(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಸೆ.12- ಮುಂಬಯಿಯಲ್ಲಿ ಸಣ್ಣಪುಟ್ಟ ಪಟಾಕಿ ಸ್ಫೋಟಿಸಿದ್ದಕ್ಕಾಗಿ ಪಾತಕಿ ಪಟ್ಟ ಕಟ್ಟಿಸಿಕೊಂಡ ದೆವ್ವೂದ್ ಇಬ್ರಾಹಿಂ ಮತ್ತು ಟಬು ಸಲೇಂ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿರುವ ನಿರ್ಧಾರಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.

ಆದರೆ ಈ ಪಟಾಕಿ ಪಾತಕಿಗಳಿಗೆ ಟಿಕೆಟ್ ಕೊಡುವುದು ಎಲ್ಲಿಗೆ ಎಂಬುದೇ ದೊಡ್ಡ ಸಮಸ್ಯೆಯ ಸಂಗತಿಯಾಗಿದೆ. ಮೇಲಕ್ಕೆ ಟಿಕೆಟ್ ಇಷ್ಟು ಬೇಗ ಕೊಟ್ಟರೆ ಅವರು ಇಷ್ಟರವರೆಗೆ ಮಾಡಿದ ಘನ ಕಾರ್ಯಗಳು ಅವರೊಂದಿಗೇ ಮೇಲಕ್ಕೆ ಹೋಗುತ್ತವೆಯಾದುದರಿಂದ ಅದು ಆಗದ ಮಾತು ಎಂದು ನಿರ್ಧರಿಸಿದ ಅಪ್ಪನ ದಳವು, ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡೋಣ ಎಂದು ತೀರ್ಮಾನಿಸಿತ್ತು.

ಈ ಬಗ್ಗೆ ಅಪ್ಪನ ದಳವನ್ನು ಮಾತನಾಡಿಸಿ ಒಂದೇ ಒಂದು ಪ್ರಶ್ನೆ ಕೇಳಲಾಯಿತು. ಪಟಾಕಿ ಸಿಡಿಸುವವರಿಗೇಕೆ ನೀವು ಯಾವುದೇ ಕ್ಯೂನಲ್ಲಿ ನಿಲ್ಲದೆ, ಹೈಕಮಾಂಡಿಗೆ ಯಾವುದೇ ಸೂಟ್ ಕೇಸ್ ರವಾನಿಸದೆಯೇ ನೇರವಾಗಿ ಟಿಕೆಟ್ ಕೊಡುತ್ತೀರಿ ಎಂಬುದು ಆ ಪ್ರಶ್ನೆ.

ಆದರೆ ಅದಕ್ಕೆ ಬಂದ ಉತ್ತರ ಮಾತ್ರ ಕನ್ನಡ ಧಾರಾವಾಹಿಗಳಂತೆ ಉದ್ದುದ್ದ ಪ್ರವಹಿಸುತ್ತಲೇ ಇತ್ತು. ಹಾಗೆ ಹರಿದಾಡುತ್ತಿದ್ದ ಅವುಗಳಲ್ಲಿ ಬೇಕಾದ್ದನ್ನು ಆರಿಸಿ ತೆಗೆದಾಗ ಸಿಕ್ಕ ಉತ್ತರದ ಸಾರಾಂಶ ಇಲ್ಲಿ ನೀಡಲಾಗುತ್ತಿದೆ.

"ಅಲ್ಲಾ ಸ್ವಾಮಿ... ನೋಡಿ... ನಮ್ಮದು ಅರ್ಹರಿಗೆ ಮಾತ್ರವೇ ಟಿಕೆಟ್ ಕೊಡುವ ಪಕ್ಷ. ಅವರಿಬ್ಬರೂ ಯಾವುದೇ ಪಕ್ಷದಲ್ಲಿ ಇಲ್ಲದೆಯೇ ಇಷ್ಟೊಂದು ಪ್ರಮಾಣದಲ್ಲಿ ರಾಜಕೀಯ ಆಟ ಆಡುತ್ತಾರೆ ಮತ್ತು ಆಡಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳನ್ನು ಗಡಗಡನೇ ಅಲ್ಲಾಡಿಸುತ್ತಾ ಇದ್ದಾರೆ."

"ರಾಜಕೀಯದ ಅಪರಾಧೀಕರಣ ಪ್ರಕ್ರಿಯೆ ತೀರಾ ನಿಧಾನವಾಗಿ ನಡೆಯುತ್ತಿದೆ. ಈ ಮಹಾನ್ ಕಾರ್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ."ಇನ್ನೂ ಒಂದು ಪ್ರಮುಖ ಕಾರಣವೆಂದರೆ, ಅವರಿಗೆ ರಾಜಕೀಯದ ಒಳ-ಹೊರಗು ಚೆನ್ನಾಗಿಯೇ ತಿಳಿದಿದೆ. ವಿರೋಧಿಗಳನ್ನು ಮಟ್ಟ ಹಾಕುವುದು ಹೇಗೆ, ಮುಗ್ಧರನ್ನು ಬಲಿಪಶುಗಳನ್ನಾಗಿಸುವುದು ಹೇಗೆ, ಕೋಟಿ ಕೋಟಿ ಗುಳುಂ ಮಾಡುವುದು ಹೇಗೆ, ಬಡ ಭಾರತೀಯರನ್ನು ಸುಲಿಯುವುದು ಹೇಗೆ, ಅವರ ಬೇಸರ ಕಳೆಯುವ ನಿಟ್ಟಿನಲ್ಲಿ ಅವರ ಜೀವನದಲ್ಲಿ ಚೆಲ್ಆಟ ಆಡುವುದು ಹೇಗೆ, ಜನರಲ್ಲಿ ಕೋಮು ಸಂಘರ್ಷ ಸೃಷ್ಟಿಸಿ ಮೋಜಿನಾಟ ನೋಡುವುದು ಹೇಗೆ, ಪೊಲೀಸರಿಗೂ ಮಾಡಲು ಕೆಲಸ ಒಂದು ಬೇಕಲ್ಲ... ಅದಕ್ಕೆ ವ್ಯವಸ್ಥೆ ಮಾಡುವುದು ಹೇಗೆ ಎಂಬಿತ್ಯಾದಿ ರಾಜಕೀಯದ ಕಲೆಗಳು ಅಮೋಘವಾಗಿ ಜನ್ಮಜಾತವಾಗಿ ಸಿದ್ಧಿಸಿವೆಯಾದುದರಿಂದ ಅದಕ್ಕೆಲ್ಲಾ ತರಬೇತಿ ಅಗತ್ಯವಿಲ್ಲ, ಮತ್ತು ನೋಡಿ ತಿಳಿ, ಮಾಡಿ ಕಲಿ ನೀತಿಯೂ ಬೇಕಾಗಿಲ್ಲ ಎಂದು ಅಪ್ಪನ ದಳವು ವಿವರಿಸಿದೆ.

ಅಪ್ಪನ ದಳವು ಹೇಳದಿದ್ದರೂ ನಮ್ಮ ಬ್ಯುರೋ ಕೇಳಿಸಿಕೊಂಡ ಕೊನೆಯ ಒಂದು ಮಾತಿನ ಪ್ರಕಾರ, ಪಟಾಕಿ ಸಿಡಿಸುತ್ತಿದ್ದ ಅವರಿಬ್ಬರೂ "ನಮಗೆ ಟಿಕೆಟ್ ಕೊಡದಿದ್ದರೆ ನಿಮಗೇ ಟಿಕೆಟ್ ಕೊಡುತ್ತೇವೆ" ಎಂದು ಪ್ರೀತಿಯಿಂದ, ಅಕ್ಕರೆಯಿಂದ, ಕಳಕಳಿಯಿಂದ ಎಚ್ಚರಿಕೆ ನೀಡಿದ್ದರು!

2 Comments

ಏನಾದ್ರೂ ಹೇಳ್ರಪಾ :-D

  1. ಇದ್ಯಾವ ದಳ? ಹೂವಿನ ದಳ ಮಾತ್ರ ನನಗೆ ಗೊತ್ತಿರೋದು. ನಿನ್ನೆ ನಾನು ಈ ಕಡೆ ತಲೆ ಹಾಕ್ಲಿಲ್ಲಾಂತ ಯಾರೂ ಬರ್ಲಿಲ್ವೇ? ಅಥವಾ ಪಟಾಕಿ ಸಿಡಿಸೋಕ್ಕೆ ಹೋಗಿದ್ದಾರೋ?

    ReplyDelete
  2. ಅಪ್ಪನ ದಳಕ್ಕೆ ಅರ್ಜಿ ಸಲ್ಲಿಸೋಕೆ ಹೋಗಿದ್ರಂತೆ..

    ReplyDelete

Post a Comment

ಏನಾದ್ರೂ ಹೇಳ್ರಪಾ :-D

Previous Post Next Post