಲ್ಲ ಗೊಂದಲಕ್ಕೂ ಕಾರಣ.

ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ, ಉನ್ನತ ಹುದ್ದೆಗೆ ನೇಮಿಸುವಾಗ ಪ್ರತಿಭೆಯೇ ಅರ್ಹತೆಯಾಗಲಿ ಎಂದು ಹೋರಾಟದ ಕಿಚ್ಚು ಹಚ್ಚಿಸುವಲ್ಲಿ ನಿಷ್ಣಾತರಾಗಿರುವ ಅವರು ಸ್ವರ್ಗಕ್ಕೇ ಕಿಚ್ಚು ಹಚ್ಚಲು ಹೊರಟಿದ್ದು, ಮತ್ತೊಂದು ಕಿಡಿ ಹತ್ತಿಸುವ ಸಿದ್ಧತೆ ಮಾಡಿದ್ದಾರೆ. ಇಷ್ಟಕ್ಕೂ ಅವರು ಹೇಳಿದ್ದೇನು? ಮೆರಿಟ್ ಆಧಾರದಲ್ಲೇ ನ್ಯಾಯಾಧೀಶರನ್ನು ನೇಮಿಸಬೇಕೆಂಬುದು.... ಅಷ್ಟೆ.

ಮೊನ್ನೆ ಮೊನ್ನೆವರೆಗೂ ಮಂಡಲ ಜಪ ಮಾಡುತ್ತಾ, ಮೀಸಲಾತಿ ನೀಡಿದರೆ ಮಾತ್ರವೇ ದೇಶ ಉದ್ಧಾರವಾಗುತ್ತದೆ ಎಂದೆಲ್ಲಾ ಹೇಳುತ್ತಾ ಇದ್ದ ತಮ್ಮ ನೇತಾರನ ಬಾಯಲ್ಲಿ ಇಂಥ ಮಾತುಗಳನ್ನು ಕೇಳಿ ಸ್ವತಃ ಅವರ ಬೆಂಬಲಿಗರು ರೋಷದಿಂದ ಕುದಿಯಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭೆಗೆ ಮಣೆ ಹಾಕಿದರೆ ಈ ದೇಶ ಉದ್ಧಾರವಾಗುವುದಾದರೂ ಹೇಗೆ, ರಾಜಕಾರಣಿಗಳು ಬದುಕುವುದಾದರೂ ಹೇಗೆ, ಓಟಿನ ಬ್ಯಾಂಕು ನಿರ್ನಾಮವಾಗಿಬಿಡುತ್ತದೆ ಎಂಬುದು ಅವರ ರೋಷಕ್ಕೆ ಕಾರಣ.
ಈ ಬಗ್ಗೆ ಸಿಂಗರನ್ನು ಮಾತನಾಡಿಸಿದಾಗ, ತಾನು ಆ ರೀತಿ ಹೇಳಲೇ ಇಲ್ಲ, ಹೇಳುವ ಮೊದಲೇ ಯಾರೋ ಬರೆದುಬಿಟ್ಟಿದ್ದಾರೆ ಎಂದು ಕಟ್ಟಾ ರಾಜಕಾರಣಿಯಂತೆ ಸ್ಪಷ್ಟಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

 1. ಕ್ನಾನ್ಸರ್‌ನಿಂದ ನರಳುತ್ತಿರುವ ವ್ಯಕ್ತಿ ಇಂದೋ ನಾಳೆಯೋ ಹೇಗಿದ್ದರೂ ಸಾಯುವುದು ಖಚಿತ. ಇನ್ನು ಓಟು ಬ್ಯಾಂಕಿನಿಂದ ಆಗಬೇಕಾದುದೇನು ಎಂಬ ಧೋರಣೆಯಿಂದ ಅಥವಾ ಸಾಯುವ ಮೊದಲಾರೂ ಒಂದು ಸಲ ಸತ್ಯ ನುಡಿದು ಪುಣ್ಯ ಸಂಪಾದಿಸಿ ಸ್ವರ್ಗಕ್ಕೆ ಹೋಗೋಣ ಎಂದುಕೊಂಡಿರಬಹುದು.

  -ಪಬ್

  ಪ್ರತ್ಯುತ್ತರಅಳಿಸಿ
 2. ಯಬ್ಬ ಪಬ್ಬ......ಇಗರೇ....

  ಒಳ್ಳೆಯ ಅಸತ್ಯಾನ್ವೇಷಣೆ ಮಾಡಿದ್ದೀರಿ....

  ಆದರೆ ಎಷ್ಟೋ ಮಂದಿಯನ್ನು ಕೊಂದರೆ ಒಂದು ಸತ್ಯ ಹೇಳಿದರೆ ಪಾಪ ಪರಿಹಾರವಾಗುತ್ತದೋ ಎಂಬುದು ಎಲ್ಲರೂ ಕಾದುನೋಡಬೇಕಾದ ಅಂಶ.

  ಪ್ರತ್ಯುತ್ತರಅಳಿಸಿ
 3. ವಿಪರೀತ ಸಿಂಗರ ವರ್ತನೆಯ ಬಗ್ಗೆ ನಾನೇನೇ ಹೇಳಿದರೂ ಅದನ್ನು ಅಪಾರ್ಥ ಮಾಡಿಕೊಳ್ಳುವ ಕಾರಣ ಅವರ ಬಗ್ಗೆ ಏನನ್ನೂ ಬರೆಯೋಲ್ಲ (ಪಿಸುಮಾತಿನಲ್ಲಿ ಅವರ ಬಗ್ಗೆ ಬರೆದರೆ ಮುಂದಿನ ಗತಿ ಏನು ಎಂಬ ಧಮಕಿ ಬಂದಿದೆ ಎಂಬುದು ನಿಜವಲ್ಲ).

  ಪ್ರತ್ಯುತ್ತರಅಳಿಸಿ
 4. ಶ್ರೀಗಳೇ
  ನಿಮಗೆ ಬರೆಯುವುದಕ್ಕೆ ಹೆದರಿಕೆಯಾದರೆ ನಮ್ಮಲ್ಲಿ ಹೇಳಿ.
  ನಾವು ಬರೆಯುತ್ತೇವೆ ಮತ್ತು ಇದನ್ನು ಶ್ರೀಗಳು ಹೇಳಿದ್ದಲ್ಲ ಅಂತನೂ ಬರೆದುಬಿಡುತ್ತೇವೆ.

  ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D